ಸಹಜ ಕೃಷಿಯ ಹರಿಕಾರ ಫುಕುವೋಕಾ ಅಮರ

Masanobu Fukuoka (1913- 2008) -Father of Natural FarmingIf we throw mother nature out the window, she comes back in the door with a pitchfork.('ಪ್ರಕೃತಿ ಮಾತೆಯನ್ನು ನೀವು ಹೊರದಬ್ಬಿದರೆ, ಆಕೆ ಕವೆಗೋಲು ಹಿಡಿದು ಬಾಗಿಲಿನಿಂದ ಪುನಃ ಒಳಬರುತ್ತಾಳೆ')' ."ಸಹಜ ಕೃಷಿ ಬರೀ ಬೆಳೆ ಬೆಳೆಯುವುದಕ್ಕಷ್ಟೆ ಅಲ್ಲ. ಮನುಷ್ಯರ ಅಭ್ಯುದಯಕ್ಕೆ, ಪರಿಪೂರ್ಣದೆಡೆಗೆ ಕರೆದೊಯ್ಯುವ ಕೃಷಿ" ಎಂದಿದ್ದ ಜಪಾನಿನ ಮಹಾನ್ ಕೃಷಿಕ ಋಷಿ ಫುಕುವೋಕಾ

ಬರಹ: ಮಲೆನಾಡಿಗ

ಜಪಾನಿನ ಪರಿಸರಕ್ಕೆ ಹೊಂದುವಂತೆ ನೈಸರ್ಗಿಕ ಕೃಷಿ ಪದ್ಧತಿಯನ್ನು ಫುಕುವೋಕಾ ರೂಪಿಸಿದರೂ, ಅದು ಬಹುಬೇಗ ಪ್ರಪಂಚದೆಲ್ಲೆಡೆ ವ್ಯಾಪ್ತಿಸಿತು. ಜಗತ್ತಿಗೆ ಸಹಜ ಕೃಷಿಯನ್ನು ಪರಿಚಯಿಸಿದ ನೈಸರ್ಗಿಕ ಕೃಷಿಕ ಮಸನೊಬು ಫುಕುವೋಕಾ(95) ಆಗಸ್ಟ್ 16 ರ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಲಿಯೋ ಎಂಬ ಊರಿನ ಸ್ವಂತ ಮನೆಯಲ್ಲಿ ಸಹಜ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ. ಆದರೆ ಅವರ ಜೀವನ ವಿಧಾನ ಅಧ್ಯಯನ ಯೋಗ್ಯ.

1913 ರ ಫೆಬ್ರವರಿ 2 ರಂದು ಜನಿಸಿದ ಮಸನೊಬು ಫುಕುವೋಕಾ, ಮೈಕ್ರೋ ಬಯಾಲಜಿ ಕಲಿತ ನಂತರ ಮಣ್ಣಿನ ಗುಣ ಅರಿವ ವಿಜ್ಞಾನಿಯಾಗಿ ವೃತ್ತಿ ಆರಂಭಿಸಿದರು. ನಂತರ ಗಿಡ ಮರಗಳಿಗೆ ತಗುಲುವ ರೋಗಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿ, ಆ ವಿಷಯದಲ್ಲಿ ಪರಿಣತಿ ಪಡೆದರು. ಜಪಾನಿನಲ್ಲಿ ಬಳಕೆಯಲ್ಲಿದ್ದ ಕೃಷಿ ಪದ್ಧತಿ ಹಾಗೂ ಅವರು ಪಡೆಯುತ್ತಿದ್ದ ಫಸಲಿನ ಬಗ್ಗೆ ತಲೆ ಕೆಡಿಸಿಕೊಂಡಾಗ ಫುಕುವೋಕಾಗೆ ಇನ್ನೂ 25 ವರ್ಷ ವಯಸ್ಸು. ತಕ್ಷಣವೇ ಸಂಶೋಧನಾ ವಿಜ್ಞಾನಿ ಹುದ್ದೆಗೆ ರಾಜೀನಾಮೆ ನೀಡಿ ಶಿಕೋಕುವಿನಲ್ಲಿದ್ದ ತನ್ನ ತೋಟದಕಡೆಗೆ ನಡೆದು, ಅಲ್ಲಿ ತನ್ನ ಚಿಂತನೆಯನ್ನು ಕಾರ್ಯ ರೂಪಕ್ಕೆ ತರಲು ಯತ್ನಿಸಿದರು.

