• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಕ್ಷಗಾನವ ಪಾಠ ಮಾಡಿ..

By Staff
|

ಇದ್ದಲ್ಲೇ ಇರುತ್ತೇವೆ. ಜನ್ನ- ಪಂಪರಿಂದ ಕುವೆಂಪು, ಬೇಂದ್ರೆ, ಅಡಿಗ ಅನ್ನುವಷ್ಟರಲ್ಲಿ ಕವಿಗಳ ಯಾದಿ ಮುಗಿದುಹೋಗುತ್ತದೆ. ಎಚ್‌.ಎಸ್‌.ವೆಂಕಟೇಶ ಮೂರ್ತಿ ಎಂಬೊಬ್ಬರು ಕವಿಯಿದ್ದಾರೆ ಅನ್ನೋದು ಎಸ್ಸೆಸ್ಸೆಲ್ಸಿ ಓದುವ ಎಷ್ಟು ಹುಡುಗರಿಗೆ ಗೊತ್ತು? ಲಂಕೇಶರು ಪದ್ಯ ಕೂಡ ಬರೆದಿದ್ದಾರೆ ಅನ್ನುವುದನ್ನು ಎಷ್ಟು ವಿದ್ಯಾರ್ಥಿಗಳು ಬಲ್ಲರು?

ನಮ್ಮ ಪಠ್ಯಗಳ ಜಾಯಮಾನವೇ ಹೀಗೆ. ಭಿನ್ನಾಭಿಪ್ರಾಯಗಳಿರುವ ಮಕ್ಕಿಕಾಮಕ್ಕಿ ಯಬಡೇಶಿಗಳ ಸಂಘ ಓದಲು ತುಂಬುವ ಒಂದು ಹಿಡಿ ಸರಕು ಎನಿಸಿಬಿಡುತ್ತದೆ. ಓಬಿರಾಯನ ಕಾಲದ ಈ ನೆಲೆಗಟ್ಟಿನಿಂದ ಪಠ್ಯ ಪುಸ್ತಕ ಕಮಿಟಿ ಹೊರಬರುವುದು ಯಾವಾಗ? ಹ್ಞಾಂ, ಬಂದರೂ ಅದು ಅಪ್ಪಿಕೋ ಚಳವಳಿಯದೋ ಜೈವಿಕ ತಂತ್ರಜ್ಞಾನದ ಮಜಲಿನ ವಿಷಯವೋ ಆಗುತ್ತದೆ, ಅಷ್ಟೆ. ಇದೂ ಬೇಕು, ನಿಜ. ಆದರೆ ಸಂಸ್ಕೃತಿ- ಪರಂಪರೆ, ನಾಡು ನುಡಿ, ಸಾಹಿತ್ಯ- ಲಾಲಿತ್ಯ ಇವುಗಳು ಮುಂದಿನ ಮಕ್ಕಳಿಗೆ ತಲುಪುವುದು ಹೇಗೆ? ಯಕ್ಷಗಾನ ಕಲಾವಿದ ಕೆರೆಮನೆ ಶಂಭು ಹೆಗಡೆ ಒಂದು ಸಲಹೆ ಕೊಟ್ಟಿದ್ದಾರೆ- ಪಾಠದ ಮೂಲಕವೇ ಸಂಸ್ಕೃತಿ ಹೇಳಿಕೊಡಿ. ಯಕ್ಷಗಾನಕ್ಕೂ ಶೈಕ್ಷಣಿಕ ಚೌಕಟ್ಟು ಕೊಡಿ.

ತಾನು ಅನುಭವಿಸಿದ, ಅನುಭಾವಿಸಿದ ಕಲೆ ಕಾಲನ ಹೊಳೆಯಲ್ಲಿ ತೇಲಿ ಹೋದರೆ ಎಂಬ ಆತಂಕ ಒಬ್ಬ ಕಲಾವಿದನ ಕಾಡಿದಾಗ, ಅದನ್ನು ಉಳಿಸಿ- ಬೆಳೆಸುವ ತವಕ ಹುಟ್ಟುವುದು ಸಹಜ. ಈ ಹೊತ್ತು ಶಂಭು ಹೆಗಡೆ ಅವರ ಮನದಲ್ಲಿ ಮನೆಮಾಡಿರುವ ವಿಷಯವೂ ಇದೆ. ಅದಕ್ಕಾಗೇ ಅವರು ಈ ಸಲಹೆ ಕೊಟ್ಟಿರುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ತಿಂಗಳು ಒಬ್ಬೊಬ್ಬ ಅತಿಥಿಗಳನ್ನು ಕರೆಸಿ, ಮಾತಾಡಿಸಿ, ಕೆಣಕಿ- ಕೆದಕಿ, ಹೊಸ ವಿಚಾರಗಳನ್ನು ಹೆಕ್ಕಿ ತೆಗೆಯುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಅದು. ಸ್ಥಳ- ನಯನಾ ಸಭಾಂಗಣ. ಪ್ರಶ್ನೆಗಳ ಗುಂಡುಗಳಿಗೆ ಶಂಭು ಹೆಗಡೆ ಎದೆಗೊಟ್ಟು ನಿಂತಿದ್ದರು. ಎಲ್ಲಕ್ಕೂ ಬಿರುಸು ಉತ್ತರ. ಅದು ಹೊಮ್ಮಿದ್ದು ಹೀಗೆ....

  • ಶೈಕ್ಷಣಿಕ ವ್ಯವಸ್ಥೆಯಿಲ್ಲದೆ ಈ ಹಿಂದೆ ಯಾವ ಕಲಾವಿದರೂ ಬೆಳೆದಿಲ್ಲವೇ ಎಂಬ ಪ್ರಶ್ನೆಯಿದೆ. ಬೆಳೆದಿಲ್ಲ ಎಂದೇನೂ ಅಲ್ಲ. ಆದರೆ ಮುಂದಿನ ಪೀಳಿಗೆಗೆ ಒಂದು ಕಲೆಯ ಪರಿಚಯವಾಗಬೇಕಾದರೆ ಅದು ಕೇವಲ ಪಾರಂಪರಿಕ ನೆಲೆಗಟ್ಟಿನಿಂದ ಅಸಾಧ್ಯ. ಶಿಕ್ಷಣದ ಚೌಕಟ್ಟು ಕೊಟ್ಟಾಗ ಅದು ಹೊಗುವ ರೀತಿಯೇ ಬೇರೆ. ಯಕ್ಷಗಾನ ಮುಂದಿನ ಪೀಳಿಗೆಗೆ ತಲುಪಬೇಕಾದರೆ, ಅದಕ್ಕೆ ಶಿಕ್ಷಣದ ಚೌಕಟ್ಟು ಕೊಡುವುದು ಅತ್ಯವಶ್ಯ.
  • ಶಿಕ್ಷಣ ವಿಧಾನ ಪ್ರತಿಭೆಗೆ ಒಂದು ಪಕ್ಕಾ ಚೌಕಟ್ಟು ವಿಧಿಸಿ, ಅದನ್ನು ಕಾಪಿಡುತ್ತದೆ.
  • ಗುರುಪರಂಪರೆ ಮುಂದುವರೆಸಲಿ ಎಂಬ ಸೊಲ್ಲಿದೆ. ಈ ಹೊತ್ತು ಕಲಾವಿದರಿಗೇ ಪುರುಸೊತ್ತಿಲ್ಲ. ಪರಂಪರೆ ಮುಂದುವರೆಯಲು ಹೇಳಿಕೊಡುವವರ್ಯಾರು? ಆ ಕೆಲಸವನ್ನು ಶಿಕ್ಷಣದ ಮೂಲಕ ಮಾಡಬೇಕಿದೆ.
  • ಯಕ್ಷಗಾನ ಎಂಬುದು ದಕ್ಷಿಣ ಕನ್ನಡ ಅಥವಾ ಉತ್ತರ ಕನ್ನಡದ್ದು ಅನ್ನುವ ಅಭಿಪ್ರಾಯವೇ ತಪ್ಪು. ಅದು ಸಮಗ್ರ ಕರ್ನಾಟಕ ರಂಗಭೂಮಿ. ಮೂಡಲಪಾಯ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ ಇವೆಲ್ಲಾ ಯಕ್ಷಗಾನದ ರೂಪಗಳೆ. ಜನ ಇವನ್ನು ಬೆಳೆಸುವ ಬಲವಾದ ಪ್ರಯತ್ನ ಮಾಡಲಿಲ್ಲ. (ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಅವರ ಪ್ರಶ್ನೆಗೆ ಉತ್ತರ)
  • ಕುಟುಂಬ ಕಲ್ಯಾಣ, ಏಡ್ಸ್‌ ನಿವಾರಣೆಗಳನ್ನು ತಿಳಿಹೇಳಲು ಯಕ್ಷಗಾನ ಬಳಸುವುದು ಸರಿಯಲ್ಲ. ಪ್ರಸ್ತುತ ಸಮಸ್ಯೆಗಳನ್ನು ಬಿಚ್ಚಿ ಹೇಳಲು, ಉದಾಹರಣೆಗೆ ಬರ ಪರಿಹಾರ ಅಂತಿಟ್ಟುಕೊಳ್ಳಿ. ಅದಕ್ಕೂ ಯಕ್ಷಗಾನದ ಬಳಕೆ ಸಲ್ಲ.
  • ವ್ಯಾಪಾರೀಕರಣದ ಲೆಕ್ಕಾಚಾರಗಳು ಕಲಾಕ್ಷೇತ್ರವನ್ನು ಮುಳುಗಿಸುತ್ತಿದೆ. ಈ ಕ್ಷಣದಲ್ಲಿ ಇದರಿಂದ ಲಾಭ ದೊರೆಯುತ್ತದೆಂಬುದು ಬೇರೆ ಮಾತು. ವೃತ್ತಿಗಾಗಿ ಕಲೆಯ ನೆಲೆ ಕೆಡಿಸುವ ಗೊಡವೆಗೆ ಹೋಗಬಾರದು. ನಮ್ಮ ತಂಡ ಈ ಕೆಲಸ ಮಾಡುತ್ತಿಲ್ಲ ಎಂಬುದೇ ಸಮಾಧಾನ.(ಪ್ರೊ.ಡಿ.ಲಿಂಗಯ್ಯ ಅವರ ಪ್ರಶ್ನೆಗೆ ಉತ್ತರ)
  • ನನಗೆ ಇದೇ ಪಾತ್ರ ಅನ್ನೋದಿಲ್ಲ. ರಾಮನ ವೇಷ ಕಟ್ಟಿದಾಗ, ರಾವಣನ ಬಗ್ಗೆ ಗಮನ ಇರುತ್ತೆ. ಹಾಗೆಯೇ ರಾವಣನಾದಾಗ ರಾಮನ ಬಗ್ಗೆ. ಆಯಾ ಸಂದರ್ಭದಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸೋದಷ್ಟೇ ನನಗೆ ಮುಖ್ಯ. (ಜಯಂತ ಕಾಯ್ಕಿಣಿ ಅವರ ಪ್ರಶ್ನೆಗಿದು ಉತ್ತರ)
  • ಕನಸು ಕಾಣುವುದರಲ್ಲಿ ನಾನು ಧಾರಾಳಿ. ಅದನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಹುಲ್ಲು- ಮುಳ್ಳು ಇದ್ದದ್ದೇ. ಕಲಾರಂಗದ ಬೆಳವಣಿಗೆಗೆ ನನ್ನ ಸ್ವಲ್ಪ ಆಯಸ್ಸನ್ನು ಕೊಟ್ಟಿದ್ದೇನೆ. ಕಳಕೊಂಡ ವಿಲಕ್ಷಣ ನೋವಿನ ಜೊತೆಗೆ ಸುಖದ ಮಧುರ ಕ್ಷಣಗಳೂ ಇವೆ. ನಾನು ಸಾಕಷ್ಟು ಪಡೆದಿದ್ದೇನೆ ಅನ್ನೋದು ನಿಜ.

ಸುಮಾರು ಇನ್ನೂರು ವರ್ಷಗಳಷ್ಟು ಇತಿಹಾಸ ಇರುವ ಇಡಗುಂಜಿ ಪರಂಪರೆ ಉಳಿಸಿಕೊಂಡು ಬಂದಿರುವ ಕೆರೆಮನೆ ಶಂಭು ಹೆಗಡೆ ಅವರ ಕನಸುಗಳನ್ನು ಮುಂದುವರೆಸುವ ಹೊಣೆಯನ್ನು ಅವರ ಮಗ ಶಿವಾನಂದ ಹೆಗಡೆ ಹೊತ್ತಿದ್ದಾರೆ. ಆದರೆ ಇದು ಇನ್ನೆಷ್ಟು ಕಾಲ ಮುಂದುವರೆದೀತು? ಒಂದಿಷ್ಟು ನೆರವು ಕೊಟ್ಟು ಕೈತೊಳಕೊಳ್ಳುವ ಸರ್ಕಾರ ಕಲೆಯ ಪ್ರಚಾರಕ್ಕೂ ಮನಸ್ಸು ಮಾಡಬೇಕು. ಟಿವಿ ಪರದೆಯಿಂದಲೂ ಮರೆಯಾಗುತ್ತಿರುವ ಯಕ್ಷಗಾನವನ್ನು ಮಕ್ಕಳಿಗೆ ಕಟ್ಟಿಕೊಡಲು ಶಿಕ್ಷಣದ ದಾರಿಯನ್ನೇ ಬಳಸಬೇಕು. ಶಂಭು ಹೆಗಡೆ ಅವರ ಕನಸೂ ಇದೇ.

ನೀವೇನಂತೀರಿ?

ವಾರ್ತಾ ಸಂಚಯ

ಮಲಯಾಳೀ ಪಂಡಿತರ ಸೆರೆ!

ಕರಾವಳಿಯ ಯಕ್ಷಗಾನ ವೆಬ್‌ಸೈಟ್‌ಗೆ ಬರ್ಕ್ಲಿ ವಿವಿ ಮಾನ್ಯತೆ

Click here to go to top

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X