• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮಕೃಷ್ಣ ಹೆಗಡೆ : ಕಣ್ಮರೆಯಾದ ರಾಜಗುರು

By Super
|
 • ಚ.ಹ. ರಘುನಾಥ
 • ಅವರು ಕರ್ನಾಟಕದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ (1983).
 • ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಆಕರ್ಷಕವಾಗಿ ಮಾತನಾಡುತ್ತಿದ್ದರು.
 • ಜನತಾಪಕ್ಷವನ್ನು ಪೊರೆದ ವ್ಯಕ್ತಿ .
 • ದೇವೇಗೌಡರಂತೆ ದಿನದ 24 ತಾಸೂ ರಾಜಕಾರಣ ಮಾಡುತ್ತಿರಲಿಲ್ಲ .
 • ಅನಂತಮೂರ್ತಿ ರೀತಿಯ ಸಾಹಿತಿಗಳ ಸಂಗ ಹೆಗಡೆ ಅವರಿಗಿತ್ತು.
 • ಕರ್ನಾಟಕದ ಎಲ್ಲ ಭಾಗಗಳಲ್ಲೂ ಅಭಿಮಾನಿಗಳನ್ನುಳ್ಳ ಏಕೈಕ ರಾಜಕಾರಣಿ.
 • ವಾಜಪೇಯಿ ಅವರ ಸಂಪುಟದಲ್ಲಿ ವಾಣಿಜ್ಯ ಸಚಿವರಾಗಿದ್ದವರು.
 • ವಿ.ಪಿ.ಸಿಂಗ್‌ ಪ್ರಧಾನಿಯಾಗಿದ್ದಾಗ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.
 • ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್‌ ಸಂಪುಟಗಳಲ್ಲಿ ಸಚಿವರಾಗಿದ್ದರು.
 • ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ವಿರುದ್ಧ ಹೋರಾಟ ನಡೆಸಿ, ಜೈಲು ವಾಸ ಅನುಭವಿಸಿದ್ದರು.
 • ಓದುತ್ತಿದ್ದರು

ರಾಮಕೃಷ್ಣ ಹೆಗಡೆ ಎಂದರೆ ಏನು? ನೆನೆಯುತ್ತಾ ಕೂತಾಗ ಕಣ್ಮುಂದೆ ಸುಳಿಯುವ ಚಿತ್ರಗಳಿಗೆ ಕೊನೆಯೆಂಬುದೇ ಇಲ್ಲ . ರಾಮಕೃಷ್ಣ ಹೆಗಡೆ ಎಂದರೆ ಇವೆಲ್ಲವೂ ಹೌದು. ಆದರೆ ಇವಿಷ್ಟೇ ಅವರಲ್ಲ . ಜ.12, 2004ರಂದು ನಿಧನರಾದ ರಾಮಕೃಷ್ಣ ಹೆಗಡೆ ದೇಶದ ಅತ್ಯಂತ ವಿರಳ ರಾಜಕಾರಣಿಗಳಲ್ಲೊಬ್ಬರು. ಹೆಗಡೆ ಎಂದರೆ ರಾಜಕಾರಣಿಯಲ್ಲ ; ಒಂದು ಪರಂಪರೆಯ ಹರಿಕಾರ ಅವರಾಗಿದ್ದರು.

ನಿಜ. ರಾಮಕೃಷ್ಣ ಹೆಗಡೆ ಅವರ ನಿಧನ ರಾಜಕಾರಣದ ಮಟ್ಟಿಗೆ ತುಂಬಲಾರದ ನಷ್ಟವಲ್ಲ . ವರ್ಷಗಳ ಹಿಂದೆಯೇ ಹೆಗಡೆ ದೈಹಿಕವಾಗಿ ದಣಿದಿದ್ದರು. ಹೆಚ್ಚೂಕಡಿಮೆ ಒಂದು ವರ್ಷದ ಹಿಂದೆ ಹಾಸಿಗೆ ಹಿಡಿದ ಹೆಗಡೆ, ರಾಜಕಾರಣದ ವೇದಿಕೆಯಲ್ಲಿ ಪುನಃ ಮಿಂಚುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ . ಆದರೆ, ಹೆಗಡೆ ಅವರ ಮಾರ್ಗದರ್ಶನವನ್ನು ಇನ್ನುಮುಂದೆಯೂ ಸಾಕಷ್ಟು ಮಂದಿ ಬಯಸಿದ್ದರು. ಜನತಾಪಕ್ಷದ ವಿಜಯ್‌ಮಲ್ಯರಿಂದ ಹಿಡಿದು ಪ್ರಗತಿಪರ ದಳ, ಜಾತ್ಯತೀತ ದಳ, ಸಂಯುಕ್ತದಳ, ಕಾಂಗ್ರೆಸ್‌ನಲ್ಲೂ ಹೆಗಡೆ ಅವರ ಮಾರ್ಗದರ್ಶನವನ್ನು ಅಪೇಕ್ಷಿಸುವ ನಾಯಕರಿದ್ದರು. ಒಂದು ಪೀಳಿಗೆಯ ರಾಜಕಾರಣಿಗಳ ಪಾಲಿಗೆ ಹೆಗಡೆ ರಾಜಗುರು. ಅಭಿಮಾನಿಗಳ ಪಾಲಿಗೆ ಅವರ ಸಾವು ಅನಿರೀಕ್ಷಿತ ಹಾಗೂ ಅಕಾಲಿಕ.

ಹೆಗಡೆ ನಿಜಲಿಂಗಪ್ಪ ಅವರ ರಾಜಕೀಯ ಗರಡಿಯಲ್ಲಿ ಬೆಳೆದುಬಂದವರು. ಕಾಂಗ್ರೆಸ್‌ ಒಡೆದು ಹೋಳಾದಾಗ ಹೆಗಡೆ ನಿಜಲಿಂಗಪ್ಪನವರ ಜೊತೆ ಗುರ್ತಿಸಿಕೊಂಡರು. ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಾಗಿ ಮಿಂಚಿದ್ದರು. ಆದರೆ, ಹೆಗಡೆ ಅವರಿಗೆ ನಿಜವಾದ ನಾಯಕತ್ವ ಪ್ರಾಪ್ತವಾಗಿದ್ದು 1983ರಲ್ಲಿ . ಮೊದಲ ಬಾರಿಗೆ ಕಾಂಗ್ರೆಸ್‌ ಧೂಳೀಪಟವಾಗಿ ಕಾಂಗ್ರೆಸ್ಸೇತರ ರಂಗ ಅಧಿಕಾರಕ್ಕೆ ಬಂದ ಸಂಕ್ರಮಣ ಕಾಲವದು. ಬಂಗಾರಪ್ಪನವರಿಗೆ ಜೈಕಾರಗಳು ಮೊಳಗುತ್ತಿರುವ ಸಂದರ್ಭದಲ್ಲೇ ಹೆಗಡೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಂತರದ ಘಟನೆಗಳೆಲ್ಲಾ ಈಗ ಇತಿಹಾಸ. ಜನತಾಪಕ್ಷದ ಪ್ರಶ್ನಾತೀತ ನಾಯಕರಾಗಿ ಬೆಳೆದ ಹೆಗಡೆ, ಹಗರಣದ ಆರೋಪ ಎದುರಾದಾಗ ಅಧಿಕಾರ ತ್ಯಜಿಸಿ ಚುನಾವಣೆ ಎದುರಿಸಲಿಕ್ಕೆ ಹಿಂಜರಿಯಲಿಲ್ಲ . ಆ ವೇಳೆಗೆ ಹೆಗಡೆ ಅವರಿಗ ಸ್ಟಾರ್‌ಗಿರಿ ಬೆಳೆದಿತ್ತು . 1983ರಿಂದ 88ರ ಕಾಲ ಹೆಗಡೆ ಪಾಲಿಗೆ ಸುವರ್ಣಯುಗ. ಹೆಗಡೆ ಪ್ರತಿಪಾದಿಸಿದ ಮೌಲ್ಯಾಧಾರಿತ ರಾಜಕಾರಣದ ಪರಿಕಲ್ಪನೆ ಜನತೆಗೆ ಇಷ್ಟವಾಯಿತು.

