• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪರೂಪದ ಸಾಂಸ್ಕೃತಿಕ ಪರಿಚಾರಕ ರಾಜುಮೇಷ್ಟ್ರು

By Staff
|

Beloved teacher Chi Srinivasrajuಕನ್ನಡದ ಸಾಹಿತ್ಯಿಕ ಕುಸುಮಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಕೃಷಿಯ ಸ್ವಾರ್ಥವನ್ನು ಬದಿಗಿಟ್ಟ ಪ್ರೀತಿಯ ರಾಜುಮೇಷ್ಟು ನವೆಂಬರ್ 28ರಂದು 65ರ ಪ್ರಾಯಕ್ಕೆ ಕಾಲಿಟ್ಟಿದ್ದರು. ನಂತರ ಸರಿಯಾಗಿ ಒಂದು ತಿಂಗಳಿಗೆ ಡಿಸೆಂಬರ್ 28ರಂದು ಸಾರಸ್ವತ ಲೋಕವನ್ನು, ಕನ್ನಡ ಸಂಘವನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ. ಕನ್ನಡದ ಕೈಂಕರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಪ್ರೀತಿಯ ರಾಜುಮೇಷ್ಟ್ರಿಗೆ ಅಕ್ಷರನಮನ.

  • ಪುಟ್ಟರಾಜು, ಶಿರಾ

ಬಹುತೇಕ ಸೃಜನಶೀಲ ಸಾಧಕರಂತೆ ಶ್ರೀನಿವಾಸರಾಜು ಅವರ ಬೇರುಗಳಿರುವುದೂ ಗ್ರಾಮೀಣ ಪರಿಸರದಲ್ಲೇ. ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ಶ್ರೀನಿವಾಸರಾಜು ಅವರ ತವರು. ಹುಟ್ಟಿದ್ದು ನವಂಬರ್‌ 28, 1942ರಲ್ಲಿ. ತಂದೆ ಚಿಕ್ಕರಾಜು, ಸರ್ಕಾರಿ ನೌಕರರು. ತಾಯಿ ಸಾವಿತ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಚಿಕ್ಕಬಳ್ಳಾಪುರದಲ್ಲಿ, ಬೆಳೆದದ್ದು ದೊಡ್ಡಮ್ಮನ ಆಶ್ರಯದಲ್ಲಿ. ಮಗ ಪೊಲೀಸ್‌ ಇಲಾಖೆಗೆ ಸೇರಬೇಕೆಂದು ಅಪ್ಪ ಬಯಸಿದ್ದರೂ, ನಡೆದದ್ದೇ ಬೇರೆ. ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ರಾಜು ಬಿ.ಎಸ್ಸಿ ಓದಿದರು. ನಂತರ ಬಿ.ಎ, ಎಂ.ಎ- ಇದಿಷ್ಟೂ ವಿದ್ಯಾಭ್ಯಾಸದ ಮಾತು.

ಇಷ್ಟಪಟ್ಟಿದ್ದರೆ ಶ್ರೀನಿವಾಸರಾಜು ಇಂಜಿನಿಯರಿಂಗ್‌ ಓದಬಹುದಿತ್ತು. ದಾವಣಗೆರೆಯಲ್ಲಿ ಸೀಟೂ ಸಿಕ್ಕಿತ್ತು. ಆದರೆ ಮಗ ಕಣ್ಮುಂದೆಯೇ ಇರಲೆಂಬ ಹೆತ್ತವರ ಆಸೆ ಶ್ರೀನಿವಾಸರಾಜು ಅವರ ದಿಕ್ಕನ್ನು ಬದಲಿಸಿತು. ಆದದ್ದೆಲ್ಲಾ ಒಳ್ಳೆಯದೇ. ಶ್ರೀನಿವಾಸರಾಜು ಇಂಜಿನಿಯರ್‌ ಆಗಿದ್ದಿದ್ದರೆ ಆರ್ಥಿಕ ದೃಷ್ಟಿಯಿಂದ ಅವರ ಬದುಕು ಇನ್ನಷ್ಟು ಸುಧಾರಿಸುತ್ತಿತ್ತೇನೋ ; ಆದರೆ ಅಪರೂಪದ ಸಾಂಸ್ಕೃತಿಕ ಪರಿಚಾರಕನನ್ನು ಕನ್ನಡ ಸಾರಸ್ವತ ಲೋಕ ಕಳೆದುಕೊಳ್ಳುತ್ತಿತ್ತು.

