‘ಶಬ್ದ ಪಾಂಡಿತ್ಯ’ದ ಪ್ರೊ.ಜಿ. ವೆಂಕಟಸುಬ್ಬಯ್ಯ
ನಾನು ದೀರ್ಘಕಾಲ ಮುಂಬಯಿ ನಿವಾಸಿಯಾಗಿದ್ದಾಗ ಒಮ್ಮೆ ನನಗೆ ಪ್ರೊ. ಜೀವಿ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಅವರು ಬರೆದುದು ಅವರು ಸಾಹಿತ್ಯ ಪರಿಷತ್ತಿನ ನಿಘಂಟು ಸಮಿತಿಯ ಅಧ್ಯಕ್ಷರಾಗಿದ್ದಾಗ. ನನ್ನ ‘ವಾತ್ಸಲ್ಯ ಪಥ’ ಕಾದಂಬರಿಯಲ್ಲಿ ಕಾಣಿಸಿಕೊಂಡ ಕರಾವಳಿಯ ಯಕ್ಷಗಾನ ಕಲೆಗೆ ಸಂಬಂಧಿಸಿದ ‘ಜೋಡಾಟ’ ಎಂಬ ಶಬ್ದದ ಅರ್ಥ ವ್ಯಾಪ್ತಿಯ ವಿವರಣೆ ಬೇಕೆಂದು ಅವರು ಪತ್ರದಲ್ಲಿ ಕೇಳಿದ್ದರು. ಇದರಲ್ಲಿ ನಿಘಂಟುಕಾರರ ಪರಿಶ್ರಮದ ವ್ಯಾಪ್ತಿಯನ್ನೂ ಭಾಷಾ ಸಂಪತ್ತನ್ನು ಹೆಚ್ಚಿಸುವ ಶಬ್ದ ಸಂಗ್ರಹದಲ್ಲಿ ಇರುವ ಕಷ್ಟಗಳನ್ನೂ ನಾವು ಗುರುತಿಸಬಹುದು. ಪ್ರಾದೇಶಿಕ ಭಾಷೆಯ ಅದರಲ್ಲೂ ಶಬ್ದಗಳ ಅರ್ಥವನ್ನು ಬದಲಿಸದಂತೆ ತೋರುವ ಅನೇಕ ಸನ್ನಿವೇಶಗಳು ನಮಗೆ ಇದಿರಾಗುವುದಿದೆ. ಕನ್ನಡ ಭಾಷಾ ವಲಯದಲ್ಲಂತೂ ಮೈಸೂರು ಕನ್ನಡ, ಉತ್ತರ ಕರ್ನಾಟಕದ ಕನ್ನಡ, ಕರಾವಳಿಯ ಕನ್ನಡ ಎಂಬ ಭೇದಗಳು ಎಲ್ಲರಿಗೂ ತಿಳಿದಂಥವು. ‘ಹಿಂದಾಗಡೆ ಬನ್ನಿ’ ಎಂದು ಧಾರವಾಡ ಭಾಗದಲ್ಲಿ ಹೇಳಿದರೆ ‘ಮತ್ತೆ ಬನ್ನಿ’ ಎಂಬ ಅರ್ಥ ಸರಿಯಾದುದು ಎಂದು ಕರ್ನಾಟಕದ ಇತರ ಭಾಗಗಳ ಜನರಿಗೆ ಸ್ಪಷ್ಟವಾಗಲು ತಡವಾಗಬಹುದು. ‘ಇಳೀಲಿಕ್ಕ ಹತ್ಯಾನ’ ಎಂದಾಗ ಇಳಿಯಲು ತೊಡಗಿದ್ದಾನೆ ಎಂದು ತಿಳಿವಳಿಕೆ ಬರುವುದು ಉತ್ತರ ಕರ್ನಾಟಕದಲ್ಲಿ ಭಾಷೆ ಪಡೆದುಕೊಳ್ಳುವ ವ್ಯತ್ಯಾಸದ ತಿಳಿವಳಿಕೆ ಇದ್ದಾಗ ಮಾತ್ರ. ನಿಘಂಟುಕಾರರು ಇಂಥ ಕಷ್ಟಗಳನ್ನೆಲ್ಲ ಇದಿರಿಸಬೇಕು. ಪ್ರೊ. ಜೀವಿ ಶಬ್ದ ಸಾಮ್ರಾಜ್ಯದಲ್ಲೇ ವಿಹರಿಸುತ್ತಿದ್ದ ನಿಘಂಟುಕಾರರು. ಅವರು ರಚಿಸಿರುವ, ಸಂಪಾದಿಸಿರುವ, ನಿಘಂಟುಗಳು ಕನ್ನಡ ಶಬ್ದಗಳು ಪಡೆದುಕೊಳ್ಳುವ ಎಲ್ಲ ಅರ್ಥ ಸಾಧ್ಯತೆಯನ್ನು ಮನವರಿಕೆ ಮಾಡಿಕೊಡುವಂಥವು.
ಸಾಮಾನ್ಯವಾಗಿ ನಾವು ಬಳಸುತ್ತಿರುವ ಎರಡು ಶಬ್ದಗಳ ಬಗೆಗೆ ಪ್ರೊ. ಜೀವಿ ತಮ್ಮ ‘ಇಗೋ ಕನ್ನಡ’ದಲ್ಲಿ ಅರ್ಥ ವಿವರಣೆ ಕೊಟ್ಟ ರೀತಿಯನ್ನು ಕೆಳಗೆ ಕಾಣಿಸಿದ್ದೇನೆ:
- ನಿಧನ ಎಂಬ ಶಬ್ದಕ್ಕೆ ಎರಡು ಬಗೆಯ ವ್ಯುತ್ಪತ್ತಿ ಇದೆ. ಧನ ಶಬ್ದಕ್ಕೆ ನಿ ಉಪಸರ್ಗವನ್ನು ಸೇರಿಸಿದಾಗ ನಿಧನ ಎಂಬುದಕ್ಕೆ ದರಿದ್ರನಾದ, ಆಸ್ತಿಯಿಲ್ಲದ, ಸಿರಿಯಿಲ್ಲದ ಎಂಬ ಗುಣವಾಚಕದ ಅರ್ಥ ಬರುತ್ತದೆ. ನಿಧನತಾ ಎಂದರೆ ಬಡತನ, ದಾರಿದ್ರ್ಯ ಎಂದು ಅರ್ಥ. ಧಾ ಎಂಬ ಧಾತುವಿನಿಂದ ನಿಧನ ಎಂಬುದನ್ನು ಸಾಧಿಸಬಹುದು. ಆಗ ಆ ಶಬ್ದಕ್ಕೆ ವಾಸಸ್ಥಳ, ಪಾತ್ರೆ, ಮುಕ್ತಾಯ, ಸಾವು ಮುಂತಾದ ಅರ್ಥಗಳು ಬರುತ್ತವೆ. ಸಾಮಾನ್ಯವಾಗಿ ಕನ್ನಡದಲ್ಲಿ ನಿಧನ ಎಂಬ ಶಬ್ದವನ್ನು ಸಾವು ಎಂಬ ಅರ್ಥದಲ್ಲಿ ಉಪಯೋಗಿಸುತ್ತಾರೆ. ನಿಧನ ಹೊಂದು ಎಂಬುದು ಸರಿಯಾದ ಪದಪುಂಜ. ನಿಧನರಾದರು ಎಂಬುದು ವ್ಯಾಕರಣದ ಪ್ರಕಾರ ತಪ್ಪು. ಇದು ತಿಳಿದಿರಬೇಕು ನಿಧನಕ್ರಿಯೆ ಎಂದರೆ ಉತ್ತರ ಕ್ರಿಯೆ ಎಂದು ಅರ್ಥವಿದೆ. ಕೇವಲ ‘ಧಾ’ ಎಂಬ ಧಾತುವಿಗೆ ಇಡು, ಉಳಿಸು, ಕೆಳಗಿಳಿಸು ಮುಂತಾದ ಅರ್ಥಗಳಿವೆ.
- ಮಹಿಳಾ ಲೇಖಕಿ. ಆ ಶಬ್ದ ತಪ್ಪಾದುದು. ಲೇಖಕಿ ಎಂಬುದೇ ಸಾಕು. ಸಂಸ್ಕೃತದಲ್ಲಿ ಲೇಖಿಕಾ ಎಂದಿರುವ ಶಬ್ದ ಕನ್ನಡದಲ್ಲಿ ಲೇಖಿಕ ಎಂದೇ ಆಗಬೇಕು. ಆದರೆ ಲೇಖಕ ಶಬ್ದಕ್ಕೆ ಕನ್ನಡದ ಇ ಪ್ರತ್ಯಯವಾದ ‘ಇ’ ಸೇರಿಸಿ ಲೇಖಕಿ ಎಂದು ಮಾಡಿಕೊಳ್ಳಬಹುದು. ಮಹಿಳಾ ಲೇಖಕಿ ಯಾಕೆ ತಪ್ಪು ಎಂದರೆ ಪುರುಷ ಲೇಖಕಿ ಇಲ್ಲ-ಆದ್ದರಿಂದ.
ಒಂದು ಭಾಷೆಯನ್ನಾಡುವ ಜನರಲ್ಲಿ ಹುಟ್ಟಿ ಬೆಳೆದ ದೇಸೀ ಶಬ್ದಗಳ ಸಂವಹನ ಸಾಮರ್ಥ್ಯ ದಿನ ದಿನಕ್ಕೂ ವಿಸ್ತಾರವಾಗುತ್ತಿರುವ ಅನುಭವಗಳ ಅಭಿವ್ಯಕ್ತಿಗೆ ಸಾಲದೆಂದು ತೋರುವಾಗ ಅನ್ಯ ಭಾಷೆಯ ಸಂಪರ್ಕ ಅನಿವಾರ್ಯವಾಗುತ್ತದೆ. ಇದರಿಂದಾಗಿ ಬೇರೆ ಭಾಷೆಯ ಶಬ್ದಗಳು ಆ ಭಾಷೆಗೆ ಬಂದು ಸೇರಿಕೊಳ್ಳುತ್ತವೆ. ಒಂದು ಭಾಷೆಯ ಸಂಪತ್ತು ಬೆಳೆಯುವುದಕ್ಕೆ ಅವು ಕಾರಣವಾಗುವುದಿದೆ. ಹೀಗೆ ಬರಬಾರದೆಂದು ನಿರ್ಬಂಧಿಸುವುದೂ ಸಾಧ್ಯವಾಗದ ಮಾತು. ಇಂದು ಇಂಗ್ಲಿಷ್ ಭಾಷೆಯ ನಿಘಂಟುವಿಗೆ ಎಷ್ಟೆಲ್ಲ ಬೇರೆ ಭಾಷೆಯ ಶಬ್ದಗಳು ಸೇರಿಕೊಂಡಿವೆ! ಭಾರತದ ಸಿನಿಮಾ ಪ್ರಪಂಚಕ್ಕಾಗಿ ಟಂಕಿಸಿದ ‘ಬಾಲಿವುಡ್’ ಶಬ್ದವೂ ಇಂದು ಆಕ್ಸ್‌ಫರ್ಡ್ ನಿಘಂಟುವಿಗೆ ಸೇರ್ಪಡೆಯಾಗಿದೆ. ರಾಜಕೀಯ ಕಾರಣಗಳಿಂದ, ಸಾಮಾಜಿಕ ಕಾರಣಗಳಿಂದ, ಸಾಂಸ್ಕೃತಿಕ ಕಾರಣಗಳಿಂದ ಹಲವಾರು ಭಾಷೆಗಳನ್ನಾಡುವ ಜನರ ಸಂಬಂಧ, ಸಂಪರ್ಕಗಳು ಹೆಚ್ಚಿದಂತೆ, ಅಲ್ಲಲ್ಲಿ ವಿಚಾರ ವಿನಿಮಯ ನಡೆದಂತೆ, ಒಂದು ಭಾಷೆಯ ಶಬ್ದಗಳು ಇನ್ನೊಂದು ಭಾಷೆಯನ್ನಾಡುವ ಜನರ ಮೇಲೂ ಪ್ರಭಾವ ಬೀರಬಹುದು. ಹಾಗೆ ಬಂದು ಸೇರುವಂಥ ಶಬ್ದಗಳು, ಅಂಥ ಶಬ್ದಗಳ ನಿಜವಾದ ಕೊರತೆಯಿದ್ದರೆ ಆ ಕೊರತೆಯನ್ನು ತುಂಬಲು ಸಹಾಯ ಮಾಡಬಹುದು. ಕನ್ನಡಕ್ಕೆ ಬಂದಿರುವ ಶಬ್ದಗಳ ಉದಾಹರಣೆಗಳನ್ನು ನೋಡುವಾಗ ಬ್ಯಾಂಕು, ಹೋಟೆಲು, ಖಾನಾವಳಿ ಮುಂತಾದ ಶಬ್ದಗಳನ್ನು ಈ ಸಾಲಿನಲ್ಲಿ ಸೇರಿಸಬಹುದು. ಹಾಗೆಯೇ ಕನ್ನಡದಲ್ಲಿ ಸಮಾನಾರ್ಥ ಬರುವ ಶಬ್ದಗಳಿದ್ದೂ ಕನ್ನಡಕ್ಕೆ ಬಂದಿರುವ ಇಂಗ್ಲಿಷ್ ಭಾಷೆಯ ಶಬ್ದಗಳಾದ ರೂಮು, ಟೀಚರ್ ಮುಂತಾದ ಶಬ್ದಗಳು ಇಂಗ್ಲಿಷ್ ಭಾಷೆಯ ವರ್ಚಸ್ಸಿನ ಅತಿರೇಕವೆನಿಸುವ ಪರಿಣಾಮವನ್ನು ಸೂಚಿಸುತ್ತವೆ. ಈ ಸಣ್ಣ ಉದಾಹರಣೆಯಿಂದಲೇ ನಮ್ಮ ಶಬ್ದ ಭಂಡಾರದ ಕುರಿತು ಒಂದು ಎಚ್ಚರಿಕೆಯ ಮಾತನ್ನು ಹೇಳಬಹುದು. ಒಂದು ಭಾಷೆಯ ಶಬ್ದ ಸಂಪತ್ತು ಹೇರಳವಾಗಿದ್ದರಷ್ಟೇ ಸಾಲದು. ಆ ಸಂಪತ್ತನ್ನು ಸರಿಯಾಗಿ ಉಪಯೋಗಿಸುವ ಪ್ರವೃತ್ತಿ ಆ ಭಾಷೆಯನ್ನಾಡುವ ಜನರಲ್ಲಿ ಇರಬೇಕು. ದೇಸಿ ಶಬ್ದಗಳಿಂದಲೇ ಒಂದು ಭಾಷೆಯ ಬೆಳವಣಿಗೆ ಸಾಧ್ಯವೆಂದು ಹೇಳುವುದು ಸರಿಯಲ್ಲವಾದರೂ ಇತರ ಭಾಷೆಗಳ ಸಂಪರ್ಕದಿಂದ ಭಾಷೆಯ ಸಂಪತ್ತು ಹೆಚ್ಚುವಂತಿರುವಾಗಲೆಲ್ಲ ಅಂಥ ಸಂಪರ್ಕದಿಂದ ಪದಗಳ ಎರವಲು ಸಹಜವೆನಿಸಿದರೂ ನಮ್ಮಲ್ಲಿ ಇರುವ ಶಬ್ದಗಳನ್ನೇ ಮರೆತು ಬೇರೆ ಭಾಷೆಗಳಿಂದ ಎರವಲು ತರುವಂಥ ಪ್ರವೃತ್ತಿ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸರಿಯೆನಿಸುವುದಿಲ್ಲ.
