ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆಯ ‘ರಾಶಿ’

By Staff
|
Google Oneindia Kannada News

*ವಿಶಾಖ ಎನ್‌.

‘ಅಪ್ಪ ಸತ್ತ ಅಳೋ ಮಗನೇ ಅಂದರೆ
ಯಾಕಮ್ಮಾ ಅವ ವಿಮಾ ಮಾಡಿರ್ಲಿಲ್ವಾ ಅಂದ್ನಂತೆ’

ಬೆಂಗಳೂರಿನ ಬಳೇಪೇಟೆಯ ಆಸ್ಪತ್ರೆಯಾಂದರ ವೈದ್ಯ ಈ ಚಟಾಕಿ ಹಾರಿಸುತ್ತಲೇ ರೋಗಿಯಾಬ್ಬನಿಗೆ ಸೂಜಿ ಚುಚ್ಚಿಬಿಟ್ಟಿದ್ದರು. ನಗೆಗಡಲಲ್ಲಿ ಮುಳುಗಿಹೋಗಿದ್ದ ಆ ರೋಗಿಗೆ ಚುಚ್ಚುಮದ್ದಿನ ನೋವಿನ ಪರಿವೆಯೇ ಇರಲಿಲ್ಲ. ಆ ವೈದ್ಯ ಡಾ। ಎಂ.ಶಿವರಾಂ ಉರುಫ್‌ . ವೈಎನ್ಕೆ ‘Pundit ಆದರೆ, ರಾ.ಶಿ. ‘Punchdig.

ಒಬ್ಬ ವೈದ್ಯನ ಕೈಗುಣ ಚೆನ್ನಾಗಿದೆ ಅಂತ ಜನ ಹೇಳೋ ಹಾಗೆ, ರಾ.ಶಿ. ಅವರ ಖಾಯಂ ಗಿರಾಕಿಗಳು ಹೇಳುತ್ತಿದ್ದುದು ಅವರ ಬಾಯಿಗುಣ ಚೆನ್ನಾಗಿದೆ. ಯಾಕೆಂದರೆ ಅವರದು ಯಃಕಶ್ಚಿತ್‌ ಟಚ್‌ ಥೆರಪಿಯಲ್ಲ, ಅದು ‘ಹೈ ಟಾಕ್‌ ಥೆರಪಿ’ ! ಅವರ ಮಾತೇ ವೈಟಮಿನ್‌ ಟ್ಯಾಬ್ಲೇಟು.

ರಾ.ಶಿ.ನಗೆ ಬರಹಗಳು ಅವರೊಳಗೆ ಹುದುಗಿದ್ದ ಪಂಚ್‌ಗಳ ಸ್ಯಾಂಪಲ್‌ಗಳು. ವಾಸ್ತವದಲ್ಲಿ ಇಂಗ್ಲಿಷ್‌ ವಾರಪತ್ರಿಕೆ ‘ಪಂಚ್‌’ನ ಪಂಚ್‌ ಹಾಗೂ ಸಿಗರೇಟು ಸುರುಳಿ ಮೋಡಿಗಾರ ಟಿ.ಪಿ.ಕೈಲಾಸಂ ಒಡನಾಟ ಶಿವರಾಂ ಡಾಕ್ಟರಲ್ಲಿ ಪಕ್ಕಾ ನಗೆಚಿಮ್ಮುಗಾರನನ್ನು ಹುಟ್ಟುಹಾಕಿಬಿಟ್ಟಿದ್ದವು. ಮಕ್ಕಳೊಡನೆ ಮಾತು, ಹೆಂಡತಿಯಾಟ್ಟಿಗೆ ಕಿಚಾವಣೆ, ರೋಗಿಗಳಿಗೆ ಪಾಠ, ಗೆಳೆಯರೊಂದಿಗೆ ಹರಟೆ... ಎಲ್ಲಾ ಕ್ಷಣಗಳೂ ಹಾಸ್ಯ ಪ್ರಧಾನವಾದವುಗಳೇ. ಕೊನೆಗೆ ಹಾಸಿಗೆ ಹಿಡಿದಾಗಲೂ ನೋವು ನುಂಗಿ ನಗೆಯ ಬುತ್ತಿಯನ್ನೇ ಕಟ್ಟಿಕೊಟ್ಟವರು ರಾ.ಶಿ. ಆ ಕಾರಣಕ್ಕೇ ಅವರು ನಗೆಯ ರಾಶಿ.