ಹೆಗಡೆ ಹುಟ್ಟಿದ್ದು 1927ರ ಆಗಸ್ಟ್‌ 29ರಂದು, ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ . ಹೆಗಡೆ ಪಾಲಿಗೆ ಅವರ ಹಿರಿಯ ಸೋದರಿ ಮಹಾದೇವಿ ತಾಯಿಯೇ ಮೊದಲ ಗುರು. ಆಕೆ ಗಾಂಧಿ ಹಾಗೂ ವಿನೋಬಾ ಅವರ ಕಟ್ಟಾ ಅನುಯಾಯಿ. ಅಕ್ಕನ ಪ್ರೇರಣೆಯಿಂದಲೇ ಹೆಗಡೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರಾಗಿ, ಆನಂತರದ ದಿನಗಳಲ್ಲಿ ಕಾಂಗ್ರೆಸ್‌ ವಿರುದ್ಧವೇ ಸಂಘಟನೆ ರೂಪಿಸಿದ ಹೆಗಡೆ ಅವರ ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ರಾಜಕೀಯ ಜೀವನ ಏರಿಳಿತಗಳಿಂದ ಕೂಡಿದ್ದು . ಟೆಲಿಫೋನ್‌ ಕದ್ದಾಲಿಕೆ, ಭೂಹಗರಣಗಳು ಹೆಗಡೆ ಅವರ ವರ್ಚಸ್ಸಿಗೆ ಧಕ್ಕೆ ತಂದವು.

1989ರಲ್ಲಿ ಜನತಾಪಕ್ಷ ಸೋಲುಂಡ ನಂತರ ಹೆಗಡೆ ರಾಷ್ಟ್ರೀಯ ರಾಜಕಾರಣದತ್ತ ಗಮನ ಹರಿಸಿದರು. ಆನಂತರದ ದಿನಗಳಲ್ಲಿ ಹೆಗಡೆ ದಣಿದದ್ದೇ ಹೆಚ್ಚು . ಒಡನಾಡಿಗಳಿಂದ ವಂಚನೆ, ಅನಾರೋಗ್ಯ, ರಾಜಕೀಯ ಹತಾಶೆಗಳಿಂದ ಹೆಗಡೆ ಬಸವಳಿದರು. ರಾಜಕೀಯ ಚದುರಂಗದಾಟದಲ್ಲಿ ಎಚ್‌.ಡಿ.ದೇವೇಗೌಡರು ಪ್ರಧಾನಿಯಾದಾಗ, ಹೆಗಡೆ ಅವರು ಜನತಾದಳದಿಂದ ಉಚ್ಛಾಟನೆಗೊಂಡರು. ಮನೆಯಿಂದ ಹೊರದೂಡಿಸಿಕೊಂಡ ಹಿರೀಕನಂತೆ ಹೆಗಡೆ ನೋವನುಭವಿಸಿದರು.

‘ಲೋಕಶಕ್ತಿ’ಯ ಮೂಲಕ ಹೆಗಡೆ ಮತ್ತೆ ರಾಜಕೀಯ ಹೋರಾಟ ಶುರು ಮಾಡಿದರು. ನಿಕಟವರ್ತಿಗಳ ವಿರೋಧದ ನಡುವೆಯೂ ಬಿಜೆಪಿಯಾಂದಿಗೆ ಸ್ನೇಹ ಬೆಳೆಸಿದರು. ಪ್ರಧಾನಿಯಾಗುವ ಕನಸು ಕಂಡರು. ಮಾಧ್ಯಮಗಳೆಲ್ಲಾ ಹೆಗಡೆ ಅವರಲ್ಲಿ ದೇಶದ ಪ್ರಧಾನಿಯನ್ನು ಗುರ್ತಿಸಿದ್ದರು. ಆದರೆ, ಹೆಗಡೆ ಅವರು ಕೇಂದ್ರ ಸಚಿವರಾಗಲೇ ಹೆಣಗಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು. ಹೆಗಡೆ ಅವರನ್ನು ಹಿಂದೂಡಿ ಜಾರ್ಜ್‌ ಫರ್ನಾಂಡಿಸ್‌ ರಕ್ಷಣಾ ಖಾತೆ ಕಸಿದುಕೊಂಡರು; ಹೆಗಡೆ ವಾಣಿಜ್ಯ ಖಾತೆಗೆ ತೃಪ್ತಿಪಡಬೇಕಾಯಿತು. ಒಂದೊಮ್ಮೆ ರಾಜಕೀಯ ನಿಕಟವರ್ತಿಗಳಾಗಿದ್ದ ದೇವೇಗೌಡ ಹಾಗೂ ಜಾರ್ಜ್‌, ಸರಿಯಾದ ಕಾಲದಲ್ಲಿ ಹೆಗಡೆಗೆ ಕೈಕೊಟ್ಟಿದ್ದರು.

