• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ವಾಭಿಷ್ಟ ಸಿದ್ಧಿಸುವ ಶಿರಸಿ ಮಾರಿಕಾಂಬಾ

By Prasad
|
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಒಂಬತ್ತು ದಿನಗಳ ಮಾರಿಕಾಂಬಾ ದೇವಿಯ ಉತ್ಸವ ಫೆಬ್ರವರಿ 23, ಮಂಗಳವಾರದಂದು ಅತ್ಯಂತ ವಿಜೃಂಭಣೆಯಿಂದ ಆರಂಭವಾಗಿದೆ. ಸರ್ವಾಭಿಷ್ಟವನ್ನು ಸಿದ್ಧಿಸುತ್ತಾಳೆಂದು ನಂಬಿಕೆಯಿಂದ ಕರ್ನಾಟಕ ಎಲ್ಲೆಡೆ ಮಾತ್ರವಲ್ಲಿ ನೆರೆಯ ಮಹಾರಾಷ್ಟ್ರ, ಆಂಧ್ರ, ಕೇರಳದಿಂದಲೂ ಭಕ್ತಾದಿಗಳು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಮಾರ್ಚ್ 3ರ ಬುಧವಾರದಂದು ಉತ್ಸವಕ್ಕೆ ತೆರೆಬೀಳಲಿದೆ.

* ಡಾ.ಬಾಲಕೃಷ್ಣ ಹೆಗಡೆ, ಶಿವಮೊಗ್ಗ

ಕರುಣಿಸು ಜಗದಂಬೆ ಶ್ರೀ ಮಾರಿಕಾಂಬೆ ಇದು ಈ ನಾಡಿನ ಆಸ್ತಿಕರ ನಾಲಿಗೆ ತುದಿಯಲ್ಲಿ ನಲಿಯುವ ಮಾತು. ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಕುರಿತಾಗೇ ಈ ಭಕ್ತಿ ಪರವಶವಾದ ಪ್ರಾರ್ಥನೆ ಲೋಕಾರೂಢಿಯಲ್ಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಮಾಘ ಮಾಸದಲ್ಲಿ ನಡೆಯುವ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಕರ್ನಾಟಕದಲ್ಲೇ ಅತೀ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂಭತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಈ ಜಾತ್ರೆ ಕೋಮು ಸೌಹಾರ್ದತೆಯ ಪ್ರತೀಕ ಎಂದರೂ ಅತಿಶಯೋಕ್ತಿಯಾಗಲಾರದು.

ಕೇವಲ ಕರ್ನಾಟಕದ ವಿವಿದ ಮೂಲೆಗಳಿಂದಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕೇರಳದಿಂದಲೂ ಭಕ್ತರು ಲಕ್ಷಾನುಲಕ್ಷ ಸಂಖ್ಯೆಯಲ್ಲಿ ಈ ಜಾತ್ರೆಗೆ ಆಗಮಿಸುವುದು ವಿಶೇಷ. ಸಾಗರೋಪಾದಿಯಲ್ಲಿ ಈ ಜಾತ್ರೆಗೆ ಹರಿದು ಬರುವ ಜನಸಾಗರ ತಮ್ಮ ತನು, ಮನ, ಧನಗಳ ಸೇವೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಯಾವುದೇ ಜಾತಿ, ಮತ, ಪಂಥಗಳ ಭೇದ ಭಾವವಿಲ್ಲದೆ ಇಲ್ಲೆ ಶೀ ದೇವಿಗೆ ಹರಕೆ ಒಪ್ಪಿಸಲಾಗುತ್ತದೆ. ತಮ್ಮ ಇಷ್ಟಾರ್ಥಗಳನ್ನು ಶ್ರೀ ಮಾರಿಕಾಂಬೆ ಸಿದ್ಧಿಸುತ್ತಾಳೆಂಬ ನಂಬಿಕೆ ಭಕ್ತರಲ್ಲಿದೆ. ಮಾರಿಕಾಂಬಾ ಜಾತ್ರೆ ಎಂದರೆ ಇಡೀ ಶಿರಸಿಗರಿಗೆ ಸಂಭ್ರಮವೋ ಸಂಭ್ರಮ. ಅಲ್ಲಿಯ ಪ್ರತಿ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿರುತ್ತದೆ. ಮಾರಿಕಾಂಬಾ ದೇವಸ್ಥಾನದಿಂದ ಸುಮಾರು 1.5 ಕಿ.ಮೀ.ದೂರದಲ್ಲಿರುವ ಬಿಡಕಿಬೈಲ್(ಹಳೆ ಬಸ್ ನಿಲ್ದಾಣದ ಸಮೀಪ)ನಲ್ಲಿ ಈ ಜಾತ್ರೆ 9 ದಿನಗಳ ಕಾಲ ನಡೆಯುತ್ತದೆ.

ಜಾತ್ರೆಗೆ ಬರುವ ಭಕ್ತ ಸಮುದಾಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕುಡಿಯುವ ನೀರು, ಶೌಚಾಲಯ, ಆರೋಗ್ಯ, ಸ್ವಾಸ್ತ್ಯ ನೋಡಿಕೊಳ್ಳುವ ಜವಾಬ್ದಾರಿಯನ್ನು ಶ್ರೀಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಇತರರ ಸಹಯೋಗದೊಂದಿಗೆ ನಿಭಾಯಿಸುತ್ತದೆ. ಸುಮಾರು ಮೂರುವರೆ ಎಕರೆ ಜಾಗದ ಪ್ರದೇಶದಲ್ಲಿ ಈ ಜಾತ್ರಾ ಮಹೋತ್ಸವ ನಡೆಯುತ್ತದೆ. ಇಲ್ಲಿ ಒಂದು ಖಾಯಂ ಮಾರಿ ಗದ್ದುಗೆ ನಿರ್ಮಿಸಲಾಗಿದ್ದು ಜಾತ್ರೆಯ ಆರಂಭದ ದಿನ ಆಕರ್ಷಕ ಶೀದೇವಿಯ ವಿಗ್ರಹವನ್ನು ಈ ಗದ್ದುಗೆಯ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ.

ಜಾತ್ರೆಯಲ್ಲಿ ದೇವಿಗೆ ಹರಕೆ ಒಪ್ಪಿಸಲು ಸಾಂಪ್ರದಾಯಿಕ ಬಳೆ, ಕೊಳ್ನುಗುಲು, ಹಣಿಗೆ, ಮನೋರಂಜನಾ ಸಾಮಗ್ರಿಗಳು ಇತ್ಯಾದಿಗಳ ಖರೀದಿಗೆ ಅನುಕೂಲವಾಗಲೆಂದು ಗದ್ದುಗೆಯ ಸುತ್ತ ಮುತ್ತ ವಿವಿಧ ನಮೂನೆಯ ಅಂಗಡಿ ಮುಂಗಟ್ಟುಗಳನ್ನೂ ಸ್ಥಾಪಿಸಲಾಗುತ್ತದೆ. ಮಹಿಳೆಯರಿಗಾಗಿಯೇ ಪ್ರತ್ಯೇಕ ಮಳಿಗೆಗಳನ್ನು ಸ್ಥಾಪಿಸುವುದರ ಮೂಲಕ ಅವರಿಗೆ ಭದ್ರತೆ ಒದಗಿಸುವುದನ್ನು ಕಾಣುತ್ತೇವೆ.

ಇತಿಹಾಸ : ಶೀ ಮಾರಿಕಾಂಬೆಯ ಸ್ಥಾಪನೆಯಾಗಿ ನಂತರ ಸುಮಾರು ನೂರು ವರ್ಷಗಳ ಕಾಲದ ದೇವಸ್ಥಾನದ ಇತಿಹಾಸ ಅಸ್ಪಷ್ಟವಾದರೂ ಒಂದು ದಾಖಲೆಯ ಪ್ರಕಾರ ಕ್ರಿ.ಶ.1790ರಲ್ಲಿದ್ದ ಶಿರಸಿಯ ಪ್ರಸಿದ್ಧ ಧಾಕಪ್ಪ ಮನೆತನದ ವ್ಯಕ್ತಿಯೊಬ್ಬರು ದೇವಸ್ಥಾನದ ಗರ್ಭಗುಡಿ ಶಿಖರ, ರಂಗಮಂಟಪ ಮತ್ತು ಚಂದ್ರಶಾಲೆಗಳನ್ನು ಕಟ್ಟಿಸಿದರೆಂದು ತಿಳಿದುಬರುತ್ತದೆ. ಇಸಳೂರು ಮನೆತನದ ವಿಠ್ಠಲರಾವ್ ಬಿನ್ ರಂಗಪ್ಪನವರು ಇರಡನೆಯ ಪ್ರಸಿದ್ಧ ಧರ್ಮದರ್ಶಿಗಳಾಗಿದ್ದು ಶಿರಸಿ ನಗರದ ರಾಯರಪೇಟೆಯು ಅವರ ನೆನಪಿನ ಕುರುಹಾಗಿ ಇಂದಿಗೂ ನಮ್ಮ ಮುಂದಿದೆ. 1863ರಲ್ಲಿ ಧಾರ್ಮಿಕ ಸಂಸ್ಥೆಗಳೆಲ್ಲ ಹಿಂದೂ ದೇವಾಲಯ ಕಮೀಟಿಯ ನಿಯಂತ್ರಣಕ್ಕೆ ಒಳಪಟ್ಟವು. ಆದರೆ ಈ ದೇವಸ್ಥಾನ ಸುಮಾರು 60-70 ವರ್ಷಗಳ ಕಾಲ ಅಂದರೆ 1925ರತನಕ ಎಸಳೂರ ಮನೆತನದವರ ಆಡಳಿತಕ್ಕೆ ಒಳಪಟ್ಟಿತ್ತು.

ವಿಠ್ಠಲರಾಯರ ನಂತರ ವೆಂಕಟ್ರಾವ್ ಶೇಷಗಿರಿರಾವ್, ಅನಂತರಾವ್ ಮತ್ತು ಎರಡನೇ ವಿಠ್ಠಲರಾವ್ ಆಡಳಿತ ನಡೆಸಿದ್ದರು. 1873ರಲ್ಲಿ ದೇವಸ್ಥಾನದ ಎದುರು ಇರುವ ನಗಾರಖಾನೆ ನಿರ್ಮಾಣವಾಗಿ ಜಾತ್ರೆ ನಡೆಯಿತು. 1925ರಲ್ಲಿ ವಿಠ್ಠಲರಾಯರ ಕಾಲದಲ್ಲಿ ಶಿರಸಿಯ ಪ್ರಖ್ಯಾತ ಕಲಾವಿದರಾಗಿದ್ದ ಗುರುರಾಯ ಶೇಠ್ ರಾಯ್ಕರ್ ಅವರು ದೇವಿಗೆ ಸುಂದರವಾದ ಸುವರ್ಣ ಕಿರೀಟವನ್ನು ತಯಾರಿಸಿದ್ದರು. ಕಾಲಕ್ರಮೇಣ ಶ್ರೀ ದೇವಿಗೆ ಭಕ್ತಾದಿಗಳಿಂದ ಸುವರ್ಣ, ರಜತ, ವಜ್ರ, ವೈಢೂರ್ಯಗಳ ಆಭರಣಗಳು ದಾನದ, ಹರಕೆಯ ರೂಪದಲ್ಲಿ ಬರಲಾರಂಭಿಸಿದವು. ಅತ್ಯಂತ ವಿರಳ, ನಯನಮನೋಹರ ರತ್ನಾಭರಣಗಳನ್ನು ಇಲ್ಲಿ ಕಾಣಬಹುದು.

ಕೋಣನ ಬಲಿಗೆ ತಡೆ : ಆರಂಭದಲ್ಲಿ ಜಾತ್ರೆಯ ಸಂದರ್ಭದಲ್ಲಿ ಶ್ರೀದೇವಿಗೆ ಕೋಣನ ಬಲಿ ಕೊಡುವ ಸಂಪ್ರದಾಯವಿತ್ತು. ಆದರೆ 1934ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಶಿರಸಿಗೆ ಭೇಟಿ ನೀಡಿದ್ದರು. ಅವರ ಅಹಿಂಸಾವಾದದ ಪ್ರಭಾವಕ್ಕೊಳಗಾದ ದೇವಸ್ಥಾನದ ಆಡಳಿತ ಮಂಡಳಿ ಕೋಣನ ಬಲಿ ನೀಡುವ ಅನಿಷ್ಟ ಪದ್ಧತಿಗೆ ತಿಲಾಂಜಲಿ ನೀಡಿತು. ದೇವಾಲಯದ ಎಡ ಪಾರ್ಶ್ವದಲ್ಲಿ ಇಂದಿಗೂ ಒಂದು ಕೋಣನನ್ನು ಕಾಣಬಹುದು. ಆದರೆ, ಬಲಿ ಕೊಡುವುದನ್ನು ನಿಷೇಧಿಸಲಾಗಿದೆ.

ಮುಕ್ತ ಪ್ರವೇಶ : ಮೊದಲು ಹರಿಜನರಿಗೆ ದೇವಾಲಯದೊಳಕ್ಕೆ ಪ್ರವೇಶ ನಿರ್ಬಂಧಿಸಲಾಗಿದ್ದು 1935ರಲ್ಲಿ ಅವರಿಗೂ ದೇವಾಲಯದಲ್ಲಿ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. 1955ರಲ್ಲಿ ರಾಜ್ಯ ಸರ್ಕಾರವು ಈ ದೇವಾಲಯದ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲಾ ನ್ಯಾಯಾಧೀಶರು ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು, ಸದಸ್ಯರನ್ನು 5 ವರ್ಷಗಳ ಅವಧಿಗೆ ನೇಮಿಸುವ ರೂಢಿ ಅಸ್ತಿತ್ವದಲ್ಲಿದೆ. ದೇವಸ್ಥಾನ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವೂ ಆಗಿದೆ.

ಅಪೂರ್ವ ಕಾವಿ ಕಲೆ : ಕಲಾ ಪ್ರಕಾರಗಳಲ್ಲಿ ವಿಶಿಷ್ಟವಾದ ಕಾವಿ ಕಲೆ ಇಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶ. ಈ ದೇವಸ್ಥಾನದ ಹೊರ ಭಿತ್ತಿ ಹಾಗೂ ಪ್ರದಕ್ಷಿಣಾ ಪಥದ ಗೋಡೆಗಳ ಮೇಲೆ ಕಾವಿ ಬಣ್ಣದ ಪೌರಾಣಿಕ ಹಾಗೂ ಲೌಕಿಕ ಚಿತ್ರಗಳು ದೇವಾಲಯಕ್ಕೆ ಮೆರಗು ತಂದಿದೆಯಲ್ಲದೆ ಪ್ರವಾಸಿಗರನ್ನು ಅಪರೂಪದ ಕಾವಿ ಕಲೆಯತ್ತ ಆಕರ್ಷಿಸುವಲ್ಲಿಯೂ ಯಶಸ್ವಿಯಾಗಿದೆ. ಜಾತ್ರೆ ಹೊರತುಪಡಿಸಿ ದೇವಸ್ಥಾನದಲ್ಲಿ ಪ್ರತಿ ವರ್ಷ ನವರಾತ್ರಿ, ದೀಪಾವಳಿ, ಕಾರ್ತೀಕ ದೀಪೋತ್ಸವಗಳೂ ವಿಜೃಂಭಣೆಯಿಂದ ನಡೆಯುತ್ತವೆ.

ಹಾಗಾದರೆ ತಡ ಏಕೆ? ಬನ್ನಿ, ಮಾರೆಮ್ಮನೆ ಜಾತ್ರೆಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more