• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೆಲ್‌ ಕಂ ಬ್ಯಾಕ್‌ ರಾಮ್‌ ಪ್ರಸಾದ್‌!

By *ವಿಶಾಖ. ಎನ್‌
|

ಪ್ರತಿಭೆ v/s ಅವಕಾಶ. ಕನ್ನಡದ ಆಡು ಮಾತಿನಲ್ಲಿ ಹೇಳುವುದಾದರೆ ಎಣ್ಣೆ ಸೀಗೇಕಾಯಿ. ಸರಸ್ವತಿ v/s ಲಕ್ಷ್ಮಿ ಎಂದು ಕರೆದರೂ ಸರಿಯೇ. ಅವಳಿದ್ದೆಡೆ ಇವಳಿಲ್ಲ, ಇವಳಿದ್ದೆಡೆ ಅವಳು ತಲೆಹಾಕಿಯೂ ಮಲಗುವುದಿಲ್ಲ.....ಪ್ರತಿಭೆಯನ್ನು ಹುಡುಕಿ ತೆಗೆಯುವ ನೋವು ಅನುಭವಿಸಲು ಜನ ಸಿದ್ಧರಿಲ್ಲರಾದ ಕಾರಣವಷ್ಟೇ ಅಲ್ಲ, ಪ್ರತಿಭೆ ಇಲ್ಲದವರು ಸೃಜನಶೀಲ ಕ್ಷೇತ್ರದಲ್ಲಿ ಕೈಯಾಡಿಸಬಾರದು ಎನ್ನುವ ನಿಯಮ ನಮ್ಮಲ್ಲಿ ಜಾರಿಗೆ ಬಂದಿಲ್ಲವಾದ ಕಾರಣ ಇಲ್ಲಿ ಇಂತಹ ವಿರೋಧಾಭಾಸಗಳು ರಾರಾಜಿಸುತ್ತಿವೆ. ಇಂಥದೊಂದು ಸಂದರ್ಭ ತೀರ ಸ್ವಾಭಾವಿಕ ಎಂದು ಒಪ್ಪಿಕೊಂಡವರಂತೆ ನಾವಿದ್ದೇವೆ. ಅದರೂ ತರ್ಕಕ್ಕೆ ಅವಕಾಶ ಯಾವತ್ತೂ ಇದ್ದೇ ಇದೆಯಲ್ಲ !

ಕರ್ನಾಟಕದ ವಿಷಯಲ್ಲಂತೂ ಈ ವಿರೋಧಾಭಾಸ ಲಾಗಾಯ್ತಿನಿಂದಲೂ ಬೆಳೆದು ಬಂದ ತರ್ಕ. ಪಂಪ ನಿಗೆ ಅರಮನೆಯ ಸಹವಾಸ, ಆದೇ ಕಾರಣವಾಗಿ ಆತ ಆಸ್ಥಾನ ಕವಿ. ಅವನಿಗೆ ವಾಗ್ದೇವಿ ಜತೆ ಅರಸ ಅರಿಕೇಸರಿಯೂ ಹರಸಿದ್ದರಿಂದ ಆದಿಪುರಾಣ ಹಾಗಿರಲಿ ವಿಕ್ರಮಾರ್ಜುನ ವಿಜಯ ರಚಿಸಿದ. ನಮಗಾದರೋ ವಾಗ್ದೇವಿ ಒಲಿದಿದ್ದಾಳೆ ಆದರೆ ರಾಜಾಶ್ರಯ ಕೈಕೊಟ್ಟಿದೆ ಎಂದು ಅವಕಾಶ ವಂಚಿತ ಪ್ರತಿಭೆಗಳು ಎಂಟನೇ ಶತಮಾನದಲ್ಲೇ ಹಲುಬಿದ್ದರಂತೆ. ಇವತ್ತಿಗೂ ಅವರ ಸಂತತಿ ಅಳಿದಿಲ್ಲ ಎನ್ನುವುದು ಬೇರೆಯದೇ ಸಂಗತಿಯಾದರೂ ಸಮಸ್ಯೆ ಇನ್ನೊಂದು ರೀತಿ ಕಾಡುತ್ತದೆ. ಆ ಎಂದವರೆಲ್ಲ ಗಾಯಕರು ಈ ಬರೆಯಬಲ್ಲವರೆಲ್ಲ ಕವಿಗಳು ಎನ್ನುವಂಥ ಸಮಾಜ ಬಲವಾಗಿರುವ ಕಾರಣ ಎಲ್ಲರೂ , ಎಲ್ಲದಕ್ಕೂ, ಎಲ್ಲ ಕಾಲಕ್ಕೂ ಅರ್ಹರು ಎಂಬ ಭಾವನೆ ಇವತ್ತು ಸೃಷ್ಟಿ ಆಗಿ ಕೂತಿದೆ. ಇದರ ಜತೆಗೆ ಅವಕಾಶ ಸಿಕ್ಕಿದ್ದಿದ್ದರೆ ನಾನೂ ಲತಾ ಮಂಗೇಶ್ಕರ್‌ ಆಗುತ್ತಿದ್ದೆ ಎಂದು ಎದೆ ತಟ್ಟಿ ಹೇಳುವವರ ದೊಡ್ಡ ದಂಡು ಬಾಲಿವುಡ್‌ನ ಹಾಗೇ ಸ್ಯಾಂಡಲ್‌ವುಡ್‌ನಲ್ಲೂ ಇದೆ.

ಪರಂತು ಪ್ರತಿಭೆ ಎಂದರೇನು ? ಅವಕಾಶಗಳು ಯಾಕೆ ಅವರ ಹತ್ತಿರ ಸುಳಿಯುವುದಿಲ್ಲ ? ಎನ್ನುವ ಚರ್ಚೆಯನ್ನು ನಿಮ್ಮ ಮುಂದಿಟ್ಟು ಈ ಹೊತ್ತಿನ ಸಮಾಚಾರವನ್ನು ವಿವೇಚಿಸಲು ನಾವೀಗ ಸಿದ್ಧರಾಗುತ್ತಿದ್ದೇವೆ. ಇಂಥದೊಂದು ಅವಕಾಶವನ್ನು ಕಲ್ಪಿಸಿಕೊಟ್ಟ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹಾಗೂ ಸದ್ಯ ಕ್ಯಾಲಿಪೋರ್ನಿಯಾದಲ್ಲೆಲ್ಲೋ ತಾವಾಗಿ ಹಾಡಿಕೊಳ್ಳುತ್ತಿರುವ ಬೆಂಗಳೂರಿನವರೇ ಆದ ರಾಮಪ್ರಸಾದ್‌ ಅವರಿಗೆ ಧನ್ಯವಾದ ಹಾಗೂ ಶುಭಾಶಯಗಳನ್ನು ತಲುಪಿಸುತ್ತಾ......

ಹೊಸಹೊಸ ಭಾವ : ಅಮೆರಿಕೆ ಅಮೆರಿಕ ಖ್ಯಾತಿಯ ನಾಗತಿಹಳ್ಳಿ ಸದ್ಯ ನನ್ನ ಪ್ರೀತಿಯ ಹುಡುಗಿ ಚಿತ್ರ ತಯಾರಿಸುತ್ತಿರುವುದು ನಿಮಗೆಲ್ಲ ತಿಳಿದಿದೆ. ಅಮೆರಿಕದ ಹೊಸನೋಟದ ಜತೆಗೆ ಹೊಸ ಮುಖಗಳನ್ನೂ ಅವರು ಪರಿಚಯಿಸುತ್ತಿರುವುದನ್ನೂ ನೀವೀಗಾಗಲೇ ಓದಿಕೊಂಡಿದ್ದೀರಿ. ಆದರೆ ಪ್ರತಿಭೆಯ ಸೆಳಕುಗಳು ಹೇರಳವಾಗಿದ್ದರೂ ಅವಕಾಶ ವಂಚಿತರ ಸಾಲಿನಲ್ಲಿ ಕುಳಿತಿದ್ದ ಅಚ್ಚ ಕನ್ನಡದ ಕಂಠವನ್ನು ನಾಗತಿಹಳ್ಳಿ ಅವರು ರೆಕಾರ್ಡಿಂಗ್‌ ರೂಂಗೆ ಕರೆದು ತಂದ ವಿಷಯ ನಿಮಗೆ ಗೊತ್ತಿ ರಲಿಕ್ಕಿಲ್ಲ.