ಸಂಯುಕ್ತ ಜನತಾದಳ, ಪ್ರಗತಿಪರ ಜನತಾದಳ, ಇತ್ತೀಚಿನ ಜನತಾಪಕ್ಷ - ಎಲ್ಲೆಡೆಯೂ ಹೆಗಡೆ ಗುರ್ತಿಸಿಕೊಂಡಿದ್ದರು. ಜನತಾದಳದ ಬಣಗಳು ವಿಲೀನ ಹೊಂದಬೇಕು ಎಂದು ಕನಸು ಕಾಣುತ್ತಿದ್ದರು. ಆದರೆ, ವಿಲೀನದ ಪ್ರಯತ್ನಕ್ಕೆ ಹೆಗಡೆ ಅವರ ಅಹಂ ಅನೇಕ ವೇಳೆ ಅಡ್ಡಿ ತರುತ್ತಿದ್ದುದು ಸ್ಪಷ್ಟವಾಗಿತ್ತು . ಎಪ್ಪತ್ತೆೈದನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹೆಗಡೆ ಮತ್ತೆ ಎದ್ದುನಿಲ್ಲುವ ಕುರುಹು ಪ್ರದರ್ಶಿಸಿದ್ದರು. ಆದರೆ, ಅವರು ಅಂದುಕೊಂಡಂತೆ ಯಾವುದೂ ಸಾಗಲಿಲ್ಲ .

ಹೆಗಡೆ ಹಾಗೂ ದೇವೇಗೌಡರ ನಡುವಿನ ವೈಮನಸ್ಸು ಕೊನೆಯವರೆಗೂ ಮಾಯಲಿಲ್ಲ . ಇತ್ತೀಚೆಗೆ ಕೂಡ ಹೆಗಡೆ ಅವರನ್ನು ದೇವೇಗೌಡರು ಟೀಕಿಸಿದ್ದರು. ಮಾರುತ್ತರ ಕೊಡಲಿಕ್ಕೆ ಹೆಗಡೆ ಅವರಿಗೆ ಚೈತನ್ಯವಿರಲಿಲ್ಲ . ಇನ್ನೆಂದೂ ಹೆಗಡೆ ದೇವೇಗೌಡರಿಗೆ ಉತ್ತರ ಕೊಡುವುದೂ ಇಲ್ಲ. ಹೆಗಡೆ ಅವರ ನಿಧನದಿಂದ ಉಂಟಾಗಿರುವ ಆಂತರಿಕ ವಿರೋಧಿಯ ಶೂನ್ಯ ದೇವೇಗೌಡರನ್ನು ಕಾಡುವುದಂತೂ ನಿಜ!