ಸಣ್ಣ ಇಳುವರಿಯ ಸಹಜ ಕೃಷಿಗೆ ರಸಾಯನಿಕಗಳು, ಕೀಟನಾಶಕಗಳು, ಕಳೆ ಕೀಳುವುದು, ಉಳುವುದು ಮುಂತಾದವುಗಳ ನೆರವಿಲ್ಲದೆ ಹೊಸ ಬಗೆಯ ಕೃಷಿ ಪದ್ಧತಿಯನ್ನು ಫುಕುವೋಕಾ ಹುಟ್ಟು ಹಾಕಿದಾಗ ಆಗಿನ್ನೂ 1940 ರ ಸಮಯ. ಪಾಶ್ಚಿಮಾತ್ಯರ ಕೃಷಿ ಪದ್ದತಿಗೆ ಸಮಾನಂತರವಾಗಿ ಹೊಸ ಚಳವಳಿ ರೂಪದಲ್ಲಿ ಆರಂಭಗೊಂಡ ಈತನ ಕೃಷಿ ಪದ್ಧತಿ ಸರ್ ಅಲ್ಬರ್ಟ್ ಹಾವರ್ಡ್, ಜೆ. ಐ ರೊಡಲ್, ಲೇಡಿ ಇವ್ ಬಾಲ್ಫೋರ್ ಮುಂತಾದ ಕ್ರಿಯಾಶೀಲರ ಕಣ್ಣು ತೆರೆಸಿತು.

ಉಳುಮೆ ಇಲ್ಲ, ಕಳೆ ಕೀಳುವುದಿಲ್ಲ:

ನೈಸರ್ಗಿಕವಾಗಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿ ಮಾಡುವುದು ಈ ವಿಧಾನದ ಮೂಲ ಆಶಯ. ಭೂಮಿ ಉಳುಮೆ ಕಾರ್ಯವಿರುವುದಿಲ್ಲ. ಯಂತ್ರಗಳ ಬಳಕೆಯಿಲ್ಲ. ಆದರೆ ಬೀಜ ಮೊಳಕೆಯೊಡೆಯುವುದಕ್ಕೆ ಅನುಕೂಲಕರ ವಾತವರಣ ಸೃಷ್ಟಿ ಮಾಡಬೇಕಾಗುತ್ತದೆ. ಮಣ್ಣಿನ ಸತ್ವ,ತೇವಾಂಶ ಉಳಿಸಿಕೊಳ್ಳುವ ವಿಧಾನ, ಸಾರಜನಕದ ಬಳಕೆ, ಕಳೆಯನ್ನು ಉಳಿಸಿಕೊಳ್ಳುವಿಕೆ, ಖನಿಜಾಂಶಗಳ ಪುನರ್ ಬಳಕೆ, ಕ್ರಿಮಿಗಳ ಹಾವಳಿ ತಡೆಯಲು ಬಾತುಕೋಳಿಗಳು, ಕಾರ್ಪ್ ಮೀನುಗಳ ಬಳಕೆ ಇವೇ ಮುಂತಾದವು ನೈಸರ್ಗಿಕ ಕೃಷಿಯ ವಿಶೇಷಣಗಳಾಗಿವೆ.

ಇಲ್ಲಿ ಕಳೆ ಕೀಳುವುದಿಲ್ಲ. ಕಳೆಯನ್ನು ಪರಿಸರವ್ಯವಸ್ಥೆಯ ಭಾಗವೆಂದು ಗುರುತಿಸಲಾಗುತ್ತದೆ. ಪ್ರತಿ ಬೆಳೆಯ ಫಸಲು ಬಂದ ತಕ್ಷಣ, ಮತ್ತೆ ಅದೇ ಮಣ್ಣಿನಲ್ಲಿ ಇನ್ನೊಂದು ಬೆಳೆ ತೆಗೆಯುತ್ತಾ, ಮಣ್ಣಿನ ಫಲವತ್ತತೆಯನು ಕಾಯ್ದುಕೊಳ್ಳಲಾಗುತ್ತದೆ. ದ್ವಿದಳ ಧಾನ್ಯಗಳ ಬೆಳೆಸಿ ಹೆಚ್ಚಿನ ಸಾರಜನಕ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಕಾಂಪೋಸ್ಟ್ , ಜೇಡಿಮಣ್ಣು ಮಿಶ್ರಿತ ಬೀಜಗಳ ಉಂಡೆಗಳನ್ನು ತಯಾರಿಸಿ, ಬಳಸುವುದರಿಂದ ಹೆಚ್ಚಿನ ಇಳುವರಿ ಸಾಧ್ಯ ಎಂಬುದನ್ನು ಕಾಣಬಹುದು. ಸಾಮಾನ್ಯ ಕೃಷಿಯಲ್ಲಿ ಒಂದು ಬೀಜ ಬಿತ್ತಿ, ಒಂದು ಬೆಳೆ ತೆಗೆಯುತ್ತಾರೆ. ಇಲ್ಲಿ ವಿವಿಧ ಬಗೆಯ ಬೀಜಗಳ ಅಂಟಿನ ಉಂಡೆ ಮಾಡಿ ಎಲ್ಲೆಡೆ ಚೆಲ್ಲಲಾಗುತ್ತದೆ. ಅದು ನೈಸರ್ಗಿಕವಾಗಿ ಬೆಳೆಯುತ್ತದೆ.

