ಇಂಥವ ಬಲು ಅಪರೂಪ, ಈ ಪೋರನ ಹೆಸರು ಸ್ವರೂಪ
ಬೆಂಗಳೂರು : ಎನ್‌ಸೈಕ್ಲೋಪೀಡಿಯಾ ಓದಿಕೊಂಡ ಪುಟ್ಟ ದೇಹ. ಮನಸ್ಸು ಅಷ್ಟೇ ದೊಡ್ಡದು. ವಯಸ್ಸು ಮೂರೂವರೆ ವರ್ಷ. ಓದುವುದೆಂದರೆ ಹರ್ಷ. ದಕ್ಷಿಣ ಕನ್ನಡದ ಈತ ಬಲು ಅಪರೂಪ. ಹೆಸರು ಸ್ವರೂಪ.
ಮಾಧ್ಯಮಗಳಿಗೆ ಈ ಪ್ರತಿಭೆಯನ್ನು ಪರಿಚಯಿಸಲು ಅಪ್ಪ ರಫೀಕ್, ಅಮ್ಮ ಆತಿಕಾ ಮಗನ ಸಮೇತ ಗುರುವಾರ ಸುದ್ದಿಗೋಷ್ಠಿ ನಡೆಸಿದರು. ಚುರುಕು ಹುಡುಗ. ಕಂಪ್ಯೂಟರ್ ಈತನ ನೆಚ್ಚಿನ ಗೆಳೆಯ. ಪದ್ಯ ಬರೆಯುತ್ತಾನೆ ಕಳೆಯಲು ಸಮಯ. ಸ್ಲೈಡ್ಸ್ ಮಾಡೋದು ಗೊತ್ತು, ಈ- ಮೇಲ್ ಕಳಿಸಬಲ್ಲೆ, ಇಂಟರ್ನೆಟ್‌ನಲ್ಲಿ ಮಕ್ಕಳ ವೆಬ್‌ಸೈಟ್‌ಗಳೆಂದರೆ ನಂಗಿಷ್ಟ... ಪಟಪಟ ಅರಳು ಹುರಿದಂಥಾ ಮಾತು. 10 ಸಾವಿರ ಪ್ರಶ್ನೆಗಳಿಗೆ ಇವನ ಬಳಿ ಉತ್ತರ ಉಂಟು. ‘ವಿಜ್ಞಾನ, ತಂತ್ರಜ್ಞಾನ, ವ್ಯಾಕರಣ, ಭೂಗೋಳ ಎಲ್ಲವುಗಳ ಬಗೆಗೆ ಪ್ರಶ್ನೆ ಕೇಳಿ. ಹೇಳುತ್ತೇನೆ’ ನಿರಾತಂಕವಾಗಿ ನಿಲ್ಲುತ್ತಾನೆ ಸ್ವರೂಪ.
ಮೌಖಿಕ ಭಾವಾನುವಾದವೂ ಇವನಿಗೆ ಅಂಗೈನೆಲ್ಲಿ. ಇಂಗ್ಲಿಷಿನಲ್ಲಿ ಕ್ರೋವ್- ಸ್ಪಾರೋ ಕತೆ ಹೇಳಿ. ಅದನ್ನು ಫಟಾಫಟ್ ಕಾಗಕ್ಕ- ಗುಬ್ಬಕ್ಕ ಕತೆ ಮಾಡಿ ಕನ್ನಡದಲ್ಲಿ ಹೇಳುತ್ತಾನೆ. ಇಂಗ್ಲಿಷ್ ವ್ಯಾಕರಣ ಕಲಿಕೆಯಲ್ಲಿ ಪ್ರೌಢಶಾಲೆಯ ಮಕ್ಕಳನ್ನು ಸರಿಗಟ್ಟಬಲ್ಲ ಸಾಮರ್ಥ್ಯ. ಸ್ವರೂಪ ಹುಟ್ಟಾ ಬುದ್ಧಿವಂತ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಒಂದೂವರೆ ವರ್ಷದ ಸ್ವರೂಪನನ್ನೇ ಮೆಚ್ಚಿಕೊಂಡು ಕಂಪ್ಯೂಟರೊಂದನ್ನು ಉಡುಗೊರೆಯಾಗಿ ಕೊಟ್ಟರು. ಜಾಣ ಹುಡುಗನಿಗೆ ಸಿಕ್ಕ ಸಾಣೆ ಅದು. ಅದರೊಳಗೆ ಮಾಹಿತಿ ತುಂಬಿದ ಸಿಡಿಗಳ ತುರುಕುತ್ತಾ, ಅವನ್ನೆಲ್ಲಾ ತಲೆಗೆ ತುಂಬಿಕೊಂಡ ಸ್ವರೂಪ.
ಸ್ವರೂಪ ಪುಟ್ಟ ಕವಿ ಕೂಡ. ಆಶುಕವಿಯೂ ಹೌದು. ಈಗಾಗಲೇ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸುಮಾರು 50 ಪದ್ಯಗಳನ್ನು ಬರೆದಿದ್ದಾನೆ. ಅವಕ್ಕೆ ರಾಗ ಕಟ್ಟಿ ಹಾಲೂ ಬಲ್ಲ. ಒಂದು ವಿಷಯ ಕೊಟ್ಟು, ಅದರ ಮೇಲೆ ಕವನ ಬರಿ ಮರಿ ಎಂದರೆ, ಬರೆದೆ ನೋಡಿ ಎನ್ನುತ್ತಾನೆ. ಕೂಡು, ಕಳೆ, ಭಾಗಿಸು, ಗುಣಿಸು, ಕುಣಿದು ಕುಪ್ಪಳಿಸು, ಹಾಡ ಹಾಡು, ಈ ದೇಶದ ಪ್ರಧಾನಿ ಯಾರು, ಈ ವಿಷಯ ಯಾವ ವೆಬ್‌ಸೈಟಿನಲ್ಲಿ ಸಿಗುತ್ತದೆ.... ಹೀಗೆ ಏನೇ ಕೇಳಿ ಸ್ವರೂಪ ಇದ್ದಾನೆ.
ಮಗನ ಪ್ರತಿಭೆಯನ್ನು ಪರಿಚಯಿಸಿದ ಅಪ್ಪ- ಅಮ್ಮ ನಗುತ್ತಿದ್ದರು. ಸ್ವರೂಪನ ಮನದಲ್ಲಿ ಮಂಥನ. ಮತ್ತೊಂದು ಪ್ರಶ್ನೆಗೆ ಸಿದ್ಧನಾಗಿ ನಿಂತಿದ್ದ. ಅಂದಹಾಗೆ, ಸ್ವರೂಪನ ಅಪ್ಪ ಉಪ್ಪಿನಂಗಡಿಯ ಸರ್ಕಾರಿ ಶಾಲೆಯಲ್ಲಿ ಮೇಷ್ಟ್ರು.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications