ಎಷ್ಟೊಂದು ಅಚ್ಚ ಬಿಳೀ ಮಲ್ಲಿಗೆ ಹೂಗಳು !
- ಪ್ರಮೀಳಾ ಚೊಕ್ಕಾಡಿ, ಬೆಳ್ತಂಗಡಿ
ಅವರೆಂದರು
ಶೂದ್ರನಿಗೆ ಬುದ್ಧಿ ಬೋಳೆ
ಇವರೆಂದರು
ವಿಪ್ರ ಕಂತ್ರೀ ನನ್ಮಗ
ಇಬ್ಬರೂ ಸೇರಿ ಗುಂಡಿ ತೋಡಿದರು ಬಡವನಿಗೆ!
***
ಎಲ್ಲಿ ದೇವತೆಗಳು ?
ರಾಮಾಯಣದ ಸೀತೆಯ ಪಾತಿವ್ರತ್ಯಕ್ಕೆ
ಸಾಕ್ಷಿ ನುಡಿಯಲು
ಆಗಸದಲ್ಲಿ ಟೊಂಕಕಟ್ಟಿ ನಿಂತಿದ್ದ
ದೇವಾನುದೇವತೆಗಳೇ
ಈಗೆಲ್ಲಿ ಹೋದಿರಿ ನೀವೆಲ್ಲ ?
ಅಗ್ನಿಯೇ
ನೀನಾದರೂ ಸುಡದೇ ಇರಬಹುದಲ್ಲ
ಬಲವಂತದಿಂದ ಆಹುತಿಯಾಗುವ
ಈ ನೆಲದ ಅಮಾಯಕ ಹೆಣ್ಣುಗಳನ್ನು ?
***
ಪ್ರೀತಿ ಆಸರೆ
ಹಸಿವಿನಿಂದ ಚೀತ್ಕರಿಸುತ್ತಿದ್ದ
ಪುಟ್ಟ ಮರಿಹಕ್ಕಿ
ಆಹಾರ ಸಿಗದೆ
ಹಾರಿಬಂದ ತಾಯಿ ಹಕ್ಕಿಯ
ಚುಂಚಿನ ಬೆಚ್ಚನೆಯ ಮೃದು ಸ್ಪರ್ಶಕ್ಕೆ
ನೇವರಿಕೆಗೆ
ಅಲ್ಲೇ ಆ ಕ್ಷಣ ರೆಕ್ಕೆಯಡಿಯಲ್ಲಿ
ಮೆತ್ತಗೆ ಮಲಗಿ ನಿದ್ದೆ ಹೋಯಿತು
***
ಹಳ್ಳಿಯ ಹೂಗಳು
ಹಳ್ಳಿಯ
ಎಷ್ಟೊಂದು ಅಚ್ಚ ಬಿಳೀ ಮಲ್ಲಿಗೆ ಹೂಗಳು
ಸಿಟೀ ಬಸ್‌ಸ್ಟ್ಯಾಂಡುಗಳ ಬಿಸಿಲಿನಲ್ಲಿ !
ಹೂ ಮಾರುವವನ ಕತ್ತರಿಯಲ್ಲಿ !
ಹರಿದು ಹಂಚಿಹೋಗಿ ಜಡದೇವರುಗಳ ಗುಡಿಗಳಲ್ಲಿ !
ಚುಚ್ಚಿಸಿಕೊಂಡು ಲಲನೆಯರ ಮುಡಿಗಳಲ್ಲಿ !
ಕೊನೆಗೆ
ತುಳಿಸಿಕೊಂಡು
ಹೂತು ಮಣ್ಣಿನಲ್ಲಿ !
ಚಳಿ-ಚುಟುಕು












Click it and Unblock the Notifications