• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಬ್ಬಲಿ ಇವರ ರಸಬಳ್ಳಿ

By Staff
|
 1. ದೇಶದ ಮೂಲೆ ಮೂಲೆಗೂ ತಂತ್ರಜ್ಞಾನ ಒಯ್ಯುವುದು ನನ್ನ ಗುರಿ. ಅದಕ್ಕಾಗಿ ನನ್ನ ಹಾಗೂ ಸರ್ಕಾರದ ನಡುವೆ ಯುದ್ಧ ನಡೆಯುತ್ತಲೇ ಇದೆ.
 2. ನಾವೆಲ್ಲಾ ದುಡ್ಡು ಮಾಡುತ್ತಿರುವಾಗ ಸರ್ಕಾರ ಸುಮ್ಮನಿರಬಾರದು. ತೆರಿಗೆ ವಸೂಲು ಮಾಡಬೇಕು. ಹಣ ಮಾಡುವ ನಾವು ತೆರಿಗೆ ಕಟ್ಟದಿದ್ದರೆ ಅದು ನಮಗೇ ಸರಿ ಬೀಳದು. ಹಣ ಮಾಡುವವರಿಂದ ತೆರಿಗೆ ಪಡೆದು, ಅದನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸುವುದೇ ಸೂಕ್ತ . ಈ ಮಾತನ್ನು ಕಾರ್ಪೊರೇಟ್‌ ಜಗತ್ತಿನಲ್ಲಿ ನಾನೊಬ್ಬನೇ ಹೇಳುತ್ತಿರುವುದರಿಂದ ಇಲ್ಲಿ ನಾನು ಅನ್‌ಪಾಪ್ಯುಲರ್‌!
 3. ಜಾಗತೀಕರಣ ನಮಗೆ ವರದಾನ. ಭಾರತೀಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಜಾಗತೀಕರಣದ ಸ್ವರೂಪದ ಬುನಾದಿಯಲ್ಲಿರುವುದರಿಂದ ಜಗತ್ತಿನ ಉದ್ದಿಮೆದಾರರೆಲ್ಲಾ ಅಬ್ಬಾ ಎನ್ನುವಷ್ಟರ ಮಟ್ಟಿಗೆ ನಾವು ಬೆಳೆಯಲಿದ್ದೇವೆ.
 4. ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ವಿಷಯ ಕೆಲವರಿಗಷ್ಟೇ ಸೀಮಿತವಾದ ಭಾವುಕ ವಿಷಯವಾಗಿದೆ. ಜಾಗತೀಕರಣದ ಪರಿಭಾಷೆಗೆ ಕನ್ನಡ ಹೊಂದದೇ ಇರುವುದರಿಂದ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡದ ಬದಲು ಇಂಗ್ಲೀಷನ್ನು ಬಳಸಬೇಕು.
ಭಾರತದ ಐಟಿ ಸಾಮ್ರಾಜ್ಯದ ಸಾಮ್ರಾಟ ಎಂದು ಮಾಧ್ಯಮಗಳ ಒಕ್ಕೊರಲ ಪ್ರಶಂಸೆಗೆ ಪಾತ್ರವಾಗಿರುವ ಎನ್‌.ಆರ್‌. ನಾರಾಯಣ ಮೂರ್ತಿ ವಿವಿಧ ವೇದಿಕೆಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳಿವು. ಒಂದೆಡೆ ಸತ್ಯವನ್ನು ಬಹಿರಂಗಪಡಿಸುತ್ತಿವೆ ಎಂದು ತೋರುವ, ಇನ್ನೊಂದೆಡೆ ಅಭಿಪ್ರಾಯಬೇಧಕ್ಕೆಡೆ ಮಾಡಿಕೊಡುವ ಈ ಪ್ರತಿಪಾದನೆಗಳು ನಾರಾಯಣಮೂರ್ತಿಯವರ ಸಂಕೀರ್ಣ ವ್ಯಕ್ತಿತ್ವದ ಅಭಿವ್ಯಕ್ತಿ ಎಂದರೆ ತಪ್ಪಾಗಲಾರದು.