‘ಮೂಡಲ್‌ ಕುಣಿಗಲ್‌ಕೆರೆ ನೋಡೋರ್ಗೊಂದ್‌ ಐಭೋಗ....’ ಎಂಬ ನಾಗತಿಹಳ್ಳಿ ಅವರೇ ಬರೆದಿರುವ ಹಾಡನ್ನು ...ಹುಡುಗಿ ಚಿತ್ರಕ್ಕಾಗಿ ಅಮೆರಿಕೆಯಲ್ಲಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ರಾಮ್‌ಪ್ರಸಾದ್‌ ಎಂಬೊಬ್ಬರು ಹಾಡಿದ್ದಾರೆ.

ಯಾರೀ ರಾಮ್‌ಪ್ರಸಾದ್‌ ?

ಪ್ರಾಯಶಃ 1980ರ ದಶಕದಲ್ಲಿ ಸದಾ ಸಂಗೀತದ ಗುಂಗಿನಲ್ಲೇ ಇರುತ್ತಿದ್ದ ಬೆಂಗಳೂರು ಮಂದಿಗೆ ರಾಮ್‌ ಪ್ರಸಾದ್‌ ಧ್ವನಿಯ ಪರಿಚಯವಿರಲಿಕ್ಕೂ ಸಾಕು. ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎಚ್‌.ಆರ್‌.ವಿಶ್ವನಾಥ್‌ ಅವರ ಮಗ ರಾಮ್‌ಪ್ರಸಾದ್‌ ಹುಟ್ಟಿದ್ದು, ಬೆಳೆದಿದ್ದು, ಕಲಿತದ್ದು ಬೆಂಗಳೂರಲ್ಲೇ. ಮಹಿಳಾ ಸೇವಾ ಸಮಾಜ, ನ್ಯಾಷನಲ್‌ ಹೈಸ್ಕೂಲಿನಲ್ಲಿ ಶಾಲೆ ಓದು. ನ್ಯಾಷನಲ್‌ ಕಾಲೇಜಿನಲ್ಲಿ ಪಿಯುಸಿ. ಯುವಿಸಿಇ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಎಂಜಿನಿಯರಿಂಗ್‌. ಇವೆಲ್ಲದರ ಜತೆಗೆ

ಸಂಗೀತದ ಬಗೆಗೆ ಅತೀವ ಆಸಕ್ತಿ ಹೊಂದಿದ್ದ ರಾಮ್‌ ದೊಡ್ಡಮ್ಮ ನಾಗರತ್ನಮ್ಮನವರಿಂದ ಶಾಸ್ತ್ರೀಯ ಸಂಗೀತದ ಮೂಲಗಳನ್ನು ಕಲಿತವರು. ಆನಂತರ ಅಯ್ಯನಾರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯೂಸಿಕ್‌ಗೆ ಸೇರಿ ವಿದ್ವಾನ್‌ ಎಂ.ಎ. ನರಸಿಂಹಾಚಾರ್‌ ಹಾಗೂ ಎಸ್‌.ಶಂಕರ್‌ ಅವರಿಂದ ಸಂಗೀತ ಹೇಳಿಸಿಕೊಂಡವರು. ಇವಿಷ್ಟನ್ನೂ ನಾವು ರಾಮ್‌ಪ್ರಸಾದ್‌ ಅವರ ಇಂಡಿಯಾ ಅಧ್ಯಾಯ ಎಂದು ಕರೆಯಬಹುದು.