'ಲೋಹ ಅಭಿವೃದ್ಧಿ ಮಂಡಳಿ"ಯಲ್ಲಿ ಸಾರಿಗೆ ಅಧಿಕಾರಿಯಾಗಿ ನೌಕರಿ ಆರಂಭಿಸಿ, ಎರಡು ವರ್ಷ ದುಡಿಯುವಷ್ಟರಲ್ಲಿ ಸಾಂಸ್ಕೃತಿಕ ಲೋಕದ ಸೆಳೆತಕ್ಕೆ ಒಳಗಾದ ಶ್ರೀನಿವಾಸರಾಜು ಅವರಿಗೆ ವೃತ್ತಿ ಬೇಸರ ತಂದಿತು. ಬಿ.ಎ ಕ್ಲಾಸಿಗೆ ಸೇರಿಕೊಳ್ಳುವ ಮೂಲಕ ಓದು ಮುಂದುವರಿಸಿದರು. ನಂತರದಲ್ಲಿ ಎಂ.ಎ. ಈ ದಿನಗಳಲ್ಲಿ ಕೆ.ವಿ.ನಾರಾಯಣ, ಎಚ್‌.ಎಸ್‌.ರಾಘವೇಂದ್ರ ರಾವ್‌, ಕಿ.ರಂ.ನಾಗರಾಜು ಮುಂತಾದ ಗೆಳೆಯರ ಒಡನಾಟದಿಂದಾಗಿ ಕನ್ನಡದ ಬಗೆಗಿನ ಆಸಕ್ತಿ ಹದಗೊಂಡರೆ, 'ಕನ್ನಡ ಮೇಷ್ಟ್ರು" ಪರಂಪರೆಗೆ ಗೌರವ ತಂದ ಜಿ.ಪಿ.ರಾಜರತ್ನಂ, ಎಂ.ವಿ.ಸೀತಾರಾಮಯ್ಯ, ರಂ.ಶ್ರೀ.ಮುಗಳಿ, ಜಿ.ಎಸ್‌.ಶಿವರುದ್ರಪ್ಪನವರಿಂದ ಪಾಠ ಕೇಳುವ ಯೋಗ ಕನ್ನಡದ ಬಗೆಗಿನ ಪ್ರೀತಿ ಬೆಳೆಸಿತು.

ಶ್ರೀನಿವಾಸರಾಜು ಅವರು ಕ್ರೈಸ್ಟ್‌ ಕಾಲೇಜು ಸೇರಿದ್ದು 1969 ರಲ್ಲಿ. ಅಪ್ಪಟ ಇಂಗ್ಲಿಷ್‌ ಸಂಸ್ಕೃತಿಯ ಪರಿಸರದಲ್ಲಿ ಕನ್ನಡದ ಬೀಜ ಊರುವ ಸವಾಲು ಅವರ ಮುಂದಿತ್ತು. ಕಾಲೇಜು ಸೇರಿದ ಮರುವರ್ಷವೇ (1970) ಮದುವೆಯಾದರು. ಸರಸ್ವತಿ ಅವರನ್ನು ಮದುವೆಯಾದ ಎರಡೇ ವರ್ಷಗಳಲ್ಲಿ (1972) ರಾಜು ಅವರಿಗೆ ಇನ್ನೊಂದು ಮದುವೆ; ಕನ್ನಡ ಸಂಘದ ರೂಪದಲ್ಲಿ. (ಕುಟುಂಬದ ಬಗ್ಗೆ ಹರಿಸಿದ್ದಕ್ಕಿಂಥ ಹೆಚ್ಚು ಗಮನವನ್ನು ಕನ್ನಡ ಸಂಘದ ಚಟುವಟಿಕೆಗಳಿಗೆ ನೀಡಿದ್ದರಿಂದ, ಕನ್ನಡ ಸಂಘವನ್ನು ರಾಜುಮೇಷ್ಟ್ರ ಎರಡನೇ ಹೆಂಡತಿ ಅಂದರೆ ತಪ್ಪಿಲ್ಲ!)

