ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸುಕಂಗಳ 'ರಾಜಕಾರಣಿ' ರಾಜೀವ್ ಗೌಡ

By * ಪ್ರಸಾದ ನಾಯಿಕ
|
Google Oneindia Kannada News

Rajeev Gowda
ಮ್ಯಾನೇಜ್‌ಮೆಂಟ್, ರಾಜಕಾರಣ, ಕ್ವಿಜ್ ಮುಂತಾದ ಕ್ಷೇತ್ರಗಳಲ್ಲಿ 'ಮಾಸ್ಟರ್' ಅನ್ನಿಸಿಕೊಂಡಿರುವ ಬಹುಮುಖ ಪ್ರತಿಭೆಯ ಚಳವಳಿಗಾರ ಡಾ. ಎಂ.ವಿ. ರಾಜೀವ್ ಗೌಡ ಪ್ರಸ್ತುತ 15ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಚುನಾವಣಾ ಕಣಕ್ಕೆ ಧುಮುಕುತ್ತಿದ್ದಾರೆ. ಕಾಲೇಜು ದಿನಗಳಲ್ಲಿಯೇ 'ಮುಂದೊಂದು ದಿನ ಯಶಸ್ವಿ ರಾಜಕಾರಣಿಯಾಗುವೆ' ಎಂದು ಕನಸು ಕಟ್ಟಿಕೊಂಡಿದ್ದ ರಾಜೀವ್ ಗೌಡ ಅವರು ಸಂಸತ್ತಿನ ಮೆಟ್ಟಿಲು ಹತ್ತುವ ಕನಸು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದಾರೆ.

ಭಾರತದ ಯುವಶಕ್ತಿಯ ಸಾಮರ್ಥ್ಯವನ್ನು ದೇಶಕ್ಕೆ ತೋರಿಸುವ ಉದ್ದೇಶದಿಂದ 'ರಿಸರ್ಜೆಂಟ್ ಇಂಡಿಯಾ' ಎಂಬ ಯುವಕರೇ ಇರುವ ಸರ್ಕಾರೇತರ ಸಂಸ್ಥೆ(NGO)ಯನ್ನು ಹುಟ್ಟುಹಾಕಿರುವ ರಾಜೀವ್ ಗೌಡ, ಯುವಕರಿಗೆ ವೃತ್ತಿ ಮಾರ್ಗದರ್ಶನ, ನಾಯಕತ್ವದ ಶಿಬಿರ ನಡೆಸುತ್ತ ಯುವಪಡೆ ಕಟ್ಟುತ್ತಿದ್ದಾರೆ. ಯುವಕರನ್ನು ಇಂಜಿನಿಯರಿಂಗ್ ಹಾಗು ಮೆಡಿಕಲ್ ವೃತ್ತಿಯ ಗುಂಗಿನಿಂದ ಹೊರತಂದು ಇತರ ಕ್ಷೇತ್ರಗಳಲ್ಲಿ ಜೀವನೋಪಾಯ ಕಂಡುಕೊಳ್ಳಲು ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ.

ಶಿಕ್ಷಣ, ರಸ್ತೆ ಮತ್ತು ರೈಲು ವ್ಯವಸ್ಥೆ ಸೇರಿದಂತೆ ಬೆಂಗಳೂರಿಗೆ ಅತ್ಯುತ್ತಮ ಮೂಲಸೌಕರ್ಯ ದೊರಕಿಸುವ ನಿಟ್ಟಿನಲ್ಲಿ ಯುವಪಡೆಯೊಂದಿಗೆ ಹೋರಾಟ ನಡೆಸಿದ್ದಾರೆ. ಅತ್ಯುತ್ತಮ ಶಿಕ್ಷಣ ಮಾತ್ರ ಕೆಲಸದ ಕೊರತೆಯನ್ನು ನೀಗಿಸಬಲ್ಲದು, ವಿದ್ಯಾವಂತ ಯುವಜನತೆ ಮಾತ್ರ ದೇಶವನ್ನು ಅಭಿವೃದ್ಧಿಯ ಪಥದತ್ತ ಒಯ್ಯಬಲ್ಲದು ಎಂದು ಬಲವಾಗಿ ನಂಬಿದ್ದಾರೆ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ರಾಜಕೀಯ ರಂಗದಲ್ಲಿ ಮಾತ್ರ ಸಾಧ್ಯ ಎಂದಿರುವ ಅವರು ರಾಜಕೀಯದಲ್ಲಿ ಅದೃಷ್ಟಪರೀಕ್ಷೆಗೆ ಅಣಿಯಾಗಿದ್ದಾರೆ. [ಬೆಂಗಳೂರು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ]

