• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರ್ಚಾಲಿನಲ್ಲಿ ಕನ್ನಡ ಸಂಸ್ಕೃತ ಹಾಲುಜೇನು

By Staff
|
ಸಂಸ್ಕೃತ ವಿಶ್ವವಿದ್ಯಾಲಯ ಬೇಕೇ ಬೇಡವೇ ಎಂಬ ಚರ್ಚೆಗಳು ಕರ್ನಾಟಕದಲ್ಲಿ ಈ ಹೊತ್ತು ಚಾಲ್ತಿಯಲ್ಲಿದೆ. ಇದಕ್ಕೂ ಮುನ್ನ, ಅಂದರೆ 98 ವರ್ಷಗಳ ಹಿಂದೆಯೇ ಗಡಿನಾಡಲ್ಲಿ ಸ್ಥಾಪನೆಗೊಂಡ ಒಂದು ಕಾಲೇಜು ಸಂಸ್ಕೃತ ವಿಶ್ವವಿದ್ಯಾಲಯದಂತೆ ಕೆಲಸ ಮಾಡಿದೆ ಎಂದರೆ ಕೆಲವು ಪಂಡಿತರಿಗೆ ಗಾಬರಿಯಾಗಬಹುದು. ಸಂಸ್ಕೃತ, ಕನ್ನಡ ಸಾರಸ್ವತ ವಿದ್ಯೆಯನ್ನು ಹಾಲು ಜೇನಿನಂತೆ ನೂರ್ಕಾಲ ಧಾರೆಯೆರೆದ ಗಡಿನಾಡಿನ ಈ ಅಪೂರ್ವ ವಿದ್ಯಾಸಂಸ್ಥೆಗೆ ಹೋಗಿಬರೋಣ, ಬನ್ನಿ.

* ರವಿಶಂಕರ ದೊಡ್ಡಮಾಣಿ, ಕಾಸರಗೋಡು

ಕನ್ನಡ ನಾಡಿನ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಹೆಮ್ಮೆಯ ವಿದ್ಯಾಸಂಸ್ಥೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು. ಪ್ರೌಢಶಾಲೆಗೆ ಈಗ 98ರ ಹರೆಯ. ನಿಜ, ಗಡಿನಾಡು ಕಾಸರಗೋಡಿನ ಹಳ್ಳಿಮೂಲೆ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಸನ್ನಿಧಿಯಲ್ಲಿ 1911ನೇ ಇಸವಿಯಲ್ಲಿ ಸಂಸ್ಕೃತ ಪ್ರಾಥಮಿಕ ಶಾಲೆಯಾಗಿ ತೆರೆದುಕೊಂಡಾಗ ಜನರ ನಿರೀಕ್ಷೆಗಳು ಬಾನಗಲ ಹಬ್ಬಿಕೊಂಡಿದ್ದವು. ಆ ನಿರೀಕ್ಷೆಗಳಿಗೆಲ್ಲ ನೇತೃತ್ವ ವಹಿಸಿದ ಖಂಡಿಗೆ ಶಂಭಟ್ಟ ಮತ್ತು ಈಶ್ವರ ಭಟ್ಟರ ತ್ಯಾಗ, ಪರಿಶ್ರಮಗಳು ಇಂದಿಗೂ ಅವಿಸ್ಮರಣೀಯವಾಗಿ ಉಳಿದಿವೆ. ಮುಂದೆ 1915ರಲ್ಲಿ ಈ ಸಂಸ್ಥೆಯನ್ನು ನೀರ್ಚಾಲಿನ ಸುಂದರ ಪ್ರದೇಶಕ್ಕೆ ವರ್ಗಾಯಿಸಲಾಯಿತು. 1920ನೇ ಇಸವಿಯಲ್ಲಿ ಮದರಾಸು ವಿಶ್ವವಿದ್ಯಾನಿಲಯವು ಮಹಾಜನ ಪಾಠಶಾಲೆಯನ್ನು ಪ್ರಾಚ್ಯಕಲಾಶಾಲೆಯನ್ನಾಗಿ ಅಂಗೀಕರಿಸಿತು ಹಾಗೂ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ತರಗತಿ ನಡೆಸಲು ಅನುಮತಿ ನೀಡಿತು. ಇದು ಸಂಸ್ಕೃತ ಮತ್ತು ನೀರ್ಚಾಲಿನ ಉಚ್ಛ್ರಾಯ ಕಾಲವಾಗಿ ಬೆಳೆದುಬಂತು.

ಕನ್ನಡ ಮತ್ತು ಸಂಸ್ಕೃತ ಸಾರಸ್ವತ ಲೋಕದಲ್ಲಿ ಮಿಂಚಿದ ಹಿರಿಯ ಮಹಾನುಭಾವರಾದ ದರ್ಭೆ ನಾರಾಯಣ ಶಾಸ್ತ್ರಿ, ಚಾಂಗುಳಿ ಸುಬ್ರಾಯ ಶಾಸ್ತ್ರಿ, ಪೆರಡಾಲ ಕೃಷ್ಣಯ್ಯ, ಕಾಕುಂಜೆ ಕೃಷ್ಣ ಭಟ್ಟ ಮೊದಲಾದವರು ಇಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಯಕ್ಷಗಾನ ಭೀಷ್ಮ ಡಾ| ಶೇಣಿ ಗೋಪಾಲಕೃಷ್ಣ ಭಟ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಡಾ| ಕಯ್ಯಾರ ಕಿಞ್ಞಣ್ಣ ರೈ, ತುಳು ಭಾಷಾ ತಜ್ಞ, ಸಂಶೋಧಕ, ತ್ರಿಭಾಷಾ ಕವಿ ಡಾ| ವೆಂಕಟರಾಜ ಪುಣಿಂಚಿತ್ತಾಯ, ಸಾಹಿತಿ ರಾ.ಮೊ. ವಿಶ್ವಾಮಿತ್ರ ಹೀಗೆ ಈ ಸಂದರ್ಭದಲ್ಲಿ ಕನ್ನಡದ ನಡೆನುಡಿಗಳ ಮೇಲೆ ಪ್ರಭಾವ ಬೀರಿದ ಅನೇಕ ಮಂದಿ ಇಲ್ಲಿ ವಿದ್ಯಾರ್ಜನೆಗೈದರು. ಆದರೆ ಭಾರತದ ಸ್ವಾತಂತ್ರ್ಯ, ಆಂಗ್ಲ ಭಾಷೆಯ ಪ್ರಭಾವ ಇತ್ಯಾದಿ ಅನಿವಾರ್ಯ ಕಾರಣಗಳಿಂದಾಗಿ ಸಂಸ್ಕೃತ ಪಾಠಶಾಲೆಯ ಬೆಳವಣಿಗೆ ಕುಂಠಿತವಾಯಿತು.

ಸಮಾಧಾನಕರ ವಿಚಾರವೆಂದರೆ ಈ ಹಿಂಜರಿತ ಅದೇ ಪರಿಸರದಲ್ಲಿ ಅಚ್ಚ ಕನ್ನಡ ಮಾಧ್ಯಮ ಶಾಲೆಯೊಂದನ್ನು ಹುಟ್ಟುಹಾಕಿತು. ವಿದ್ಯಾಭಿಮಾನಿಗಳ ಅಪೇಕ್ಷೆಯ ಮೇರೆಗೆ ವಿಜ್ಞಾನ, ಗಣಿತ, ಆಂಗ್ಲ ಭಾಷೆಗಳಿಗೆ ಪ್ರಾಧಾನ್ಯವನ್ನು ನೀಡುತ್ತಾ 1952ರಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯನ್ನು ತೆರೆಯಲಾಯಿತು. ಭಾಷಾವಾರು ಪ್ರಾಂತ ವಿಂಗಡನೆಯ ಕಾರಣದಿಂದಾಗಿ ಮಲಯಾಳಿಗಳ ಜತೆ ಸೇರ್ಪಡೆಯಾದಾಗ ಕೇರಳ ಸರಕಾರದ ಆದೇಶದಂತೆ ಸಂಸ್ಕೃತ ಪ್ರಾಥಮಿಕ ಶಾಲೆಯು 1957ರಲ್ಲಿ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಾಗಿ ಬದಲಾವಣೆಗೊಂಡಿತು. ಹೀಗೆ ಆಡಳಿತಾತ್ಮಕ ದೃಷ್ಟಿಯಿಂದ ರೂಪುಗೊಂಡ ಎರಡು ಸಂಸ್ಥೆಗಳು ನೀರ್ಚಾಲಿನ ವಿಶಾಲ ಪರಿಸರದಲ್ಲಿ ಒಂದರಿಂದ ಹತ್ತನೆಯ ತರಗತಿಯ ತನಕ ವಿದ್ಯಾಭ್ಯಾಸವನ್ನು ಸರಳವಾಗಿ ಜನಸಾಮಾನ್ಯರಿಗೆ ನೀಡಿದವು.

ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ವಿಚಾರಗಳಲ್ಲಿ ಜೀವನಾನುಭವದ ನಿಧಿಯಾಗಿ, ಸಾರ್ವಕಾಲಿಕ ಮೌಲ್ಯಗಳ ಪ್ರತಿಪಾದಕರಾಗಿ ಬುಧಜನ ಮಾನಸದಲ್ಲಿ ಸ್ಥಿರವಾಗಿ ನೆಲೆಯೂರಿದ ಅನರ್ಘ್ಯ ಚೇತನ ಖಂಡಿಗೆ ಶಾಮ ಭಟ್ಟರು ಸಂಸ್ಕೃತ ಕಾಲೇಜಿನ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನೀರ್ಚಾಲಿನ ಖ್ಯಾತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದರು. 1973ರಿಂದಲೂ ಅವರು ಶಾಲಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಾ ತೊಂಭತ್ತೆರಡರ ಈ ಇಳಿಹರೆಯದಲ್ಲೂ ಏರುತ್ಸಾಹದಲ್ಲಿ ಸಕ್ರಿಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ವಿದ್ಯಾಭಿಮಾನಿಗಳ ಸಹಕಾರದಲ್ಲಿ ಈ ಶಾಲೆಯ ರಜತ, ಸುವರ್ಣ ಮತ್ತು ವಜ್ರ ಮಹೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ.

ಪ್ರಸ್ತುತ 1,000ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ ಕ್ರಮಾನುಗತವಾಗಿ 96%, 99.4% ಮತ್ತು 98.4% ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ದಾಖಲಿಸಿದೆ. ಈ ಬಾರಿ ಮತ್ತೆ 155 ಮಂದಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಅಚ್ಚ ಗ್ರಾಮೀಣ ಪ್ರದೇಶವಾದ ಇಲ್ಲಿ ಆಧುನಿಕ ಶಿಕ್ಷಣ ಪದ್ಧತಿಯ ಭಾಗವಾಗಿ ಎಲ್.ಸಿ.ಡಿ. ಪ್ರೊಜೆಕ್ಟರ್, ಕಂಪ್ಯೂಟರ್, ಪ್ರಿಂಟರ್, ತರಗತಿ ಅಧ್ಯಯನಕ್ಕೆ ಅನುವಾಗುವ ನಿಟ್ಟಿನಲ್ಲಿ ಎರಡು ಲ್ಯಾಪ್‍ಟಾಪ್‌ಗಳನ್ನೂ ಒಳಗೊಂಡ ಕಂಪ್ಯೂಟರ್ ಲ್ಯಾಬನ್ನು ಸಜ್ಜುಗೊಳಿಸಲಾಗಿದೆ.

ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆಲ್ಲ ವಾರಕ್ಕೆರಡು ಬಾರಿ ತಲಾ 40 ನಿಮಿಷಗಳ ಕಾಲ ಕಂಪ್ಯೂಟರ್, ಕಲಿಕೆಗೆ ಮುಕ್ತವಾಗಿದೆ. ಈ ಹಳೆಯ ಪಾಠಶಾಲೆಗೆ ಆಧುನಿಕತೆಯ ಸ್ಪರ್ಶ ನೀಡಿದ್ದು ಇಲ್ಲಿನ ವಿದ್ಯಾರ್ಥಿ-ಅಧ್ಯಾಪಕ ಸಮೂಹ ರೂಪಿಸಿದ ಬ್ಲಾಗ್ 'ಮಹಾಜನ ಇ-ಪತ್ರಿಕೆ". ಹಲವು ವೆಬ್‍ಸೈಟುಗಳು, ಕನ್ನಡ, ಮಲಯಾಳಂ ಆಂಗ್ಲ ಪತ್ರಿಕೆಗಳು, ಮಲಯಾಳದ ಮನೋರಮಾ ನ್ಯೂಸ್ ಚಾನಲ್ ಸಹಿತ ಅನೇಕ ಮಾಧ್ಯಮಗಳು ಈ ಬ್ಲಾಗನ್ನು ಮೆಚ್ಚಿ, ಪ್ರೋತ್ಸಾಹಿಸಿ ಲೇಖನಗಳನ್ನು ಬರೆದಿವೆ, ಮಾಹಿತಿಗಳನ್ನು ಬಿತ್ತರಿಸಿವೆ.

ಸಂಸ್ಥೆಯಲ್ಲಿ ಸಂಸ್ಕೃತ, ಕನ್ನಡ, ಇಂಗ್ಲೀಷ್ ಇತ್ಯಾದಿ ಭಾಷಾ ಸಾಹಿತ್ಯಗಳನ್ನೊಳಗೊಂಡ ಸುಮಾರು 10,000ಕ್ಕೂ ಮಿಕ್ಕು ಪುಸ್ತಕಗಳುಳ್ಳ ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ವಿಶಾಲ ಆಟದ ಮೈದಾನಗಳೂ ಇವೆ. ಆಂಗ್ಲ ಭಾಷಾ ತಜ್ಞ, ಕವಿ ಕೆ.ವಿ. ತಿರುಮಲೇಶ್, ಪ್ರಖ್ಯಾತ ಚಿತ್ರಗಾರ ಪಿ.ಎಸ್.ಪುಣಿಂಚಿತ್ತಾಯ, ಮಂಗಳೂರು ಮೇಯರ್ ಶಂಕರ ಭಟ್... ಹೀಗೆ ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದ ಪ್ರತಿಭಾವಂತರ ಪಟ್ಟಿ ಬೆಳೆಯುತ್ತದೆ.

ಮಹಾಜನ ವಿದ್ಯಾಭಿವರ್ಧಕ ಸಂಘದ ನೇತೃತ್ವದಲ್ಲಿ ಈ ವಿದ್ಯಾಲಯ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರಿಯಾಗುವ ನಿಟ್ಟಿನಲ್ಲಿ ಶತಮಾನೋತ್ಸವ ಸಂಭ್ರಮದ ಆರು ತರಗತಿ ಕೊಠಡಿಗಳುಳ್ಳ ನೂತನ ಕಟ್ಟಡ ಸಮುಚ್ಚಯ ನಿರ್ಮಾಣ ಹಂತದಲ್ಲಿದೆ. ಜೊತೆಗೆ ಪ್ರತೀವರ್ಷದಂತೆ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ವಿದ್ಯಾರ್ಥಿಗಳೂ ಸಜ್ಜುಗೊಳ್ಳುತ್ತಿದ್ದಾರೆ.

* ಲೇಖಕರ ವಿಳಾಸ : ರವಿಶಂಕರ ದೊಡ್ಡಮಾಣಿ, ಎಡನಾಡು ಅಂಚೆ, ಕುಂಬಳೆ - 671321 ಕಾಸರಗೋಡು, ಕೇರಳ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more