ಕೊರವಂಜಿ ದಿನಗಳು

‘ಪಂಚ್‌’ ಮೋಡಿಗೆ ಒಳಗಾಗಿ ಅದೇ ಮಾದರಿಯಲ್ಲಿ 1942ರಲ್ಲಿ ಕೊರವಂಜಿ ಪತ್ರಿಕೆ ಶುರುಮಾಡಿದ ಶಿವರಾಂ, 25 ವರ್ಷಗಳ ಕಾಲ ಅದನ್ನು ನಡೆಸಿಕೊಂಡು ಬಂದರು. ನಾ.ಕಸ್ತೂರಿ ಅನರ್ಥಕೋಶ, ದಾಶರಥಿ ದೀಕ್ಷಿತರ ಗಾಂಪರ ಗುಂಪು, ಟಿ.ಸುನಂದಮ್ಮನವರ ಛಾಪು, ಕೇಫ ಖದರು, ಆರ್‌.ಕೆ.ಲಕ್ಷ್ಮಣ್‌ ಕಾರ್ಟೂನ್‌ ಗೆರೆಗಳು ಎಲ್ಲಕ್ಕೂ ಅದು ವೇದಿಕೆ. ರಾ.ಶಿ. ಕೂಸು ಕೊರವಂಜಿಯನ್ನು ಎಲ್ಲಾ ಸೇರಿ ಬೆಳೆಸಿ, ತಾವೂ ಬೆಳೆದರು. ಕನ್ನಡದಲ್ಲಿ ಅಲ್ಲೋ ಇಲ್ಲೋ ಎಂಬಂತಿದ್ದ ಹಾಸ್ಯ ಹೊನಲಾದದ್ದೇ ಆಗ. ಇನ್ನು ಪತ್ರಿಕೆ ನಡೆಸಲಾಗದು ಎಂಬ ತೀರ್ಮಾನಕ್ಕೆ ರಾ.ಶಿ.ಬಂದುಬಿಟ್ಟಿದ್ದಾಗ, ನವ ಕರ್ನಾಟಕದವರು ಹೋಗಿ ಕೇಳಿದರಂತೆ- ನಾವೇ ನಡೆಸಿಕೊಂಡು ಹೋಗುತ್ತೇವೆ. ಅದಕ್ಕೆ ರಾ.ಶಿ., ‘ಕಷ್ಟಾನಾ ಮೈಮೇಲೆ ಎಳೆದುಕೊಳ್ಳಬೇಡಿ’ ಅಂತ ಬುದ್ಧಿ ಹೇಳಿ ಕಳಿಸಿದರಂತೆ !

ಕೊರವಂಜಿಯಲ್ಲಿನ ಉರಿಗಾಳು, ಕುಹಕಗಳು, ಕೊರವಾವಲೋಕನ ಅಂಕಣಗಳು ತಿಳಿಹಾಸ್ಯದ ನವಿರು ಎಳೆಗಳ ಮೂಲಕ ರಾ.ಶಿ. ಕೊಡುತ್ತಿದ್ದ ಮಾಂಜಾಗಳು. ಅವರ ಬರಹಗಳು ಮಾತು ಹರಿದಂತೆ. ಸರಳ, ನೇರ, ಸ್ಪಷ್ಟ. ಮೇಲಾಗಿ ಪಂಚ್‌ ಮಿಶ್ರ. ಥ್ಯಾಕ್ಸ್‌ ಟು ಕೈಲಾಸಂ. ಹಿರಿಯಣ್ಣ ಶಿವರಾಮ ತಮ್ಮ ತಂಗಿಯರ ದೊಡ್ಡ ಸಂಸಾರದ ನೊಗ ಹೊತ್ತು ದುಡ್ಡು ಮಾಡುವ ಹಾದಿಗಿಳಿಯುವ ಹೊತ್ತಲ್ಲಿ ಕೈಲಾಸಂ ಬೈದರು. ಶಿವರಾಂಗೆ ಸಿನಿಮಾ ನಟನೆಯ ಆಫರ್‌ ಬಂದಿತ್ತು. ಕೈಲಾಸಂ ಆ ಲೋಕದಲ್ಲಿ ಕಳೆದುಹೋಗಬೇಡ. ವೈದ್ಯನಾಗಿ ಸೇವೆ ಮಾಡು ಎಂದು ಬುದ್ಧಿಹೇಳದಿದ್ದರೆ ಡಾ.ಶಿವರಾಂ ಆಗಲೀ ರಾ.ಶಿ. ಆಗಲೀ ನಮಗೆ ಸಿಗುತ್ತಲೇ ಇರಲಿಲ್ಲವೇನೋ?

