ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ
- ಕೆ.ಗಿರೀಶ ಐತಾಳ, [email protected]
ವಿಳಾಸ : 50, ರಾಘವೇಂದ್ರ ನಗರ, ಡಿ ಬ್ಲಾಕ್, ಅಚಿದ್ರಹಳ್ಳಿ, ವಿಶ್ವನೀಡಂ ಅಂಚೆ, ಬೆಂಗಳೂರು- 560 091.
ಈ ಭೂಮಿಗೋ, ಸದಾ ಆ ಗಗನವನ್ನು ಚುಂಬಿಸುವ ಆಸೆ.ಅದಕ್ಕೆ ಬೆಳೆಯುವುದು ಮರ, ಕೊರಳ ಚಾಚುವುದು ಗಿರಿ ಶಿಖರ ;
ಮತ್ತೆ ಮುಖ ಮಾಡಿ ಮುಗಿಲಿನತ್ತ , ಅರಳುವ ಆ ಸಣ್ಣ ಹೂಗಳು,
ನಿತ್ಯ ಯತ್ನಿಸುತ್ತಿವೆ ಬಾನ ಸಂಧಿಸಲು.
ಆ ಬಾನಿಗದೂನು ಸದಾ ಈ ಭೂಮಿಯನ್ನು ಅಪ್ಪಿಕೊಳ್ಳುವಾಸೆ.
ಹಗಲು ರಾತ್ರಿ ಬಿಡದೆ ನಿರಂತರ, ಬೆಳಗಿ ಹರಿಯುವ ಕದಿರ ಹೊಳೆ ;
ಕಣ್ಣ ತಣಿಸುವ ಕಾಮನಬಿಲ್ಲು , ಮೋಡಗಳ ಮೂಲಕ ಮಿಂಚು ಮಾತಾಡಿ,
ಮಳೆಯ ಸುರಿಸಿ ಮುಗಿಲು, ಇಳೆಯ ಪ್ರೀತಿಸುವುದು.
ಬಾರೆ ಗೆಳತಿ ಅಲ್ಲಿ ; ನೆಲ ಬಾನ ಕೂಡುವಲ್ಲಿ .
ಅಲ್ಲಿ ಸದಾ ಪ್ರೇಮದ ವರ್ಷಧಾರೆ.
ಅಲ್ಲಿ ಸಮಯ ಚಲಿಸುವುದಿಲ್ಲ .
ಅಲ್ಲಿ ಸೂರ್ಯ ಮುಳುಗುವುದಿಲ್ಲ .
ಅಲ್ಲಿ ದಾರಿ ಮುಗಿಯುವುದಿಲ್ಲ .
ಅಲ್ಲಿ ರಾತ್ರಿ ಮರಳುವುದಿಲ್ಲ .
ಬಾರೆ ಗೆಳತಿ ಅಲ್ಲಿ ; ನೆಲ ಬಾನ ಕೂಡುವಲ್ಲಿ .
ಅಲ್ಲಿ ಸದಾ ಪ್ರೇಮದ ವರ್ಷಧಾರೆ.
ಅಲ್ಲಿ ನೋವು ಸುಳಿಯುವುದಿಲ್ಲ .
ಅಲ್ಲಿ ಸವಿನೆನಪು ಮಾಸುವುದಿಲ್ಲ .
ಅಲ್ಲಿ ಬಣ್ಣಗಳು ಅಳಿಸುವುದಿಲ್ಲ .
ಅಲ್ಲಿ ಹಸಿವೆ, ನೀರಡಿಕೆಯೆಂಬುದಿಲ್ಲ .
ಬಾ,ಬಾ ಆ ದಿಗಂತದೆಡೆಗೆ !
ಅಲ್ಲಿ ಸುರಿಯುವ ಮಳೆ ಹೊಳೆಯಾಗಿ ಹರಿದು,
ಹೊಳೆ ಪೈರಾಗಿ ಬೆಳೆದು,
ನನ್ನ ನಿನ್ನ ಹೃದಯಗಳಲ್ಲಿ ಅರಳಲಿ
ಆ ಬೆಟ್ಟದ ಮೇಲಿನ ಸಣ್ಣ ಹೂಗಳು ;
ಕ್ಷಣವೊಂದಾದರೂ ಕಂಪ ಸೂಸಲು.
ಮುಖಪುಟ / ಸಾಹಿತ್ಯ ಸೊಗಡು / ಕವನ ಸ್ಪರ್ಧೆ ಫಲಿತಾಂಶಗಳು












Click it and Unblock the Notifications