• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಆರ್ ಹಿರೇಮಠ ಯಾರು? ಸಂಕ್ಷಿಪ್ತ ಪರಿಚಯ

By ಪ್ರಸಾದ ನಾಯಿಕ
|

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯ ವಿರುದ್ಧ ಸೊಲ್ಲೆತ್ತಿ, ಕೋಟೆ ಕಟ್ಟಿ ಮೆರೆದ ಕೋಟ್ಯಾಧಿಪತಿಗಳಲ್ಲಿ ಕೆಲವರನ್ನು ಜೈಲಿಗಟ್ಟಿ, ಜೈಲಿನಿಂದ ಹೊರಗಿರುವ ಅಕ್ರಮ ಗಣಿಧಣಿಗಳನ್ನು ಗಡಗಡ ನಡುಗಿಸುತ್ತಿರುವ, ಚೈತನ್ಯದ ಚಿಲುಮೆಯಂತಿರುವ 69 ವರ್ಷದ ಸಂಗಯ್ಯ ರಾಚಯ್ಯ ಹಿರೇಮಠ (ಎಸ್ಆರ್ ಹಿರೇಮಠ) ಒನ್ಇಂಡಿಯಾ-ಕನ್ನಡ 'ಕರ್ನಾಟಕ ವರ್ಷದ ವ್ಯಕ್ತಿ 2013' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗೆ ಹಿರೇಮಠ ಅವರನ್ನು ಒನ್ಇಂಡಿಯಾ ಓದುಗರೇ ಆಯ್ಕೆಮಾಡಿದ್ದಾರೆ.

ಭೂಮಿಯಲ್ಲಿ ಅಡಗಿರುವ ಅಗಾಧ ಸಂಪತ್ತನ್ನು ಬಗೆದು ವಿದೇಶಕ್ಕೆ ರವಾನೆ ಮಾಡಿ ಲೂಟಿ ಹೊಡೆಯುತ್ತಿದ್ದವರ ವಿರುದ್ಧ ಎಸ್ಆರ್ ಎಂದೇ ಜನಜನಿತರಾಗಿರುವ ಹಿರೇಮಠ ಅವರು ಸೆಡ್ಡು ಹೊಡೆಯದಿದ್ದರೆ ಕರ್ನಾಟಕ ಇನ್ನೆಷ್ಟು ಬಡವಾಗಿರುತ್ತಿತ್ತೋ? ಅಕ್ರಮ ನಡೆಸುತ್ತಿರುವ ಗಣಿಧಣಿಗಳು ಇನ್ನಷ್ಟು ಶ್ರೀಮಂತರಾಗಿರುತ್ತಿದ್ದರೋ? ಈ ಮಟ್ಟಿಗೆ ಇಡೀ ಕರ್ನಾಟಕದ ಜನತೆ ಎಸ್ಆರ್ ಹಿರೇಮಠ ಅವರಿಗೆ ಆಭಾರಿಯಾಗಿರಬೇಕಾಗಿದೆ. ಹಿರೇಮಠ ಅವರು ನಡೆಸುತ್ತಿರುವ ಹೋರಾಟವನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಕನ್ನಡಿಗರ ಮೇಲಿದೆ.

ಎಸ್ಆರ್ ಹಿರೇಮಠ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟಕ್ಕೆ ಮಾತ್ರ ತಮ್ಮ ಜೀವನವನ್ನು ಸೀಮಿತಗೊಳಿಸಿಲ್ಲ. ಗ್ರಾಮೀಣಾಭಿವೃದ್ಧಿ, ಸಮಾಜಸೇವೆ, ಪರಿಸರ ನಾಶದ ವಿರುದ್ಧದ ಹೋರಾಟವನ್ನು ತಪಸ್ಸಿನಂತೆ ನಡೆಸಿಕೊಂಡು ಬರುತ್ತಿದ್ದಾರೆ. ಧಾರವಾಡದಲ್ಲಿ ಅವರು 1984ರಲ್ಲಿ ಸ್ಥಾಪಿಸಿರುವ ಸಮಾಜ ಪರಿವರ್ತನಾ ಸಮುದಾಯ (ಲಾಭರಹಿತ ಸರಕಾರೇತರ ಸಂಸ್ಥೆ) ಹಿರೇಮಠ ಅವರ ನೆರಳಿನಲ್ಲಿ ಸಮಾಜ ಸುಧಾರಣೆ, ಮಾಲಿನ್ಯ ನಿರ್ಮೂಲನೆ, ಅರಣ್ಯ ಉಳಿಸುವ ಹೋರಾಟದಲ್ಲಿ ತೊಡಗಿಕೊಂಡಿದೆ. [ಕರ್ನಾಟಕ ವರ್ಷದ ವ್ಯಕ್ತಿಗೆ ಅಭಿನಂದನೆ]


