ಅಧ್ಯಾತ್ಮ ನಿಲುವಿನ ಸಮಾಜವಾದಿ ಚಿಂತಕ


ಪ್ರೀತಿಯ ಗೆಳೆಯ ಮುರಾರಿ ಬಲ್ಲಾಳರು ಆನಂದತೀರ್ಥರ ಉಡುಪಿಯಲ್ಲಿ ಆಧುನಿಕ ಕಾಲದ ಋಷಿಯಂತೆ ಬದುಕಿದವರು. ‘ಎಲ್ಲವನ್ನೂ ವಿಮರ್ಶಿಸಿ ಒಪ್ಪಿಕೊಳ್ಳಬೇಕು. ಒಪ್ಪಿಕೊಂಡದ್ದನ್ನು ಭಾವನಾತ್ಮಕವಾಗಿ ಅನುಭವಿಸಬೇಕು. ಸ್ವಂತವಾಗಿ ಅನುಭವಿಸಿದ್ದನ್ನು ಎಲ್ಲರ ಜತೆ ಹಂಚಿಕೊಳ್ಳಬೇಕು’ ಎನ್ನುವ ಹಂಬಲದ ವಿಸ್ತಾರದಲ್ಲಿ ಅವರು ಕಳೆದುಹೋದರು.

ಅವರು ಕಲಿತದ್ದು ಅರ್ಥಶಾಸ್ತ್ರ . ಆದರೆ ಈಗ ಚಾಲ್ತಿಯಲ್ಲಿರುವ ಬಂಡವಾಳಶಾಹಿ ಆರ್ಥಿಕ ನೀತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿ ಗಾಂಧೀಜಿಯ ಸರ್ವೋದಯವನ್ನು ನಂಬಿದವರು. ಪ್ರಾಯಶಃ ನಮ್ಮ ಕರ್ನಾಟಕದಲ್ಲಿ ಈ ಬಗೆಯ ಆಧ್ಯಾತ್ಮಿಕ ನಿಲುವಿನ ಸಮಾಜವಾದಿ ಚಿಂತಕರೆಂದರೆ ಮುಖ್ಯವಾಗಿ ಅವರು ಎಂಬುದು ನನ್ನ ನಂಬಿಕೆ.

‘ರಥಬೀದಿ ಗೆಳೆಯರು’ ಸಂಸ್ಥೆ ಮುರಾರಿಯವರಿಂದಾಗಿ ಕೇವಲ ಸಾಂಸ್ಕೃತಿಕ ಸಂಸ್ಥೆಯಾಗಿ ಉಳಿಯದೇ ರಾಜಕೀಯವಾಗಿಯೂ ಈ ಸಮಾಜವಾದಿ ನಿಲುವನ್ನು ಎಲ್ಲರಿಗೂ ಅರ್ಥಪೂರ್ಣವೆನ್ನಿಸುವಂತೆ ಬಿತ್ತರಿಸಿತು.

ಮಠಗಳ ಲೋಕದಿಂದಲೇ ಬಂದ ಮುರಾರಿ, ಅಗತ್ಯವಿದ್ದಾಗ ಆ ಮಠಗಳನ್ನೆಲ್ಲಾ ಎದುರು ಹಾಕಿಕೊಂಡು ಹೋರಾಡಬಲ್ಲವರಾಗಿದ್ದರು. ಕೋಮುವಾದಿ ಸಿದ್ಧಾಂತದ ವಿರುದ್ಧವಾಗಿ ಅವರು ಒಬ್ಬ ಅಪ್ಪಟ ‘ಹಿಂದೂ’ ಆಗಿಯೇ ಹೋರಾಡಿದರು. ಪ್ರತಿನಿತ್ಯ ಸ್ನಾನ, ಸಂಧ್ಯಾವಂದನೆ ಇತ್ಯಾದಿ ಕರ್ಮಗಳಲ್ಲಿ ಶ್ರದ್ಧೆಯಿರಿಸಿಕೊಂಡೂ ಅವರು ನಮ್ಮ ಪರಂಪರೆ, ಆಧುನಿಕ ಕಾಲಕ್ಕೂ ಸ್ಪಂದಿಸಬಲ್ಲದು ಎಂಬುದನ್ನು ತಮ್ಮ ಜೀವನದ ಮುಖೇನ ರುಜುವಾತುಗೊಳಿಸಿದರು.