ಇಪ್ಪತ್ತು ವರ್ಷಗಳ ಕಾಲ ಎಲ್ಲರೊಳಗೆ ಒಬ್ಬರಾಗಿದ್ದ ನಾರಾಯಣಮೂರ್ತಿ ಈಹೊತ್ತು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾಗಿರುವ ಕನ್ನಡಿಗ! ಮುರ್ಡೋಕ್‌, ಯಾಷಿರೊ ಮೋರಿ.. ಯಾವ ಅಂತರರಾಷ್ಟ್ರೀಯ ಗಣ್ಯರೇ ಇರಲಿ- ನಾರಾಯಣಮೂರ್ತಿ ಅವರ ಭೇಟಿಯಾಗದಿದ್ದರೆ ಅವರ ಭಾರತ ಭೇಟಿ ಅಪೂರ್ಣವೆಂದೇ ಅರ್ಥ. ಪ್ರಸಕ್ತ ಭಾರತೀಯ ಉದ್ಯಮದ ಪರ್ಯಾಯವಾಗಿ ಕಾಣಿಸಿಕೊಳ್ಳುತ್ತಿರುವ ಮೂರ್ತಿ ಕನ್ನಡಿಗರ ಹೆಮ್ಮೆಯ ಪ್ರತೀಕ. ಅವರ ಅಭಿಪ್ರಾಯಗಳಲ್ಲಿನ ವೈರುಧ್ಯಗಳೇನೇ ಇರಲಿ, ಸಾಧನೆಯ ಹಿನ್ನೆಲೆಯಲ್ಲಿ ಮೂರ್ತಿ ಬಾಹುಬಲಿ! ಅದೇ ಮೂರ್ತಿ ಈಗ ಟೈಮ್‌ ಪತ್ರಿಕೆಯ ಇಪ್ಪತ್ತೆೈದು ಪ್ರಭಾವಿ ಕಾರ್ಯ ನಿರ್ವಾಹಕ ಅಧಿಕಾರಿಗಳಲ್ಲಿ ಜಾಗೆ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅವರದು ಇಪ್ಪತ್ತೊಂದನೇ ಸ್ಥಾನ ; ಪಟ್ಟಿಯಲ್ಲಿರುವ ಏಕೈಕ ಭಾರತೀಯ!

ಅವರು ಹುಟ್ಟಿದ ಮರುವರ್ಷ ಭಾರತಕ್ಕೆ ಸ್ವಾತಂತ್ರ್ಯ ಬಂತು..

ನಾರಾಯಣಮೂರ್ತಿ ಹುಟ್ಟಿದ್ದು ಆಗಸ್ಟ್‌ 20, 1946 ರಲ್ಲಿ . 1967 ರಲ್ಲಿ ಮೈಸೂರು ವಿಶ್ವ ವಿದ್ಯಾಲಯದಿಂದ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ, 1969 ರಲ್ಲಿ ಕಾನ್ಪುರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಯಿಂದ ಎಂ.ಟೆಕ್‌. ಪದವಿ ಪಡೆದರು.

ನಾರಾಯಣಮೂರ್ತಿಯವರ ವೃತ್ತಿ ಜೀವನ 1969 ರಲ್ಲಿ , ಅಹಮದಾಬಾದ್‌ನಲ್ಲಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೇನೇಜ್‌ಮೆಂಟ್‌ನಲ್ಲಿ ಚೀಫ್‌ ಸಿಸ್ಟಂ ಪ್ರೋಗ್ರಾಮರ್‌ ಮೂಲಕ ಆರಂಭವಾಯಿತು. ಮಾಹಿತಿ ತಂತ್ರಜ್ಞಾನ ಬೆಳವಣಿಗೆಗಳ ಬಗ್ಗೆ ಅವರಿಗೆ ಆಸಕ್ತಿ ಕುದುರಿದ್ದು ಅಲ್ಲಿಯೇ. 1972 ರಲ್ಲಿ ಸಿಸ್ಟಂಸ್‌ ಇಂಜಿನಿಯರ್‌ ಆಗಿ ಪ್ಯಾರಿಸ್‌ನ ಸೇರಿದರು. 1975 ರಲ್ಲಿ ಪುಣೆಯ ಸಿಸ್ಟಂಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ಪದಾರ್ಪಣ. ಅಲ್ಲಿಂದ Patni Computer Systems ಗೇ ಸೇರ್ಪಡೆ. ಆನಂತರ ಹುಟ್ಟಿದ್ದು INFOSYS!

ಇನ್ಫೋಸಿಸ್‌ ಫೌಂಡೇಶನ್‌ ಸ್ಥಾಪನೆಯಾಗಿದ್ದು ಇಪ್ಪತ್ತು ವರ್ಷಗಳ ಹಿಂದೆ, 1981 ರಲ್ಲಿ . ಆರು ಮಂದಿ ಸಾಫ್ಟ್‌ವೇರ್‌ ಪರಿಣತರೊಂದಿಗೆ ಕೂಡಿ ಸ್ಥಾಪಿಸಿದ ಇನ್ಫೋಸಿಸ್‌ಗೆ ನಾರಾಯಣಮೂರ್ತಿ ಅಧ್ಯಕ್ಷರು. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಓ) ಜವಾಬ್ದಾರಿಯೂ ಅವರ ಹೆಗಲಿಗೆ.

ಸಾಧನೆಯ ಹಾದಿಯಲ್ಲಿ ನೆಟ್ಟ ಮೈಲುಗಲ್ಲುಗಳು

1992 ರಿಂದ 1994 ರವರೆಗೆ ನಾಸ್‌ಕಾಮ್‌ ಅಧ್ಯಕ್ಷರಾಗಿ ಸೇವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಬೋರ್ಡ್‌ ನಿರ್ದೇಶಕರಲ್ಲಿ ಮೂರ್ತಿ ಅವರೂ ಒಬ್ಬರು. ಪ್ರಧಾನಮಂತ್ರಿಯ ವಾಣಿಜ್ಯ ಹಾಗೂ ಕೈಗಾರಿಕಾ ಸಮಿತಿ ಹಾಗೂ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಾರ್ಯಪಡೆಯ ಸದಸ್ಯರೂ ಹೌದು.

ಇಂದು ಜಾಗತಿಕ ಮನ್ನಣೆ ಪಡೆದಿರುವ ಇನ್ಫೋಸಿಸ್‌ ಟೆಕ್ನಾಲಜೀಸ್‌ 1999 ರ ಮಾರ್ಚ್‌ನಲ್ಲಿ ಅಮೆರಿಕನ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಪ್ರವೇಶಿಸಿತು. ಅಂದಹಾಗೆ, ಅಮೆರಿಕನ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಿಂದ ಮನ್ನಣೆ ಪಡೆದ ಮೊದಲ ಭಾರತೀಯ ಕಂಪನಿ- ಇನ್ಫೋಸಿಸ್‌!

ನಾರಾಯಣಮೂರ್ತಿ ಅವರಿಗೆ ಸಂದ ಗೌರವ/ಪ್ರಶಸ್ತಿ ಹಲವಾರು. ಕೆಲವನ್ನು ಪಟ್ಟಿ ಮಾಡುವುದಾದರೆ :