ಎಲೆಮರೆಕಾಯಿಯಂತೆ ಸಮಾಜ ಸುಧಾರಕರಾಗಿ, ಪರಸರವಾದಿಯಾಗಿ, ಗ್ರಾಮೀಣಾಭಿವೃದ್ಧಿಯ ಹರಿಕಾರರಾಗಿ, ಹಳ್ಳಿಯಲ್ಲೇ ಇದ್ದುಕೊಂಡು ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳಲ್ಲಿ ಶಿಕ್ಷಣ, ಆರೋಗ್ಯ, ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ ಹಿರೇಮಠ ಅವರ ಜೀವನವೇ ಸ್ಫೂರ್ತಿಯ ಸೆಲೆ. ಅಮೆರಿಕದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಭಾರತವನ್ನು ಉದ್ಧಾರ ಮಾಡಬೇಕೆಂಬ ತುಡಿತದಿಂದ ಸಂಸಾರ ಸಮೇತರಾಗಿ ಭಾರತದ ಹಳ್ಳಿಗೆ ಮರಳಿ, ತಮ್ಮಿಡೀ ಜೀವನವನ್ನೇ ಸಮಾಜಸೇವೆಗೆ ಮುಡಿಪಾಗಿಟ್ಟಿರುವ ಹಿರೇಮಠ ಅವರು ಈ ಪ್ರಶಸ್ತಿಗೆ ನಿಜಕ್ಕೂ ಅರ್ಹರು.

ಪ್ರತಿಭಾವಂತ ವಿದ್ಯಾರ್ಥಿ

1944ರ ನವೆಂಬರ್ 5ರಂದು ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಂಕಿ ಗ್ರಾಮದಲ್ಲಿ ರಾಚಯ್ಯ ಮತ್ತು ರಾಚವ್ವ ಹಿರೇಮಠ ಅವರ ಮಗನಾಗಿ ಸಂಗಯ್ಯ ಅವರು ಜನಿಸಿದರು. 5 ವರ್ಷದವನಿದ್ದಾಗಲೇ ತಂದೆಯನ್ನು ಕಳೆದುಕೊಂಡ ಸಂಗಯ್ಯ ಅವರು ವಿದ್ಯಾಭ್ಯಾಸವನ್ನು ಮುಂದುವರಿಸಿದ್ದು ಬಿಜಾಪುರದಲ್ಲಿ. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಎರಡನೆಯವರಾಗಿ ಉತ್ತೀರ್ಣರಾದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿಯುಸಿ ಮುಗಿಸಿ ಹುಬ್ಬಳ್ಳಿಯ ಬಿವಿ ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೂಡ ಮೆಕ್ಯಾನಿಕಲ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.

ಬಿಜಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅಲ್ಲಿಗೆ ಬಂದಿದ್ದ ಡಾ. ಶಿವರಾಮ ಕಾರಂತ್ ಅವರು, ತಂದೆ-ತಾಯಿ ಋಣಕ್ಕಿಂತ ಸಮಾಜದ ಋಣ ಹೆಚ್ಚಿನದು ಎಂದು ಹೇಳಿದ್ದು ಸಿಮೆಂಟಿನಲ್ಲಿ ಸಿಕ್ಕ ಕಲ್ಲಿನಂತೆ ಸಂಗಯ್ಯ ಅವರ ಮನದಲ್ಲಿ ಅಚ್ಚೊತ್ತಿತ್ತು. ಮುಂದೆ 1969ರಲ್ಲಿ ಅಮೆರಿಕಾದ ಕನ್ಸಾಸ್ ಪ್ರಾಂತ್ಯದಲ್ಲಿರುವ ಮ್ಯಾನ್‌ಹಟ್ಟನ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪೂರೈಸಿ, 1977ರಲ್ಲಿ ಶಿಕಾಗೋದ ಇಲಿನಾಯ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ಎಂಬಿಎ ಪದವಿ ಪಡೆದ ನಂತರವೂ ಶಿವರಾಮ ಕಾರಂತ್ ಹೇಳಿದ್ದ ಮಾತು ಹಿರೇಮಠ ಅವರ ಕಿವಿಯಲ್ಲಿ ಗುಂಗಿಡುತ್ತಲೇ ಇತ್ತು.

ಅಮೆರಿಕದಲ್ಲಿ ಬಲಿತ ಸಮಾಜಸೇವೆಯ ಬೀಜ

1969ರಿಂದ 1979ರವರೆಗೆ ಇಲಿನಾಯ್ ನಲ್ಲಿ ಆಪರೇಷನ್ಸ್ ರಿಸರ್ಚ್ ಅನಾಲಿಸ್ಟ್, ಶಿಕಾಗೋದ ಫೆಡರಲ್ ರಿಸರ್ವ ಬ್ಯಾಂಕ್ ನಲ್ಲಿ ರಿಸರ್ಚ್ ಮ್ಯಾನೇಜರ್, ಓಕ್ ಬ್ರೂಕ್ ನಲ್ಲಿ ಬಂಕರ್ ರಾಮೋ ಕಾರ್ಪೊರೇಷನ್ ನಲ್ಲಿ ನಿರ್ದೇಶಕರಾಗಿ ಹಲವಾರು ಉನ್ನತ ಹುದ್ದೆಗಳನ್ನು ಎಸ್ಆರ್ ಅಲಂಕರಿಸಿದರು. ಹೀಗೇ ಮುಂದುವರಿದಿದ್ದರೆ ಕರ್ನಾಟಕ ಅವರ ಸೇವೆಯನ್ನು ಖಂಡಿತ ಕಳೆದುಕೊಳ್ಳುತ್ತಿತ್ತು. ಅಮೆರಿಕದಲ್ಲಿದ್ದಾಗ ಕೂಡ ಅವರ ಮನಸು ಭಾರತದಲ್ಲಿನ ನಿರುದ್ಯೋಗ, ಬಡತನದ ಬಗ್ಗೆಯೇ ಚಿಂತಿಸುತ್ತಿತ್ತು. 1975ರಲ್ಲಿ ತುರ್ತು ಪರಿಸ್ಥಿತಿ ಎದುರಾಗಿದ್ದಾಗ ಇಂದಿರಾ ಗಾಂಧಿ ವಿರುದ್ಧ ಅಮೆರಿಕದಲ್ಲಿಯೇ ಪ್ರತಿಭಟನೆ ವ್ಯಕ್ತಪಡಿಸಿದ್ದರು ಎಸ್ಸಾರ್.

ಶಿಕಾಗೋದಲ್ಲಿ ಕೆಲಸ ಮಾಡುತ್ತಿದ್ದಾಗ ಅಮೆರಿಕದ ನಿವಾಸಿ ಮಾವಿಸ್ ಸಿಗ್ವಾಲ್ಟ್ ಅವರೊಂದಿಗೆ ಆದ ಸ್ನೇಹ ಪ್ರೀತಿಯಾಗಿ ಪರಿವರ್ತಿತಗೊಂಡು ಮದುವೆಯಲ್ಲಿ ಪರ್ಯವಸಾನವಾಯಿತು. ಅಲ್ಲಿಯೇ ಹುಟ್ಟಿದ್ದು ಮಗ ರಾಜ್ ಮತ್ತು ಮಗಳು ಶೀಲಾ. ಮದುವೆಯ ನಂತರ ಶ್ಯಾಮಲ ಹಿರೇಮಠ ಆದ ಮಾವಿಸ್ ಅವರು ಕೂಡ ಸ್ವಯಂಸೇವಕರಾಗಿ ದಕ್ಷಿಣ ಆಫ್ರಿಕಾದಲ್ಲಿ ಸೇವೆ ಸಲ್ಲಿಸಿದ್ದರು. ಭಾರತಕ್ಕೆ ಮರಳಿ ಗ್ರಾಮೀಣಾಭಿವೃದ್ಧಿಯಲ್ಲಿ ಹಿರೇಮಠ ಅವರು ತೊಡಗಿಕೊಳ್ಳಬೇಕೆಂಬ ಆಸೆಗೆ ನೀರು ಎರೆದವರು ಶ್ಯಾಮಲ ಅವರು.

