ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾ : ಕೈಯಲ್ಲಿ ಕತ್ತಿ , ಕೊರಳಲ್ಲಿ ಬಂಗಾರ

By Oneindia Staff
|
Google Oneindia Kannada News

ವಿಶಾಖ ಎನ್‌.

Fencing talent of Bangalore, Pratibhaಹದಿನೆಂಟರ ಹರೆಯದ ಪಂಕಜ್‌ ಅದ್ವಾನಿ ಸ್ನೂಕರ್‌ನಲ್ಲಿ ಚಿನ್ನ ಗೆದ್ದರೆ ಮಲ್ಯ ಸಂತೋಷದಿಂದ 50 ಸಾವಿರ ರುಪಾಯಿ ಬಹುಮಾನ ಕೊಡುತ್ತಾರೆ. ಒಂದೇ ಒಂದು ಕ್ರಿಕೆಟ್‌ ಪಂದ್ಯದಲ್ಲಿ ಲಕ್ಷ್ಮಣ್‌ ರನ್‌ ಮಳೆ ಸುರಿಸಿದರೆ ಜಾಹೀರಾತು ಕಂಪನಿಗಳು ಮನೆ ಮುಂದೆ ಬಂದು ನಿಂತಿರುತ್ತವೆ. ಟೆನಿಸ್‌ ಆಡಿ ಮಿಂಚಿದ ಯುವತಿ ಸಾನಿಯಾ ಮಿರ್ಜಾ ಸೌಂದರ್ಯ ಕುರಿತು ಚರ್ಚೆ ನಡೆಯುತ್ತದೆ. ಹೀಗೆ ಕೆಲವು ಆಟಗಳಲ್ಲಿ ಒಂದೇ ಒಂದು ಅದೃಷ್ಟದಾಟ ಆಡಿಬಿಟ್ಟರೆ ಸಾಕು, ಭವಿತವ್ಯ ಹಸನು.

ಆದರೆ ಅನೇಕ ಆಟಗಳಲ್ಲಿ ಪರಿಸ್ಥಿತಿ ಹಾಗಿಲ್ಲ. ದೇಸೀ ಆಟವಾದ ಕಬಡ್ಡಿಯಲ್ಲಿ ಯಾರೆಷ್ಟೇ ಚೆನ್ನಾಗಿ ಆಡಿದರೂ ಬೆನ್ನು ತಟ್ಟಲು ಸರ್ಕಾರ ಹಿಂದೂಮುಂದೂ ನೋಡುತ್ತದೆ. ಜನಪ್ರಿಯ ಆಟಗಳನ್ನು ಆಯ್ದುಕೊಂಡರೆ, ತೀವ್ರ ಪೋಟಿ ಹಾಗೂ ಲಾಬಿಯ ಚಾಟಿ. ಹೊಸ ಆಟದತ್ತ ವಾಲಿದರೆ ತರಬೇತಿಯ ಕೊರತೆ, ಪ್ರಾಯೋಜಕರಿಗೆ ಬರ. ಹೀಗಿದೆ ನಮ್ಮ ಕ್ರೀಡಾಲೋಕದ ವಸ್ತುಸ್ಥಿತಿ. ಭಾರತದ ಮಟ್ಟಿಗೆ ಇಂಥಾ ಹೊಸ ಆಟಗಳ ಪೈಕಿ ಕತ್ತಿವರಸೆಯಂಥಾ ಆಟ 'ಫೆನ್ಸಿಂಗ್‌" ಕೂಡ ಒಂದು. 1990ರ ದಶಕದಿಂದ ಭಾರತದಲ್ಲಿ ಕೊಂಚ ಮಟ್ಟಿಗೆ ಸದ್ದು ಮಾಡಲು ಶುರುವಿಟ್ಟುಕೊಂಡಿರುವ ಈ ಆಟದಲ್ಲಿ ಇರುವ ಅವಕಾಶದಲ್ಲೇ ಸಾಕಷ್ಟು ಮಿಂಚಿರುವ ಬೆಂಗಳೂರಿನ ಪ್ರತಿಭೆ 'ಪ್ರತಿಭಾ". ಹೆಸರಿಗೆ ತಕ್ಕಂಥ ಹುಡುಗಿ.