ಅನಾರೋಗ್ಯದಿಂದ ಚೇತರಿಸಿಕೊಂಡಿದ್ದರೆ ಹೆಗಡೆ ಸಕ್ರಿಯ ರಾಜಕಾರಣಕ್ಕೆ ಮರಳುತ್ತಿದ್ದರಾ ? ಇಲ್ಲವೆನ್ನುವುದು ಕಷ್ಟ . ಹೆಗಡೆ ಅನೇಕ ಬಾರಿ ನಿವೃತ್ತಿಯ ಮಾತನಾಡಿದರೂ, ಅವರಲ್ಲಿನ ರಾಜಕಾರಣದ ಹಸಿವು ಎದ್ದುಕಾಣುತ್ತಿತ್ತು . ಮೆದುಳು ಶಸ್ತ್ರಚಿಕಿತ್ಸೆಗೊಳಗಾಗಿ ಆಗಷ್ಟೇ ಲಂಡನ್‌ನಿಂದ ಆಗಮಿಸಿದ್ದ ಹೆಗಡೆ (ಮೇ 25, 2003) ‘ಕಚ್ಚಾಟ, ಪ್ರತಿಷ್ಠೆ ದೊರೆತು ಉಭಯ ಬಣಗಳು ಒಂದಾಗಬೇಕು’ ಎಂದು ಅಭಿಮಾನಿಗಳಿಗೆ ಕರೆ ನೀಡಿದರು. ಆ ಸಂದರ್ಭದಲ್ಲಿ ಹೆಗಡೆ ಅವರು ಮಾತನಾಡಲೂ ಕಷ್ಟಪಡುತ್ತಿದ್ದರು. ‘ಜೀವಂತ ವಾಪಸ್ಸಾಗುವ ಕುರಿತು ಭಯವಿತ್ತು ’ ಎಂದು ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕಂಡು ಹೆಗಡೆ ಭಾವುಕರಾಗಿ ಉದ್ಘರಿಸಿದ್ದರು. ಇದೇ ಹೆಗಡೆ, ಲಂಡನ್‌ನ ಆಸ್ಪತ್ರೆಯಲ್ಲಿ ಮಲಗಿದ್ದಾಲೇ, ಉದ್ಯಮಿ ವಿಜಯ್‌ ಮಲ್ಯ ಅವರನ್ನು ಬೆಂಬಲಿಸುವ ಹೇಳಿಕೆಗೆ ಸಹಿ ಹಾಕಿದ್ದರು. ಹಾಗೆಂದು, ಹೆಗಡೆ ಅವರಿಗೆ ರಾಜಕಾರಣ ಹಾಗೂ ಅಧಿಕಾರದ ತೆವಲಿತ್ತು , ಅವರದು ಬಾಯಿ ಮಾತಿನ ಹೇಳಿಕೆ ಎಂದರ್ಥವಲ್ಲ . ನಮ್ಮ ಪ್ರಮುಖ ರಾಜಕಾರಣಿಗಳ ದುರಂತ ಹೆಗಡೆ ಅವರದೂ ಆಗಿತ್ತು . ಹೆಗಡೆ ಒಲ್ಲೆನೆಂದರೂ ಅವರ ಸುತ್ತಲಿನ ಪರಿಸರ ಅವರನ್ನು ಬಿಡುಲಿಕ್ಕೆ ಸಿದ್ಧವಿರಲಿಲ್ಲ . ಆಳ್ವಾ, ಸಿಂಧ್ಯಾ, ದೇಶಪಾಂಡೆ, ಬೊಮ್ಮಾಯಿ, ಅನಂತನಾಗ್‌- ಹೀಗೆ ಹೆಗಡೆಯ ಬೆನ್ನಹಿಂದೆ ಬೆಳೆದವರ ಜೋಳದ ಪಾಳಿ ದೊಡ್ಡದು. ಮೊನ್ನೆ , ಕನಕಪುರದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಿಕ್ಕಾಗಿ ದೇವೇಗೌಡರಿಗೆ ಹೆಗಡೆಯ ಸಹಾಯ ಬೇಕಾಗಿತ್ತು !

ಹೆಗಡೆ ಅವರ ಅಂತ್ಯದೊಂದಿಗೆ ರಾಜ್ಯ ರಾಜಕಾರಣದ ಒಂದು ಮಜಲು ಕೊನೆಗೊಂಡಂತಾಗಿದೆ. ಸದ್ಯಕ್ಕೆ ಹೆಗಡೆಯ ಹಿಂದೆ ಹೆಚ್ಚು ಮಂದಿಯಿಲ್ಲ . ಇದ್ದವರು ಕೂಡ ಒಂದು ಕಾಲನ್ನು ಬಾಗಿಲಿನಿಂದ ಹೊರಗೆ ಇಟ್ಟವರೇ ಆಗಿದ್ದರು.

ಹೆಗಡೆ ಓರ್ವ ಕನಸುಗಾರ. ಹೆಗಡೆ ಭೌತಿಕವಾಗಿ ಇನ್ನಿಲ್ಲ ವಾದರೂ ಅವರ ಕನಸುಗಳಿಗೆ ಸಾವಿಲ್ಲ . ರಾಜ್ಯದ ರಾಜಕಾರಣದ ತುಂಬ ಹೆಗಡೆ ಬಿತ್ತಿದ ಬೀಜಗಳು ಅವಿನಾಶಿ.

English summary
He is no more. Intellectual, honest, opportunist, a political guru, a dreamer..Ramakrishna Hegde has left a legecy in public life in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X