ಕೊನೆಗೆ 1979ರಲ್ಲಿ ಭಾರತಕ್ಕೆ ಮರಳಲೇಬೇಕೆಂದು ಸ್ನೇಹಿತರೊಡನೆ ಚರ್ಚಿಸಿ ಎಸ್ಸಾರ್ ಅವರು ದೃಢನಿರ್ಧಾರ ಮಾಡಿದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಸಂಸಾರವನ್ನು ಸ್ಥಳಾಂತರಿಸಿದರು. ಧಾರವಾಡದಲ್ಲಿ ಭಾರತ ಅಭಿವೃದ್ಧಿ ಸೇವಾ ಸಂಸ್ಥೆ (ಅಂತಾರಾಷ್ಟ್ರೀಯ)ಯನ್ನು 1979ರಲ್ಲಿ ಸ್ಥಾಪಿಸಿದರು. ಮೆಡ್ಲೇರಿಯಲ್ಲಿ ಇದ್ದುಕೊಂಡು ಸುತ್ತಲಿನ 30 ಹಳ್ಳಿಗಳನ್ನು ಆರಿಸಿಕೊಂಡು, ನೈರ್ಮಲ್ಯೀಕರಣ, ಆರೋಗ್ಯ, ಸ್ವಯಂಉದ್ಯೋಗ ತರಬೇತಿ ನೀಡಿ ಗ್ರಾಮೀಣಾಭಿವೃದ್ಧಿಯ ಹರಿಕಾರ ಎನಿಸಿಕೊಂಡರು. ಇವರ ಕೆಲಸವನ್ನು ಪ್ರಶಂಸಿಸಿ 1982ರಲ್ಲಿ ನೆದರ್ಲ್ಯಾಂಡ್‌ನ ಸಂಸ್ಥೆ ಜಾಪ್ ವ್ಯಾನ್ ಪ್ರಾಗ್ ಪ್ರಶಸ್ತಿ ನೀಡಿ ಗೌರವಿಸಿತು.

ಸಮಾಜ ಪರಿವರ್ತನಾ ಸಮುದಾಯದ ಉಗಮ

ಹರಿಹರದಲ್ಲಿ ತುಂಗಭದ್ರಾ ನದಿ ಫ್ಯಾಕ್ಟರಿ ತ್ಯಾಜ್ಯದಿಂದ ಕಲುಷಿತಗೊಳ್ಳುತ್ತಿರುವುದನ್ನು ವಿರೋಧಿಸಿ ಅವರು ನಡೆಸಿದ ಹೋರಾಟ ಮುಂದೆ ಧಾರವಾಡದಲ್ಲಿ ಸಮಾಜ ಪರಿವರ್ತನಾ ಸಮುದಾಯ(ಸಪಸ)ದ ಉಗಮಕ್ಕೆ ನಾಂದಿಯಾಯಿತು. 1984ರಲ್ಲಿ ಸಪಸ ಆರಂಭಿಸಿ 2009ರವರೆಗೆ ಗೌರವ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಿರೇಮಠ ಅವರು ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಡಾ. ರವಿ ಚೋಪ್ರಾ ಅವರು ಚೇರ್ಮನ್ ಆಗಿ ಸಮಾಜ ಪರಿವರ್ತನಾ ಸಮುದಾಯವನ್ನು ಮುನ್ನಡೆಸುತ್ತಿದ್ದಾರೆ. ಈ ಸಮುದಾಯದ ಮುಖಾಂತರವೇ ಗಣಿಧಣಿಗಳ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಹಿರೇಮಠ ಅವರು ಸಮರ ಸಾರಿದ್ದು.

