ಮುಂದುವರಿದ ಸಾಹಿತ್ಯ ಸುಗ್ಗಿ
ಲಂಡನ್ : ಭಾರತೀಯ ಲೇಖಕರಿಗಿದು ಸುಗ್ಗಿಕಾಲ! ಭಾರತೀಯ ಮೂಲದ ನೈಪಾಲ್ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ದೊರೆತಿರುವ ಸುದ್ದಿ ಹಸಿರಾಗಿರುವಾಗಲೇ, ಮತ್ತೊಂದು ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಭಾರತದ ಮಡಿಲಿಗೆ ಬಿದ್ದಿದೆ. ಈ ಬಾರಿ ಸಾಧನೆ ಸಂಭ್ರಮದ ಕೇಂದ್ರದಲ್ಲಿರುವ ವ್ಯಕ್ತಿ ಅಮಿತವ್ ಘೋಷ್, ಅಪ್ಪಟ ಭಾರತೀಯ.
ಸಾಹಿತ್ಯ ಸುಗ್ಗಿಯ ಮುಂದುವರಿಸಿದ ಅಮಿತವ್‌ರ ದಿ ಗ್ಲಾಸ್ ಪ್ಯಾಲೇಸ್ ಕೃತಿಗೀಗ ಫ್ರಾಂಕ್‌ಫರ್ಟ್ ಇ ಬುಕ್ ಪ್ರಶಸ್ತಿಯ ಗರಿ. 50 ಸಾವಿರ ಡಾಲರ್‌ಗಳ ಪ್ರಶಸ್ತಿ ಪಡೆದ ಅಮಿತವ್‌ಗೆ ಶುಭಾಶಯಗಳು.
ಯುದ್ಧ ಮತ್ತು ಪ್ರೀತಿ ಕುರಿತ ಹೊಳಹುಗಳನ್ನು ಮಂಡಿಸುತ್ತಾ ಹೋಗುವ ದಿ ಗ್ಲಾಸ್ ಪ್ಯಾಲೇಸ್ ಅಮಿತವ್‌ರ ಮಹತ್ವಾಕಾಂಕ್ಷೆಯ ಕೃತಿ. ಇದೇ ಮೊದಲ ಬಾರಿಗೆ ಇ ಬುಕ್ ಇಂಡಸ್ಟ್ರಿಯಲ್ಲಿ , ಫಿಕ್ಷನ್ ವಿಭಾಗದಲ್ಲಿ ಪ್ರಶಸ್ತಿ ಪಡೆದ ಅಗ್ಗಳಿಕೆ ಅಮಿತವ್ ಅವರದು. ನಾನ್ ಫಿಕ್ಷನ್ ವಿಭಾಗದ ಪ್ರಶಸ್ತಿ ಸ್ಟೀವನ್ ಲೆವಿ ಅವರ ಕ್ರಿಪ್ಟೋ ಕೃತಿಗೆ.
ಸಣ್ಣ ಹಾಗೂ ದೊಡ್ಡ ಪ್ರಕಾಶಕರು, ಸ್ವಯಂ ಲೇಖಕರು ಹಾಗೂ ಇ- ಪ್ರಕಾಶಕರು ಸಲ್ಲಿಸಿದ ಪ್ರವೇಶಗಳನ್ನು ಪರಿಗಣಿಸಿ ಫ್ರಾಂಕ್‌ಫರ್ಟ್ ಇ ಬುಕ್ ಪ್ರಶಸ್ತಿಗಳನ್ನು ನಿರ್ಧರಿಸಲಾಗಿದೆ. ವಿಜೇತರ ಹೆಸರುಗಳನ್ನು ಫ್ರಾಂಕ್‌ಫರ್ಟ್‌ನಲ್ಲಿನ ಓಲ್ಡ್ ಅಪೇರ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು ಎಂದು ಇ ಬುಕ್ ಪ್ರಶಸ್ತಿ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಅಮಿತವ್ ಬದುಕು- ಬರಹ
1956 ರಲ್ಲಿ ಕಲ್ಕತ್ತಾದಲ್ಲಿ ಜನಿಸಿದ ಅಮಿತವ್ ಘೋಷ್ ಪ್ರಮುಖ ಭಾರತೀಯ ಇಂಗ್ಲೀಷ್ ಲೇಖಕರಲ್ಲೊಬ್ಬರು ಎಂದೇ ಪ್ರಸಿದ್ಧರು. ದೆಹಲಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ದುಡಿದಿರುವ ಅನುಭವವನ್ನೂ ಹೊಂದಿರುವ ಅಮಿತವ್, ತಮ್ಮ ಮೊದಲ ಕೃತಿ ಬರೆಯುವ ಮುನ್ನವೇ ಆಕ್ಸ್‌ಫರ್ಡ್‌ನಿಂದ ಡಾಕ್ಟರೇಟ್ ಪಡೆದಿದ್ದರು.
ದಿ ಸರ್ಕಲ್ ಆಫ್ ರೀಸನ್, ದಿ ಷಾಡೋ ಲೈನ್ಸ್ , ಡ್ಯಾನ್ಸಿಂಗ್ ಇನ್ ಕಾಂಬೋಡಿಯಾ, ದಿ ಕಲ್ತತ್ತಾ ಕ್ರೋಮೋಸೋಮ್ ಕೃತಿಗಳಿಂದ ಅವರು ಪ್ರಸಿದ್ಧರು. ನ್ಯೂ ಯಾರ್ಕರ್ ನಿಯತಕಾಲಿಕೆಯಲ್ಲಿ ನಿಯಮಿತ ಬರಹಗಾರರೂ ಹೌದು.
ಪ್ರಶಸ್ತಿಗಳು ಅಮಿತವ್‌ಗೆ ಹೊಸತೇನೂ ಅಲ್ಲ . ದಿ ಸರ್ಕಲ್ ಆಫ್ ರೀಸನ್ ಕೃತಿಗೆ ಫ್ರಾನ್ಸ್‌ನ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಪ್ರಿಕ್ಸ್ ಮೆಡಿಸಿ ಎಸ್ಟ್ರೇಂಜರ್ ಪ್ರಶಸ್ತಿ ದೊರೆತರೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಿ ಷಾಡೋ ಲೈನ್ಸ್‌ಗೆ ದೊರೆತಿದೆ. ದಿ ಕಲ್ತತ್ತಾ ಕ್ರೋಮೋಸೋಮ್ ಕೃತಿಗೆ ಆರ್ಥರ್ ಸಿ ಕ್ಲಾರ್ಕ್ ಪ್ರಶಸ್ತಿ ದೊರೆತಿದೆ ಹಾಗೂ ಈ ಕೃತಿಯನ್ನು ಆಸ್ಕರ್ ವಿಜೇತ ಗೇಬ್ರಿಯಲೆ ಸಲ್ವಟೋರ್ಸ್ ಸಿನಿಮಾ ಮಾಡಿದ್ದಾರೆ.
(ಪಿಟಿಐ/ಇನ್ಫೋ ಇನ್‌ಸೈಟ್)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications