ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಕೃಷ್ಣ : ಆನಂದ್‌ ಜಾಗೆ ತುಂಬಬಲ್ಲ ಭಾರತದ ಚೆಸ್‌ ಮಾಸ್ಟರ್‌

By Staff
|
Google Oneindia Kannada News

*ವಿ. ಕೃಷ್ಣಸ್ವಾಮಿ

ನವದೆಹಲಿ : ಕಳೆದ ಭಾನುವಾರ (ಡಿ.24) ಟೆಹರಾನ್‌ನಲ್ಲಿ ವಿಶ್ವನಾಥನ್‌ ಆನಂದ್‌, ಸ್ಪೇನ್‌ನ ಶಿರೋವ್‌ ವಿರುದ್ಧದ ಫಿಡೆ ವಿಶ್ವ ಚಾಂಪಿಯನ್‌ಷಿಪ್‌ ಚೆಸ್‌ ಫೈನಲ್ಸ್‌ 4ನೇ ಸುತ್ತಿನಲ್ಲಿ ತಲೆ ಎತ್ತದೆ ಕಾಯಿಗಳನ್ನು ನಡೆಸುತ್ತಿದ್ದುದನ್ನು ಇಲ್ಲಿನ ಒಂದು ಕೊಠಡಿಯಲ್ಲಿ ಕೂತ ಹಿಂಡುಗಟ್ಟಲೆ ಹುಡುಗರು ಇಂಟರ್‌ನೆಟ್‌ನಲ್ಲಿ ಅವರಷ್ಟೇ ಗಂಭೀರವಾಗಿ ಗಮನಿಸುತ್ತಿದ್ದರು.

ಕೃಷ್ಣನ್‌ ಶಶಿಕಿರಣ್‌, ಅಭಿಜಿತ್‌ ಕುಂಟೆ, ಪೆಂಟ್ಯಾಲ ಹರಿಕೃಷ್ಣ ಹಾಗೂ ಸೂರ್ಯ ಶೇಖರ್‌ ಗಂಗೂಲಿ. ಇವರೆಲ್ಲರ ಕಣ್ಣಲ್ಲಿ ಮನೆ ಮಾಡಿರುವುದು ಆನಂದ್‌. ಮುಂದೊಂದು ದಿನ ತಾವೂ ಆನಂದ್‌ ಆಗಬೇಕೆಂಬ ಕನಸನ್ನು ಹೊತ್ತಿರುವ ಈ ಯುವ ಪ್ರತಿಭೆಗಳು, ಆ ಸೂಚನೆಯನ್ನು ತಮ್ಮ ಆಟಗಳ ಮೂಲಕ ಈಗಾಗಲೇ ಕೊಟ್ಟಿದ್ದಾರೆ. ಆನಂದ್‌ ವಿಶ್ವ ಚಾಂಪಿಯನ್‌ ಆದ ಆಟದ ಒಂದೊಂದು ನಡಿಗೆಯನ್ನೂ ಈ ಮಕ್ಕಳು ಹದ್ದಿನ ಕಣ್ಣಿನಿಂದ ವೀಕ್ಷಿಸಿದ್ದಾರೆ.

ಹರಿಕೃಷ್ಣನಿಗೆ ಈಗ 14 ವರ್ಷ. ಹತ್ತು ವರ್ಷದೊಳಗಿನವರ ಅಂತರರಾಷ್ಟ್ರೀಯ ಚಾಂಪಿಯನ್‌ ಆಗಿರುವ ಈತ ಆನಂದ್‌ ಎತ್ತರಕ್ಕೆ ಏರಲು ಇನ್ನು ಕೆಲವೇ ಮೆಟ್ಟಿಲುಗಳಿವೆ ಎಂಬುದು ಚೆಸ್‌ ಪಂಡಿತರ ಬಾಯಲ್ಲಿ ಕೇಳಿಬರುತ್ತಿರುವ ಮಾತು. ಆನಂದ್‌ ಮೀರಿಸುವುದು ನಿನ್ನ ಬಯಕೆಯೇ ಎಂದು ಹರಿಕೃಷ್ಣನನ್ನು ಕೇಳಿದರೆ, ‘ಚೆನ್ನಾಗಿ ಆಡೋದು ನನ್ನ ಕನಸು. ನಾನು ಆನಂದ್‌ ಅಭಿಮಾನಿ. ಅವರು ನನ್ನ ಆರಾಧ್ಯ ದೈವ’ ಎಂದು ಮುಗುಮ್ಮಾಗಿ ಉತ್ತರಿಸುತ್ತಾರೆ.

ಸಾಮಾನ್ಯವಾಗಿ ಸದಾ ಒಂದಿಲ್ಲೊಂದು ಟೂರ್ನಿಯಲ್ಲಿ ಬ್ಯುಸಿಯಾಗಿರುವ ಆನಂದ್‌ಗೂ ಬಿಡುವಿನ ವೇಳೆ ಈ ಮಕ್ಕಳನ್ನು ಮಾತನಾಡಿಸುವ, ಅವರ ಆಟ ನೋಡುವಾಸೆ. ಮುಂದಿನ ತಿಂಗಳು ಅಂಥ ಒಂದು ಅವಕಾಶ ಒದಗಿ ಬರಲಿದೆ. ಹಾಲೆಂಡಿನಲ್ಲಿ ನಡೆಯಲಿರುವ ಎಲೈಟ್‌ ಪಂದ್ಯಗಳಲ್ಲಿ ಆನಂದ್‌ ಆಡಲಿದ್ದು, ಅದೇ ಜಾಗೆಯಲ್ಲಿ ‘ಬಿ’ ವಿಭಾಗದಲ್ಲಿ ಹರಿಕೃಷ್ಣ ಕೂಡ ಆಡಲಿದ್ದಾರೆ.

ಆನಂದ್‌ ಅತಿ ಚಿಕ್ಕ ವಯಸ್ಸಿನ ಚಾಂಪಿಯನ್‌ ಅನ್ನುವ ಖ್ಯಾತಿಗೂ ಪಾತ್ರರಾಗಿದ್ದು, 18ರ ಹರೆಯದಲ್ಲಿ ಆ ಸಾಧನೆ ಮಾಡಿದ್ದಾರೆ. ಆನಂದ್‌ ಹಾದಿಯಲ್ಲೇ ಅವರಿಗಿಂತ ಕೊಂಚ ಜೋರಾಗೇ ನಡೆದಿರುವ ಹರಿಕೃಷ್ಣ , ಅವರ ದಾಖಲೆಯನ್ನು ಮುರಿಯುವ ಲಕ್ಷಣಗಳೂ ಕಂಡುಬರುತ್ತಿದೆ. ಕುಂಟೆ ಕೂಡ ಚೆಸ್ಸನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಭರವಸೆಯ ಪ್ರದರ್ಶನ ನೀಡುತ್ತಿದ್ದಾರೆ. ಚೆಸ್‌ ಆಟದ ಮಟ್ಟಿಗೆ ಇದೊಂದು ಮಹತ್ವಪೂರ್ಣ ಬೆಳವಣಿಗೆ.

ಹಿಂದೊಮ್ಮೆ ಆನಂದ್‌ ಜಾಗೆ ತುಂಬಬಲ್ಲ ಯಾವ ಮುಖವೂ ಭಾರತದಲ್ಲಿ ಕಾಣುತ್ತಿಲ್ಲ ಎಂಬ ಮಾತಿತ್ತು. ಆದರೆ ಈ ಹೊತ್ತು ಚೆನ್ನೈನಲ್ಲಿ ಸ್ಥಳೀಯ ಟೂರ್ನಿಗಳಿಗೆ ತಮ್ಮ ಮಕ್ಕಳನ್ನು ಆಡಿಸಲು ಅಪ್ಪ- ಅಮ್ಮಂದಿರು ನಾಮುಂದು ತಾಮುಂದು ಅನ್ನುತ್ತಿದ್ದಾರೆ. ಭಾರತದ ಮಟ್ಟಿಗೂ ಮೊದಲ ಬಾರಿಗೆ 4 ಗ್ರ್ಯಾಂಡ್‌ ಮಾಸ್ಟರ್‌ ಟೂರ್ನಿಗಳನ್ನು ಆಯೋಜಿಸಲಾಗುತ್ತಿದೆ. ಎನ್‌ಐಐಟಿ, ವಿಪ್ರೋ, ಪೆಂಟಾ ಮೀಡಿಯಾದಂಥ ಮಾಹಿತಿ ತಂತ್ರಜ್ಞಾನ ದಿಗ್ಗಜಗಳು ಇವುಗಳನ್ನು ಪ್ರಾಯೋಜಿಸಲು ಮುಗಿ ಬೀಳುತ್ತಿವೆ. ಎಷ್ಟೋ ಕಂಪನಿಗಳು ಈಗಾಗಲೇ ಆಟಗಾರರನ್ನು, ಟೂರ್ನಿಗಳನ್ನು ಬುಕ್‌ ಮಾಡಿಕೊಂಡು ಬಿಟ್ಟಿವೆ.

ಕ್ರಿಕೆಟ್‌ ಹುಚ್ಚಿನಲ್ಲೇ ಮುಳುಗಿ ಹೋಗುತ್ತಿದ್ದ ದೇಶದಲ್ಲಿ ಚೆಸ್‌ ದೊರೆ ವಿಶ್ವನಾಥನ್‌ ಆನಂದ್‌ ಚೆಸ್‌ ಕ್ರಾಂತಿ ಮಾಡಿದ್ದಾರೆ. ಆನಂದ್‌ ಜಾಗೆಯನ್ನು ಹರಿಕೃಷ್ಣ ಯಶಸ್ವಿಯಾಗಿ ತುಂಬಲಿ.

(ಐಎಎನ್‌ಎಸ್‌)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X