ಇದರ ಜೊತೆಗೆ, ಕರ್ನಾಟಕ ಮಾಲಿನ್ಯ ನಿರ್ಮೂಲನಾ ಮಂಡಳಿಯ ಸದಸ್ಯ, ಪಶ್ಚಿಮ ಘಟ್ಟ ಅರಣ್ಯ ಯೋಜನೆ ಸಮಿತಿಯ ಸದಸ್ಯ, ಭಾರತ ಸರಕಾರದ ಜಾಗತಿಕ ಪರಿಸರ ನಿಧಿಯ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯ, ದೆಹಲಿಯಲ್ಲಿರುವ ಕಾಂಡಕ್ಟ್ ಆಫ್ ವಾಲಂಟರಿ ಆರ್ಗನೈಸೇಷನ್‌ನ ಸ್ಥಾಯಿ ಸಮಿತಿಯ ಸದಸ್ಯ, ರಾಜ್ಯ ಸರಕಾರದ ಈಸ್ಟರ್ನ್ ಪ್ಲೇನ್ ಫಾರೆಸ್ಟರಿ ಪ್ರಾಜೆಕ್ಟ್‌ನ ಸಲಹಾ ಸಮಿತಿಯ ಸದಸ್ಯ, ಸುಪ್ರೀಂ ಕೋರ್ಟ್‌ನ ಕರ್ನಾಟಕದ ಆಯುಕ್ತರ ಸಲಹೆಗಾರರಾಗಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿ, ಗೌರವ ಮತ್ತು ಕೃತಿಗಳು

1989ರಲ್ಲಿ ಇಂದಿರಾ ಗಾಂಧಿ ಪರ್ಯಾವರಣ ಪುರಸ್ಕಾರ, 1982ರಲ್ಲಿ ನೆದರ್ಲ್ಯಾಂಡ್‌ನ ಹಿವೋಸ್ ಸಂಸ್ಥೆ ನೀಡುವ ಜಾಪ್ ವ್ಯಾನ್ ಪ್ರಾಗ್ ಅಂತಾರಾಷ್ಟ್ರೀಯ ಪ್ರಶಸ್ತಿ, 1987ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಬೆಂಗಳೂರು ಪ್ರೆಸ್ ಕ್ಲಬ್‌ನಿಂದ 'ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ' ಪ್ರಶಸ್ತಿಗೆ ಎಸ್ಆರ್ ಹಿರೇಮಠ ಅವರು ಭಾಜನರಾಗಿದ್ದಾರೆ. ಇಷ್ಟೆಲ್ಲ ಬಿಡುವಿಲ್ಲದ ಚಟುವಟಿಕೆಗಳ ನಡುವೆ ಅರಣ್ಯ ಉಳಿಕೆ, ಜೈವಿಕ ವೈವಿಧ್ಯ, ಭೂ ಒತ್ತುವರಿ, ನೈಸರ್ಗಿಕ ಸಂಪತ್ತಿನ ಮೇಲೆ ಜನರಿಗಿರುವ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಅವರು ಸಂಪಾದಿಸಿದ್ದಾರೆ.

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ(ರುವ) ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ ಶ್ರೇಯಸ್ಸು ಎಸ್ಆರ್ ಹಿರೇಮಠ ಅವರಿಗೇ ಸಲ್ಲಬೇಕು. ಭೂಮಿಯಲ್ಲಿ ಅಪಾರವಾಗಿ ಹುದುಗಿರುವ ಖನಿಜ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವುದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖಾಂತರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಮುಂದೆ ಅಕ್ರಮ ಗಣಿಗಾರಿಕೆಯ ವಿರುದ್ಧ ತನಿಖೆ ನಡೆಸಿದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಇಡೀ ಹಗರಣವನ್ನು ಬಯಲಿಗೆಳೆದರು.

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಿ ವರದಿ ನೀಡುವಂತೆ ಕೇಂದ್ರ ಎಂಪಾವರ್ ಕಮಿಟಿ (ಸಿಇಸಿ)ಯನ್ನು ಸುಪ್ರೀಂ ಕೋರ್ಟ್ ನೇಮಿಸಿದ ನಂತರ ಒಟ್ಟು 19 ಅಕ್ರಮ ಗಣಿ ಕಂಪನಿಗಳನ್ನು ಮುಚ್ಚಲು ಸುಪ್ರೀಂ ಕೋರ್ಟ್ ನಿರ್ದೇಶಿಸಿತು. ಅಕ್ರಮ ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಸಕಲ ದಾಖಲೆಗಳನ್ನು ಸಂಪಾದಿಸಿಯೇ ದೂರು ನೀಡುವ ಹಿರೇಮಠ ಅವರು ಪ್ರಸ್ತುತ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಸಂತೋಷ್ ಲಾಡ್ ರಾಜೀನಾಮೆ ನೀಡಲು ಕಾರಣರಾಗಿದ್ದಾರೆ.

ಸಚಿವರಾದ ಡಿಕೆ ಶಿವಕುಮಾರ್ ಮತ್ತು ರಮೇಶ್ ಕುಮಾರ್ ಅವರ ವಿರುದ್ಧವೂ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ ದೂರು ನೀಡಿ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ಧಾರ್ಥ ಅವರು ಸರಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೂಡ ದೂರು ನೀಡಿ, ಪುರಾವೆಯಾಗಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಅಕ್ರಮ ಎಸಗುವವರು ಯಾವುದೇ ಪಕ್ಷದವರಿರಲಿ, ಎಷ್ಟೇ ಪ್ರಭಾವಿತರಿರಲಿ ಅವರನ್ನು ಬಿಡುವುದಿಲ್ಲ ಎಂದು 69 ವರ್ಷದ ಎಸ್ಆರ್ ಹಿರೇಮಠ ಅವರು ಗರ್ಜಿಸಿದ್ದಾರೆ.

ನಿಗರ್ವಿ ಮತ್ತು ಸರಳ ಜೀವಿ

ಇಷ್ಟೆಲ್ಲ ಅಪಾಯಗಳನ್ನು ಹಿರೇಮಠ ಅವರು ಮೈಮೇಲೆ ಎಳೆದುಕೊಂಡಿದ್ದರೂ ತಮಗೆ ರಕ್ಷಣೆ ನೀಡಬೇಕೆಂದು ಸರಕಾರವನ್ನು ಗೋಗರೆದಿಲ್ಲ. ಸತ್ಯದ ಗುರಾಣಿ ಮುಂದಿರುವಾಗ ಯಾವ ಬಾಣವೂ ತನ್ನನ್ನು ನಾಟುವುದಿಲ್ಲ ಎಂದು ಯುದ್ಧಸನ್ನದ್ಧರಾಗಿ ಭ್ರಷ್ಟ ರಾಜಕಾರಣಿಗಳ ವಿರುದ್ಧ ಗುರಾಣಿ ಝಳಪಿಸುತ್ತಿದ್ದಾರೆ. ಸರಳಾತಿಸರಳ ಜೀವನವೇ ಅವರನ್ನು ಗೌರಿಶಿಖರದೆತ್ತರಕ್ಕೆ ಕರೆದೊಯ್ದಿದೆ. ಸರಳ ಸಜ್ಜನಿಕೆಯ ಸಂಗಯ್ಯ ಹಿರೇಮಠ ಅವರದು ಧಾರವಾಡ ಮತ್ತು ಬಿಜಾಪುರದ ಗಡಸು ಮಾತಾದರೂ ಹೃದಯ ಬೆಣ್ಣೆಯಷ್ಟು ಮೆತ್ತಗೆ. ರೈಲಿನಲ್ಲಿ ಎರಡನೇ ದರ್ಜೆಯಲ್ಲೇ ಪಯಣಿಸುವ ಅವರು ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು sr hiremath ಸುದ್ದಿಗಳುView All

English summary
Oneindia - Karnataka Person of the year 2013 S R Hiremath, a profile. Anti corruption crusader Hiremath chosen Person of the year through online poll.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more