ಇಂಥ ಮುರಾರಿಯವರ ಇಡೀ ಮನಸ್ಸನ್ನು ಕಟ್ಟಿದ ಒಂದು ಶಕ್ತಿಯೆಂದರೆ ಜಿಡ್ಡು ಕೃಷ್ಣಮೂರ್ತಿ. ಕೃಷ್ಣಮೂರ್ತಿಯವರನ್ನು ಸದಾ ಎದುರಾಗುತ್ತಲೇ ಮುರಾರಿ, ತನ್ನ ಎಲ್ಲ ರಾಜಕೀಯ, ಸಾಮಾಜಿಕ, ಆರ್ಥಿಕ ಚಿಂತನೆಗಳನ್ನು ರೂಪಿಸಿಕೊಳ್ಳುತ್ತಿದ್ದರು. ಆದ್ದರಿಂದಲೇ ಅವರಲ್ಲಿ ಚಿಂತನಶೀಲತೆಯ ಜತೆಗೆ ಕಾವ್ಯದ ಮನಸ್ಸೂ ಕೆಲಸ ಮಾಡುತ್ತಿತ್ತು . ಜಿಡ್ಡು ಕೃಷ್ಣಮೂರ್ತಿಯವರ ಬದುಕಿನ ಬಗ್ಗೆ ಬರೆದ ಒಂದು ಪುಸ್ತಕ ಇನ್ನೂ ಪ್ರಕಟವಾಗಬೇಕಿದೆ. ಅದಕ್ಕೆ ನಾನು ಮುನ್ನುಡಿ ಬರೆದಿದ್ದೇನೆ.

‘ನನ್ನ ಹೃದಯವನ್ನು , ಮನಸ್ಸನ್ನು ತುಂಬಿಕೊಂಡ ಪುಸ್ತಕದ ಬಗ್ಗೆ ನಾನು ಬರೆದ ಮುನ್ನುಡಿಯನು ಓದಿ ಮುರಾರಿ ಸ್ವತಃ ಸಂತೋಷಪಟ್ಟರು. ಎಲ್ಲವನ್ನೂ ವಿಮರ್ಶಾ ದೃಷ್ಟಿಯಿಂದ ನೋಡುವ ನನಗೆ ಅವರು ಬದುಕಿದ್ದಾಗಲೇ ಕೆಲವು ಒಳ್ಳೆಯ ಮಾತುಗಳನ್ನು ಅವರ ಬಗ್ಗೆಯೇ ಬರೆಯಲು ಸಾಧ್ಯವಾಗಿಸಿದರು.

ನಾನು ಸಾಮಾನ್ಯವಾಗಿ ಮುರಾರಿಯವರನ್ನು ಹಿಂದೆ ನೋಡುತ್ತಿದ್ದುದು ಕೆ.ವಿ.ಸುಬ್ಬಣ್ಣನ ಹೆಗ್ಗೋಡಿನ ನೀನಾಸಂ ಶಿಬಿರಗಳಲ್ಲಿ . ಅಲ್ಲಿಗೆ ಅವರೂ ಬರುತ್ತಿದ್ದುದು ಉಳಿದ ಸ್ನೇಹಿತರ ಸಹವಾಸಕ್ಕಾಗಿ. ಅವರನ್ನು ಆತ್ಮೀಯವಾಗಿ ಬಲ್ಲದ ಯಾವ ದೊಡ್ಡ ಮನುಷ್ಯನೂ ನನಗೆ ಗೊತ್ತಿಲ್ಲ . ರುಸ್ತುಂಬ ರೂಚಾ, ಆಶೀಶ್‌ ನಂದಿ, ವಂದನಾ ಶಿವ, ರಿಂಪೋಚೆ- ಹೀಗೆ ಯಾರ ಹೆಸರನ್ನೇ ಹೇಳಿದರೂ ಅವರು ಉಡುಪಿಯಲ್ಲಿ ಇಳಿದುಕೊಳ್ಳುತ್ತಿದ್ದುದು ಮುರಾರಿಯವರ ಮನೆಯಲ್ಲೇ.

ಒಂದು ದೃಷ್ಟಿಯಲ್ಲಿ ಮುರಾರಿ ತುಂಬಾ ಪ್ರೀತಿಸುತ್ತಿದ್ದ ಅವರ ಮನೆ ಎಲ್ಲರಿಗೂ ತೆರೆದ ಮನೆಯಾಗಿತ್ತು . ಈ ಮನೆಯಲ್ಲಿ ಚರ್ಚೆ, ಸಂಗೀತ ಕಛೇರಿ, ಕಾವ್ಯ ವಾಚನ ಎಲ್ಲವೂ ಆಗುತ್ತಿತ್ತು . ಕೇವಲ ಕಾಡು ಹರಟೆಗೂ ಅವಕಾಶವಿರುತ್ತಿತ್ತು . ಇದು ನಾವೆಲ್ಲಾ ನಮ್ಮನ್ನು ವಿಸ್ತರಿಸಿಕೊಂಡ ಜಾಗ’.

ಮುರಾರಿ, ಇತರರು ವಿಸ್ತಾರವಾಗುತ್ತಾ ಪ್ರಜ್ಞಾಶೀಲರಾಗುತ್ತಾ ಹೋಗುವುದನ್ನು ಕಂಡೇ ಎಷ್ಟು ಉಬ್ಬುತ್ತಿದ್ದರು ಎಂಬುದನ್ನು ಮರೆಯಲಾರೆ.

ಮುರಾರಿಯವರದು ಆಧ್ಯಾತ್ಮಿಕ ತೀವ್ರತೆಯ ಸಮಾಜವಾದ ಎಂದೆ. ಅವರು ಆ ಪ್ರದೇಶದ ಸಕ್ರಿಯ ಪರಿಸರ ಹೋರಾಟಗಾರರಾಗಿದ್ದರು. ಮುರಾರಿ ಎಷ್ಟು ಬೌದ್ಧ ನಿಲುವಿಗೆ ವಾಲಿದರೂ ಈ ಪ್ರಪಂಚ ಸತ್ಯ ಎನ್ನುವುದನ್ನು ನೈತಿಕವಾಗಿಯೂ ಒಪ್ಪಿಕೊಂಡವರು. ಪ್ರಪಂಚವನ್ನು ಮನುಷ್ಯ ನಾಶ ಮಾಡಲೂ ಬಲ್ಲ ಎಂಬ ಭಯ ಅವರನ್ನು ಕಾಡುತ್ತಿತ್ತು . ಆದ್ದರಿಂದಲೆ ಪರಿಸರವಾದಿಯಾದರು. ಅವರ ಪರಿಸರವಾದ ಮಾತೃಭಾವನೆಯಿಂದ ಹುಟ್ಟಿದ್ದು . ಅರ್ಥಶಾಸ್ತ್ರಜ್ಞರೂ ಆಗಿದ್ದ ಮುರಾರಿಯವರಿಗೆ ‘ಡೆವಲಪ್‌ಮೆಂಟ್‌’ಗೆ ಮಿತಿಗಳಿವೆ ಎಂಬುದು ತಿಳಿದಿತ್ತು .

ಅವರ ಪರಿಸರವಾದಿ ನಿಲುವಿಗೂ, ಅರ್ಥಶಾಸ್ತ್ರಜ್ಞನಾಗಿ ತೆಗೆದುಕೊಂಡ ನಿಲುವಿಗೂ, ಸಂಗೀತ-ಕಾವ್ಯವನ್ನು ಮೆಚ್ಚುತ್ತಿದ್ದುದಕ್ಕೂ, ಜೆ.ಕೆ, ಉಪನಿಷತ್‌, ಬೌದ್ಧಧರ್ಮ-ಇವುಗಳಲ್ಲಿ ಅವರಿಗಿದ್ದ ಶ್ರದ್ಧೆಗೂ ಹಾಗೂ ತನ್ನ ಸಂಪ್ರದಾಯದಿಂದಲೇ ಬಂದ ಆಚಾರಗಳನ್ನೂ ಪಾಲಿಸುತ್ತಿದ್ದ ರೀತಿಗೂ ಪರಸ್ಪರ ದೊಡ್ಡ ಹೊಂದಾಣಿಕೆಯಿತ್ತು . ಅದನ್ನು ಅವರಿಂದ ಮಾತ್ರ ಸಾಧಿಸಬಲ್ಲದ್ದು . ಬೇರೆಯವರಲ್ಲಿ ಒಡೆದುಕೊಂಡಂತೆ ಕಾಣುವ ವಿಚಾರಗಳು ಮುರಾರಿಯವರಲ್ಲಿ ಸಮಗ್ರ ರೂಪ ತಳೆದಿದ್ದನ್ನು ನಾನು ಕಂಡಿದ್ದೇನೆ.

ಮುರಾರಿ ನಮ್ಮ ನಡುವೆ ಬಹಳ ಕಾಲ ಉಳಿಯುತ್ತಾರೆ ಎಂಬ ನಂಬಿಕೆ ನನ್ನದು. ಅಷ್ಟು ಪರಿಶುದ್ಧವಾದ ತೀವ್ರತೆಯ ಬರವಣಿಗೆಯನ್ನು ನಮಗೆ ಅವರು ಬಿಟ್ಟು ಹೋಗಿದ್ದಾರೆ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+