ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಿರು ಹಾಸ್ಯದ ಸಾಮ್ರಾಟ ಮೆಹಮೂದ್‌

By Staff
|
Google Oneindia Kannada News

Tribute to comedian Mehmood Aliಸೀದಾ ಒಂದು ಅಂಗಡಿಗೆ ಹೋಗಿ ‘ಮೈ ಮನಗಳಿಗೆ ಕಚಗುಳಿ ಇಡುವಂಥ, ಹುಚ್ಚೆದ್ದು ಕುಣಿವಂಥ, ಮನಸ್ಸಿನ ಭಾರ ಇಳಿಸಿಕೊಳ್ಳುವಂಥ’ ಯಾವುದಾದರೂ ಒಂದು ಸಿನಿಮಾ ಸಿಡಿ ಬೇಕೆಂದು ಕೇಳಿ. ಆತ ಥಟ್ಟನೆ ಮೆಹಮೂದ್‌ನ ಸಿನಿಮಾದ ಸಿಡಿಯಾಂದನ್ನು ನಿಮ್ಮ ಕೈಗಿಡುತ್ತಾನೆ !

ಮೆಹಮೂದ್‌ ಒಂದು ರೀತಿಯಲ್ಲಿ ನಗುವಿನ ಕಾರ್ಖಾನೆ. ಈಗಿನ ಹಾಸ್ಯನಟರಂತೆ ನಿಮ್ಮನ್ನು ನಗಿಸಲು ಆತ ಅಶ್ಲೀಲ ಸಂಭಾಷಣೆಯ ಮೊರೆ ಹೋಗುವುದಿಲ್ಲ . ತನ್ನ ಆಂಗಿಕ ಪರಿಭಾಷೆಯಿಂದಲೇ ಆತ ನಿಮ್ಮ ಹೊಟ್ಟೆ ಹುಣ್ಣಾಗಿಸುತ್ತಾನೆ. ಮಾತಿಲ್ಲದೇ, ಬರೀ ಅಂ(ಮಂ)ಗಚೇಷ್ಟೆಯಿಂದಲೇ ನಗೆ ಬಾಂಬ್‌ ಸಿಡಿಸುತ್ತಾನೆ. ನಿಂತ ನಿಲುವಿನಲ್ಲೇ ಮಂಗಗಳಿಗಿಂತಲೂ ಹೆಚ್ಚು ಭಂಗಿಗಳನ್ನು ತೋರಬಲ್ಲ ತಾಕತ್ತು ಈತನದು. ಥೇಟ್‌ ನಮ್ಮ ನರಸಿಂಹರಾಜು ಥರ!

ಮೆಹಮೂದ್‌ ಸಿನಿಮಾ-ರಂಗ ನಟ, ನೃತ್ಯ ಪಟು, ಮಮ್ತಾಜ್‌ ಆಲಿಯ ಮಗ. ಪೋಷಕ ನಟಿ ಮಿನೂ ಮಮ್ತಾಜ್‌ ಸೋದರ. ಮೆಹಮೂದ್‌ ಹುಟ್ಟಾ ತುಂಟ. ಚಿಕ್ಕ ಹುಡುಗನಾಗಿದ್ದಾಗಲೊಮ್ಮೆ ಮನೆ ಬಿಟ್ಟು ಓಡಿದ್ದ . ಕೊನೆಗೆ ತಾಯಿ ರೈಲ್ವೆ ನಿಲ್ದಾಣಕ್ಕೆ ಬಂದು ಮಗನನ್ನು ಮನೆಗೆ ಎಳೆದುಕೊಂಡು ಹೋಗಿದ್ದಳು. ‘ಮರ್ಯಾದೆ ಇಲ್ಲ . ನಿನ್ನ ಬಟ್ಟೆಗೂ ಅಪ್ಪನೇ ಹಣ ಕೊಡಬೇಕು’ ಎಂದೊಮ್ಮೆ ಅಮ್ಮ ಬಯ್ದಾಗ ನಿಂತ ನಿಲುವಿನಲ್ಲೇ ಬಟ್ಟೆ ಕಳಚಿದ್ದ .

ಮೆಹಮೂದ್‌ಗೆ ಚಿಕ್ಕಂದಿನಿಂದಲೂ ದುಡಿಯುವ ಚಟ. ಮೀಸೆ ಚಿಗುರುವಷ್ಟರಲ್ಲೇ ಅಲ್ಲಲ್ಲಿ ಪುಡಿಗೆಲಸಗಳನ್ನು ಮಾಡಿಕೊಂಡು ಅಷ್ಟಿಷ್ಟು ಹಣ ಸಂಪಾದಿಸತೊಡಗಿದ್ದ . ಕೋಳಿ, ಕೋಳಿ ಮೊಟ್ಟೆ ಮಾರುವುದರಿಂದ ಹಿಡಿದು, ಟೇಬಲ್‌ ಟೆನಿಸ್‌ ಕಲಿಸುವ ತನಕ ತರಹೇವಾರಿ ಕಸುಬುಗಳನ್ನು ಮಾಡಿದ. ಖ್ಯಾತ ನಟಿ ಮೀನಾ ಕುಮಾರಿಗೂ ಈತ ಟಿಟಿ ಕಲಿಸಿದ್ದ . ಹಾಗೆ ಮೀನಾ ತಂಗಿ ಮಧು ಪರಿಚಯವಾಯಿತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಕೊನೆಗೆ ಮದುವೆಯೂ ಆಯಿತು. ಮಗ ಮಸೂದ್‌ ಹುಟ್ಟಿದ್ದೂ ಆಯಿತು.

ಆಗಿನ್ನೂ 1950ರ ದಶಕದ ಆರಂಭ. ಮೆಹಮೂದ್‌ಗೆ ಸಂಸಾರ ಸಾಗಿಸುವುದು ಕಷ್ಟವಾಗತೊಡಗಿತು. ತಾನು ದುಡಿಯುತ್ತಿರುವುದು ಎಲ್ಲಿಗೂ ಸಾಲದು ಎನಿಸತೊಡಗಿತ್ತು . ಮೀನಾ ಕುಮಾರಿ ಪರಿಚಯದ ಮೇಲೆ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಲಾರಂಭಿಸಿದ. ದೋ ಭೀಗಾ ಜಮೀನ್‌ ಮತ್ತು ಪ್ಯಾಸಾ ಚಿತ್ರಗಳನ್ನಿಲ್ಲಿ ಹೆಸರಿಸಬಹುದು. ಆದರೆ ಈ ಪಾತ್ರಗಳನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ .

ಈ ಹಂತದಲ್ಲಿ ಅತ್ತಿಗೆಯ ನೆರವಿಲ್ಲದೇ, ಸ್ವಸಾಮರ್ಥ್ಯದಿಂದ ಪ್ರಮುಖ ಪಾತ್ರಗಳನ್ನು ಗಿಟ್ಟಿಸಬೇಕೆಂಬ ಹಠ ಆತನಲ್ಲಿ ಮೂಡಿತು. ಅದರ ಫಲಿತಾಂಶವೇ 1958ರಲ್ಲಿ ಬಿಡುಗಡೆಯಾದ ‘ಪರ್ವರಿಶ್‌’. ಈ ಚಿತ್ರದಲ್ಲಿ ರಾಜ್‌ಕಪೂರ್‌ ಸೋದರನಾಗಿ ಸೆಂಟಿಮೆಂಟಲ್‌ ಪಾತ್ರದಲ್ಲಿ ಮೆಹಮೂದ್‌ ಮಿಂಚಿದ. ಬಾಲಿವುಡ್‌ನಲ್ಲಿ ಅವನಿಗೊಂದು ನೆಲೆಯೇನೋ ಸಿಕ್ಕಿತು. ಆದರೆ ಹಾಸ್ಯನಟನಾಗಿ ಅವನನ್ನು ಯಾರೂ ಗುರ್ತಿಸಲಿಲ್ಲ .

1960ರ ದಶಕದಲ್ಲಿ ಮೆಹಮೂದ್‌ ನಟಿಸಿದ ದಕ್ಷಿಣ ಭಾರತೀಯ ನಿರ್ಮಾಪಕರ ‘ಚೋಟಿ ಬೆಹೆನ್‌’ ಎಂಬ ಕರ್ಚೀಫ್‌ ಚಿತ್ರ ಹಿಟ್‌ ಆಯಿತು. ಇದರ ಬೆನ್ನ ಹಿಂದೆಯೇ ಸಸುರಾಲ್‌, ಹಮ್‌ರಾಹಿ, ಜಿಂದಗೀ ಚಿತ್ರಗಳು ಬಂದವು.

ಮೆಹಮೂದ್‌ಗೆ ಹಾಸ್ಯನಟನಾಗಿ ದೊಡ್ಡ ಬ್ರೇಕ್‌ ನೀಡಿದ್ದು ಸಸುರಾಲ್‌. ಈ ಚಿತ್ರದೊಂದಿಗೆ ಮೆಮಮೂದ್‌-ಶುಭಾ ಹಾಸ್ಯ ಜೋಡಿ ಜನಪ್ರಿಯವಾಯಿತು. 60ರ ದಶಕದ ಮಧ್ಯಭಾಗದಲ್ಲಿ ಈ ಜೋಡಿಯ ಗೃಹಸ್ಥಿ, ಭರೋಸಾ, ಜಿದ್ದಿ , ಲವ್‌ ಇನ್‌ ಟೋಕಿಯೋ ಚಿತ್ರಗಳು ಹಿಟ್‌ ಎನ್ನಿಸಿಕೊಂಡವು.

