ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತಾಭ್‌ ಬಚ್ಚನ್‌ಗೆ ಪ್ರತಿಮಾ ಯೋಗ

By Staff
|
Google Oneindia Kannada News

ಲಂಡನ್‌ : ವಿಶ್ವ ವಿಖ್ಯಾತರ ಮೇಣದ ಪ್ರತಿಮೆಗಳನ್ನು ಪ್ರದರ್ಶಿಸುವ ಮೇಡಂ ಥೌಸಡ್ಸ್‌ ಗ್ಯಾಲರಿಯಲ್ಲಿ ಶಾಶ್ವತ ಮೇಣದ ಬೊಂಬೆಯಾಗಿ ಪ್ರದರ್ಶಿತವಾಗುವುದು ಸಾಮಾನ್ಯ ವಿಷಯವೇನಲ್ಲ. ಇದು ಜೀವನದ ಸಾರ್ಥ್ಯಕ್ಯ. ಇಂತಹ ಪ್ರತಿಷ್ಠಿತ ಗ್ಯಾಲರಿಯಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಸ್ಥಾಪಿಸಿಕೊಳ್ಳುವ ಹಿರಿಮೆ ಭಾರತದ ಬಾಲಿವುಡ್‌ನ ಮೇರು ನಟ ಅಮಿತಾಭ್‌ ಬಚ್ಚನ್‌ ಅವರಿಗೆ ಲಭ್ಯವಾಗಿದೆ.

1835ರಲ್ಲಿ ಸ್ಥಾಪಿತವಾದ ‘ಮೇಡಂ ಥೌಸಡ್ಸ್‌ ವ್ಯಾಕ್ಸ್‌ ವರ್ಕ್ಸ್‌’ ಜಗತ್ತಿನ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದು. ಇಲ್ಲಿ ಪುತ್ಥಳಿಯಾಗಿ ಪ್ರದರ್ಶಿತವಾಗುವವರು ವಿಶ್ವ ವಿಖ್ಯಾತರೆಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ಬಾರಿ ಬಾಲಿವುಡ್‌ನ ಒಬ್ಬರು ಸ್ಥಾನಗಿಟ್ಟಿಸುತ್ತಾರೆಂಬ ಸುಳಿವು ಕೆಲವು ತಿಂಗಳುಗಳ ಹಿಂದೆಯೇ ದೊರೆತಿತ್ತು. ಆದರೆ ಆ ಭಾಗ್ಯಶಾಲಿ ಯಾರು? ಎಂಬ ಜಿಜ್ಞಾಸೆ ಮಾತ್ರ ಹಾಗೇ ಇತ್ತು.

ಭಾನುವಾರ ಈ ಎಲ್ಲ ಜಿಜ್ಞಾಸೆಗಳಿಗೆ ತೆರೆ ಬಿದ್ದಿದ್ದೆ. ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಸ್ಪರ್ಧೆಯಲ್ಲಿ ಗೆದ್ದು ಈ ಪ್ರತಿಷ್ಠಿತ ಗ್ಯಾಲರಿಯಲ್ಲಿ ಮೂರ್ತಿವೆತ್ತು ನಿಲ್ಲುವ ಸೌಭಾಗ್ಯವನ್ನು ಪಡೆದಿದ್ದಾರೆ. ಇಲ್ಲಿ ಈ ಬಾರಿ ಯಾರ ಮೇಣದ ಪುತ್ಥಳಿಯನ್ನು ಸ್ಥಾಪಿಸಬೇಕು ಎಂಬ ಬಗ್ಗೆ ನಡೆದ ಜನಾಭಿಪ್ರಾಯ ಸಂಗ್ರಹದಲ್ಲಿ ಅಮಿತಾಬ್‌ ಜಯಶಾಲಿಯಾಗಿದ್ದಾರೆ. ಈ ಜನಾಭಿಪ್ರಾಯ ಸಂಗ್ರಹ ನಡೆದದ್ದು ಇಂಟರ್‌ನೆಟ್‌ ಮೂಲಕ. ಈ ವಿಷಯವನ್ನು ಮೇಡಂ ಥೌಸಡ್ಸ್‌ನ ವಕ್ತಾರರು ಪ್ರಕಟಿಸಿದ್ದಾರೆ.

