ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಕುಮಾರ ಸ್ವಾಮಿಗಳಿಗೆ ನೂರೊಂದು ನಮನ

By Staff
|
Google Oneindia Kannada News

siddganga seer turns 101ದೀನದಲಿತರು, ಬಡಬಗ್ಗರು, ಅಸಹಾಯಕರನ್ನು ಕಂಡು 'ಇವನಾರವ ಇವನಾರವನೆನ್ನದೆ ಇವ ನಮ್ಮವ ಇವ ನಮ್ಮವ' ಎನ್ನುತ್ತಾ ಸಮಾಜ ಸೇವೆಗೆ, ಅನ್ನ, ಅಕ್ಷರ, ಆಶ್ರಯ ದಾಸೋಹಗಳಿಗೆ ಸದಾ ಸಿದ್ಧವಿರುವ ಸಿದ್ಧಗಂಗಾ ಮಠದ ಪೀಠಾಧೀಶರಿಗೆ ನಮೋ ನಮಃ. ನಡೆದಾಡುವ ದೇವರು, ಕರ್ಮಯೋಗಿ, ಅವತಾರ ಪುರುಷ, ಮಹಾಮಹಿಮ, ಇಪ್ಪತ್ತೊಂದನೆ ಶತಮಾನದ ಬಸವಣ್ಣ ಎಂದು ಭಕ್ತ ಜನರು ಬಣ್ಣಿಸುವ ಜ್ಞಾನವೃದ್ಧ ಡಾ.ಶಿವಕುಮಾರ ಸ್ವಾಮಿಜಿಗಳು ಜಾತಿ, ಮತ, ಪಂಥ, ಧರ್ಮಗಳನ್ನು ಮೀರಿ ಮಾನವಧರ್ಮ ಒಂದೇ ಎಂದು ನಂಬಿ ನಡೆದವರು. ಕಾಯಕದಲ್ಲಿ ಕೈಲಾಸ ಕಂಡವರು. ಇಂದು ಶಿವಕುಮಾರ ಸ್ವಾಮಿಗಳಿಗೆ 101ನೆಯ ಹುಟ್ಟು ಹಬ್ಬದ ಸಂಭ್ರಮ.

ಅಲ್ಪಾಹಾರ, ಅಲ್ಪ ನಿದ್ದೆ, ಸರಳ ಜೀವನಕ್ಕೆ ಕಟ್ಟುಬಿದ್ದವರು. ಶಿವಕುಮಾರ ಸ್ವಾಮಿಗಳ ದಿನಚರಿ ಆರಂಭವಾಗುವುದೇ ಬೆಳಗ್ಗೆ 2ಗಂಟೆಗೆ. 2 ರಿಂದ 3ರವರೆಗೆ ಅಧ್ಯಯನ. 3ರಿಂದ 3.30ರವರೆಗೆ ಸ್ನಾನ. 3.30ರಿಂದ 5.30ರ ತನಕ ಧ್ಯಾನ, ಪೂಜೆ, ಭಜನೆ ನಂತರ ತಿಂಡಿ. 5.30ರ ನಂತರ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥನೆ ನಂತರ ಮಠದ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ತಲ್ಲೀನ. 6ರಿಂದ 8ರತನಕ ವಿದ್ಯಾರ್ಥಿಗಳೊಂದಿಗೆ ಸಂಜೆಯ ಪ್ರಾರ್ಥನೆ ನಂತರ ಭಜನೆ. 8ರಿಂದ 11ರ ತನಕದ ಸಮಯ ವಿವಿಧ ತತ್ವಶಾಸ್ತ್ರಜ್ಞರ ಕುರಿತು ಅಧ್ಯಯನಕ್ಕೆ ಮೀಸಲು. ಇದೇ ಏನೋ ಅವರ ದೀರ್ಘಾಯುಷ್ಯದ ಗುಟ್ಟು ಅನಿಸುತ್ತದೆ.

ಬೆಳಗಿನ ಉಪಹಾರಕ್ಕೆ ಒಂದು ಇಡ್ಲಿ ಜೊತೆಗೆ ಮಸಾಲೆ ರಹಿತ ಸಾಂಬಾರ್ ಮತ್ತು ಒಂಚೂರು ಹಣ್ಣು. ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆ, ಸ್ವಲ್ಪ ಅನ್ನ ರಸ. ರಾತ್ರಿ ಊಟ ಇದಕ್ಕಿಂತಲೂ ಅಲ್ಪವಾಗಿರುತ್ತದೆ. ಸ್ವಾಮೀಜಿಗಳಿಗೆ ಕಾಫಿ, ಚಹ ಅಥವಾ ಹಾಲು ಕುಡಿಯುವ ಅಭ್ಯಾಸವಿಲ್ಲ. ಬೇವಿನ ಕಷಾಯವನ್ನು ಮಾತ್ರ ಸೇವಿಸುತ್ತಾರೆ. ಆದರೆ ಬೆಳಗಿನ ಪತ್ರಿಕೆಗಳನ್ನು ಓದುವುದನ್ನು ಮಾತ್ರ ತಪ್ಪಿಸುವುದಿಲ್ಲ. ವಿಶ್ವದ ಹಾಗುಹೋಗುಗಳ ಬಗ್ಗೆ ಸದಾ ಗಮನವಿಟ್ಟಿರುತ್ತಾರೆ. ಹಿಂಸಾಚಾರ, ರಕ್ತಪಾತದ ಸುದ್ದಿಗಳು ಕಣ್ಣಿಗೆ ಬಿದ್ದರೆ ಸ್ವಾಮಿಜಿಗಳ ಕಣ್ಣು ಹನಿಗೂಡುತ್ತದೆ.