ಒಟ್ಟಿನಲ್ಲಿ ಯಂತ್ರಗಳು, ಸಿದ್ಧಪಡಿಸಿದ ರಾಸಯನಿಕಗಳು, ಕ್ರಿಮಿನಾಶಕಗಳನ್ನು ಬಳಸದೇ ಹೆಚ್ಚಿನ ಇಳುವರಿಯನ್ನು ಕಡಿಮೆ ವಿಸ್ತೀರ್ಣದ ಭೂಮಿಯಲ್ಲಿ ಪಡೆಯಬಹುದು ಎಂಬುದನ್ನು ಫುಕುವೋಕಾ ಅವರ ನೈಸರ್ಗಿಕ ಕೃಷಿ ಪದ್ಧತಿ ಹಾಗೂ ತತ್ವಗಳಿಂದ ಮನದಟ್ಟಾಗುತ್ತದೆ. ಇವರ 'ಒನ್ ಸ್ಟ್ರಾ ರೆವಲ್ಯೂಷನ್' ಕೃತಿಯಲ್ಲಿ ವಿಸ್ತಾರವಾಗಿ ಈ ಬಗ್ಗೆ ಬರೆಯಲಾಗಿದೆ.

ಫುಕುವೋಕಾ ಬರೆದ 'ದಿ ಒನ್ ಸ್ಟ್ರಾ ರೆವಲ್ಯೂಷನ್ ಎಂಬ ಪುಸ್ತಕ ಕನ್ನಡ, ಇಂಗ್ಲಿಷ್ ಸೇರಿದಂತೆ ಪ್ರಪಂಚದ ಹಲವಾರು ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯಗೊಂಡಿದೆ. ದಿ ರೋಡ್ ಬ್ಯಾಕ್ ಟು ನೇಚರ್ ಹಾಗೂ ದಿ ನ್ಯಾಚುರಲ್ ವೇ ಆಫ್ ಫಾರ್ಮಿಂಗ್ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಕೃತಿಗಳು ಹಾಗೂ ಶೂನ್ಯ ಬಂಡವಾಳದ ಕೃಷಿ ಪದ್ಧತಿ ಕನ್ನಡ ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರತೇಜಸ್ವಿ , ಪ್ರಗತಿಪರ ಕೃಷಿಕ ಎಲ್. ನಾರಾಯಣರೆಡ್ಡಿ, ಶಿಕಾರಿಪುರದ ಯುವ ಕೃಷಿಕ ಬಿ.ಎನ್. ನಂದೀಶ್ ಮುಂತಾದವರಿಗೆ ಮಾರ್ಗದರ್ಶನವಾಗಿತ್ತು.

ರಸಾಯನಿಕಗಳ ಬಳಕೆಯಿಲ್ಲದೆ ಯಶಸ್ವಿಯಾಗಿ ಬೆಳೆ ತೆಗೆಯಬಲ್ಲ ನೈಸರ್ಗಿಕ ಕೃಷಿ ಪದ್ಧತಿಯನ್ನು ಆವಿಷ್ಕರಿಸಿದ ಇವರ ಸಾಧನೆಗೆ 1988 ರಲ್ಲಿ ಭಾರತ ಸರ್ಕಾರ ದೇಶಿಕೋತ್ತಮ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಕೂಡ ಲಭಿಸಿತ್ತು. ಆದರೆ ಪ್ರಶಸ್ತಿಗಳಿಗಿಂತ ಮಿಗಿಲಾದ ಪ್ರಶಸ್ತಿಯನ್ನು ಪ್ರಕೃತಿಯೇ ಅವರಿಗೆ ಕೊಟ್ಟಿತ್ತು. ಪ್ರಕೃತಿಯನ್ನು ಆರಾಧಿಸುವವರಿಗೆ ಫುಕುವೋಕಾ ಎಂದಿಗೂ ಮಾದರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+