ಕಚ್ಚೆ ಕಿತ್ತಾಗ ಕೈಲಾಸಂ ಗೊಮ್ಮಟನಾದದ್ದು...

ಮೆಜೆಸ್ಟಿಕ್‌ ಥಿಯೇಟರ್‌ ಹತ್ತಿರ ಕಚ್ಚೆ ಉಟ್ಟು ಪೇಟ ತೊಟ್ಟ ಒಬ್ಬ ಸೈಕಲ್‌ ಹತ್ತುವ ಹೆಣಗಾಟದಲ್ಲಿ , ಚೈನಿಗೆ ಪಂಚೆಯ ಚುಂಗು ಸಿಕ್ಕು ತ್ರಾಸು ಪಡುತ್ತಿದ್ದಾಗ ಕೈಲಾಸಂ ಗಹಗಹಿಸಿ ನಕ್ಕರು; ಗೊಳ್ಳೆಂದು. ಜೊತೆಯಲ್ಲಿದ್ದ ಶಿವರಾಂ ಈ ಅಮಾನವೀಯ ವರ್ತನೆಯನ್ನು ಖಂಡಿಸಿ, ‘ಕಷ್ಟದಲ್ಲಿರುವವರ ಕಂಡು ಈ ಪರಿ ನಗುವುದು ತರವೇ’ ಅಂದರು. ಅದಕ್ಕೆ ಕೈಲಾಸಂ, ತಾವು ಒಮ್ಮೆ ಇದೇ ಪಡುಪಾಟಲು ಪಟ್ಟ ಘಟನೆ ಹೇಳಿದರು- ‘ಇದೇ ಥರಾ ಸೈಕಲ್‌ ಚೈನಿಗೆ ನನ್ನ ಪಂಚೆ ಸಿಕ್ಕಿಕೊಂಡಿತ್ತು. ಅದನ್ನು ಬಿಡಿಸಿಕೊಳ್ಳಲು ಬತ್ತಲಾಗುವುದು ಅನಿವಾರ್ಯವಾಯಿತು. ಆಗೊಬ್ಬ ಆಸಾಮಿ ಬಂದು ಬೀದೀಲಿ ಬತ್ತಲು ನಿಂತಿದ್ದೀಯಾ ಅಂತ ಛೇಡಿಸಿದ. ಮೈಯೆಲ್ಲಾ ಉರಿಯಿತು. ನನ್ನ ಕಷ್ಟ ನನಗೆ. ಇದನ್ನು ನೋಡೋಕೆ ಬಂದ ನೀವು ಮಾಡುತ್ತಿರುವುದು ಸರಿಯಾ? ನೋಡಿಕೊಳ್ಳಿ ಅಂತ ನಿಂತುಬಿಟ್ಟೆ. ಹಾಗೆ ನನ್ನ ಛೇಡಿಸಿದ ವ್ಯಕ್ತಿ ಕೂಡ ಇದೇ ಥರಾ ಕೋಟು- ಪೇಟ- ಪಂಚೆ ತೊಟ್ಟಿದ್ದ. ಇವನ ಕಂಡು ಅವನು ನೆನಪಾದ. ಅದಕ್ಕೇ ಹಾಗೆ ನಕ್ಕಿದ್ದು’.

ಕೈಲಾಸಂ ಆಡಿದ ಈ ಮಾತನ್ನು ಆಗಾಗ ನೆನಪಿಸಿಕೊಂಡು ರಾ.ಶಿ.ನಗುತ್ತಿದ್ದರಂತೆ. ಯಾಕೆಂದರೆ, ಕೈಲಾಸಂ ಅದನ್ನು ವರ್ಣಿಸಿದ ಪರಿ ಹೇಗಿತ್ತೆಂದರೆ, ಅವರ ಸಾಕ್ಷಾತ್‌ ಗೊಮ್ಮಟ ರೂಪ ಮನದಲ್ಲಿ ನಿಲ್ಲುತ್ತಿತ್ತಂತೆ !

