ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಾರಾವ್‌ : ಕನ್ನಡ ಪತ್ರಕರ್ತರಲ್ಲಿ ಮರೆಯಲಾಗದ ಸಜ್ಜನ!

By Staff
|
Google Oneindia Kannada News
K. Rajaraoನಾನಿನ್ನೂ ಆಗ ಹೈಸ್ಕೂಲ್‌ ವಿದ್ಯಾರ್ಥಿ. ಅಪ್ಪ (ಹೆಚ್‌.ಆರ್‌.ನಾಗೇಶರಾವ್‌) ‘ ಸಂಯುಕ್ತ ಕರ್ನಾಟಕ(ಸಂಕ)’ದ ಸುದ್ದಿ ಸಂಪಾದಕರಾಗಿದ್ದರಿಂದ ಮೊದಲು ನಾನು ಗಮನಿಸುತ್ತಿದ್ದದ್ದು ಆ ಪತ್ರಿಕೆಯನ್ನೇ. ಇತ್ತ ನಮ್ಮಪ್ಪ ಎಲ್ಲ ಪತ್ರಿಕೆಗಳತ್ತ ಒಮ್ಮೆ ಕಣ್ಣು ಹಾಯಿಸಿ ನಂತರವಷ್ಟೇ ‘ ಸಂಕ’ದ ಪುಟಗಳನ್ನು ತಿರುಗಿಸುತ್ತಿದ್ದದ್ದು ನನಗೆ ಅನುಕೂಲವಾಗಿತ್ತು.

ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದೆ ಪತ್ರಿಕೋದ್ಯಮ ಇಂದಿನಂತೆ ‘ಎಕ್ಸ್‌ಪ್ಲೋಸಿವ್‌’ ಆಗಿರಲಿಲ್ಲ. ಎಂದಾದರೂ ಪತ್ರಿಕೆಗಳಲ್ಲಿ ರೋಚಕ ಸುದ್ದಿಗಳು ಬರುವುದೆ? ಎಂದು ಕಾಯುತ್ತಿದ್ದ ದಿನಗಳವು. ಆ ಸಮಯದಲ್ಲಿ ಅಲ್ಲಲ್ಲಿ ಮಿಂಚಿಸುತ್ತಿದ್ದ ತನಿಖಾ ವರದಿಗಳ ಮೂಲಕ ರಾಜಾರಾವ್‌ ನನ್ನಂಥ ಪಡ್ಡೆ ಹುಡುಗರಿಗೆ ‘ಹೀರೋ’ ಆಗಿದ್ದರು. ಈ ಸಂದರ್ಭದಲ್ಲಿ ನನ್ನ ನೆನಪಿನಿಂದ ಇನ್ನೂ ಅಚ್ಚಳಿಯದೇ ಉಳಿದಿರುವ ಘಟನೆಯೆಂದರೆ ‘ಸುಮಿತ್ರಾ ದೇಸಾಯಿ ಪ್ರಕರಣ’.

ನನಗೆ ತಿಳಿದ ಮಟ್ಟಿಗೆ ಅಂದಿನ ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದ ಕಿತ್ತೂರ್‌ ಅವರ ರಾಜೀನಾಮೆಗೆ ಆ ವರದಿ ಕಾರಣವಾಗಿತ್ತು. ಅಂಥ ಸುದ್ದಿಯನ್ನು ಮೊದಲು ಹೊರತೆಗೆದವರು ನಮ್ಮ ಈ ರಾಜಾರಾವ್‌. ಬಹುಶಃ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ಇದೇ ಕಾರಣಕ್ಕಾಗಿ ಅವರಿಗೊಂದು ಪುಟ್ಟ ಸನ್ಮಾನವೂ ನಡೆದಿತ್ತು. ಸಂಘದ ನಿಯತಕಾಲಿಕ ‘ಪತ್ರಕರ್ತ’ದಲ್ಲಿ ಸುದೀರ್ಘ ವರದಿಯೊಂದು ಪ್ರಕಟವಾಗಿತ್ತೆಂದು ನೆನಪು.

