ಕೃಷ್ಣ ಜಯಂತಿ ದಿನ
- ರಘುನಾಥ ಚ.ಹ.
ನುಣುಪಾಗಿಸುವ
ಎಣ್ಣೆ ಬೆಣ್ಣೆ ಎಳನೀರು ಜೇನು
ಎಷ್ಟು ಪೂಸಿದರು ಮುಳುಮುಳುಗಿಸಿ ಮೀಯಿಸಿದರು
ಸಾಕೆನ್ನ ಕೃಷ್ಣ
ಹದಿನಾರಾಣೆ ಕಂಚಿ ಜರಿಯುಡುಗೆ
ಅಪ್ಪಟ ಬಂಗಾರ-ವಜ್ರದೊಡವೆಗಳ ಸಿಂಗಾರ
ಅಂದವಿಮ್ಮಡಿಸುವ ತಾಜಾ ಹೂಗಳ ಹಾರ
ಕೃಷ್ಣ ಬಲು ಸೊಗಸುಗಾರ
ತುಪ್ಪದಿ ಮುಳುಮುಳುಗೆದ್ದ ಬಗೆಬಗೆ ಭಕ್ಷ್ಯ
ಸಿಹಿ ನೈವೇದ್ಯ
ಗಂಧದ ಬತ್ತಿಗಳಿಂದ ಅಲೆಅಲೆಯಾಗುವ
ಘಮಘಮ
ಕಣ್ಕುಕ್ಕುವ ದೀಪಕಾಂತಿ ರಾಶಿ
ಚಾಮರಗಳು ಚೆಲ್ಲುವ ಶೀತಲತೆ
- ಒಂದು ಕ್ಷಣ ಭಗವಂತನಿಗೂ ಮಂಪರು
ಜಡತೆ
ನೂರು ಕಂಠದಿ ಹೊಮ್ಮುವೊಂದೆ ದನಿ
ಅಪ್ಪಳಿಸಿ ಅಪ್ಪಳಿಸಿ ಮೊರೆವ ಘಂಟಾ ನಿನಾದ
ಭಗವಂತ ಕಣ್ಣುಜ್ಜಿಕೊಳ್ಳುತ್ತಾನೆ
ನೋಡಿದಷ್ಟೂ ಕಣ್ಣ ತುಂಬುವವನ
ನೋಡಿ ನೋಡಿ ತಣಿಯುತ್ತಿದೆ ಮಗು
ಇಬ್ಬರ ಮೋರೆಯಲು ಕುಂದದ ನಗು
ಹುಂಡಿಗೆ ಕಾಣಿಕೆಯರ್ಪಿಸಲೆಂದು
ಚಡ್ಡಿ ಜೇಬಿಗೆ ಕಯ್ಯನಿಳಿಬಿಟ್ಟ
ಕೂಸಿನ ಮುಖ ಪೆಚ್ಚು
ಹುಟ್ಟಿದ ದಿನವೆಂದು ಅವ್ವ ಕೊಟ್ಟ
ನಾಕಾಣೆ-ಚಾಕಲೇಟು
ಎರಡೂ
ತೂತು ಜೇಬಿನ ಪಾಲು.
ಪೂರಕ ಗದ್ಯ-
ಕೃಷ್ಣ - ದೇವರುಗಳ ನಡುವಿನ ಮನುಷ್ಯ












Click it and Unblock the Notifications