ಕನ್ನಡಿ, ನನ್ನೊಡನಾಡಿ
- ಅಲಮೇಲು ಅಯ್ಯಂಗಾರ್
(ಸಾರಾಟೋಗಾ, ಕ್ಯಾಲಿಫೋರ್ನಿಯಾ)
ಅತ್ತತ್ತು ಕಣ್ಣು ಕೆಂಪಾಗಿ ....ಗಂಟಲೊಣಗಿ,ಸೊರಗಿ, ಎಷ್ಟು ರಮಿಸಿದರೂ ಪಟ್ಟು ಬಿಡದೆ
ರೆಚ್ಚೆ ಹಿಡಿದಿದ್ದ ಹಸುಗೂಸಿನ ಮುಖಕೆ
ರಮಿಸಲೆಂದು ಕನ್ನಡಿಯ ಹಿಡಿದರು ಅಮ್ಮ;
ಪ್ರತಿಫಲಿಸಿದ ಬಿಂಬವ ಕಂಡು ಬೆರಗಾಗಿ ನಕ್ಕಿತಾ ಮಗು
ತಾನೂ ನಕ್ಕಿತು ನನ್ನೊಡನಾಡಿ ಕನ್ನಡಿ !
ನಾ ಕಣ್ಣು ಮಿಟುಕಿಸಿದರೆ ತಾನೂ ಮಿಟುಕಿಸಿ,
ಕೈಯ್ಯ ಚಾಚಿದರೆ ತಾನೂ ಚಾಚಿ,
ಮುಟ್ಟ ಹೋದರೆ ಕೈಗೆಟುಕದ
ಈ ವಿಸ್ಮಯಕ್ಕೆ ದಿಙ್ಮೂಡಳಾದೆ;
ಅಂದು, ಮಾತಿಲ್ಲದೆಯ ನನ್ನ ಸಂತೈಸಿದ ಕನ್ನಡಿ-
ಇಂದು ನನ್ನೆಲ್ಲ ಗುಟ್ಟುಗಳನರಿತ ಒಡನಾಡಿ !
ಎಳೆತನದಲ್ಲಿ ಅಮ್ಮ ಜಡೆಗಳೆರಡನು ಬಿಗಿದು ಹೆಣೆದು,
ಒದ್ದೆ ಸೆರಗಿನಲಿ ಮುಖ ಒರಸಿ, ಹಣೆಗೆ ಬೊಟ್ಟಿಟ್ಟು,
ಕನ್ನಡಿಯ ಹಿಡಿದಾಗ ಮನವ ಮಾರುಗೊಳಿಸಿತ್ತು-
ಹೊಸ ರಿಬ್ಬನ್ನು ಲೋಲಾಕುಗಳ ಚಂದ !
ಯೌವನದುಯ್ಯಾಲೆಯಲಿ ಜೋಕಾಲಿಯಾಡುತ್ತ,
ಬಗೆ ಬಗೆಯ ಕನಸುಗಳ ಬಣ್ಣದಲಿ ತೇಲುತ್ತ,
ಮುಂಗುರುಳ ತೀಡಿ ಬರಲಿರುವ ಮನ್ಮಥನದಾರೋ ?-
ಎಂದು ಮುಗುಳ್ನಕ್ಕಾಗ ತಾನೂ ನಕ್ಕಿತು ನನ್ನೊಡನಾಡಿ ಕನ್ನಡಿ !
ಮಧ್ಯ ವಯಸ್ಸು... ವರ್ಷ ಹಲವಾರು ಸಂದಿತ್ತು;
ಮಕ್ಕಳೆರಡಾಗಿ ಸಂಸಾರ ಸಾಗರದಲ್ಲಿ ನಲುಗಿ,
ಮುಖದಲ್ಲಿ ಅಲ್ಲಲ್ಲಿ ಇಣುಕಿ ಹಾಕಿದ ಕಾಕರೇಖೆಗಳ
ಮೇಕಪ್ಪಿನಲಿ ಮುಚ್ಚಲೆಣಿಸಿದ ನನ್ನ ವ್ಯರ್ಥ ಸಾಹಸಗಳ
ಕಂಡು ನಕ್ಕಿತು ನನ್ನೊಡನಾಡಿ ಕನ್ನಡಿ !
ಇಂದು ಐವತ್ತರ ಹೊಸ್ತಿಲಲಿ ನಿಂತು,
ಕನ್ನಡಿಯ ಕೈಯ್ಯಲ್ಲಿ ಹಿಡಿದಾಗ ನಾ ಕಾಣ ಬಯಸುವುದು-
ಮುಂಗುರುಳು, ಮಿನುಗು ಕಣ್ಣಿನ ಬಾಹ್ಯ ಸೌಂದರ್ಯವನಲ್ಲ
ಹಿಡಿಯ ಬಯಸುವೆ ನಾ ನನ್ನಂತರಂಗಕ್ಕೆ ಕನ್ನಡಿ !!












Click it and Unblock the Notifications