 1. 2000-2001 ನೇ ಸಾಲಿನ ಅತ್ಯುತ್ತಮ ಉದ್ಯಮಿ (ಎಕನಾಮಿಕ್‌ ಟೈಮ್ಸ್‌ )
 2. ಏಷ್ಯಾದ ಪ್ರಭಾವಿ ವ್ಯಕ್ತಿಗಳ ಪಟ್ಟಿ, ಪವರ್‌- 50 ಯಲ್ಲಿ ಸ್ಥಾನ (ಜೂನ್‌, 2000)
 3. 1999 ರ ಬಿಜಿನೆಸ್‌ ವೀಕ್‌ನ ಉತ್ತಮ ವಾಣಿಜ್ಯೋದ್ಯಮಿ ಪಟ್ಟಿಯಲ್ಲಿ ಸ್ಥಾನ
 4. 1999 ರ ಅತ್ಯುತ್ತಮ ವಾಣಿಜ್ಯೋದ್ಯಮಿ(ಬಿಜಿನೆಸ್‌ ಇಂಡಿಯಾ)
 5. 1998, 1999 ಹಾಗೂ 2000- ಸತತ ಮೂರು ವರ್ಷ ಬಿಜಿನೆಸ್‌ ವೀಕ್‌ನ ಏಷ್ಯಾದ ತಾರೆಗಳ ತೋಟದಲ್ಲಿ ಸ್ಥಾನ
 6. 1996-97 ರಲ್ಲಿ ಜೆಆರ್‌ಡಿ ಟಾಟಾ ಲೀಡರ್‌ಷಿಪ್‌ ಪ್ರಶಸ್ತಿ
 7. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಕಾನ್ಪುರ- 1998 ರ ಅಲ್ಯೂಮಿನಿ ಅವಾರ್ಡ್‌
 8. ಇಂಡೋ- ಬ್ರಿಟಿಷ್‌ ಪಾರ್ಟನರ್‌ಷಿಪ್‌ನ ಸಹ ಅಧ್ಯಕ್ಷ
 9. ದಿ ಮ್ಯಾಕ್ಸ್‌ ಶ್ಮಿಡ್ಹೆನಿ ಅವಾರ್ಡ್‌- 2001 (The Max Schmidheiny Award 2001)
 10. ಸ್ವಿಟ್ಜರ್‌ಲೆಂಡ್‌ನ ಲಿಬರ್ಟಿ ಪ್ರತಿಷ್ಠಾನದ ಲಿಬರ್ಟಿ ಅವಾರ್ಡ್‌-2001
ಸಮಾಜಸೇವೆಯಲ್ಲೂ ಮುಂದು

ನಾರಾಯಣಮೂರ್ತಿ ಅವರ ಪತ್ನಿ ಸುಧಾ ನಾರಾಯಣಮೂರ್ತಿ ಅವರ ನೇತೃತ್ವದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನ ಸಮಾಜ ಸೇವೆಯಲ್ಲಿ ತನ್ನನ್ನು ಗುರ್ತಿಸಿಕೊಂಡಿದೆ. ಗ್ರಾಮೀಣ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಚಾರವಿರಲಿ ಅಥವಾ ಗ್ರಂಥಾಲಯ ರೂಪಿಸುವುದಿರಲಿ ಅಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನ ಕಾಣಿಸಿಕೊಂಡಿರುತ್ತದೆ. ಇವತ್ತು ಕನ್ನಡ ಸಾಂಸ್ಕೃತಿಕ ಲೋಕದಲ್ಲೂ ಪ್ರತಿಷ್ಠಾನ ತನ್ನದೇ ವಿಶಿಷ್ಠ ಛಾಪನ್ನು ಮೂಡಿಸಿದೆ.

ನಾರಾಯಣಮೂರ್ತಿ ಅವರ ತಂದೆ ಶಿಕ್ಷಕರಾಗಿದ್ದರು. ಗಾಂಧಿ ನನ್ನ ಆದರ್ಶ ಎನ್ನುತ್ತಾರೆ ನಾರಾಯಣಮೂರ್ತಿ. ನಮ್ಮೆಲ್ಲ ಯೋಜನೆಗಳ ಸಮಾಜದ ಕೊನಯ ಸ್ತರದಲ್ಲಿರುವ ವ್ಯಕ್ತಿಯನ್ನು ಗುರಿ ಆಗಿರಿಸಿಕೊಂಡಿರಬೇಕು ಎನ್ನುತ್ತಿದ್ದರು ಗಾಂಧಿ. ಸಮಾಜದ ಕನಿಷ್ಠನವರೆಗೂ ತಂತ್ರಜ್ಞಾನದ ಫಲವನ್ನು ಒಯ್ಯುವುದು ನಾರಾಯಣಮೂರ್ತಿ ಅವರ ಕನಸು. ಇಂಥವರು ಹೆಚ್ಚಲಿ!

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X