ಆ ನಗೆ ಪ್ರಹಸನದ ಘಳಿಗೆಯಲ್ಲೇ ಪಂಚ್‌ನಲ್ಲಿ ಓದಿದ ವಿಡಂಬನಾ ಶಿಶುಪ್ರಾಸ ಹೇಳಿದರು ಶಿವರಾಂ...

ಜಾಕ್‌ ಮತ್ತು ಜಿಲ್‌
ವಿವಾಹದ ಆಶೀರ್ವಾದ ಅನುಗ್ರಹ ಪಡೆಯಲು
ಇಗರ್ಜಿಯ ಹಜಾರಗಳ ದಾಟಿ ನಡೆದರು.
ಜಾಕ್‌ ಮದುವಣಗಿತ್ತಿಯ ಮೊಣಕಾಲ
ಗೌನಿಗೆರಗಿ ಬಿದ್ದ
ಇನ್ನು ಉಳಿದದ್ದು ಗೋಳು, ಪೇಚಾಟಗಳಷ್ಟೇ.

ಕೈಲಾಸಂ ಖುಷ್‌ ಆದರು. ‘ನೋಡು ಶಿವರಾಂ, ನೀನು ಸಂಪೂರ್ಣವಾಗಿ ನಿರಾಶಾದಾಯಕ ವ್ಯಕ್ತಿಯಲ್ಲ. ಪೋಲಿ ಕಿಟ್ಟಿ ಥರಾ. ನಿನ್ನೊಳಗೆ ಜುಳುಜುಳು ಹರಿಯುವ ವಿನೋದ ಪ್ರಜ್ಞೆ ಇದೆ ಅನಿಸುತ್ತೆ’ ಶಹಭಾಸ್‌ಗಿರಿ ಕೊಟ್ಟರು. ಶಿವರಾಂ ರಾ.ಶಿ. ಆಗಿಬಿಟ್ಟರು.

ಬದುಕು ಮತ್ತು ಬರಹ

ಅವರ ಬರೆಹ ಕೂಡ ತಾನಾಗೇ ಹುಟ್ಟುತ್ತಿತ್ತು. ಪಂಚ್‌ನ ಕುಮ್ಮಕ್ಕು ಇತ್ತಷ್ಟೆ. ಬರೆಯಲೆಂದೇ ಹಾಸ್ಯದ ಹುಡುಕಾಟ ಅವರಲ್ಲಿರಲಿಲ್ಲ. ಹಾಸುಹೊಕ್ಕು ಹಾಸ್ಯ ಲಹರಿಯಾಗಿ ಹೊಮ್ಮಿತು. ರಾ.ಶಿ.ಗೆ ಡಾ। ಎಂ.ಶಿವರಾಂ ಮುನ್ನುಡಿ ಬರೆದರೆ, ಡಾ। ಎಂ.ಶಿವರಾಂಗೆ ರಾ.ಶಿ. ಮುನ್ನುಡಿ ಬರೆಯುತ್ತಿದ್ದರು. ಇವರನ್ನು ಹತ್ತಿರದಿಂದ ಬಲ್ಲದವರಿಗಿದು ಚಿದಂಬರ ರಹಸ್ಯ. ಹಾಸ್ಯ ರಾ.ಶಿ. ಅವರಿಗೆ ಲಘುವಾಗಲಿಲ್ಲ, ಗುರುವಾಯಿತು. ವೃತ್ತಿ ಇಹವಾಯಿತು. ವೃತ್ತಿಯಲ್ಲಿ ಕಂಡ ಮನೋ ದೈಹಿಕ ಬೇನೆಗಳು ಮನ ಮುಟ್ಟಿದವು. ಅವು ಇಲ್ಲಸ್ಟ್ರೇಟೆಡ್‌ ಮಾದರಿಯ ಗಂಭೀರ ಬರಹಗಳಾದವು. ಈ ಕಾರಣಕ್ಕೇ ‘ಮನ ಮಂಥನ’ ಜನಪ್ರಿಯವಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಿಕ್ಕಿತು.

ಕಾದಂಬರಿಕಾರರಾಗಿ ರಾ.ಶಿ. ಸದ್ದು ಮಾಡದಿದ್ದರೂ, ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕಾರ್ತೀಕ ಸೋಮವಾರ ಕಾದಂಬರಿ ಇವರಿಗೆ ಅಭಿಮಾನಿಗಳ ಕಟ್ಟಿಕೊಟ್ಟದ್ದಂತೂ ನಿಜ. ಇಂಗ್ಲಿಷಿನಲ್ಲಿ ಇವರು ಬರೆದ Kailasam and I, Ananda and three Great Acharyas, Death and Nachiketas ಸಾಕಷ್ಟು ಹೆಸರು ತಂದುಕೊಟ್ಟವು. ಚಿರಂಜೀವಿತನವನ್ನು ವಸ್ತುವಾಗುಳ್ಳ Death and Nachiketas ಹಿಂದೆ ಕೈಲಾಸಂ ಆಶಯ ಇತ್ತು. ಚಿರಂಜೀವಿಯಾಗಿರೋದು ವರವಲ್ಲ, ಶಾಪ ಎನ್ನುತ್ತಿದ್ದ ಕೈಲಾಸಂ ಅಶ್ವತ್ಥಾಮನ ಬಗ್ಗೆ ಬರೆಯಬೇಕೆಂಬ ಆಸೆಯನ್ನು, ಅದರ ವಸ್ತುವನ್ನು ರಾ.ಶಿ.ಯವರಿಗೆ ತಿಳಿಸಿದ್ದರು.

ಕೊರವಂಜಿ ಜಾಗೆಗೆ ಅಪರಂಜಿ ಬಂದಿದೆ. ರಾ.ಶಿ. ಮಗ ಎಂ.ಶಿವಕುಮಾರ್‌ ಕೈಲಿ ಅದರ ಲಗಾಮು. ಆದರೆ ಕೊರವಂಜಿಯ ಛರಿಷ್ಮಾ ಈಗಲೂ ಹಸುರು. ರಾ.ಶಿ. ಅವರ ಪುಸ್ತಕಗಳು ಈಗ ಸುಲಭವಾಗಿ ಸಿಗುವುದಿಲ್ಲವಾದರೂ, ಅವರ ಬಗೆಗೆ ತಿಳಿಯುವ ಅವಕಾಶಗಳಿಂದ ನಾವು ವಂಚಿತರಾಗಿಲ್ಲ. ಟಿ.ಸುನಂದಮ್ಮ ಹಾಗೂ ವಿಮಲಾ ಶೇಷಾದ್ರಿ(ರಾ.ಶಿ. ಅವರ ಮಗಳು) ರಾ.ಶಿ. ಕುರಿತು ಕೃತಿಗಳನ್ನು ಬರೆದಿದ್ದಾರೆ. ತಮ್ಮ ತಂದೆಯ ಲೇಖನ- ನಗೆ ಹನಿ- ಪಂಚ್‌ಗಳನ್ನು ಪುಸ್ತಿಕೆಯ ರೂಪದಲ್ಲಿ ಕೊಟ್ಟಿದ್ದಾರೆ ಶಿವಕುಮಾರ್‌, ಪ್ರಿಸಂ ಅದನ್ನು ಹೊರ ತಂದಿದೆ. ಇದೀಗ ಇತಿಹಾಸ ತಜ್ಞ ಹಾಗೂ ಸಾಹಿತಿ ಡಾ।ಎಚ್‌.ಎಸ್‌.ಗೋಪಾಲ ರಾವ್‌ ‘ರಾ.ಶಿ. ಬದುಕು- ಬರಹ’ದಲ್ಲಿ ತಲ್ಲೀನ. ಪರಿಷತ್ತು ಮನಸ್ಸು ಮಾಡಿದರೆ, ಅವರ ಕೃತಿಗಳ ಮರು ಮುದ್ರಣ ಸಾಧ್ಯ.

