ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರದರ್ಶಕವಾಗಿರುವವರೇ ಗುರುಗಳು

By Super
|
Google Oneindia Kannada News

ತನಗೆ ಸಂಬಂಧವೇ ಇಲ್ಲದ ಸಂಗತಿಯಾಂದಕ್ಕೆ ತಾನು ಸಾಕ್ಷಿಯಾಗುತ್ತಿದ್ದೇನೆ ಅಂತ ಆನಂದನಿಗೆ ಮತ್ತೆ ಮತ್ತೆ ಅನ್ನಿಸಿತು. ಆತ ತನ್ನೆದುರು ಕುಳಿತ ಕುರುಚಲು ಗಡ್ಡದ ನೀಳಮುಖದ ಬೋಳುನೆತ್ತಿಯ ವಿದ್ಯಾನಂದರ ವ್ಯಕ್ತಿತ್ವವನ್ನೇ ಆವಾಹಿಸಿಕೊಳ್ಳುವವನಂತೆ ಅವರನ್ನು ನೋಡಿದ. ಅವರ ಆಶೆಗಳಿಗಾಗಲೀ, ಸಮಸ್ಯೆಗಳಿಗಾಗಲೀ ತಕ್ಷಣ ಪರಿಹಾರ ಸಿಗುವುದು ಕಷ್ಟ ಅನ್ನಿಸಿತು. ಅವರಿಗೆ ಅನ್ನಿಸಿದ್ದನ್ನೆಲ್ಲ ಜನರ ಮುಂದಿಡುವುದು ಕಷ್ಟ . ಅದನ್ನು ಜನರ ಮುಂದಿಟ್ಟರೂ ಯಾವ ಉಪಯೋಗವೂ ಆಗುವುದಿಲ್ಲ . ಸ್ವಾಮಿಗಳು ಮದುವೆಯಾದರಂತೆ ಎಂಬ ಒಂದು ಸಾಲಿನ ಹೇಳಿಕೆಯಲ್ಲಿ ಅದು ಮುಗಿದುಹೋಗುತ್ತದೆ. ಬಸಿರುಮಾಡಿದರಂತೆ ಎಂಬ ಒಂದು ಅಪವಾದದಲ್ಲಿ ಅವರ ಆತ್ಮಾವಲೋಕನ, ಅಕ್ಕರಾಸ್ಥೆಗಳೆಲ್ಲ ಕರಗುತ್ತವೆ. ಜನಪದದ ಬಾಯಲ್ಲಿ ಹೆಣ್ಣಿನ ಹಿಂದೆ ಹೋದ ಸ್ವಾಮಿ ಅನ್ನಿಸಿಕೊಳ್ಳುತ್ತಾರೆ.

ರಘುನಂದನನೂ ಅದನ್ನೇ ಯೋಚಿಸುತ್ತಿದ್ದ. ವಿದ್ಯಾನಂದರು ಹೇಳಿದ್ದರಲ್ಲಿದ್ದ ಪ್ರಾಮಾಣಿಕತೆ ಅವನನ್ನು ತೀವ್ರವಾಗಿ ಕಲಕಿತ್ತು . ಎಲ್ಲ ಮನುಷ್ಯರಲ್ಲೂ ಇಂಥ ಪ್ರಾಮಾಣಿಕತೆ ಇರಬಹುದೇನೋ? ಆದರೆ ನಾವು ಅದನ್ನು ತಪ್ಪು ತಿಳಿಯುತ್ತೇವೋ ಏನೋ? ಬಹುಶಃ ಹತ್ತಿರದಿಂದ ನೋಡಿದರೆ ಪ್ರತಿಯಾಬ್ಬನೂ ಪ್ರಾಮಾಣಿಕನಾಗೇ ಕಾಣಿಸುತ್ತಾನೋ ಏನೋ?