'' ಬುದ್ಧಿ, ನಿಮ್ಮನ್ನು ಕಾಣಲು ಸರ್ಕಾರಿ ಉನ್ನತಾಧಿಕಾರಿಯೊಬ್ಬರು ಬಂದಿದ್ದಾರೆ'' ಎಂದು ಶಿವಕುಮಾರ ಸ್ವಾಮಿಗಳ ಕಿವಿಯ ಬಳಿ ವ್ಯಕ್ತಿಯೊಬ್ಬ ಹೇಳುತ್ತಾನೆ. ''ಬುದ್ಧಿ ನೀವು ನಮ್ಮ ಕಾಲೇಜಿಗೆ ಬರಬೇಕು, ನಿಮ್ಮನ್ನು ಸನ್ಮಾನಿಸಬೇಕು ಎಂದು ಕೊಂಡಿದ್ದೇವೆ'' ಎಂದು ಕೋಟು ತೊಟ್ಟ ಕಾಲೇಜು ವಿದ್ಯಾರ್ಥಿ ಭಿನ್ನವಿಸಿಕೊಳ್ಳುತ್ತಾನೆ.''ಬುದ್ಧಿ , ಇವತ್ತಿನ ಪ್ರಸಾದಕ್ಕೆ ಏನು ಮಾಡಬೇಕು?'' ಎಂದು ಅಡುಗೆ ಭಟ್ಟ ಪ್ರಶ್ನಿಸುತ್ತಾನೆ. ''ಬುದ್ಧಿ ನಿಮ್ಮ ಆಶೀರ್ವಾದ ಪಡೆಯಲು ದೂರದ ಊರಿಂದ ಜನಬಂದವರೆ'' ಎನ್ನುತ್ತಾನೆ ಮತ್ತೊಬ್ಬ. ಮಠದ ಕಡತಗಳಲ್ಲಿ ತಲ್ಲೀನರಾಗಿರುವ ಶಿವಕುಮಾರಸ್ವಾಮಿಗಳು ನಿಧಾನಕ್ಕೆ ತಲೆ ಎತ್ತಿ ಶಾಂತಚಿತ್ತರಾಗಿ ಕಾಣಲು ಬಂದ ಉನ್ನತಾಧಿಕಾರಿಯನ್ನು ಕಚೇರಿಯಲ್ಲಿ ಕೂರಲು, ವಿದ್ಯಾರ್ಥಿಗಳನ್ನು ಚೆನ್ನಾಗಿ ಓದಿಕೊಳ್ಳಬೇಕೆಂದು, ಅಡಿಗೆ ಭಟ್ಟರಿಗೆ ನಿಮಗಿಷ್ಟವಾದದ್ದನ್ನು ಮಾಡಿ ಎಂದು ಹೇಳಿ, ದೂರದ ಊರಿಂದ ಬಂದವರನ್ನು ಕಾಣಲು ಹೊರಡುತ್ತಾರೆ. ಏಕೆಂದರೆ ಅವರು ಬೇಗ ಊರು ಸೇರಿಕೊಳ್ಳಲಿ ಎಂದು. ಯಾರೇ ಆಗಲಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟರೆ ಈ ಅನುಭವ ನಿಮ್ಮ ಗಮನಕ್ಕೆ ಬರುತ್ತದೆ.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟರೆ ಕ್ಯಾಬಿನೆಟ್ ದರ್ಜೆ ಸಚಿವನಾಗಿರಲಿ ಅಥವಾ ಬಡ ರೈತನೇ ಆಗಿರಲಿ ಎಲ್ಲರಿಗೂ ಒಂದೇ ತೆರನಾದ ಪ್ರಸಾದ. ಮಠ ಮೇಲು ಕೀಳು ಎಂದೆಣಿಸದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಪ್ರತಿ ನಿತ್ಯ ಇಲ್ಲಿ 10 ಸಾವಿರ ಮಂದಿ ಊಟ ಮಾಡುತ್ತಾರೆ, ಸಹಸ್ರಾರು ಮಂದಿ ಆಶ್ರಿತರಾಗಿದ್ದಾರೆ. ಸಿದ್ಧಗಂಗಾ ಮಠ ಅಕ್ಷಯ ಪಾತ್ರೆ ಇದ್ದಂತೆ. ಅಡುಗೆ ಮನೆಯ ಒಲೆ ಸದಾ ಉರಿಯುತ್ತಲೇ ಇರುತ್ತದೆ. ಇಲ್ಲಿ ಅನ್ನ, ಆಶ್ರಯ ದಾಸೋಹಗಳು ನಿಲ್ಲುವುದಿಲ್ಲ. ಪ್ರಾಥಮಿಕ ಶಾಲೆಯಿಂದ ಇಂಜಿನಿಯರಿಂಗ್ ಮತ್ತು ಮೆಡಿಕಲ್‌ವರೆಗೆ ಮಠ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಧ ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಅಕ್ಷರ ದಾಸೋಹ ನಿತ್ಯ ಕೈಂಕರ್ಯ. ''ಕಾವಿಯುಡಿಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ...'' ಎಂಬ ಡಾ.ಜಿ.ಎಸ್.ಶಿವರುದ್ರಪ್ಪನವರ ಸಾಲುಗಳು ನೆನಪಾಗುತ್ತವೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X