ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್‌ ಎಂಬ ವಾಮನನ ತ್ರಿವಿಕ್ರಮ ಹೆಜ್ಜೆಗಳು

By Staff
|
Google Oneindia Kannada News

*ವಿಶಾಖ . ಎನ್‌

1987- ಇಂದೋರ್‌ನ ಜವಾಹರ್‌ಲಾಲ್‌ ನೆಹರೂ ಕ್ರೀಡಾಂಗಣ. 14 ವರ್ಷದ ಬಾಲಕನೊಬ್ಬ ಗೋಳೋ ಅನ್ನುತ್ತಿದ್ದಾನೆ. ತಿಂಗಳು ಕಾಲದ ಸಬ್‌ ಜೂನಿಯರ್‌ ಕ್ರಿಕೆಟ್‌ ಶಿಬಿರಕ್ಕೆ ಬಂದಿದ್ದ ಹುಡುಗನ ಪ್ಯಾಡ್‌ಗಳು ಕಳೆದುಹೋಗಿವೆ; ಅವು ಸುನಿಲ್‌ ಗವಾಸ್ಕರ್‌ ಉಡುಗೊರೆ.

2001- ಇಂದೋರ್‌ನ ಅದೇ ಕ್ರೀಡಾಂಗಣ. ಆಸ್ಟ್ರೇಲಿಯಾ ವಿರುದ್ಧದ ಒಂಡೇ. 34 ರನ್‌ ಗಳಿಸಿದೊಡನೆ 27ರ ಹರೆಯದ ವಾಮನಮೂರ್ತಿ ಕಣ್ಣಲ್ಲಿ ಮಿಂಚಿನ ಹೊಳಹು. ಗಗನಸ್ಪರ್ಶಿ ಅನುಭವ. ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ನೆಟ್ಟ ಮೈಲುಗಲ್ಲು 10 ಸಾವಿರ ಅದು.

ಪ್ಯಾಡ್‌ ಕಳಕೊಂಡ ಬಾಲಕ, ಮೈಲುಗಲ್ಲು ನೆಟ್ಟ ವಾಮನಮೂರ್ತಿ- ಇಬ್ಬರೂ ಒಬ್ಬನೇ; ಅದು ಸಚಿನ್‌ ರಮೇಶ್‌ ತೆಂಡೂಲ್ಕರ್‌.

ತನ್ನ 8- 9ರ ತುಂಟಾಟ ಆಡಬೇಕಾದ ವಯಸ್ಸಲ್ಲಿ ಈತ ಕಣ್ಣಿಗೆ ಕಟ್ಟಿಕೊಂಡದ್ದು ಚೆಂಡು- ದಾಂಡು. ಮುಂಬಯಿಯ ಶಿವಾಜಿ ಪಾರ್ಕಿನಲ್ಲಿ ತ್ರಿವಿಕ್ರಮರಂತಿದ್ದ ತನಗಿಂತ ದೊಡ್ಡ ಆಳುಗಳು ನೆಟ್‌ ಪ್ರಾಕ್ಟೀಸ್‌ ಮಾಡುವುದನ್ನು ನೋಡುತ್ತಾ , ತಾನು ಇವರೆಲ್ಲರ ಮೀರಿಸೋದು ಯಾವಾಗ ಎಂದು ಗಂಭೀರವಾಗಿ ಪ್ರಶ್ನೆ ಹಾಕಿಕೊಂಡಿದ್ದ. ಈತನ ಮನಸ್ಸಲ್ಲಿ ಆವತ್ತು ಮನೆ ಮಾಡಿದ ಕ್ರಿಕೆಟ್‌ ಇವತ್ತು ದೇಶದ ಹೆಮ್ಮೆಯ ಪ್ರತಿನಿಧಿಯ ಸ್ಥಾನ ಕೊಟ್ಟಿದೆ.