ಮೆಹಮೂದ್‌-ಶುಭಾ ಜೋಡಿ ಎಷ್ಟು ಜನಪ್ರಿಯವಾಯಿತೆಂದರೆ ಪ್ರತಿ ಚಿತ್ರದಲ್ಲೂ ಇವರಿಬ್ಬರದೊಂದು ಡ್ಯುಯೆಟ್‌ ಇರಲೇಬೇಕೆಂದು ಚಿತ್ರ ವಿತರಕರು ಒತ್ತಾಯಿಸುತ್ತಿದ್ದರು. ಅದರಲ್ಲೂ ಮೆಹಮೂದ್‌ ಅಭಿನಯಿಸುವ ಹಾಡಿಗೆ ಮನ್ನಾ ಡೇಯ ಗಾಯನವೇ ಆಗಬೇಕಿತ್ತು . ನಂತರ ಪ್ಯಾರ್‌ ಕಿಯೇ ಜಾ (1966), ಪಡೋಸನ್‌ (1968) ಚಿತ್ರಗಳು ಮೆಹಮೂದ್‌ನನ್ನು ದಂತಕತೆಯನ್ನಾಗಿಸಿದವು.

ಪ್ಯಾರ್‌ ಕಿಯೇ ಜಾ ಚಿತ್ರದಲ್ಲಿ ‘ವಾಹ್‌ ವಾಹ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಡಿ ಚಿತ್ರವನ್ನು ನಿರ್ಮಿಸಲು ಹಣ ನೀಡುವಂತೆ ತಂದೆಯನ್ನು (ಒಂ ಪ್ರಕಾಶ್‌) ಪೀಡಿಸುವ ನಿರ್ದೇಶಕನಾಗಿ ಈತನ ಅಭಿನಯ ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ.

ಇನ್ನು ‘ಪಡೋಸನ್‌’ ಚಿತ್ರದಲ್ಲಂತೂ ಮೆಹಮೂದ್‌ಗೆ ಮೆಹಮೂದನೇ ಸಾಟಿ. ಸಾಯಿರಾ ಬಾನುಗೆ ಸಂಗೀತ ಕಲಿಸುವ ‘ಲುಂಗಿ ಮೇಷ್ಟ್ರಾಗಿ’ ಈತನ ನಟನೆ ಸಾರ್ವಕಾಲಿಕ ನಗೆ ಗುಳಿಗೆ ! ಇಂದಿಗೂ ಹಾಸ್ಯ ಚಿತ್ರಗಳ ಪ್ರಸ್ತಾಪ ಬಂದಾಗ ಮೊದಲು ಉಲ್ಲೇಖವಾಗುವುದು ಪಡೋಸನ್‌ ಮತ್ತು ಸಂಗೀತ ಮೇಷ್ಟ್ರು ಮೆಹಮೂದ್‌.

1980ರ ದಶಕ ಆರಂಭವಾಗುವಷ್ಟರಲ್ಲಿ ಮೆಹಮೂದ್‌ ಬಹುತೇಕ ನೇಪಥ್ಯಕ್ಕೆ ಸರಿದ. ತನ್ನ ಜೀವನದ ಸಂಧ್ಯಾಕಾಲವನ್ನು ಬೆಂಗಳೂರಿನ ಫಾರ್ಮ್‌ಹೌಸ್‌ನಲ್ಲಿ ಕಳೆದ ಮೆಹಮೂದ್‌ ದೂರದ ಅಮೆರಿಕೆಗೆ ಹೋಗಿ ಸಾವನ್ನಪ್ಪಿದ.

ಇಂದು ಮೆಹಮೂದ್‌ ನಮ್ಮೊಂದಿಗಿಲ್ಲ . ಆದರೆ ಬಾಲಿವುಡ್‌ನಲ್ಲಿ ಆತ ಸಿಡಿಸಿದ ನಗೆ ಬಾಂಬ್‌ಗಳ ಘಾಟು ಇನ್ನೂ ಆರಿಲ್ಲ . ಸದ್ಯಕ್ಕಂತೂ ಅದು ಆರುವುದೂ ಇಲ್ಲ . ಬಾಲಿವುಡ್‌ನಲ್ಲಿ ನಗು ಇದ್ದಷ್ಟು ದಿನ ಮೆಹಮೂದ್‌ ಜೀವಂತವಾಗಿರುತ್ತಾನೆ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X