ವಾರ್ಟನ್ ಮತ್ತು ಬರ್ಕಲಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಪಡೆದರೂ ಪ್ರಾಥಮಿಕ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಿಯೇ. ಸೇಂಟ್ಸ್ ಜೋಸೆಫ್ ಕಾಲೇಜಿನಲ್ಲಿ ಬಿಎ ಮುಗಿಸಿದ ಗೌಡ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ನ್ಯೂಯಾರ್ಕ್‌ನ ಫಾರ್ದಮ್ ವಿಶ್ವವಿದ್ಯಾನಿಲಯದಿಂದ ಪಬ್ಲಿಕ್ ಪಾಲಿಸಿ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಡಾಕ್ಟರೇಟ್ ಪದವಿ ಗಳಿಸಿದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರುನಲ್ಲಿ ಪ್ರೊಫೆಸರಾಗಿ ಸೇರಿಕೊಳ್ಳುವ ಮೊದಲು ಓಕ್ಲಹಾಮ ವಿಶ್ವವಿದ್ಯಾನಿಲಯದಲ್ಲಿ ರಾಜನೀತಿಶಾಸ್ತ್ರದಲ್ಲಿ ಅಸೋಸಿಯೇಟ್ ಪ್ರೊಫೆಸರಾಗಿ ಕಾರ್ಯನಿರ್ವಹಿಸಿದ್ದಾರೆ.

ವ್ಯಾಪಾರ, ಆಡಳಿತ ಮತ್ತು ಸಮಾಜ, ಅರ್ಥಶಾಸ್ತ್ರ, ಮ್ಯಾನೇಜ್‌ಮೆಂಟ್ ಎಕಾನಾಮಿಕ್ಸ್, ಡಿಸಿಜನ್ ಅನಾಲಿಸಿಸ್, ರಿಸ್ಕ್ ಮ್ಯಾನೇಜ್‌ಮೆಂಟ್ ವಿಷಯಗಳಲ್ಲಿ ಪರಿಣತಿ ಪಡೆದಿದ್ದಾರೆ. ಎರಡು ಪುಸ್ತಕಗಳನ್ನು ಸಂಪಾದಿಸಿರುವ ರಾಜೀವ್ ಗೌಡ ಅವರು ಬರೆದಿರುವ ಅನೇಕ ಪ್ರಬಂಧಗಳು, ಲೇಖನಗಳು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ.

ಜನರಲ್ ಇನ್ಶೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾದ ನಿರ್ದೇಶಕರಾಗಿದ್ದಾರೆ. 2001ರಲ್ಲಿ ಬಿಬಿಸಿ ಚಾನಲ್ ನಡೆಸಿದ ಮಾಸ್ಟರ್‌ಮೈಂಡ್ ಇಂಡಿಯಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎರಡನೆಯವರಾಗಿ ಯಶ ಸಾಧಿಸಿದ್ದಾರೆ. ಕರ್ನಾಟಕ ಕ್ವಿಜ್ ಅಸೋಸಿಯೇಶನ್‌ನ ಸ್ಥಾಪಕ ಕಾರ್ಯದರ್ಶಿಯೂ ರಾಜೀವ್ ಗೌಡ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಪತಿ ಸೋನಿಯಾ ಗಾಂಧಿಯವರ ಬ್ಲೂ ಐಡ್ ಬಾಯ್ ಆಗಿರುವ ರಾಜೀವ್ ಗೌಡ ಅವರು ಸೋನಿಯಾ ಅವರ ಅಣತಿಯಂತೆ ಚುನಾವಣೆಯ ನಂತರ ರಾಜಕಾರಣಿಗಳಿಗೆ ಮ್ಯಾನೇಜ್‌ಮೆಂಟ್ ತರಬೇತಿ ನೀಡುವ ಶಿಕ್ಷಣ ಸಂಸ್ಥೆಯ ನೇತೃತ್ವವಹಿಸಲಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ಮಹಿಳೆಯರ ಮೇಲೆ ಹಲ್ಲೆಯಾಗಿದ್ದನ್ನು ವಿರೋಧಿಸಿ ಬೆಂಗಳೂರಿನ ಯುವಕರು, ನೌಕರರನ್ನು ಸಂಘಟಿಸಿ ವಿನೂತನ ರೀತಿಯಲ್ಲಿ ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿದ್ದರು. "ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ" ಎಂದು ಕರೆ ನೀಡಿ ಸಂಚಲನ ಉಂಟುಮಾಡಿದ್ದರು.

ರಾಜೀವ್ ಗೌಡ ಅಧಿಕೃತ ವೆಬ್‌ಸೈಟ್
ಫೇಸ್‌ಬುಕ್‌ನಲ್ಲಿ ರಾಜೀವ್ ಗೌಡ
ಆರ್ಕುಟ್‌ನಲ್ಲಿ ರಾಜೀವ್ ಗೌಡ
ಬೆಂಗಳೂರು ಯುನೈಟ್ಸ್, ರಾಜೀವ್ ಗೌಡ ಬ್ಲಾಗ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X