ಸಚಿನ್‌ ತನ್ನ 11ನೇ ವಯಸ್ಸಲ್ಲಿ ಗೆಳೆಯ ಕಾಂಬ್ಳಿ ಜೊತೆ ದಾಖಲೆ ಆಟ ಆಡುತ್ತಾನೆ. 14ನೇ ವಯಸ್ಸಲ್ಲಿ ತರಪೇತುಗಳಲ್ಲಿ ಪಾಲ್ಗೊಂಡು ಆಟವನ್ನು ಮೊನಚು ಮಾಡಿಕೊಳ್ಳುತ್ತಾನೆ. 16 ವರ್ಷದವನಾಗಿದ್ದಾಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸುತ್ತಾನೆ. ದೊಡ್ಡ ತೂಕದ ಬ್ಯಾಟ್‌ ಎಳೆಯುತ್ತಾ 4, 5, 6ನೇ ಕ್ರಮಾಂಕದಲ್ಲಿ ತಂಡದ ಗೆಲುವಿನ ಜವಾಬ್ದಾರಿಯನ್ನು ಹೊತ್ತು ಸ್ವಾರ್ಥ ಬಿಡುತ್ತಾನೆ. 2 ಸಾವಿರ ರನ್ನುಗಳು ಒಂದೇ ಒಂದು ಶತಕವಿಲ್ಲದೆಯೇ ಹರಿದು ಬರುತ್ತವೆ. ಐದು ವರ್ಷ ಹೀಗೇ ಕಳೆದು ಹೋಗುತ್ತದೆ.

ನಂತರ ದಾಖಲೆಗಳು ಬಲವಾಗತೊಡಗುತ್ತವೆ. 2ನೇ ಕ್ರಮಾಂಕಕ್ಕೆ ಬ್ಯಾಟಿಂಗ್‌ ಬಡ್ತಿ ದೊರೆಯುತ್ತದೆ. ಆಗಾಗ ಕೈಗೆ ಚೆಂಡೂ ಸಿಗುತ್ತದೆ. ಎರಡೂ ಕಡೆ ತಂಡಕ್ಕೆ ಗೆಲುವನ್ನು ಕಿತ್ತು ಕೊಡಬಲ್ಲ ಸಾಮರ್ಥ್ಯ ಮೆರೆಯುತ್ತಾನೆ. ಶತಕಗಳ ನೀರು ಕುಡಿದಂತೆ ಗಳಿಸಬಲ್ಲ, ಮೊದಲ 15 ಓವರ್‌ಗಳಲ್ಲಿ ಎದುರಾಳಿಗಳ ಬುಡ ಅಲ್ಲಾಡಿಸಬಲ್ಲ ಪ್ರವೀಣ ಎಂಬ ಛಾಪು ಮೂಡಿಸುತ್ತಾನೆ. ನಾಯಕನ ಪಟ್ಟ ಹೊರುತ್ತಾನೆ. ಅದು ತನ್ನ ಆಟಕ್ಕೆ ಎಡರು ಎಂಬುದನ್ನರಿತು ಪದ ಬಿಟ್ಟು, ಆಟ ಮುಂದುವರೆಸುತ್ತಾನೆ. ದಾಖಲೆಗಳು ತಂತಾವೇ ಮೂಡುತ್ತವೆ.

ಇಷ್ಟೆಲ್ಲದರ ನಡುವೆ ಕಂಡೂ ಕಾಣದ್ದು...

ಇಷ್ಟೆಲ್ಲದರ ನಡುವೆ 22ನೇ ವಯಸ್ಸಿಗೇ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಾನೆ. ತನಗಿಂತ ಹಿರಿಯಳಾದ ವೈದ್ಯೆಯಾಬ್ಬಳನ್ನು ಬಾಳ ಸಂಗಾತಿಯಾಗಿಸಿಕೊಳ್ಳುತ್ತಾನೆ. ಸಂಸಾರ, ಕ್ರೀಡೆ ಎರಡೂ ಒಲಿಯುತ್ತದೆ. ಇಬ್ಬರು ಮಕ್ಕಳ ತಂದೆಯಾಗುತ್ತಾನೆ. ಕಣದಲ್ಲಿ ದೇಶದ ಪ್ರತಿಷ್ಠೆಯ ಹೊರೆ, ಮನೆಯಲ್ಲಿ ಸಂಸಾರದೊಡೆಯನ ಜವಾಬ್ದಾರಿ ಎರಡನ್ನೂ ಸುಸೂತ್ರವಾಗಿ ನಿಭಾಯಿಸುತ್ತಾನೆ. ಮ್ಯಾಚ್‌ಫಿಕ್ಸಿಂಗ್‌ ಎಂಬ ಅಲೆ ಎದ್ದೇಳುತ್ತದೆ. ಈತನ ಮುಖಕ್ಕೆ ನೀರೆರಚುವ ಯತ್ನಗಳೂ ನಡೆಯುತ್ತವೆ. ಈತನ ಮದುವೆಯಲ್ಲಿ ನಾಲ್ಕು ಜನ ಬುಕ್ಕಿಗಳು ಹಾಜರಿದ್ದರು ಎಂಬ ಸೊಲ್ಲು ಹಕೀಕತ್ತಲ್ಲ ಅನ್ನೋದು ಸಾಬೀತಾಗುತ್ತೆ.

ಮ್ಯಾಚ್‌ಫಿಕ್ಸಿಂಗ್‌ ಮಸಿ ಅಳಿಸಿಕೊಂಡು ಕ್ರಿಕೆಟ್‌ ಮೇಲೇಳುತ್ತೆ. ಆ ಮಸಿಯಲ್ಲಿ ಈತನೊಟ್ಟಿಗಾಡಿದ ಕೆಲವು ದಿಗ್ಗಜಗಳು ಮಾಸಿಹೋಗುತ್ತಾರೆ. ಈತ ವಯಸ್ಸಿಗೆ ಮೀರಿ ಬೆಳೆಯುತ್ತಲೇ ಹೋಗುತ್ತಾನೆ. ಶೇನ್‌ ವಾರ್ನ್‌ ಮುಖ ಕಿವುಚುವಂತೆ ಮಾಡುತ್ತಾನೆ, ಮೆಕ್‌ಗ್ರಾತ್‌ ಅನ್ನು ತಲೆ ಅಲ್ಲಾಡಿಸುತ್ತಾ ತನಗೆ ತಾನೇ ಬಯ್ದುಕೊಳ್ಳುವಂತೆ ಮಾಡುತ್ತಾನೆ. ದಿನೇದಿನೇ ಆಟ ಮೊನಚಾಗುತ್ತೆ. ದಾಖಲೆ ಮೈದುಂಬುತ್ತೆ.

ಇದು ಸಚಿನ್‌ ಹಾದು ಬಂದ ಹಾದಿ. ಒಬ್ಬ ಮಾದರಿ ಆಲ್‌ರೌಂಡ್‌ ಆಟಗಾರನಿಗೆ ಸಚಿನ್‌ ಒಂದು ಲಿವಿಂಗ್‌ ಎಕ್ಸಾಂಪಲ್‌. ಇಲ್ಲಿ ಆಲ್‌ರೌಂಡ್‌ ಅಂದರೆ ಕೇವಲ ಕಣದಲ್ಲಷ್ಟೇ ಅಲ್ಲ. ಒಬ್ಬ ಮಗ, ಗಂಡ, ಇಬ್ಬರು ಮಕ್ಕಳಿಗೆ ತಂದೆ, ದೇಶದ ದೊಡ್ಡ ನೆಚ್ಚು, ಜನರ ವಿ ವಾಂಟ್‌ ಸಿಕ್ಸರ್‌ ಮೊರೆ, ಮಾಧ್ಯಮಗಳ ಹೊಗಳಿಕೆಗಳ - ಇವೆಲ್ಲಾ ಒತ್ತಡಗಳ ಮಹಾಪೂರ. ಹಮ್ಮು ಮೂಡಿಸಬಹುದು. ಉಡಾಫೆ ಧೋರಣೆ ಹುಟ್ಟು ಹಾಕಿಬಿಡಬಹುದು. ಆದರೆ, ಸಚಿನ್‌ ವಿಷಯದಲ್ಲಿ ಇವ್ಯಾವುದೂ ಆಗಿಲ್ಲದಿರುವುದು ಸಮಾಧಾನಕರ.

ಈತನ ಎತ್ತರ ಕಡಿಮೆಯಾದರೂ ಮನಸ್ಸಿನ ಎತ್ತರ- ಆಳ ಅಳತೆಗೆ ನಿಲುಕದ್ದು. ಎದುರಾಳಿಗಳ ಯಾವತ್ತೂ ಮುಖ ಕಿವುಚದೆ, ಆಟದಿಂದಷ್ಟೇ ದಂಡಿಸಿರುವ ಈತ ಅಕ್ಷರಶಃ ಸಂಭಾವಿತ. ಕ್ರಿಕೆಟ್‌ ಹಿರಿಯಜ್ಜ ಡಾನ್‌ ಬ್ರಾಡ್‌ಮನ್‌ ಅವರ ಮನದಲ್ಲೇ ಮನೆ ಮಾಡಿದ, ಅವರ ಮಾದರಿಯಲ್ಲೇ ಆಡುವ ಈ ಆಟಗಾರ ಇನ್ನಷ್ಟು ಮೈಲುಗಲ್ಲು ನೆಡಲಿ.

ಆತನ ಎತ್ತರಕ್ಕೆ ಈ ‘ಮೊದಲು’ಗಳೇ ಸಾಕ್ಷಿ...

  • ಒಂಡೇ- ಅಜೇಯ 10 ಸಾವಿರ ಪ್ಲಸ್‌ ರನ್‌ ದಾಖಲೆ
  • ಒಂಡೇಯಲ್ಲಿ ಅರ್ಧ ಶತಕ ಬಾರಿಸಿದ ಹಾಗೂ ಪಂದ್ಯಶ್ರೇಷ್ಠ ಗೌರವ ಪಡೆದ ವಿಶ್ವದ ಅತಿ ಕಿರಿಯ (17 ವರ್ಷ 225 ದಿನ ವಯಸ್ಸಲ್ಲಿ ಪುಣೆಯಲ್ಲಿ ಶ್ರೀಲಂಕಾ ವಿರುದ್ಧ, (1990- 91)
  • ಅತಿ ಹೆಚ್ಚು ಒಂಡೇ ಶತಕ (28)
  • 1998- 99ರ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಗರಿಷ್ಠ ಶತಕಗಳ ಬಾರಿಸಿದ ವಿಶ್ವ ದಾಖಲೆ (9 ಶತಕಗಳು)
  • ಕ್ಯಾಲೆಂಡರ್‌ ವರ್ಷವೊಂದರಲ್ಲಿ ಗರಿಷ್ಠ ರನ್‌- 1998ರಲ್ಲಿ 34 ಪಂದ್ಯಗಳಿಂದ 69.31ರ ಸರಾಸರಿಯಲ್ಲಿ 1894 ರನ್‌
  • 5 ಬಾರಿ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಸಾವಿರ ರನ್‌ ದಾಟಿರುವ ಏಕೈಕ (1996, 97, 98 ಹಾಗೂ 2000)
  • ವಿಶ್ವ ದಾಖಲೆಯ 3 ಜೊತೆಯಾಟಗಳಲ್ಲಿ ಈತನ ಹವಿಸ್ಸಿದೆ
    1. ಗಂಗೂಲಿ ಜೊತೆ ಮೊದಲ ವಿಕೆಟ್‌ಗೆ 252 ರನ್‌ (1998ರಲ್ಲಿ ಕೊಲಂಬೋದಲ್ಲಿ ಶ್ರೀಲಂಕಾ ವಿರುದ್ಧ)
    2. ದ್ರಾವಿಡ್‌ ಜೊತೆ 2ನೇ ವಿಟೆಟ್‌ಗೆ 331 ರನ್‌ (1999ರಲ್ಲಿ ನ್ಯೂಜಿಲೆಂಡ್‌ ವಿರುದ್ಧ)
    3. ದ್ರಾವಿಡ್‌ ಒಟ್ಟಿಗೆ 3ನೇ ವಿಕೆಟ್‌ಗೆ 237 ರನ್‌ (1999ರಲ್ಲಿ ಬ್ರಿಸ್ಟಲ್‌ನಲ್ಲಿ ಕೀನ್ಯಾ ವಿರುದ್ಧ)
  • ವರ್ಷವೊಂದರಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಮೊದಲಿಗ (1998ರಲ್ಲಿ 12 ಬಾರಿ)
  • ಅತಿ ಹೆಚ್ಚು ಪಂದ್ಯ ಶ್ರೇಷ್ಠ ಗೌರವ ಪಡೆದಿರುವ ಭಾರತದ ಕ್ರಿಕೆಟಿಗ (36 ಬಾರಿ)
  • ಟೂರ್ನಿಯಾಂದರಲ್ಲಿ ಅತಿ ಹೆಚ್ಚು ರನ್‌ ದೋಚಿದ ದಾಖಲೆ (1996ರಲ್ಲಿ 523 ರನ್‌)
  • ಶಾರ್ಜಾ ಟೂರ್ನಿಯಲ್ಲಿ ಆಟಗಾರನೊಬ್ಬನ ಗರಿಷ್ಠ ಮೊತ್ತ (1998, 5 ಪಂದ್ಯಗಳಿಂದ 435 ರನ್‌)
ವಾರ್ತಾಸಂಚಯ
ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X