ಹಾಸ್ಯಕ್ಕೆ ಮುಪ್ಪಡರಲೇ ಇಲ್ಲ

ಒಪ್ಪತ್ತುಂಡವ ರೋಗಿ
ಎರಡ್ಹೊತ್ತುಂಡವ ಮಂತ್ರಿ
ಮೂರ್ಹೊತ್ತುಂಡವ ಸೊಸೈಟಿ ಸಿಬ್ಬಂದಿ
- ಎಂದು ಚಾಟಿ ಏಟು ಕೊಟ್ಟ ಸೃಜನಶೀಲ ಬರಹಗಾರ ರಾ.ಶಿ. ಹಾಗೂ ವೈದ್ಯಕೀಯ ವಿಜ್ಞಾನ ಬರಹಗಾರ ಡಾ। ಎಂ.ಶಿವರಾಂ ದೂರ ನಿಂತು, ತನ್ನನ್ನು ತಾನೇ ನೋಡಿ ನಗಬಲ್ಲವರಾಗಿದ್ದರು. ಬೇಂದ್ರೆ, ಕುವೆಂಪು, ವಿ.ಸೀ ಅವರ ಪದ್ಯಗಳ ದಾಟಿಗೆ ‘ಕೆಣಕೋಣು ಬಾರಾ’ ಎಂದು ತಮ್ಮದೇ ನಗೆ ಚಾಟಿಗಳ ನೇಯ್ದರು.

1984. ಎರಡು ಬಾರಿ ಲಕ್ವ ಹೊಡೆದದ್ದಾಗಿತ್ತು. ರಾ.ಶಿ. ಹಾಸಿಗೆ ಹಿಡಿದಿದ್ದರು. ಅಭಿಮಾನಿಯಾಬ್ಬ ಮುಂದೆ ಬಂದು ನಿಂತ. ಕಣ್ಣು ತೆರೆಯಲೂ ಕಷ್ಟವಾಗುತ್ತಿತ್ತು ರಾ.ಶಿ. ಅವರಿಗೆ. ಅಭಿಮಾನಿ ಹೇಳಿದ- ‘ಕಣ್ಣು ಮುಚ್ಚಿಕೊಂಡೇ ಇರಿ, ಸಾರ್‌’. ‘ಕಣ್ಣು ಮುಚ್ಚಿಯೇ ಬಿಟ್ಟರೆ ನನ್ನ ಕತೆ ಮುಗಿದಂತೆ ಅಲ್ವೇನಯ್ಯಾ?’- ರಾ.ಶಿ. ಮುಗುಳು ನಗುತ್ತಲೇ ಹೇಳಿದರು. ‘ನಿಮ್ಮದೊಂದು ಫೋಟೋ ಬೇಕಲ್ಲಾ ಸಾರ್‌’, ಕೇಳಿದ ಅಭಿಮಾನಿ. ‘ಸದ್ಯದಲ್ಲೇ ಪೇಪರ್‌ಗಳಲ್ಲಿ ಬರುತ್ತಲ್ಲಾ’, ಹಾಸ್ಯಕ್ಕೆ ಮುಪ್ಪು- ಕಾಯಿಲೆ ಅಡರಿರಲಿಲ್ಲ . ಆದರೆ ಅಭಿಮಾನಿ ಮನದಲ್ಲಿ ಸತಮತ. ಕಣ್ಣು ತುಂಬಿಕೊಂಡಿತ್ತು ! ರಾ.ಶಿ. ನಗು ನಿಂತಿತ್ತು.

ರಾ.ಶಿ ಬದುಕಿದ್ದಿದ್ದರೆ ಇಂದು (ನವೆಂಬರ್‌ 10) ಅವರಿಗೆ ತೊಂಬತ್ತಾರು ವರ್ಷ ತುಂಬುತ್ತಿತ್ತು. ಇದೇ ಸಂದರ್ಭದಲ್ಲಿ, ನ. 11ರಂದು ಅಮೆರಿಕೆಯ ಭೂಮಿಕಾ ರಾ.ಶಿ. ಕುರಿತ ಸಾಕ್ಷ್ಯಚಿತ್ರ ಹಾಗೂ ಉಪನ್ಯಾಸ ಆಯೋಜಿಸಿದೆ. ಧೀಮಂತನ ನೆನೆಯಲು ಇಂಥಾ ಅವಕಾಶಗಳನ್ನು ಹುಡುಕಿಕೊಳ್ಳಲೇಬೇಕು. ಅಲ್ಲವೇ?

ರಾ.ಶಿ. ಅವರ ಕೃತಿಗಳು

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X