ಪ್ರೊ.ಜೀವಿಯವರ ‘ಇಗೋ ಕನ್ನಡ’ ಸಂಪುಟಗಳು ಕನ್ನಡ ಭಾಷೆಯ ಸರಿಯಾದ ಬಳಕೆಗೆ, ಶಬ್ದಗಳ ಅರ್ಥ ವ್ಯಾಪ್ತಿಯನ್ನು ತಿಳಿಯಲು, ತಪ್ಪು ಪ್ರಯೋಗಗಳಿಂದ ದೂರವಿರಲು ಮಾಡುತ್ತಿರುವ ಸಹಾಯವನ್ನು ಕನ್ನಡಿಗರು ತುಂಬ ಕೃತಜ್ಞತೆಯಿಂದ ನೆನೆಯಬೇಕು. ಈ ಲೇಖನದಲ್ಲಿ ಎರವಲು ಶಬ್ದಗಳ ಪ್ರಸ್ತಾಪ ಮಾಡಿರುವುದರಿಂದ ಪ್ರೊ. ಜೀವಿ ಎರಡು ವರ್ಷಗಳ ಕಾಲ ಪರಿಶ್ರಮಿಸಿ ಕನ್ನಡದಲ್ಲಿರುವ ಅನ್ಯ ದೇಶಗಳ ಶಬ್ದಗಳ ನಿಘಂಟನ್ನು ತಯಾರಿಸಿದ ‘ಎರವಲು ಪದಕೋಶ’ ಕನ್ನಡ ಭಾಷಾ ಜ್ಞಾನವನ್ನು ಹೆಚ್ಚಿಸುವ ಇನ್ನೊಂದು ಮಹತ್ವದ ಗ್ರಂಥವೆಂದು ಹೇಳಬೇಕು.
ಈ ನಿಘಂಟಿನಲ್ಲಿ ಕನ್ನಡಕ್ಕೆ ಇತರ ಭಾಷೆಗಳಿಂದ ಎಂದರೆ ಮುಖ್ಯವಾಗಿ ಅರಬ್ಬಿ, ಪಾರ್ಸಿ, ಹಿಂದೀ, ಉರ್ದು, ಮರಾಠಿ ಭಾಷೆಗಳಿಂದ ಬಂದಿರುವ ಶಬ್ದಗಳನ್ನೂ, ಈಚೀಚೆಗೆ ಇಂಗ್ಲೀಷಿನಿಂದ ಹೆಚ್ಚಾಗಿ ಬಂದಿರುವ ಶಬ್ದಗಳನ್ನೂ ಉಲ್ಲೇಖಿಸಲಾಗಿದೆ. ಸಂಸ್ಕೃತ ಬೇರೆ ಭಾಷಾ ವರ್ಗಕ್ಕೆ ಸೇರಿದೆಯಾದರೂ ಅದು ಕನ್ನಡದಲ್ಲಿ ಆತ್ಮೀಯವಾಗಿ ಬೆರೆತು ಹೋಗಿರುವುದರಿಂದ ಅಂಥ ಶಬ್ದಗಳು ತತ್ಸಮ, ತದ್ಭವಗಳೆಂದು ಎರಡು ಭಾಗಗಳಾಗಿ ಕನ್ನಡವೆಂದೇ ಸೇರಿಕೊಂಡಿದೆ.
ನಮ್ಮಲ್ಲಿ ಸ್ಥಳ ನಾಮಗಳ ಬಗ್ಗೆ ಕುತೂಹಲವಿದೆ. ಅಧ್ಯಯನವೂ ನಡೆಯುತ್ತಿದೆ. ಆದರೆ ಕನ್ನಡ ಶಬ್ದ ಸಂಪತ್ತಿನ ಸರಿಯಾದ ಪ್ರಯೋಗ ಜ್ಞಾನವಿರದೆ ಆಗುತ್ತಿರುವ ತಪ್ಪುಗಳನ್ನು ಹೆಚ್ಚಾಗಿ ಪತ್ರಿಕೆಗಳಲ್ಲೂ, ಕೆಲವು ಸಾಹಿತ್ಯ ಕೃತಿಗಳಲ್ಲೂ, ಕಾಣುತ್ತೇವೆ. ಸೃಜನಶೀಲ ಸಾಹಿತ್ಯದಲ್ಲಿ ಆಡು ಮಾತಿನ ಬಳಕೆ ಹೆಚ್ಚುತ್ತಿರುವುದರಿಂದಲೂ, ಗ್ರಾಮ್ಯ ಶಬ್ದಗಳ ಉಪಯೋಗದ ರೀತಿ ಕೆಲವೊಮ್ಮೆ ವ್ಯಾಕರಣದ ನಿಯಮಗಳಿಗೆ ಹೊಂದಿಕೊಳ್ಳದ ಪ್ರಮೇಯವಿರುವುದರಿಂದಲೂ, ಪ್ರೊ. ಜೀವಿ ರಚಿಸಿರುವ ಶಬ್ದ ಪಾಂಡಿತ್ಯ ಸಾರುವ ಸಂಪುಟಗಳು ಕನ್ನಡಿಗರೆಲ್ಲರು ಅಭಿಮಾನ ಪಡುವಂಥವು.
ಪ್ರೊ. ಜೀವಿ ನನಗೆ ದೀರ್ಘ ಕಾಲದ ಆತ್ಮೀಯರು. ನನ್ನ ಬರವಣಿಗೆಯನ್ನು ಆರಂಭದಿಂದಲೂ ಮೆಚ್ಚಿಕೊಂಡು ಪತ್ರ ಬರೆದು ಪ್ರೋತ್ಸಾಹಿಸಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅವರು ಮುಂಬಯಿಗೆ ಬಂದಿದ್ದಾಗಲೇ ಅವರ ಮುಖ ಪರಿಚಯವೆಂದು ನೆನಪು. ನನ್ನಂತೆಯೇ ಮುಂಬಯಿಯ ಹಲವಾರು ಮಿತ್ರರು ಪರಿಷತ್ತಿನ ಸದಸ್ಯರಾದುದೂ ಅಗಲೇ ಎಂದು ನನ್ನ ನೆನಪು. ಮುಂಬಯಿಗೆ ಬಂದಾಗ ನಮ್ಮ ಮನೆಗೂ ಬಂದಿದ್ದರು. ನಾನು ಬೆಂಗಳೂರಿಗೆ ಬಂದು ನೆಲೆಸಿದ ಮೇಲಂತೂ ಅವರ ಒಡನಾಟ, ಅತ್ಮೀಯತೆ ನಾನು ಸದಾ ನೆನಪಿಡಬೇಕಾದಂಥಹದು. ನಾನು ಬೆಂಗಳೂರಿಗೆ ನೆಲೆಸಲು ಬರುವ ವಿಚಾರ ತಿಳಿದು ‘ನವಕರ್ನಾಟಕ’ ಪ್ರಕಾಶನದ ಮಿತ್ರರು ಏರ್ಪಡಿಸಿದ ‘ಸ್ವಾಗತ’ ಸಮಾರಂಭಕ್ಕೂ ಅವರೇ ಅಧ್ಯಕ್ಷರಾಗಿದ್ದರು. ಮುಂದೆ ನನಗೆ 75 ತುಂಬಿದಾಗ ಮನೆಗೆ ಬಂದು ಶುಭ ಹಾರೈಸಿ ಆಶೀರ್ವದಿಸಿದರು. ಆ ಸಮಯದಲ್ಲಿ ರಚಿಸಲ್ಪಟ್ಟ ನನ್ನ 75ರ ಅಭಿನಂದನಾ ಸಮಿತಿಗೂ ಅವರದೇ ಅಧ್ಯಕ್ಷತೆ. 1999 ದಶಂಬರದಲ್ಲಿ ಜರುಗಿದ ಆ ಕಾರ್ಯಕ್ರಮದ ನೆನಪುಗಳನ್ನು ನಾನು ಯಾವಾಗಲೂ ಮೆಲಕು ಹಾಕುತ್ತಿರುತ್ತೇನೆ. ಒಮ್ಮೆ ಶಿವರಾಮ ಕಾರಂತರ ಹುಟ್ಟು ಹಬ್ಬದ ಅಚರಣೆಯ ಸಂದರ್ಭದಲ್ಲಿ ನಾನು ಅವರ ಜತೆಗೆ ಕೋಟಕ್ಕೂ ಹೋಗಿದ್ದೆ.
ಅವರ ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವೇದಿಕೆ ಮುಂತಾದ ಸಾಮಾಜಿಕ ಸಂಘಟನೆಗಳಲ್ಲಿ ಭಾಗವಹಿಸಿದ ಸಂತೋಷ ನನಗಿದೆ. ಪ್ರೊ. ಜೀವಿಯವರದು ಸಮಾಜ ಮುಖಿಯಾದ ಜೀವನ. ವಿದ್ಯೆ ವಿನಯವನ್ನು ಕೊಡುತ್ತದೆ ಎಂಬ ಮಾತಿಗೆ ಅವರ ಬದುಕೇ ಒಂದು ಉದಾಹರಣೆ. ಅತ್ಯಂತ ಹಿರಿಯ ಮಟ್ಟದ ವಿದ್ವಾಂಸರಾಗಿಯೂ ಅವರು ಪಾಂಡಿತ್ಯದ ದಂತ ಗೋಪುರದಲ್ಲಿ ಕುಳಿತವರಲ್ಲ. ಸರಳ ಜೀವನ, ಪಕ್ವವಾದ ವಾಗ್ಮಿತೆ, ಎಲ್ಲರನ್ನೂ ಪ್ರೀತಿಯಿಂದ ನೋಡುವ, ಸಾವಿರಾರು ವಿದ್ಯಾರ್ಥಿಗಳಿಗೆ ತನ್ನ ಜ್ಞಾನ ರಾಶಿಯನ್ನು ಹಂಚಿದ ಗೌರವಾರ್ಹ ವ್ಯಕ್ತಿ ಪ್ರೊ. ಜಿ. ವೆಂಕಟಸುಬ್ಬಯ್ಯ. ಅವರಿಗೆ ಈ ಆಗಸ್ಟ್ ತಿಂಗಳಲ್ಲಿ ತೊಂಬತ್ತು ತುಂಬುತ್ತಿದೆ. ಶತಾಯುಷಿಗಳ ನಾಡು ಕರ್ನಾಟಕ. ಪಾಂಡಿತ್ಯದಿಂದ, ಪ್ರತಿಭೆಯಿಂದ, ಕಾಯಕ, ನಿಷ್ಠೆಯಿಂದ ಸಾಮಾಜಿಕ ಚಿಂತನೆಯಿಂದ, ಸ್ವಚ್ಛ ನಡವಳಿಕೆಯಿಂದ ಕನ್ನಡಿಗರಿಗೆಲ್ಲ ಗೌರವಾರ್ಹ ವ್ಯಕ್ತಿ ಎಂದು ಮೆರೆಯುತ್ತಿರುವ ಜ್ಞಾನ ವೃದ್ಧರೂ ವಯೋ ವೃದ್ಧರೂ ಆಗಿರುವ ಪ್ರೊ. ಜೀವಿಯವರಿಗೂ, ಅವರ ಕುಟುಂಬದ ಸದಸ್ಯರೆಲ್ಲರಿಗೂ ದೀರ್ಘಕಾಲ ಆರೋಗ್ಯ ಭಾಗ್ಯವಿರಲಿ, ಅವರು ಮಾಡುತ್ತಿರುವ ಭಾಷೆಯ ಸೇವೆ ಎಂದೆಂದಿಗೂ ಮುಗಿಯದ ವರವಾಗಿ ಕನ್ನಡಿಗರಿಗೆ ಲಭಿಸಲಿ ಎನ್ನುತ್ತಾ ನನ್ನ ಗೌರವ ಹಾಗೂ ಪ್ರೀತಿ ಪೂರ್ವಕ ನಮನಗಳನ್ನು ಅವರಿಗೆ ಸಲ್ಲಿಸಲು ಬಯಸುತ್ತೇನೆ.
(ಸ್ನೇಹಸೇತು : ವಿಜಯ ಕರ್ನಾಟಕ)
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ










Click it and Unblock the Notifications