ಹಿಂದಿ ಚಿತ್ರರಂಗದ ದಿಗ್ಗಜ ರಾಜ್‌ ಕಪೂರ್‌, ಹದಿಹರೆಯದವರ ಮನಗೆದ್ದಿರುವ ಶಾರುಖ್‌ ಖಾನ್‌, ಖ್ಯಾತ ನಟಿ ತ್ರಿಭುವನ ಸುಂದರಿ ಐಶ್ವರ್ಯ ರೈ ಹಾಗೂ ಎಂ.ಎಫ್‌. ಹುಸೇನ್‌ರ ಕುಂಚ ಸ್ಫೂರ್ತಿಯ ದೇವತೆ ಮಾಧುರಿ ದೀಕ್ಷಿತ್‌ ಸಹ ಅಮಿತಾಭ್‌ ಬಚ್ಚನ್‌ರೊಂದಿಗೆ ಸ್ಪರ್ಧಾ ಕಣದಲ್ಲಿದ್ದರು. ಆದರೆ ಬಿಬಿಸಿ ವೀಕ್ಷಕರಿಂದ ಸಹಸ್ರಮಾನದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಮಿತಾಭ್‌ರನ್ನೇ ಮತ್ತೊಮ್ಮೆ ವಿಶ್ವದ ಚಿತ್ರಪ್ರೇಮಿಗಳು ಪ್ರತಿಷ್ಠೆಯ ಮೇಣದ ಪ್ರತಿಮೆಯ ಗ್ಯಾಲರಿಯಲ್ಲಿ ಪುತ್ಥಳಿಯಾಗಿ ನೋಡ ಬಯಸಿದರು.

ವಿಶ್ವ ವಿಖ್ಯಾತವಾದ ಈ ಗ್ಯಾಲರಿಯಲ್ಲಿ ಸ್ಥಾನ ಪಡೆದ ಪ್ರಪ್ರಥಮ ಬಾಲಿವುಡ್‌ ನಟ ಎಂಬ ಹೆಗ್ಗಳಿಕೆಯೂ ಈಗ ಹಿಂದಿಯ ನಂ. 1 ನಟ ಅಮಿತಾಭ್‌ರಿಗೆ ಸಂದಿದೆ. ಈ ಜಗದ್ವಿಖ್ಯಾತ ಗ್ಯಾಲರಿಯಲ್ಲಿ ಈವರೆಗೆ ಭಾರತದ ಮಾಜಿ ಪ್ರಧಾನಿಗಳಾದ ಶ್ರೀಮತಿ ಇಂದಿರಾಗಾಂಧಿ, ರಾಜೀವ್‌ ಗಾಂಧಿ ಹಾಗೂ ಪಿ.ವಿ. ನರಸಿಂಹ ರಾವ್‌ ಪಾತ್ರರಾಗಿದ್ದರು.

ಬಚ್ಚನ್‌ ಪ್ರತಿಕ್ರಿಯೆ : ಬಹು ಎತ್ತರದ ವ್ಯಕ್ತಿ ಬಚನ್‌ ತಮಗೆ ಈ ಗೌರವ ಸಂದ ಬಗ್ಗೆ ತೂಕವಾದ ಮಾತುಗಳನ್ನೇ ಆಡುವ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ ಇದು ಹಿಂದಿ ಚಿತ್ರರಂಗಕ್ಕೇ ಸಂದ ಗೌರವ’ ಎಂಬುದು ಅವರ ಪ್ರತಿಕ್ರಿಯೆ. ವಿಶ್ವ ಮಾನ್ಯರಾಗಿ ಮೇಂಡ ಥೌಸಡ್ಸ್‌ನಲ್ಲಿ ಸ್ಥಾನ ಪಡೆದ ಬಾಲಿವುಡ್‌ನ ಬಿಗ್‌ ಬಿ ಬಚ್ಚನ್‌ರನ್ನು ನಾವೂ ತುಂಬು ಹೃದಯದಿಂದ ಅಭಿನಂದಿಸೋಣ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X