ರಘುನಂದನನ ಕನಸಲ್ಲಿ ಬಂದ ಭಾರತಿ

ಏನಕ್ಕೋ ಬಂದು ಇನ್ನೇನೋ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡೆವು ಅಂತ ರಘುನಂದನ ಮತ್ತು ಆನಂದ ಇಬ್ಬರಿಗೂ ಅನ್ನಿಸಿತು. ಈಗ ವಿದ್ಯಾನಂದರಿಗೆ ಮದುವೆಗೆ ನೆರವಾಗುವುದಾಗಿ ಮಾತುಕೊಟ್ಟಾಗಿದೆ. ತೋಳ್ಪಡಿತ್ತಾಯರು ಆ ತಂಟೆಗೆ ಹೋಗಕೂಡದು ಎಂದಿದ್ದಾರೆ. ಇಬ್ಬರಲ್ಲಿ ಯಾರ ಮಾತನ್ನು ತಳ್ಳಿಹಾಕುವುದೂ ಕಷ್ಟವೇ. ವಿದ್ಯಾನಂದರ ಮಾತನ್ನು ತಳ್ಳಿಹಾಕಿದರೆ ಸಮಯಸಾಧಕರು ಅನ್ನಿಸಿಕೊಳ್ಳುತ್ತೇನೆ. ತೋಳ್ಪಡಿತ್ತಾಯರ ಮಾತಿಗೆ ಗೌರವ ಕೊಡದಿದ್ದರೆ ಅದರಿಂದ ಮುಂದೆ ತೊಂದರೆಯಾಗೋದು ಖಂಡಿತ. ಇದರಿಂದ ಪಾರಾಗುವುದಕ್ಕೆ ಏನಾದರೂ ದಾರಿಯಿದೆಯೇ ಎಂದು ಇಬ್ಬರು ರಾತ್ರಿಯಿಡೀ ಯೋಚಿಸಿದರು.

‘ನಾವು ಹೇಗಾದರೂ ಮಾಡಿ ತೋಳ್ಪಡಿತ್ತಾಯರನ್ನೇ ಒಪ್ಪಿಸಬೇಕು’ ಅಂದ ರಘುನಂದನ.

‘ಅವರು ಒಪ್ಪೋದಿಲ್ಲ’ ಆನಂದ ಒಂದೇ ಮಾತಲ್ಲಿ ರಘುವಿನ ಇರಾದೆಯನ್ನು ತಳ್ಳಿಹಾಕಿದ.

‘ಅವರನ್ನು ಒಪ್ಪಿಸೋದಕ್ಕೆ ನನಗೊಂದು ಉಪಾಯ ಹೊಳೆದಿದೆ’ ಎಂದ ರಘುವಿನ ಹೊಳೆಯುವ ಕಣ್ಣುಗಳನ್ನು ಆನಂದ ಆಸೆಯಿಂದ ನೋಡಿದ.

‘ಅವರ ಉದ್ದೇಶವನ್ನೇ ಮುಂದಿಟ್ಟುಕೊಂಡು ಅವರನ್ನು ಒಪ್ಪಿಸುವ ಪ್ರಯತ್ನ ಮಾಡಬೇಕು. ಈಗ ಹೇಗಿದ್ದರೂ ಗುರುಗಳ ಪ್ರೇಮಪ್ರಕರಣ ಬಯಲಾಗಿದೆ. ಅದನ್ನು ಮುಚ್ಚಿಹಾಕುವುದಂತೂ ಸಾಧ್ಯವಿಲ್ಲದ ಮಾತು. ಹೆಚ್ಚೆಂದರೆ ಅದನ್ನು ನಾವು ತೇಪೆಹಾಕಲು ಯತ್ನಿಸಬಹುದು. ಪುಟ್ಟ ಪತ್ರಿಕೆಗಳಲ್ಲೋ ಟ್ಯಾಬ್ಲಾಯಿಡುಗಳಲ್ಲೋ ಬಂದಿರುವುದರಿಂದ ಅದು ಸುಳ್ಳೆಂದು ಸಾಧಿಸಬಹುದು. ಆದರೆ ಜನರ ಮನಸ್ಸಿನಲ್ಲಿ ಅನುಮಾನ ಉಳಿದೇ ಉಳಿಯುತ್ತದೆ. ಹೀಗಾಗಿ ತೋಳ್ಪಡಿತ್ತಾಯರ ಉದ್ದೇಶ ಅಷ್ಟೇನೂ ಫಲಿಸುವುದಿಲ್ಲ’

ಆನಂದನಿಗೆ ಅದೂ ಹೌದೆನ್ನಿಸಿತು. ಆದರೆ ತೋಳ್ಪಡಿತ್ತಾಯರ ವಾದ ಬೇರೆಯೇ ಇದೆಯಲ್ಲ . ಅವರು ಪೀಠ ತೊರೆದರೆ ಅದು ಜಗಜ್ಜಾಹೀರಾಗುತ್ತದೆ. ಅದು ಚರಿತ್ರೆಯಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದುಕೊಳ್ಳುತ್ತದೆ. ಪತ್ರಿಕೆಯಲ್ಲಿ ಬಂದ ಗಾಸಿಪ್ಪುಗಳನ್ನೆಲ್ಲ ಜನ ಬೇಗ ಮರೆಯುತ್ತಾರೆ ಎಂದವರು ಯೋಚಿಸಿರುವ ಸಾಧ್ಯತೆಯೂ ಇದೆಯಲ್ಲ.

ಆನಂದ ಅದನ್ನೇ ರಘುವಿಗೆ ಹೇಳಿದ. ಏನಾದರೂ ಮಾಡಿ ಇಬ್ಬರಲ್ಲಿ ಒಬ್ಬರನ್ನು ಒಪ್ಪಿಸುವುದರ ಹೊರತು ಬೇರೆ ದಾರಿಯಿಲ್ಲ ಅಂದುಕೊಳ್ಳುತ್ತಾ ಇಬ್ಬರೂ ನಿದ್ದೆಹೋದರು.

ರಘುನಂದನನ ಕನಸಿನಲ್ಲಿ ನರ್ಮದೆ ಕಾಣಿಸಿಕೊಳ್ಳಲಿಲ್ಲ . ಪೂರ್ತಿಯಾಗಿ ಭಾರತಿಯೇ ತುಂಬಿದ್ದಳು. ಆಕೆ ಬಂದು ನನ್ನನ್ನು ಕಾಪಾಡಿ ಎಂದು ಕೇಳಿಕೊಂಡಳು. ರಘುನಂದನ ಯಾವುದೋ ಒಂದು ಹೊತ್ತಲ್ಲಿ ಎದ್ದು ಕುಳಿತ. ಕನಸಲ್ಲಿ ಬಂದ ಭಾರತಿಯ ಮುಖವನ್ನು ನೆನಪಿಸಿಕೊಳ್ಳಲು ಯತ್ನಿಸಿದ. ಭಾರತಿಯನ್ನು ತಾನಿನ್ನೂ ನೋಡಿಲ್ಲ. ಹಾಗಿದ್ದರೆ ಕನಸಲ್ಲಿ ಬಂದ ಮುಖ ಯಾವುದು? ಅದನ್ನು ತಾನು ಭಾರತಿ ಅಂದುಕೊಂಡಿದ್ದೇಕೆ? ತನ್ನ ಕನಸಲ್ಲಿ ಪ್ರತ್ಯಕ್ಷವಾದ ಭಾರತಿಗೂ ನಿಜವಾದ ಭಾರತಿಗೂ ಸಾಮ್ಯ ಇರಬಹುದೇ?

ಹೀಗೆ ಯೋಚಿಸುತ್ತಾ ಯೋಚಿಸುತ್ತಾ ರಘುನಂದನನಿಗೆ ಮತ್ತೆ ನಿದ್ದೆ ಹತ್ತಲಿಲ್ಲ.

ಬೆಳಗ್ಗೆ ಅಭಿಯಾನಕ್ಕೆ ಬಂದವರೆಲ್ಲ ಒಬ್ಬೊಬ್ಬರಾಗಿ ಊರಿಗೆ ಹೋಗುವ ಆತುರ ವ್ಯಕ್ತಪಡಿಸಿದರು. ಹೆಣ್ಣುಮಕ್ಕಳಂತೂ ಆದಷ್ಟೂ ಬೇಗ ಹೊರಟುಬಿಡಬೇಕೆಂಬ ಆತುರದಲ್ಲಿದ್ದರು. ವಿದ್ಯಾನಂದರಿಗೆ ಅವರಿಂದ ಅಂಥ ಸಹಾಯವೇನೂ ಆಗುವುದಿಲ್ಲ ಅಂತ ಆನಂದನಿಗೆ ಖಾತ್ರಿಯಾಯಿತು.

ಅವರನ್ನೆಲ್ಲ ಹೊರಡುವುದಕ್ಕೆ ಹೇಳಿ ಆನಂದ ಮತ್ತು ರಘುನಂದನ ಮಠಕ್ಕೆ ಹೋಗಲು ನಿರ್ಧರಿಸಿದರು. ಆನಂದ ಯಾಕೋ ತಲೆ ನೋಯುತ್ತಿದೆ, ಒಂದು ರೌಂಡ್‌ ವಾಕಿಂಗು ಹೋಗಿ ಬರುತ್ತೇನೆ ಎಂದು ಹೊರಗೆ ನಡೆದ.