ಆದರೆ ವಿದ್ಯಾನಂದರ ಮುಂದೆ ಅವರಿಬ್ಬರೂ ಕಿಂಕರ್ತವ್ಯ ವಿಮೂಢರಾಗಿ ಕುಳಿತಿದ್ದರು. ತಾವು ಬಂದಿದ್ದೇಕೆ ಅನ್ನುವುದು ಅವರಿಗೆ ಮರೆತೇ ಹೋಗಿತ್ತು. ಹೊರಗಡೆ ಸಾಕಷ್ಟು ಮಂದಿ ಕಾಯುತ್ತಿದ್ದಾರೆ ಅನ್ನುವುದನ್ನೂ ಮರೆತಿದ್ದರು. ಅದೆಲ್ಲ ನೆನಪಾದಂತೆ ಆನಂದ ಹೇಳಿದ;

‘ಗುರುಗಳೇ, ಸದ್ಯಕ್ಕೆ ಇದ್ಯಾವುದರ ಬಗ್ಗೆಯೂ ಯೋಚನೆ ಮಾಡುವುದು ಬೇಡ. ಹೊರಗಡೆ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಈಗ ಅಭಿಯಾನವನ್ನು ನೀವು ಉದ್ಘಾಟನೆ ಮಾಡಿ. ಇದನ್ನೆಲ್ಲ ನಾವು ಕುಮಾರಪರ್ವತದಿಂದ ವಾಪಸ್ಸು ಬಂದ ನಂತರ ನಿಧಾನವಾಗಿ ಮಾತಾಡೋಣ.’

ಮಾತಾಡುತ್ತಾ ಆಡುತ್ತಾ ಆನಂದ ನೀನೂ ಏನಾದರೂ ಹೇಳು ಎಂಬಂತೆ ತಿರುಗಿ ರಘುನಂದನನ ಮುಖ ನೋಡಿದ. ರಘುನಂದನ ತನಗೇನೂ ಹೇಳಲಿಕ್ಕಿಲ್ಲ ಎಂಬಂತೆ ಕಣ್ಣಾಡಿಸಿದವನು, ಇದ್ದಕ್ಕಿದ್ದಂತೆ ಎದ್ದು ನಿಂತು ಗುರುಗಳ ಪಾದಮುಟ್ಟಿ ನಮಸ್ಕರಿಸಿದ. ‘ನೀವು ಈಗ ನನ್ನ ಮಟ್ಟಿಗೆ ಪೂಜಾರ್ಹರಾದಿರಿ. ಯಾರು ಪಾರದರ್ಶಕವಾಗಿರುತ್ತಾರೋ ಅವರು ಗುರು ಅಂತ ನಮ್ಮಜ್ಜ ಹೇಳಿದ್ದರು’ ಎಂದ. ಆನಂದನಿಗೂ ಅವನ ಮಾತು ಬಹಳ ಮೆಚ್ಚುಗೆಯಾಯಿತು.

ಆನಂದ-ರಘುನಂದನರ ಜೊತೆ ಗುರುಗಳು ಹೊರಬಂದರು.

ಹುಡುಗರೆಲ್ಲ ಆಸಕ್ತಿಯಿಂದ ಕಾಯುತ್ತಿದ್ದರು. ಗುರುಗಳ ಜೊತೆ ಆನಂದ ಮತ್ತು ರಘು ಅಷ್ಟು ಹೊತ್ತು ಏನು ಮಾತಾಡಿರಬಹುದು ಎಂಬ ಕುತೂಹಲ ಅವರ ಮುಖದಲ್ಲೂ ಎದ್ದು ಕಾಣುತ್ತಿತ್ತು . ಗುರುಗಳು ಹೊರಗೆ ಬರುತ್ತಿದ್ದಂತೆ ಒಂದಷ್ಟು ಕ್ಯಾಮರಾಗಳು ಫಳ್ಳೆಂದವು. ವಿದ್ಯಾನಂದರು ಕೈಯೆತ್ತಿ ಫೊಟೋ ಬೇಡ ಎಂದರು. ಆದರೆ ಅದನ್ನು ಕೇಳುವುದಕ್ಕೆ ಯಾವ ಛಾಯಾಗ್ರಾಹಕರಿಗೂ ವ್ಯವಧಾನ ಇರಲಿಲ್ಲ.

ಆನಂದ ಗುರುಗಳು ಅಭಿಯಾನವನ್ನು ಉದ್ಘಾಟಿಸಬೇಕು ಅಂತ ಸಾರ್ವಜನಿಕವಾಗಿ ಅರಿಕೆ ಮಾಡಿಕೊಂಡ. ಗುರುಗಳು ದೀಪ ಬೆಳಗಿದರು. ರಘುನಂದನ ತಂದುಕೊಟ್ಟ ಹೂವಿನ ಕುಂಡವನ್ನು ಎತ್ತಿಹಿಡಿದರು. ಗಿಡನೆಡಿ, ಕಾಡು ಉಳಿಸಿ ಆಂದೋಲನ ತನ್ಮೂಲಕ ಆರಂಭವಾಯಿತು. ಕಾಡು ದಟ್ಟವಾಗಲಿ ಅಂತ ಘೋಷಿಸಿದರು. ಆ ಸಂದರ್ಭಕ್ಕೆ ತಕ್ಕಂಥ ಶ್ಲೋಕವೊಂದನ್ನು ಪಠಿಸಿದರು;

ಅಶ್ವತ್ಥಮೇಕಂ ಪಿಚಮಂದಮೇಕಂ।
ನ್ಯಗ್ರೋಧಮೇಕಂ ದಶಚಿಂಚಣೀಕಂ।
ಕಪಿತ್ಥಬಿಲ್ವಾಮಲತೀತ್ರಯಂತೀ।
ಪಂಚಾಮ್ರರೋಪಿ ನರಕಂ ನಪಶ್ಯೇತ್‌।।

ಅಶ್ವತ್ಧದ ಮರವೊಂದು, ಬೇವಿನ ಮರವೊಂದು, ಆಲದ ಮರವೊಂದು, ಹತ್ತು ಹುಣಸೆ ಮರ, ತಲಾ ಮೂರು ಮೂರು ಬೇಲ, ಬಿಲ್ವ ಮತ್ತು ನೆಲ್ಲಿಯ ಗಿಡಗಳು, ಐದು ಮಾವಿನ ಮರ- ಇಷ್ಟನ್ನು ತನ್ನ ಜೀವಿತಕಾಲದಲ್ಲಿ ಯಾರು ನೆಡುತ್ತಾನೋ ಅವನಿಗೆ ನರಕದ ಅನುಭವವಾಗುವುದಿಲ್ಲ ಅಂದರು. ನರಕಕ್ಕೆ ಹೋಗುವುದಿಲ್ಲ ಅನ್ನುವ ಬದಲು ನರಕದ ಅನುಭವವಾಗುವುದಿಲ್ಲ ಅಂತ ಹೇಳಿದ್ದು ರಘುನಂದನನಿಗೆ ತುಂಬಾ ಹಿಡಿಸಿತು.

ಗುರುಗಳ ಮಾತಾದ ನಂತರ ಅಭಿಯಾನ ದೇವಸ್ಥಾನದ ಅಂಗಳ ಬಿಟ್ಟು ಕದಲಿತು. ಆಯಾ ತಂಡದ ನಾಯಕರು ತಮ್ಮ ತಮ್ಮ ಹುಡುಗರನ್ನು ನಿಯಂತ್ರಿಸುತ್ತಾ ಅವರು ಗುಲ್ಲೆಬ್ಬಿಸದಂತೆ ಕಾಯುತ್ತಾ ಹೆಜ್ಜೆ ಹಾಕಿದರು. ವೆಂಕಪ್ಪ ಗೌಡರ ಅಂಗಳ ಸೇರುವ ಹೊತ್ತಿಗೆ ಸಂಜೆ ಕಂತಿತ್ತು.

*

ಬೆಳಗ್ಗೆ ಅಷ್ಟು ಹೊತ್ತಿಗೇ ತಂಡ ಕುಮಾರ ಪರ್ವತ ಹತ್ತುವುದಕ್ಕೆ ಆರಂಭಿಸಿತು. ವಿದ್ಯಾರ್ಥಿಗಳಲ್ಲಿ ಉತ್ಸಾಹವಿತ್ತೇ ವಿನಾ ಹತ್ತುವ ಕ್ರಮ ಗೊತ್ತಿರಲಿಲ್ಲ. ಸಾಕಷ್ಟು ಟ್ರೆಕಿಂಗ್‌ ಮಾಡಿ ಅಭ್ಯಾಸವಿದ್ದ ರಘು ಮತ್ತು ಆನಂದ ಅವರನ್ನು ನಿಧಾನವಾಗಿ ನಡೆಸಿಕೊಂಡು ಮೇಲೇರಿದರು. ಅರ್ಧ ಹತ್ತುವಷ್ಟರಲ್ಲೇ ಹುಡುಗರೆಲ್ಲ ಪೂರ್ತಿ ಸುಸ್ತಾದರು. ಹುಡುಗಿಯರು ಮಾತ್ರ ಹುರುಪು ಕಳಕೊಂಡಿರಲಿಲ್ಲ. ತನ್ನ ಗುಂಪನ್ನು ಜಾಗ್ರತೆಯಿಂದ ಮುನ್ನೆಡೆಸುತ್ತಾ ಬರುತ್ತಿದ್ದ ನರ್ಮದೆಯನ್ನು ರಘುನಂದನ ದೂರದಿಂದಲೇ ನೋಡಿದ. ಅವಳ ಹಣೆಯ ಮೇಲೆ ಬೆವರ ಮಣಿಗಳು ಮೆರವಣಿಗೆ ಹೊರಟಿದ್ದವು. ಅವನ್ನು ಒರೆಸಿಕೊಳ್ಳಬೇಕು ಅನ್ನುವುದೂ ನೆನಪಿಲ್ಲದಂತೆ ಆಕೆ ಅವಡುಗಚ್ಚಿ ಹತ್ತುತ್ತಿದ್ದಳು.

ಹುಡುಗರೆಲ್ಲ ವಿಶ್ರಾಂತಿ ಬೇಕು ಅಂದದ್ದರಿಂದ ಅರ್ಧಗಂಟೆ ಕುಳ್ಳಿರಿಸಿ ಅವರಿಗೆಲ್ಲ ನೀರು ಕುಡಿಸಿದ ಆನಂದ. ಆನಂದನಿಗೆ ತನಗೂ ಹತ್ತುವುದು ಕಷ್ಟವಾಗುತ್ತಿದೆ ಅನ್ನಿಸಿತು. ತಲೆನೋವು ಇದ್ದಕ್ಕಿದ್ದ ಹಾಗೆ ಕಾಡತೊಡಗಿತು. ಅದರತ್ತ ಗಮನ ಕೊಟ್ಟರೆ ಅದು ಹೆಚ್ಚಾಗುತ್ತದೆ ಅನ್ನುವ ಕಾರಣಕ್ಕೆ ಅದನ್ನು ಕಡೆಗಣಿಸುತ್ತಾ ಅವನು ಓಡಾಡುತ್ತಿದ್ದ.

ಹುಡುಗಿಯರು ತಮಗೆ ವಿಶ್ರಾಂತಿ ಬೇಡ ಅಂದಿದ್ದರು. ಪತ್ರಕರ್ತರಲ್ಲಿ ಕೆಲವರು ತಾವು ಮೇಲೆ ಬರುವುದಿಲ್ಲ ಎಂದು ಹೇಳಿ ಅರ್ಧದಿಂದ ಇಳಿಯುವ ಉತ್ಸಾಹ ತೋರಿಸಿದರು. ಇದ್ಯಾಕೋ ತೊಂದರೆಯಾಗುತ್ತದೆ ಅನ್ನಿಸಿ ಅಲ್ಲೇ ಪತ್ರಿಕಾಗೋಷ್ಠಿ ಮಾಡೋಣ ಅಂತ ರಘುನಂದನ ಸೂಚಿಸಿದ. ಆನಂದನಿಗೂ ಅದು ಸರಿಯೆನ್ನಿಸಿತು.

ಆದರೆ ಹುಡುಗಿಯರು ಪೂರ್ತಿ ಹತ್ತಲೇಬೇಕು ಅಂತ ಪಟ್ಟುಹಿಡಿದರು. ಪತ್ರಿಕಾಗೋಷ್ಠಿ ಮುಗಿಸುವುದು. ನಂತರ ಯಾರ್ಯಾರಿಗೆ ಮೇಲೆ ಹತ್ತಬೇಕು ಅನ್ನಿಸುತ್ತದೋ ಅವರು ಮೇಲೆ ಏರುವುದು. ಉಳಿದವರು ಅಲ್ಲೇ ವಿಶ್ರಾಂತಿ ತೆಗೆದುಕೊಂಡು ತುದಿಗೆ ಹತ್ತಿದವರು ಬರುವ ತನಕ ಕಾಯುವುದು ಎಂದು ಆನಂದ ಘೋಷಿಸಿದ. ಪತ್ರಕರ್ತರು ಸಂತೋಷಚಿತ್ತರಾದರು.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X