ಎಲ್ಲಾ ಮಾಯವೋ ಸಿವನೆ ಹಳ್ಳಿಯಲಿ ಎಲ್ಲಾ ಮಾಯವೊ

By: * ವಿವೇಕ ಪಟಗಾರ, ಬೆಟ್ಕುಳಿ, ಉ.ಕ.
Subscribe to Oneindia Kannada
Old traditions cultures vanishing from villages
20 ವರ್ಷದ ಹಿಂದೆ ಊರಿನಲ್ಲಿ (ಹಳ್ಳಿಯಲ್ಲಿ) ಒಂದು ಮನೆಯಲ್ಲಿ ಮದುವೆ, ಪೂಜೆ, ಗೃಹಪ್ರವೇಶ ಏನೇ ಮುಖ್ಯವಾದ ಕಾರ್ಯವಿರಲಿ, ಅಥವಾ ಊರಿನ ದೇವಸ್ಥಾನದಲ್ಲಿ ಉತ್ಸವವಿರಲಿ, ಅಂದು ಊರಿನ ಎಲ್ಲರಿಗೂ ಎಲ್ಲರ ಸಹಕಾರದ ಅಗತ್ಯವಿತ್ತು. ಸಹಕಾರಕ್ಕಾಗಿಯೇ ಮನೆ ಮನೆಗೆ ಹೋಗಿ ಚಪ್ಪರದ ವಿಳ್ಯ, ಮದುವೆ ವೀಳ್ಯ, ಅಡುಗೆ ವಿಳ್ಯ ಎಂದು ಪ್ರತ್ಯೇಕ ಆಮಂತ್ರಣ ಇರುತ್ತಿತ್ತು. ಆ ಆಮಂತ್ರಣ ಸ್ವೀಕರಿಸಿದ ಮೇಲೆ ಆ ಕಾರ್ಯಕ್ಕೆ ಮನೆಯಿಂದ ಒಬ್ಬರ ಉಪಸ್ಥಿತಿ ಕಡ್ಡಾಯವಾಗಿತ್ತು.

ಊರಿನಲ್ಲಿ ಸಂಕ್ರಾತಿ ಹಬ್ಬ, ಗಡಿಹಬ್ಬ, ಹಗರಣ, ಭಜನೆ ಈ ಎಲ್ಲಾ ದೈವಿಕ ಕಾರ್ಯಗಳಲ್ಲಿಯೂ ಎಲ್ಲಾ ಜನಾಂಗದವರು ಭಾಗವಹಿಸಿ ಆಯಾಯ ಕಾರ್ಯವನ್ನು ಭಕ್ತಿಯಿಂದ ಮಾಡುತ್ತಿದ್ದರು. ಯಾರದೇ ಮನೆಯಲ್ಲಿ ಒಂದು ಸಾವು ಸಂಭವಿಸಿದ್ದರೂ ಊರಿಗೇ ಊರೇ ಬಂದು ಸಾಂತ್ವನ ಹೇಳುತ್ತಿತ್ತು ಮತ್ತು ಮುಂದಿನ ಕಾರ್ಯವನ್ನು ನೆರವೇರಿಸುತ್ತಿತ್ತು. ಅಂದರೇ ಊರಿನಲ್ಲಿ ಸಂಭ್ರಮವಿರಲಿ ಅಥವಾ ದುಃಖವಿರಲಿ ಎರಡರಲ್ಲಿಯೂ ಊರಿಗೆ ಊರೇ ಭಾಗಿಯಾಗುತ್ತಿತ್ತು. ಪರಸ್ಪರರ ಬಗ್ಗೆ ಮತ್ತು ಪ್ರತಿಯೊಂದು ಕಾರ್ಯದ ಬಗ್ಗೆ ಎಲ್ಲರಿಗೂ ಭಕ್ತಿ ಶ್ರದ್ಧೆಯಿತ್ತು, ಜೊತೆಗೆ ಸಹಕಾರ ಭಾವನೆ ಇತ್ತು.

ಬೇಸಿಗೆಯಲ್ಲಿ ಯಕ್ಷಗಾನ, ದೊಡ್ಡಾಟಗಳಿರುತ್ತಿದ್ದವು. ಬೇಸಿಗೆ ರಜೆಗೆ ಬರಲು ಊರಿನ ಮಕ್ಕಳು ಮೊಮ್ಮಕ್ಕಳು ಕಾತುರದಿಂದ ಕಾಯುತ್ತಿದ್ದರು. ಅಜ್ಜ ಹೇಳುವ ಕಥೆಯನ್ನು ಕೇಳಲು, ಚಿನ್ನಿದಾಂಡು ಆಟ ಆಡಲು, ಮೊಮ್ಮಕ್ಕಳು ಹಪಹಪಿಸುತ್ತಿದ್ದರು. ಪಟ್ಟಣದಿಂದ ಆ ಮಕ್ಕಳು ಬಂದರೆ ಇತರ ಹಳ್ಳಿಯ ಮಕ್ಕಳಿಗೂ ಸಂತಸ. ಹಣ್ಣಣ್ಣು ಅಜ್ಜ ಅಜ್ಜಿಯರಂತೂ ಮೊಮ್ಮಕ್ಕಳನ್ನು ಕಂಡಕೂಡಲೆ ಚಿಕ್ಕಮಕ್ಕಳಂತಾಗಿ ಬಿಡುತ್ತಿದ್ದರು. ಆದರೆ, ಇಂದಿನ ಹಳ್ಳಿಯಲ್ಲಿ 20 ವರ್ಷದ ಹಿಂದಿನ ಯಾವುದೇ ಚಟುವಟಿಕೆಗಳು ಕಂಡುಬರುತ್ತಿಲ್ಲ.

ಮದುವೆ ಎಂಬುದು ಒಂದು ನಾಟಕದಲ್ಲಿ ಬಂದು ಹೋಗುವ ದೃಶ್ಯದಂತಾಗಿದೆ. ಮೊದಲಿನ ಸಂಭ್ರಮ ಉಳಿದೇ ಇಲ್ಲ. ಈಗ ಮದುವೆ ಆಗಲು ಹುಡುಗ ಹುಡುಗಿ, ಕೈಯಲ್ಲಿ ಸಾಕಷ್ಟು ದುಡ್ಡು ಇದ್ದರೆ ಸಾಕು ಯಾರ ಸಹಕಾರವೂ ಬೇಕಾಗಿಲ್ಲ. ಲೋಕಲ್ ಟಿವಿ ಚಾನಲ್ ಮತ್ತು ಸ್ಥಳೀಯ ದಿನಪತ್ರಿಕೆಯಲ್ಲಿ ಆಮಂತ್ರಣವನ್ನು ನೀಡುವುದು, ಕಲ್ಯಾಣ ಮಂಟಪಕ್ಕೆ ಹೋಗಿ ದುಡ್ಡು ಕೊಟ್ಟು ಬಂದರೆ ಆಯಿತು. ಆ ನಂತರ ಮದುವೆ ದಿನ ಹೋಗಿ ಫಟಾಫಟ್ ಮದುವೆ ಶಾಸ್ತ್ರ ಮುಗಿಸಿಬಿಡುವುದು. ಈಗ, ಮನೆಮನೆಗೆ ಹೋಗಿ ಅಡುಗೆ ಸಾಮಗ್ರಿ ಸಂಗ್ರಹಿಸುವ ಶ್ರಮವಿಲ್ಲ. ಬೇರೆ ಬೇರೆ ರೀತಿಯ ವೀಳ್ಯ ನೀಡುವ ಚಿಂತೆಯಿಲ್ಲ. ಮಂಟಪ ಕಟ್ಟುವ ಅಗತ್ಯವಿಲ್ಲ. ಬಾಳೆ ಎಲೆಯನ್ನು ಹುಡುಕಬೇಕಾಗಿಲ್ಲ. ಯಾರ ಹಂಗೂ ಬೇಕಾಗಿಲ್ಲ.

ಊರಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಟಿವಿ ಆಕ್ರಮಿಸಿಕೊಂಡಿವೆ. ಮೊಮ್ಮಕಳೊಂದಿಗೆ ಕಥೆ ಹೇಳಬೇಕಾದ ಅಜ್ಜಿ-ಅಜ್ಜ ಧಾರಾವಾಹಿ ನೋಡುವಲ್ಲಿ ಮಗ್ನರಾಗಿದ್ದಾರೆ. ಗಿಲ್ಲಿ ದಾಂಡು, ಬುಗುರಿ, ಮರಕೋತಿಯಾಟ, ಬಯಲಾಟ, ಮುಟ್ಟಾಟ, ಮೀನು ಹಿಡಿಯುವುದು ಮಾಯವಾಗಿ ಟಿವಿ, ಟ್ಯೂಶನ್, ಬೇಸಿಗೆ ಶಿಬಿರ, ಕ್ರಿಕೆಟ್ ಇವು ಇಂದಿನ ಮಕ್ಕಳ ಬಾಲ್ಯವಾಗಿದೆ. ಮಕ್ಕಳ ಭವಿಷ್ಯದಿಂದಾಗಿ ದುಡ್ಡು ಮಾಡುವ ಔಷಧವಿಲ್ಲದ ಕಾಯಿಲೆ ಹಳ್ಳಿಯಲ್ಲಿಯೂ ಪ್ರಾರಂಭವಾಗಿದೆ. ಕಾಟಾಚಾರಕ್ಕೆ ಹಳ್ಳಿಗೆ ಕುಟುಂಬ ಸಮೇತರಾಗಿ ಬಂದರೂ ಮೊದಲಿನ ಆತ್ಮೀಯತೆ ಕಾಣೆಯಾಗುತ್ತಿದೆ. ಹಳ್ಳಿ ಮಂದಿ ಪ್ಯಾಟೆಗ್ ಬಂದ್ರುದಂಥ ಟಿವಿ ಕಾರ್ಯಕ್ರಮಗಳು ಹಳ್ಳಿಗರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿವೆ.

ಸೂಕ್ಮವಾಗಿ ಗಮನಿಸಿದಾಗ ನಾವು ಏನೋ ಕಳೆದುಕೊಳ್ಳುತ್ತಿದ್ದೇವೆ ಎಂಬುದು ಅರಿವಿಗೆ ಬರುತ್ತದೆ. ಹಳ್ಳಿಯಲ್ಲಿನ ಸಹಕಾರ ತತ್ವ ಎಂಬುದು ಈ ರೀತಿಯ ಹಲವಾರು ಕಾರಣಗಳಿಂದ ಮರೆಯಾಗುತ್ತಿರುವುದನ್ನು ನಾವು ಗುರುತಿಸುತ್ತಿಲ್ಲ. ಪಟ್ಟಣದಲ್ಲಿ ಅಕ್ಕದಲ್ಲಿ ಏನಾದರೂ ಆದರೆ ಪಕ್ಕದಲ್ಲಿರುವವರಿಗೆ ಗೊತ್ತಾಗುವುದೇ ಇಲ್ಲ. ನಮಗೂ ಅವರಿಗೂ ಸಂಬಂಧವೇ ಇಲ್ಲ ಎಂಬಂತೆ ಜೀವನ ಸಾಗುತ್ತಿರುತ್ತದೆ. ಇದೇ ರೀತಿಯ ವಾತಾವರಣ ಹಳ್ಳಿಗಳಲ್ಲಿ ಪ್ರಾರಂಭವಾಗಿರುವುದು ನಿಜಕ್ಕೂ ದುರದೃಷ್ಟಕರ.

ಇಂತಹ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಪ್ರಾರಂಭಿಸಿರುವ ಪ್ರಗತಿಬಂಧು ಗುಂಪು ಸಹಕಾರ ತತ್ವವನ್ನು ಹಳ್ಳಿಗಳಲ್ಲಿ ಸಾರಲು ಪ್ರಯತ್ನಿಸುತ್ತಿದೆ. ಕನಿಷ್ಠ ಪಕ್ಷ ವಾರದಲ್ಲಿ ಒಂದು ದಿನ ಗಂಡಸರು ಒಂದೊಂದು ಮನೆಯಲ್ಲಿ ಗುಂಪಿನ ಎಲ್ಲರನ್ನೂ ಸೇರಿ ಕೆಲಸ ಮಾಡುವ ರೂಢಿಯನ್ನು ಪ್ರಾರಂಭಿಸುತ್ತಿದೆ. ಮಹಿಳೆಯರು ವಾರದ ಒಂದು ದಿನದ 2 ಗಂಟೆಯಾದರೂ ಉಳಿತಾಯ ಸಂಘದ ಹೆಸರಿನಲ್ಲಿ ಪರಸ್ಪರ ಮಾತನಾಡುತ್ತಿದ್ದಾರೆ. ಇದು ನಮ್ಮ ಹಿಂದಿನವರು ನಡೆಸಿಕೊಂಡು ಬಂದ ಕೆಲವೊಂದು ಉತ್ತಮ ಸಂಪ್ರದಾಯವನ್ನು ಬೆಳಸುವ ನಿಟ್ಟಿನಲ್ಲಿ ಶ್ಲಾಘನೀಯ ಕಾರ್ಯವಾಗಿದೆ.

ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ
ತಳಮಳಿಸುತಿದೆ ಲೋಕ-ಮಂಕುತಿಮ್ಮ

(ಹಿಂದಿನ ಕಾಲದಲ್ಲಿ ಇದ್ದಂತಹ ಶ್ರದ್ಧೆ, ಭಕ್ತಿಗಳನ್ನು ನಾವು ಈಗ ಕಾಣುತ್ತಿಲ್ಲ, ಕಾಲದ ಜೊತೆಗೆ ಹಳೆಯ ನಂಬಿಕೆಗಳು ಕಳೆದು ಹೋಗುತ್ತಿದೆ. ಬರುತ್ತಿರುವ ಕಾಲದಲ್ಲಿ ನಂಬಿಕೆಗಳಿಗೆ ಬೆಲೆಯೇ ಇಲ್ಲದಂತಾಗಿರುವಾಗ ಹೊಸ ನಂಬಿಕೆ ಹುಟ್ಟುತ್ತಿಲ್ಲ. ಕುಂಟ ಅಥವಾ ಕುರುಡನು, ಬಹುಕಾಲ ಅಭ್ಯಾಸವಾಗಿದ್ದ ಮನೆಯೂ ಬಿದ್ದು ಹೋದಾಗ, ತೊಂದರೆ ಪಡುವಂತೆ, ನಮ್ಮ ಲೋಕವು ಸಹಾ ತಳಮಳಿಸುತ್ತಿದೆ.)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Now-a-days old traditions, cultures are getting vanished from villages in Karnataka. Marriages, temple festivals are not being celebrated like 20 years before. What is the reason for it? An eye opening article by Vivek Patgar, Betkuli, Uttara Kannada.
Please Wait while comments are loading...