ರಘುನಂದನ ಸ್ನಾನ ಮುಗಿಸಿ ಹೊರಗೆ ಬರುವಷ್ಟರಲ್ಲಿ ರೂಮಿನ ಹೊರಗೆ ಇಬ್ಬರು ಹುಡುಗಿಯರು ನಿಂತಿದ್ದು ಕಾಣಿಸಿತು. ಬನ್ನಿ ಒಳಗೆ ಅಂತ ಕರೆದ. ಬಂದವರಲ್ಲಿ ಒಬ್ಬಳು ನರ್ಮದೆ, ಇನ್ನೊಬ್ಬಳು ಅವಳ ಗೆಳತಿ. ನರ್ಮದೆ ಹೀಗೆ ಧುತ್ತೆಂದು ಎದುರಾದಾಗ ಏನು ಮಾತಾಡುವುದು ಅಂತ ರಘುನಂದನನಿಗೆ ತೋಚಲಿಲ್ಲ. ‘ಬನ್ನಿ, ಕುಳಿತುಕೊಳ್ಳಿ’ ಅಂತ ಸಾಕಷ್ಟು ಗಲೀಜಾಗಿದ್ದ ಕುರ್ಚಿ ತೋರಿಸಿದ. ನರ್ಮದೆ ಕುಳಿತುಕೊಳ್ಳಲಿಲ್ಲ . ಬದಲಾಗಿ ತಾನು ಕೈಯಲ್ಲಿ ತಂದಿದ್ದ ಪುಟ್ಟ ಡೈರಿಯನ್ನು ರಘುವಿನತ್ತ ಚ ಾಚುತ್ತಾ ‘ ಇವತ್ತು ಹೊರಡುತ್ತಿದ್ದೇವೆ. ನೆನಪಿಗೆ ಅಂತ ನಿಮ್ಮ ವಿಳಾಸ ಮತ್ತು ಆಟೋಗ್ರಾಫ್‌ ಬೇಕು’ ಅಂದಳು.

ಏನು ಬರೆಯುವುದು ಅಂತ ತೋಚದೆ ಒಂದು ಕ್ಷಣ ಕಂಗಾಲಾದ ರಘು ಅವಳ ಕಣ್ಣುಗಳನ್ನೇ ನೋಡಿದ. ಅಲ್ಲಿ ಏನಾದರೂ ಸಿಗಬಹುದು ಎಂದು ಹುಡುಕಾಡಿದ. ಕೊನೆಗೆ ಅದೇನೋ ಸಿಕ್ಕಿದವರಂತೆ ಬರೆದ;

ಪ್ರಿಯ ನದಿ,
ಅಭಿಯಾನವನ್ನು ಸಾರ್ಥಕಗೊಳಿಸಿದ ಸಂಭ್ರಮಕ್ಕೆ ಮತ್ತು ಕುಮಾರಪರ್ವತದ ಬೆಳದಿಂಗಳಿಗೆ ವಿನಯ ಕರುಣಿಸಿದ ಖುಷಿಗೆ....
- ರಘು

ಅದು ತನಗೆ ಅರ್ಥವೇ ಆಗಲಿಲ್ಲ ಎಂಬಂತೆ ನರ್ಮದೆ ತಲೆಯೆತ್ತಿ ನೋಡಿದಳು. ‘ನದಿ ಅಂದರೆ ಯಾರು?’ ಕೇಳಿದಳು.

‘ನೀನೇ. ನರ್ಮದೆಯನ್ನು ನಾನು ಪ್ರೀತಿಯಿಂದ ನದಿ ಅನ್ನಬಾರದಾ?’ ರಘು ಕೇಳಿದ. ನರ್ಮದೆ ಬರಿದೇ ನಕ್ಕಳು. ಬಾಗಿಲ ಹತ್ತಿರ ತಿರುಗಿ ಹೋಗುವಾಗ ಕೊರಳು ಕೊಂಕಿಸಿ ನೋಡಿದಳು. ಏನೋ ಮರೆತವಳಂತೆ ಮತ್ತೆ ಒಳಗೆ ಬಂದು ‘ನನ್ನ ವಿಳಾಸ’ ಅನ್ನುತ್ತಾ ಮುದ್ದಾಗಿ ಬರೆದ ಅಕ್ಷರಗಳ ಒಂದು ಚೀಟಿ ಕೊಟ್ಟಳು.

ರಘುವಿನೊಳಗೊಂದು ನದಿ ಭೋರ್ಗರೆಯುತ್ತಿತ್ತು. ಇದ್ದಕ್ಕಿದ್ದಂತೆ ಯಾಕೋ ಸೀತಾರಾಮ ನೆನಪಾದ. ಅವನನ್ನು ಇಂಥ ಆಕರ್ಷಣೆಯೇ ಸೆಳೆದುಕೊಂಡಿರಬಹುದೇ? ರಘು ತಲ್ಲಣಿಸಿದ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+