ಅದು 1993- 94. ಬೆಂಗಳೂರಿನ ರಾಜಾಜಿನಗರದ ಎಸ್‌ಜೆಆರ್‌ಸಿ ಮಹಿಳಾ ಕಾಲೇಜಲ್ಲಿ ಬಿಎಸ್ಸಿ ಓದುತ್ತಿದ್ದ ಕಾಲ. ಮೊದಲಿಂದಲೂ ಆಟದ ಗೀಳಿಟ್ಟುಕೊಂಡಿದ್ದ ಪ್ರತಿಭಾ ಥ್ರೋ ಬಾಲ್‌ ಆಟವಾಡಿ ಬೆವರು ಹರಿಸುತ್ತಿದ್ದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ಥ್ರೋಬಾಲ್‌ನಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದ ಪ್ರತಿಭಾ ಪ್ರತಿಭೆ ಫೆನ್ಸಿಂಗ್‌ನತ್ತ ಪಲಾಯನವಾದದ್ದು ಆಗಲೇ. ತರಪೇತುದಾರರಿಗೆ ಈಕೆಗೊಂದು ಹೊಸ ಆಟದ ಗೀಳು ಹಚ್ಚಬೇಕೆಂಬ ಮನಸ್ಸಾಯಿತು. ಆ ಮೊಳಕೆ ಗಿಡವಾದ ಪರಿಣಾಮವೇ ಪ್ರತಿಭಾ ಫೆನ್ಸಿಂಗ್‌ ಆಡೋಕೆ ಕತ್ತಿ ಹಿಡಿಯಲು ಕಾರಣ. ಹಾಗೆ ಕತ್ತಿ ಝಳಪಿಸತೊಡಗಿದ ಪ್ರತಿಭಾ ರಾಜ್ಯ ತಂಡಕ್ಕೆ ದಿಢೀರ್‌ ಆಯ್ಕೆಯಾದರು.

Fencing : The new game for India1995ರಲ್ಲಿ ಬಿಹಾರದಲ್ಲಿ 8ನೇ ಹಿರಿಯರ ರಾಷ್ಟ್ರೀಯ ಮಟ್ಟದ ಫೆನ್ಸಿಂಗ್‌ ಕೂಟ ನಡೆಯಿತು. ಅದು ಪ್ರತಿಭಾ ಎದುರಿಸಿದ ಮೊದಲ ಬಲಾಢ್ಯ ಹೋರಾಟದಾಟ. ಪ್ರಥಮ ಚುಂಬನೇ ದಂತಭಗ್ನಂ ಎಂಬಂತಾಯಿತು. ಬಲಗೈಗೆ ಪೆಟ್ಟು ಬಿದ್ದ ಕಾರಣ ಪ್ರತಿಭಾ ಹತಾಶರಾದರು. ಈ ಆಟದ ಸಹವಾಸವೇ ಸಾಕು ಎಂಬ ತೀರ್ಮಾನಕ್ಕೆ ಬಂದರು. ಆಗ ಈ ಫೆನ್ಸಿಂಗ್‌ ಪ್ರತಿಭಾ ಪಲಾಯನವನ್ನು ತಡೆಗಟ್ಟಿದವರು ಮಣಿಪುರದ ಕೋಚ್‌ ಐರಾನ್‌ ದೇವಾನ್‌ ಸಿಂಗ್‌. ಬಲಗೈಲಿದ್ದ ಕತ್ತಿ ಎಡಗೈಗೆ ಬಂತು. ಆ ನಂತರ ಪ್ರತಿಭಾ ನಸೀಬು ಬದಲಾಯಿತು. ಪದಕಗಳು ಕೊರಳನ್ನು ಹುಡುಕಿಕೊಂಡು ಬರತೊಡಗಿದವು.

