ಬ್ರಹ್ಮ ಮತ್ತು ಜನ್ಮ
- ಕಿರಣ್ ಎನ್, ಬೆಂಗಳೂರು
ಓ ನನ್ನ ಬ್ರಹ್ಮ ಸಾಕೆನಗೆ ಈ ಜನ್ಮಕಾಣದಾ ಗಾಳಿಯಲಿ ಹುಡುಕಿದ್ದೆ ನಿನ್ನನ್ನು
ಆಯಿತು ಗಾಳಿ ವಿಷಪೂರಿತವಿನ್ನು,
ಬೇರೆಯಾಗದ ನೀರಲಿ ಬೆರೆತಿದ್ದೆ ತಂದೆ,
ಬತ್ತಿ ಹೋಯಿತು ಸಾಗರವು ಮರುಭೂಮಿಯಂತೆ.
ಓ ಬ್ರಹ್ಮ ಸಾಕೆನಗೆ ಈ ಜನ್ಮ ।।
ಪ್ರತಿ ನಿಮಿಷಕು ಬಡಿಯುವ ಅಲೆ ನೀನಾಗಿಬಿಟ್ಟೆ,
ಬಡಿದ ಅಲೆಯನು ಎದುರಿಸುವ ಬಂಡೆ, ನಾನೆಂದು ಇಟ್ಟೆ,
ಬಡಿತ ಎದುರಿಸುವ ಬಂಡೆಯನು (ಮನಸನು) ನನಗೇಕೆ ಕೊಟ್ಟೆ ।।
ಕಣ್ಣಲ್ಲಿ ಪ್ರೀತಿ, ಮನಸ್ಸಲ್ಲಿ ಅನೀತಿ,
ಕೈಯಲ್ಲಿ ಕತ್ತಿ, ಬಾಯಲ್ಲಿ ಭಕ್ತಿ,
ಜಾತಿಜಾತಿಗಳಲ್ಲಿ , ಕೋಮು ಗಲಭೆಗಳಲ್ಲಿ,
ನೀತಿ ಸೂತ್ರವ ಸಾರುವ ಜ್ಞಾನ ಜ್ಯೋತಿಯೆಲ್ಲಿ ?
ಓ ನನ್ನ ಬ್ರಹ್ಮ ಸಾಕೆನಗೆ ಈ ಜನ್ಮ ।।
ಕವಿ ಬರೆದ ಕವಿತೆ ಮುದುಡಲಿಲ್ಲವಂತೆ,
ಕವಿತೆ ಬರೆದ ಕವಿ ಇನ್ನಿಲ್ಲವಂತೆ,
ಕತ್ತಲಾಗುವ ಮುನ್ನ ಬೆಳಕಿನ ಕನಸು
ಬೆಳಕು ಚೆಲ್ಲಿದ ಮೇಲೆ ಹಗಲುಗನಸು,
ಹೊತ್ತಿ ಉರಿಯುತ್ತಿರುವ, ಎಣ್ಣೆ ಇಲ್ಲದ ದೀಪ,
ನೀ ಆಗಲಾರೆ ಬಹುದಿನದ ಪ್ರತಿರೂಪ.
ಮೋಡಗಳು ಬಡಿದು ಹನಿನೀರು (ಕಣ್ಣೀರು)
ಬೀಳುವ ಮೊದಲು, ಕರೆದುಕೋ ಎನ್ನನು,
ಓ ನನ್ನ ಬ್ರಹ್ಮ ಸಾಕೆನಗೆ ಈ ಜನ್ಮ ।।
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications