ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಯಾಳೀ ಪಂಡಿತರ ಸೆರೆ!

By Staff
|
Google Oneindia Kannada News

(ಇನ್ಫೋ ಇನ್‌ಸೈಟ್‌)

ನಮ್ಮ ಪೂರ್ವಿಕರಿಗೆ ವಿಡಿಯಾ ಕ್ಯಾಸೆಟ್‌ ತಂತ್ರಜ್ಞಾನ ಗೊತ್ತಿರಲಿಲ್ಲ . ಅವರು ಈ ತಂತ್ರಜ್ಞಾನವನ್ನು ಅರಿತಿದ್ದಲ್ಲಿ , ಈ ಹೊತ್ತು ಕಲ್ಪನಾ ಲಹರಿ ಮೂಸೆಯಲ್ಲಿ ಚಿತ್ರರೂಪ ತಾಳಿರುವ ಶರಭ, ಶಾರ್ದೂಲ, ಗಂಡುಭೇರುಂಡ ಇತ್ಯಾದಿಗಳ ಅಸಲಿ ರೂಪಗಳನ್ನು ಕ್ಯಾಸೆಟ್ಟಿನಲ್ಲಿ ನೋಡಿ ರೋಮಾಂಚನ ಪಡಬಹುದಿತ್ತು !?

ಎಷ್ಟೋ ಜನಪದ ಕಲೆ ಪ್ರಕಾರಗಳು ಕಾಲ ಪ್ರವಾಹದಲ್ಲಿ ನಶಿಸಿಹೋಗಿವೆ. ನಮ್ಮ ಶಾಸ್ತ್ರೀಯ ಸಂಗೀತಗಾರರನ್ನು ಕೇಳಿ, ಮರೆತುಹೋಗಿರುವ ನೂರು ಸಾವಿರ ರಾಗಗಳ ಹೆಸರು ಹೇಳುತ್ತಾರೆ. ಮೊನ್ನೆ ಮೊನ್ನೆವರೆಗೂ ನಾಲಗೆಗಳಲ್ಲಿದ್ದ ಹಾಡುಗಳೂ ಈ ಹೊತ್ತು ಅಲಭ್ಯ. ಆ ಕಾಲದ ಮಂದಿಗೆ ತಂತ್ರಜ್ಞಾನದ ಬಗ್ಗೆ ಅಕ್ಕರಾಸ್ಥೆ ಅಷ್ಟಕ್ಕಷ್ಟೇ. ಕಲೆಯನ್ನು ತಂತ್ರಜ್ಞಾನ ಮೈಲಿಗೆ ಮಾಡುತ್ತದೆಂಬ ನಂಬಿಕೆ ಬೇರೆ. ಇಂಥ ಕಾರಣಗಳಿಂದಾಗಿಯೇ, ಅಪರೂಪದ ಸಂಸ್ಕೃತಿಗಳೇ ಸ್ಮೃತಿಗಳಾಗಿ ಉಳಿದಿವೆ.

ಕಾಲ ಬದಲಾಗಿದೆ. ಜಾಗತೀಕರಣದ ಹುಚ್ಚು ಪ್ರವಾಹದಲ್ಲಿ ಸಂಸ್ಕೃತಿ, ಕಲಾ ಪ್ರಕಾರಗಳ ಬಗ್ಗೆ ಪ್ರೀತಿ ಉಳ್ಳವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ಕಲಾ ಪ್ರಕಾರಗಳು ಉಳಿಯುವುದಾದರೂ ಹೇಗೆ? ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ಅವುಗಳ ಕುರಿತು ಹೇಳುವುದಾದರೂ ಹೇಗೆ? ಪುಣ್ಯಕ್ಕೆ, ಈಗ ಕಲಾ ಪ್ರಕಾರಗಳನ್ನು ಕ್ಯಾಸೆಟ್‌ ಮಾಡಲು ಯಾರೂ ಅಭ್ಯಂತರ ಹೇಳುತ್ತಿಲ್ಲ . ಪ್ರಸಿದ್ಧ ಸಂಗೀತಕಾರರ ಹಾಡುಗಳೆಲ್ಲ ಕ್ಯಾಸೆಟ್‌ಗಳಲ್ಲಿ ದೊರೆಯುತ್ತಿದೆ. ಕಲಾ ಪ್ರಕಾರಗಳು ಕ್ಯಾಸೆಟ್‌ಗಳಲ್ಲಿ ದಾಖಲಾಗುತ್ತಿವೆ. ಮುಂದೊಂದು ದಿನ ಯಕ್ಷಗಾನ, ನಾಟಕ, ಕಚೇರಿಗಳೆಲ್ಲ ಬಯಲು, ಅಂಗಳದಿಂದ ಮಲಗುವ ಕೋಣೆಯಲ್ಲೆ ಶಾಶ್ವತ ತಾವು ಪಡೆಯುತ್ತಾವೇನೋ?

ಉಡುಪಿಯಲ್ಲಿ ನಡೆದದ್ದೂ ಇಂಥದ್ದೇ ಕಾರ್ಯಕ್ರಮ

ಅದೊಂದು ವಿಭಿನ್ನ ಕಾರ್ಯಕ್ರಮ. ಯಕ್ಷಗಾನದಲ್ಲಿ ಬರುವ ಹಾಸ್ಯ ಸನ್ನಿವೇಶಗಳ ದಾಖಲೀಕರಣ ಕಾರ್ಯಕ್ರಮ. ಜಿಲ್ಲೆಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಆರ್‌ಆರ್‌ಸಿ) ದವರು ಯಕ್ಷಗಾನ ಕೇಂದ್ರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ತೆಂಕು ತಿಟ್ಟು ಯಕ್ಷಗಾನಕ್ಕೆ ಮಾತ್ರ ಸೀಮಿತವಾಗಿದ್ದ ಮೂರು ದಿನಗಳ ಈ ಕಮ್ಮಟದಲ್ಲಿ , ತೆಂಕು ತಿಟ್ಟು ಯಕ್ಷಗಾನದ ಪ್ರಸಿದ್ಧ ಪ್ರಸಂಗಗಳಲ್ಲಿ ಬರುವ ಸುಮಾರು 45 ಹಾಸ್ಯ ಸನ್ನಿವೇಶಗಳ ದಾಖಲೀಕರಣ ನಡೆಯಿತು.

ಸಾಮಾನ್ಯವಾಗಿ ಯಕ್ಷಗಾನದಲ್ಲಿ ಬರುವ ಪಾತ್ರಗಳನ್ನು ರಂಗದಲ್ಲಿ ರಂಗಸ್ಥಳದ ಮೇಲೆ ಹೇಗೆ ಬಿಂಬಿಸಲಾಗುತ್ತದೆ ಎನ್ನುವುದನ್ನು ಮತ್ತು ಆ ಸಂದರ್ಭದಲ್ಲಿ ರಾಗ ತಾಳಗಳ ಬಳಕೆ, ವೇಷ ಭೂಷಣಗಳ ರೀತಿ ನೀತಿಗಳನ್ನು ವಿಡಿಯೋ ಮೂಲಕ ದಾಖಲಿಸಲಾಯಿತು. ಯಕ್ಷಗಾನಕ್ಕೆ ಸಂಬಂಧಿಸಿದಂತೆ ತಲೆಮಾರುಗಳ ನಡುವಿನ ಅಂತರ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಈ ದಾಖಲೆ ಅಮೂಲ್ಯವೆನಿಸಲಿದೆ.

ಉದಾಹರಿಸುವುದಾದರೆ, ಬಾಗಿಲು ದೂತ, ಕುದುರೆ ದೂತ, ರಾಣಿ ದೂತ, ಮಂಥರೆ, ಮಕರಂದ, ದಾರುಕ, ಮಲಯಾಳೀ ಪಂಡಿತ, ಪೀಠಿಕೆ ಹೊಗಳಿಕೆ, ಭೂತ ಬಿಡಿಸುವುದು, ಶನಿ ಬ್ರಾಹ್ಮಣ, ಮದುವೆ ಪುರೋಹಿತ, ಕೊರವಂಜಿ, ಹರಿವೆ ಸೊಪ್ಪು ಮಲ್ಲಮ್ಮ, ಮೈರಾವಣ ಬಾಗಿಲುದೂತ ಪಾತ್ರಗಳನ್ನು ದಾಖಲಿಸಲಾಗಿದೆ.
ತೆಂಕು ತಿಟ್ಟು ಯಕ್ಷಗಾನದ ಪ್ರಸಿದ್ಧ ಹಾಸ್ಯ ಪಾತ್ರಧಾರಿಗಳಾದ ಮಿಜಾರು ಅಣ್ಣಪ್ಪ, ಪೆರುವೋಡಿ ನಾರಾಯಣ ಭಟ್ಟ, ಕೊಡಕ್ಕಲ್‌ ಗೋಪಾಲಕೃಷ್ಣ ಭಟ್ಟ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ವೇಣೂರು ಸುಂದರ ಆಚಾರ್ಯ, ಮುಂಡ್ಕೂರು ಜಯರಾಮ ಶೆಟ್ಟಿ, ಪುಳಿಂಚ ರಾಮಯ್ಯ ರೈ ಮತ್ತಿತರರು ಹಾಸ್ಯ ಪಾತ್ರಗಳನ್ನು ನಿರ್ವಹಿಸಿದರು.
ಇತರ ಪೂರಕ ಪಾತ್ರಗಳಲ್ಲಿ ಹಿರಿಯ ಕಲಾವಿದರಾದ ಕೋಳ್ಯೂರು ರಾಮಚಂದ್ರ ರಾವ್‌, ಪ್ರಸಿದ್ಧ ದೇವಿ ಪಾತ್ರಧಾರಿ ಪುಂಡರೀಕಾಕ್ಷ ಉಪಾಧ್ಯಾಯ ಹಾಗೂ ಸಂಪಾಜೆ ಶೀನಪ್ಪ ರೈ ಅವರೂ ಪಾಲ್ಗೊಂಡಿದ್ದರು. ಡಾ.ಎಂ. ಪ್ರಭಾಕರ ಜೋಶಿ, ಡಾ. ಚಂದ್ರಶೇಖರ ದಾಮ್ಲೆ ಹಾಗೂ ಎಸ್‌.ಎ. ಕೃಷ್ಣಯ್ಯ ಅವರ ನೇತೃತ್ವದಲ್ಲಿ ದಾಖಲೀಕರಣ ಕಾರ್ಯಕ್ರಮ ನಡೆಯಿತು.

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X