ಅಧ್ಯಯನದ ದಿನಗಳಲ್ಲಿ ಸೆಂಟ್ರಲ್‌ ಕಾಲೇಜಿನ ಪರಿಸರ ಶ್ರೀನಿವಾಸರಾಜು ಅವರ ಮೇಲೆ ಎರಡು ರೀತಿಯಲ್ಲಿ ಪ್ರಭಾವ ಬೀರಿತ್ತು. ಮೊದಲನೆಯದಾಗಿ, ರಾಜು ಅವರನ್ನು ಸೆಂಟ್ರಲ್‌ ಕಾಲೇಜಿನ ಪರಿಸರದ ತುಂಬಾ ವ್ಯಾಪಿಸಿದ್ದ ಜಿ.ಪಿ.ರಾಜರತ್ನಂ ತುಂಬಾ ಸೆಳೆದರು. ಸೆಂಟ್ರಲ್‌ ಕಾಲೇಜಿನಲ್ಲಿ ರಾಜರತ್ನಂ ರೂಪಿಸಿ ಬೆಳೆಸಿದ ಕನ್ನಡ ಸಂಘ, ಕ್ರೈಸ್ಟ್‌ ಕಾಲೇಜಿನಲ್ಲಿ ಕನ್ನಡ ಸಂಘ ರೂಪಿಸುವಾಗ ಶ್ರೀನಿವಾಸರಾಜು ಅವರಿಗೆ ಮಾದರಿಯಾಯಿತು. ಎರಡನೆಯದಾಗಿ, ಸೆಂಟ್ರಲ್‌ ಕಾಲೇಜಿನ ಲೈಬ್ರರಿ ಮುಂದಿನ ಕಲ್ಲುಬೆಂಚು ಅರ್ಥಾತ್‌ 'ಪಿಪಿ ಕಟ್ಟೆ" (ಪಿಪಿ ಅಂದರೆ ಪೋಲಿ ಪಟಾಲಂ ಅಂತಾರೆ ಮೇಷ್ಟ್ರು) ರಾಜು ಅವರ ವಿಚಾರಗಳನ್ನು ಗಟ್ಟಿಗೊಳಿಸಿತು. ಗೆಳೆಯರ ಪಟಾಲಂನ ಸಂಜೆಯ ಸಭೆ ನಡೆಯುತ್ತಿದ್ದುದು ಈ ಕಟ್ಟೆಯ ಮೇಲೆಯೇ. 'ಅಂಕಣ", 'ಶೂದ್ರ" ಪತ್ರಿಕೆಗಳು ಹುಟ್ಟಿದ್ದು 'ಪಿಪಿ ಕಟ್ಟೆ" ಸಭೆಗಳಲ್ಲೇ.

ಕ್ರೈಸ್ಟ್‌ ಕಾಲೇಜು ಕನ್ನಡ ಸಂಘ ಶ್ರೀನಿವಾಸರಾಜು ಅವರ ಶ್ರಮ-ಕನಸಿನ ಅಭಿವ್ಯಕ್ತಿ. ಕನ್ನಡಸಂಘ ಹಾಗೂ ಶ್ರೀನಿವಾಸರಾಜು ಅವರನ್ನು ಪ್ರತ್ಯೇಕವಾಗಿ ನೆನೆಯುವುದು ಸಾಧ್ಯವೇ ಇಲ್ಲ. ಬಯಸಿದ್ದರೆ ಯಾವುದೊ ಒಂದು ವಿಶ್ವ ವಿದ್ಯಾಲಯದ ಪ್ರಮುಖ ಸ್ಥಾನವನ್ನು ಅಲಂಕರಿಸಬಹುದಿತ್ತಾದರೂ, ನಿವೃತ್ತಿ ಹೊಂದುವ ದಿನದವರೆಗೂ ಶ್ರೀನಿವಾಸರಾಜು ಕ್ರೆಸ್ಟ್‌ ಕಾಲೇಜಿನಲ್ಲೇ ಉಳಿದರು. ಬೆಂಗಳೂರಿನ ಪ್ರತಿಷ್ಠಿತ ಹಾಗೂ ಹೈಟೆಕ್‌ ಕಾಲೇಜುಗಳಲ್ಲೊಂದಾದ ಕ್ರೈಸ್ಟ್‌ ಕಾಲೇಜಿನ ಹೆಸರನ್ನು ಕನ್ನಡ ಸಂಘದ ಮೂಲಕ ನಾಡಿನುದ್ದಕ್ಕೂ ಮುಟ್ಟಿಸಿದ ಕೀರ್ತಿ ರಾಜು ಅವರಿಗೆ ಸಲ್ಲುತ್ತದೆ.

ಬೇರೆಯವರ ಪುಸ್ತಕ ಪ್ರಕಟಿಸುವುದರಲ್ಲಿ, ಆ ಪುಸ್ತಕಗಳನ್ನು ಸಹೃದಯರಿಗೆ ಮುಟ್ಟಿಸುವುದರಲ್ಲೇ ಸಾರ್ಥಕತೆ ಕಂಡ ಶ್ರೀನಿವಾಸರಾಜು ತಾವು ಬರೆದದ್ದು ಕಡಿಮೆ. ನಾಟಕ, ಕಥೆ, ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಆಗಾಗ ತೊಡಗಿಸಿಕೊಂಡ ಅವರಿಗೆ ಪೂರ್ಣ ಪ್ರಮಾಣದಲ್ಲಿ ಬರಹಗಾರರಾಗಲು ಬಿಡುವಾಗಲೇ ಇಲ್ಲ. ಶ್ರೀನಿವಾಸರಾಜು ಅವರ ಮೂಕ ನಾಟಕಗಳನ್ನು ಕನ್ನಡ ಸಾಹಿತ್ಯದಲ್ಲಿ ವಿಭಿನ್ನ ಪ್ರಯೋಗಗಳು ಎಂದು ಗುರ್ತಿಸಲಾಗಿದೆ.

ಕನ್ನಡ ಸಂಘದ ಮೂಲಕ 170ಕ್ಕೂ ಹೆಚ್ಚು ಪುಸ್ತಕಗಳ ಪ್ರಕಟಿಸಿದ ಶ್ರೀನಿವಾಸರಾಜು ಒತ್ತು ನೀಡಿದ್ದು ಯುವಬರಹಗಾರರಿಗೆ, ಅದರಲ್ಲೂ ಕವಿಗಳಿಗೆ. ಎಚ್‌.ಎಸ್‌.ಶಿವಪ್ರಕಾಶ್‌, ಎಸ್‌.ಮಂಜುನಾಥ್‌, ಪ್ರತಿಭಾ ನಂದಕುಮಾರ್‌, ಅಬ್ದುಲ್‌ ರಷೀದ್‌, ಟಿ.ಎನ್‌.ಸೀತಾರಾಂ, ಅಮರೇಶ ನುಗಡೋಣಿ, ಬಸವರಾಜ ಕಲ್ಗುಡಿ, ಎಚ್‌.ಎಸ್‌.ರಾಘವೇಂದ್ರ ರಾವ್‌, ಕೆ.ಎನ್‌.ಹನುಮಂತಯ್ಯ ಅವರ ಮೊದಲ ಪುಸ್ತಕಗಳು ಪ್ರಕಟವಾದದ್ದು ಕನ್ನಡ ಸಂಘದ ಮೂಲಕವೇ. ಇದೆಲ್ಲ ಸಾಹಿತ್ಯ ಪರಿಚಾರಕ ಶ್ರೀನಿವಾಸರಾಜು ಅವರ ಮುಖ. ತುಂಬಾ ಜನಕ್ಕೆ ಗೊತ್ತಿಲ್ಲದ ಇನ್ನೊಂದು ಮುಖ ಅವರಿಗಿತ್ತು. ದಾರಿಯಲ್ಲಿ ಎನ್‌ಸಿಸಿ ಸಮವಸ್ತ್ರ ಧರಿಸಿದ ವಿದ್ಯಾರ್ಥಿಯಾಬ್ಬ ನಡೆದುಹೋಗುತ್ತಿದ್ದರೆ ಶ್ರೀನಿವಾಸರಾಜು ಅವರ ನಡಿಗೆ ನಿಧಾನವಾಗುತ್ತಿತ್ತು. ಅದೇರೀತಿ, ಫುಟ್ಬಾಲ್‌ ಆಡುವ ಹುಡುಗರನ್ನು ಕಂಡಾಗ ಅವರ ಕಣ್ಣುಗಳಲ್ಲಿ ಹೊಳಪು ಕಾಣಿಸುತ್ತದೆ. ವಿದ್ಯಾರ್ಥಿ ದಿನಗಳಲ್ಲಿ ಶ್ರೀನಿವಾಸರಾಜು ಅವರಿಗೆ ಎನ್‌ಸಿಸಿ ಎಂದರೆ ಅಚ್ಚುಮೆಚ್ಚು. ವಿದ್ಯಾರ್ಥಿಯಾಗಿದ್ದಾಗ ಎನ್‌ಸಿಸಿ ಕೆಡೆಟ್‌ ಆಗಿದ್ದ ಅವರು, ಆನಂತರ ಎನ್‌ಸಿಸಿ ಅಧಿಕಾರಿಯಾಗಿಯೂ ದುಡಿದಿದ್ದರು. ಎನ್‌ಸಿಸಿಯಷ್ಟೇ ಪುಟ್ಬಾಲ್‌ ಅವರಿಗಿಷ್ಟ. ಕಾಲ್ಚೆಂಡಿನಾಟದಲ್ಲಿ ಗೋಲು ರಕ್ಷಕರಾಗಿ ಚೆಂಡು ಹಿಡಿಯುವುದು ತುಂಬಾ ಖುಷಿ ಕೊಡುವ ಸಂಗತಿಯಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more