ಮುಂದೆ ‘ಸಂಕ’ದ ಮಾಲಿಕತ್ವ ಘೋರ್ಪಡೆಯವರಿಗೆ ಹಸ್ತಾಂತರವಾದ ಸಮಯ. ‘ಕರ್ಮವೀರ’ ಪತ್ರಿಕೆಗೆ ಹೊಸತನ ನೀಡುವ ಕಾರ್ಯ ಕೆ.ಜನಾರ್ದನರ ನೇತೃತ್ವದಲ್ಲಿ ನಡೆದಿತ್ತು. ಗೋಪಾಲ ವಾಜಪೇಯಿ, ಗಂಗಾಧರ ಮೊದಲಿಯಾರ್‌ ಮುಂತಾದ ಯುವ ಪಾಳಯ ‘ಕರ್ಮವೀರ’ವನ್ನು ಮುನ್ನಡೆಸುತ್ತಿತ್ತು. ಸಣ್ಣ-ಪುಟ್ಟ ಚುಟುಕ, ನಗೆಹನಿ, ಅನುಭವಗಳನ್ನು ಬರೆದು ಕಳುಹಿಸುವ ಹವ್ಯಾಸವನ್ನು ನನ್ನಂಥವರು ಬೆಳೆಸಿಕೊಳ್ಳಲು ಹೊಸ ‘ಕರ್ಮವೀರ’ ಅವಕಾಶ ಮಾಡಿಕೊಟ್ಟಿತ್ತು. ಆ ಸಮಯದಲ್ಲೊಂದು ರೋಮಾಂಚಕ ಪತ್ತೇದಾರಿ ಕಾದಂಬರಿ ‘ಕೈ ಕೊಟ್ಟ ಕನಕಾಂಬರ’ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಅದನ್ನು ಬರೆದವರು ಇದೇ ಕರಣಂ ರಾಜಾರಾವ್‌. ಇಷ್ಟೆಲ್ಲಾ ಅಭಿಮಾನವಿಟ್ಟುಕೊಂಡಿದ್ದ ರಾಜಾರಾಯರನ್ನು ನಾನು ನೇರವಾಗಿ ಭೇಟಿಯಾಗಿಯೇ ಇರಲಿಲ್ಲ.

ಎರಡು ವರ್ಷಗಳ ಹಿಂದೆ ‘ದಟ್ಸ್‌ಕನ್ನಡ ಡಾಟ್‌ ಕಾಮ್‌’ ಸಂಪಾದಕ ಶ್ಯಾಮಸುಂದರ ಪ್ರೆಸ್‌ಕ್ಲಬ್‌ನಲ್ಲೊಂದು ಸಂಜೆ ರಾಜಾರಾಯರನ್ನು ಭೇಟಿ ಮಾಡಿಸಿದ್ದರು. ಅಗಲಿದ ನನ್ನ ತಂದೆಯ ಬಗ್ಗೆ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಅಭಿಮಾನಪೂರ್ವಕವಾಗಿ ಸದ್ಯದಲ್ಲೇ ಪ್ರೆಸ್‌ಕ್ಲಬ್‌ ವತಿಯಿಂದ ಬಿಡುಗಡೆಯಾಗಲಿರುವ ನನ್ನ ತಂದೆಯವರ ನೆನಪು ಸಂಚಿಕೆಗೆ ಲೇಖನ ಬರೆದುಕೊಟ್ಟಿದ್ದರು. ಬಿಡುಗಡೆಯ ಸಮಯದಲ್ಲಿ ತಪ್ಪದೇ ಕರೆಯಬೇಕೆಂದು ಒತ್ತಾಯಿಸಿದ್ದರು.

ಅವರು ನೆನಪಿಸಿಕೊಂಡ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸುವುದು ಅಪ್ರಸ್ತುತವಾಗದು. ತುಮಕೂರಿನ ಕಾಲೇಜಿನಲ್ಲಿ ಕಲಿತ ರಾಜಾರಾವ್‌ ಅಲ್ಲಿ ಪ್ರಾಧ್ಯಾಪಕರಾಗಿದ್ದ ಜಿ.ಆರ್‌.ಶ್ರೀನಿವಾಸಮೂರ್ತಿ (ಜಿ.ಆರ್‌.ಎಸ್‌.) ಅವರ ನೆಚ್ಚಿನ ಶಿಷ್ಯರು. ಈ ಜಿ.ಆರ್‌.ಎಸ್‌. ತುಮಕೂರಿನಲ್ಲಿ ನನ್ನ ತಂದೆಯ ಶಾಲಾ-ಕಾಲೇಜು ಸಹಪಾಠಿಗಳಾಗಿದ್ದವರು. ನನ್ನ ತಂದೆ ಸ್ವಾತಂತ್ರ್ಯಪೂರ್ವದಲ್ಲಿ ಜಿ.ಆರ್‌.ಎಸ್‌. ಜತೆಗೂಡಿ ಸಂಪಾದಿಸುತ್ತಿದ್ದ ಕೈಬರಹ ಪತ್ರಿಕೆ ಮತ್ತೆ ಜೀವಂತಗೊಂಡಿದ್ದು, ರಾಜಾರಾಯರು ಅದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ. ಈ ಪರೋಕ್ಷ ಶಿಷ್ಯವೃತ್ತಿ ‘ ಸಂಕ’ದಲ್ಲಿ ಪ್ರತ್ಯಕ್ಷವಾಗಿ ಮುಂದುವರಿದ ಬಗ್ಗೆ ರಾಜಾರಾವ್‌ ತುಂಬು ಹೃದಯದಿಂದ ನೆನೆಸಿಕೊಳ್ಳುತ್ತಿದ್ದರು. ಇದು ಅವರ ಸಜ್ಜನಿಕೆಗೆ ಸಾಕ್ಷಿ.


ಪೂರಕ ಓದಿಗೆ-
ತುಸು ಹುಂಬತನ, ಸ್ವಲ್ಪ ಜಾಣತನ, ಅಪಾರ ಒಳ್ಳೆಯತನ - ಇವರು ರಾಜಾರಾವ್‌


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X