ಕತ್ತಿಯ ಮೊನೆಯ ಮಿಂಚಿಗೆ ಪ್ರತಿಭಾ ಕಣ್ಣು ಒಗ್ಗಿಕೊಂಡಿತು. ಸರಿಯಾಗಿ 2 ವರ್ಷಗಳ ನಂತರ, 1997ರಲ್ಲಿ ಹರಿಯಾಣದಲ್ಲಿ ನಡೆದ 9ನೇ ಹಿರಿಯರ ರಾಷ್ಟ್ರೀಯ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಕೊರಳಿಗೆ ಹಾರವಾಯಿತು. ಅದರ ಮುಂದಿನ ವರ್ಷ ಲಕ್ನೋದಲ್ಲಿ ನಡೆದ ಇದೇ ಸ್ಪರ್ಧೆಯಲ್ಲಿ ಇನ್ನೊಂದು ಚಿನ್ನ. 2000ನೇ ಇಸವಿ ಹೊತ್ತಿಗೆ ಚಿನ್ನದ ಪದಕ ಗೆಲ್ಲುವುದು ಪ್ರತಿಭಾ ಗೀಳಾಗಿ ಹೋಯಿತು. 11ನೇ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಂತೂ ನಾಲ್ಕು ಚಿನ್ನದ ಪದಕಗಳ ಹುಡುಗಿಯಾಗಿ ಪ್ರತಿಭಾ ಬಂಗಾರದ ಬಾಲೆಯಾದರು.

ಕೇವಲ ಏಳು ವರ್ಷಗಳ ಕ್ರೀಡಾ ಸಾಧನೆಯಲ್ಲಿ ಪ್ರತಿಭಾಗೆ ಕತ್ತಿ ಒಲಿಯಿತು. 2001ನೇ ಇಸವಿಯಲ್ಲಿ ಏಷ್ಯನ್‌ ಫೆನ್ಸಿಂಗ್‌ ಷಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ 31ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಪ್ರತಿಭಾ, ಮರು ವರ್ಷ ನಡೆದ ಕಾಮನ್‌ವೆಲ್ತ್‌ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 27ನೇ ಸ್ಥಾನ ಪಡೆದರು. ರಾಷ್ಟ್ರೀಯ ಕ್ರೀಡೆಗಳಲ್ಲಿ 7, ಹಿರಿಯರ ರಾಷ್ಟ್ರೀಯ ಮತ್ತು ಕಿರಿಯರ ರಾಷ್ಟ್ರೀಯ ಕೂಟಗಳಲ್ಲಿ 11 ಹಾಗೂ ರಾಜ್ಯ ಚಾಂಪಿಯನ್‌ಷಿಪ್‌ಗಳಲ್ಲಿ 3 ಚಿನ್ನದ ಪದಕಗಳನ್ನು ಪ್ರತಿಭಾ ಈವರೆಗೆ ಗೆದ್ದಿದ್ದಾರೆ. ಗೆದ್ದಿರುವ 23 ಚಿನ್ನ, 7 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ತೋರಿಸುವಾಗ ಸಾರ್ಥಕತೆಯ ನಗು ಸೂಸುವ ಪ್ರತಿಭಾ, ಭವಿತವ್ಯದ ಬಗೆಗಿನ ಕೆಣಕು ಪ್ರಶ್ನೆಗೆ ವಿಷಾದದ ಭಾವ ತೋರಿದರು. ಪ್ರತಿಭಾಗೆ ಈ ಕ್ರೀಡೆ ಕೆಲಸ ತಂದುಕೊಟ್ಟಿಲ್ಲ. ಈಕೆ ಇನ್ನೂ ನಿರುದ್ಯೋಗಿ. ಪೊಲೀಸ್‌ ಕೆಲಸ ಹೊರತುಪಡಿಸಿ ಮಿಕ್ಕ ಯಾವ ಕೆಲಸಕ್ಕೂ ಫೆನ್ಸಿಂಗ್‌ ಕ್ರೀಡೆಯನ್ನು ಸರ್ಕಾರ ಪರಿಗಣಿಸುತ್ತಿಲ್ಲ.

Pratibha being honored by H.T.Sanglianaವಿಷಾದದ ಮೂಡಿಂದ ಹೊರ ತರಲು ಫೆನ್ಸಿಂಗ್‌ ಆಟ ರೂಪುಗೊಂಡಿದ್ದು ಎಲ್ಲಿ ಯಾಕೆ ಎಂದು ಪ್ರತಿಭಾ ಮುಂದೆ ಪ್ರಶ್ನೆಯಿಟ್ಟಾಗ ಮಾತುಗಳಲ್ಲಿ ಮತ್ತೆ ಲವಲವಿಕೆ ಮೂಡಿತು. ಯೂರೋಪ್‌ ರಾಷ್ಟ್ರಗಳಲ್ಲಿ ಕತ್ತಿ ವರಸೆ ಹಿಂದೆ ಯುದ್ಧ ಕಾಲದ ಜರೂರತ್ತಾಗಿತ್ತು. ಆಮೇಲೆ ಅಲ್ಲಿನ ಜನ ಯಾಕೆ ಅದನ್ನು ಒಂದು ಆಟವಾಗಿ ಆಡಬಾರದು ಎಂದು ತೀರ್ಮಾನಿಸಿದರು. ಕತ್ತಿ ಹಾನಿಕಾರಕವಾದ್ದರಿಂದ, ಚೂಪಾದ ಬಿದುರು ಕಡ್ಡಿಗಳನ್ನು ಆಟವಾಡಲು ಉಪಯೋಗಿಸಿದರು. ಬಿದುರು ಕಡ್ಡಿಯ ಚೂಪು ಮೊನೆಯಿಂದ ಯಾರು ಎದುರಾಳಿಯನ್ನು ಹೆಚ್ಚಾಗಿ ಚುಚ್ಚುವರೋ ಅವರು ವಿಜಯಶಾಲಿ ಅಂತ ತೀರ್ಮಾನವಾಯಿತು. ಆಧುನಿಕ ಜಗತ್ತಿನಲ್ಲಿ ಇದೇ ಆಟದ ಸ್ವರೂಪ ಬದಲಾಯಿತು. ರಕ್ಷಣೆಗೆ ಭದ್ರ ಕವಚದಂತಹ ಉಡುಗೆ. ಕೈಗೆ ಭರ್ತಿ ಗ್ಲೌಸುಗಳು. ಮುಖಕ್ಕೆ ಬಲು ಹಸನಾದ ಶಿರಸ್ತ್ರಾಣ, ಮೊಗಮುಸುಕು, ಕಾಲುಗಳ ಕದಲಿಕೆಯನ್ನು ಸುಲಭವಾಗಿಸಲು ಹೂವಿನಂಥಾ ತೂಕದ ಬೂಟುಗಳು. ಇವತ್ತು ಒಂದು ಕತ್ತಿಯ ಸಹಿತ ಇಷ್ಟೆಲ್ಲವನ್ನೂ ಕೊಂಡುಕೊಳ್ಳಬೇಕಾದರೆ ಬರೋಬ್ಬರಿ 50 ಸಾವಿರ ರುಪಾಯಿ ಬೇಕು !

ಫಾಯಿಲ್‌, ಎಪೀ, ಸ್ಯಾಬರ್‌ ಎಂಬ ಮೂರು ಪ್ರಕಾರದ ಕತ್ತಿಗಳನ್ನು 'ಫೆನ್ಸಿಂಗ್‌" ಆಟದಲ್ಲಿ ಉಪಯೋಗಿಸಲಾಗುತ್ತದೆ. ಈ ಪೈಕಿ ಫಾಯಿಲ್‌ ಹಾಗೂ ಸ್ಯಾಬರ್‌ ಅರ್ಧ ಕಿಲೋ ತೂಗುವ ಕತ್ತಿಗಳು. ಎಪೀ ಮುಕ್ಕೂಲು ಕಿಲೋದಷ್ಟು ತೂಕವಿರುತ್ತದೆ. ಎಪೀ ಹಾಗೂ ಫಾಯಿಲ್‌ ಪ್ರಕಾರದ ಕತ್ತಿಗಳನ್ನು ಬಳಸಿ ಪ್ರತಿಭಾ ಹೆಚ್ಚು ಆಟಗಳನ್ನಾಡಿದ್ದಾರೆ. ಒಂದು ಕತ್ತಿಯ ಅಂದಾಜು ಬೆಲೆ 4 ರಿಂದ 5 ಸಾವಿರ ರುಪಾಯಿ.

ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ ಕೊಡುವ ಕೀರ್ತಿರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಒಲಂಪಿಕ್‌ ಒಕ್ಕೂಟದ ಪ್ರಶಸ್ತಿಗಳಿಗೆ ಪ್ರತಿಭಾ ಭಾಜನರಾಗಿದ್ದಾರೆ. ಸದ್ಯಕ್ಕೆ ಕತ್ತಿವರಸೆಯ ಧ್ಯಾನದಲ್ಲೇ ಇರುವ ಈಕೆಯನ್ನು ನೀವು ಕಿತ್ತೂರು ಚೆನ್ನಮ್ಮನಾ ಅಂತ ಕೆಣಕಿದರೆ ನಸು ನಗುತ್ತಾ, ಅಲ್ಲಪ್ಪಾ ಅನ್ನುತ್ತಾರೆ. ಹೊಸಬರು ಈ ಆಟಕ್ಕೆ ಸೇರಬಯಸಿದರೆ, ಆಗಬಹುದಾದ ಖರ್ಚಿಗೆ ಬೇಸ್ತು ಬೀಳುವ ಅಗತ್ಯವಿಲ್ಲ. ಫೆನ್ಸಿಂಗ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಪ್ರತಿಭಾರಂತಹ ಪ್ರತಿಭೆಗಳಿಗೆ ವಸ್ತ್ರ- ಕವಚ ವಗೈರೆಗಳನ್ನು ಒದಗಿಸುತ್ತದೆ. ಕತ್ತಿ ಕೊಳ್ಳಬೇಕಾದ್ದು ಮಾತ್ರ ಕಡ್ಡಾಯ.

1995ರಲ್ಲಿ ಪ್ರತಿಭಾ ಈ ಆಟಕ್ಕೆ ಸೇರಿಕೊಂಡಾಗ, ಕರ್ನಾಟಕದ ಕೇವಲ 20 ಚಿಲ್ಲರೆ ಫೆನ್ಸಿಂಗ್‌ ಪಟುಗಳು ಇದ್ದರು. ಆದರೀಗ ಈ ಸಂಖ್ಯೆ ಅರ್ಧ ಶತಕದಷ್ಟಾಗಿದೆ. ಆಟ ಹೀಗೆ ಬೆಳೆಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂಬುದು ಪ್ರತಿಭಾ ನಿರೀಕ್ಷೆ. ಸರ್ಕಾರ ಈಕೆಗೆ ಪ್ರಕಟಿಸಿರುವ ಏಕಲವ್ಯ ಪ್ರಶಸ್ತಿಯನ್ನು ಬಜೆಟ್‌ ತೊಂದರೆಯಿಂದ ಇನ್ನೂ ಪ್ರದಾನ ಮಾಡಿಲ್ಲ. ಒಂದು ಕಡೆ ಕೆಲಸ ಸಿಗದ ವಿಷಾದ, ಇನ್ನೊಂದು ಕಡೆ ಕತ್ತಿವರಸೆಯ ಗೀಳು- ಭರವಸೆಯ ನಿರೀಕ್ಷೆಯಲ್ಲಿ ಪ್ರತಿಭಾ ಪಯಣ ಸಾಧನೆಯ ಹಾದಿಯಲ್ಲಿ ಹಾಗೇ ಸಾಗಿದೆ.

ಅಂದಹಾಗೆ, ಫೆನ್ಸಿಂಗ್‌ ಆಟದ ಮೂಲಕ ಕತ್ತಿ ಝಳಪಿಸಬಯಸುವವರು ಕಂಠೀರವ ಕ್ರೀಡಾಂಗಣದ ಕಾರ್ಯದರ್ಶಿ ಕಚೇರಿಯ ಕದ ತಟ್ಟಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X