ಅಮೆರಿಕಾಗೆ ಹಾರಿದ ಮೇಲೆ ರಾಮ್‌ ಉನ್ನತ ವ್ಯಾಸಂಗ ಮುಂದುವರೆಸಿದರು, ನೌಕರಿ ಹಿಡಿದರು. ಇಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ (ಯಂಗ್ಸ್‌ಟೌನ್‌ ಸ್ಟೇಟ್‌ ಯೂನಿವರ್ಸಿಟಿ) ಹಾಗೂ ಕಂಪ್ಯೂಟರ್‌ ಸೈನ್ಸ್‌ (ಕ್ಲೀವ್‌ಲ್ಯಾಂಡ್‌ ಸ್ಟೇಟ್‌ ಯೂನಿವರ್ಸಿಟಿ) ವಿಷಯಗಳ ಎರಡು ಸ್ನಾತಕೋತ್ತರ ಪದವಿ, ಕ್ಯಾಲಿಫೋರ್ನಿಯಾದ ಹ್ಯಾಂಡ್‌ಸ್ಪ್ರಿಂಗ್‌ ಎಂಬ ವೈರ್‌ಲೆಸ್‌ ಟೆಕ್ನಾಲಜಿ ಕಂಪನಿಯಲ್ಲಿ ಕೆಲಸ, ಹೆಂಡತಿ ಉಷಾ- ಮಕ್ಕಳಾದ ವೈಭವ್‌ ಹಾಗೂ ದೀಪಿಕಾರ ಚೊಕ್ಕ ಸಂಸಾರ . ಇವಿಷ್ಟರ ನಡುವೆ ಸಂಗೀತದ ತಮ್ಮ ತುಡಿತ ಬಿಟ್ಟು ಕೊಡದ ರಾಮ್‌ ಚಿಕ್ಕ ಮಕ್ಕಳಿಗೆ ಸಂಗೀತದ ಪಾಠ ಹೇಳಿ ಕೊಡುತ್ತಾರೆ. ಕೈತುಂಬಾ ಕೆಲಸವಿರುವ ಅಮೆರಿಕೆಯ ಜೀವನದಲ್ಲೂ ಸಂಗೀತಕ್ಕೆ ಸಮಯ ಹೊಂದಿಸಿಕೊಳ್ಳುತ್ತಾರೆ. ಕೆಸೆಟ್ಟುಗಳನ್ನು ತರುತ್ತಾರೆ !

ಫ್ಲ್ಯಾಷ್‌ ಬ್ಯಾಕ್‌ : ಅಂತಿಮ ಬಿಇ ಓದುವ ಸಂದರ್ಭದಲ್ಲಿ ಮಾರುತಿ ಶಿವರಾಂ ಎಂಬುವರು ಹೊಸ ಚಿತ್ರ ನಿರ್ಮಿಸುವ ವಿಷಯ ಬಿ.ಆರ್‌.ಛಾಯಾ ಮೂಲಕ ರಾಮ್‌ಗೆ ತಿಳಿಯುತ್ತದೆ. ಆಗ ಛಾಯಾ ಕೂಡ ಅಯ್ಯನಾರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯೂಸಿಕ್‌ ವಿದ್ಯಾರ್ಥಿನಿ. ‘ಈ ಬಂಧನಾ’ ಹಾಡನ್ನು ರೆಕಾರ್ಡ್‌ ಮಾಡಿ, ಮಾರುತಿ ಶಿವರಾಂಗೆ ಕೊಡುತ್ತಾರೆ. ಕಂಠ ಮೆಚ್ಚುವ ಮಾರುತಿ ಶಿವರಾಂ, ರಾಮ್‌ರನ್ನು ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್‌ ಅವರಿಗೆ ಪರಿಚಯಿಸುತ್ತಾರೆ. ಧ್ವನಿ ಪರೀಕ್ಷೆಯಲ್ಲಿ ಪಾಸಾಗುವ ರಾಮ್‌ಗೆ ಆ ಚಿತ್ರಕ್ಕೆ ಡ್ಯೂಯೆಟ್‌ ಹಾಡುವ ಅವಕಾಶ ಸಿಗುತ್ತದೆ. ಮುಂದೆ ಎಲ್‌.ವೈದ್ಯನಾಥನ್‌ ಹಾಗೂ ಎಂ.ರಂಗರಾವ್‌ರಂಥ ದಿಗ್ಗಜ ಸಂಗೀತ ನಿರ್ದೇಶಕರ ಸಂಯೋಜನೆಗಳಲ್ಲಿ ಸಿನಿಮಾಗಳಿಗೆ, ಕೆಸೆಟ್ಟುಗಳಿಗೆ ಹಾಡುತ್ತಾರೆ. ಆದರೆ ಇವರಿಗೆ ಬ್ರೇಕ್‌ ಸಿಗೋದಿಲ್ಲ.

ಈಗಲೂ ವಿದ್ಯಾರ್ಥಿ : ಓದಿನ ವಿಷಯದಲ್ಲಿ ಅಪ್ಪ- ಅಮ್ಮನ ಒತ್ತಡ ಅಮೆರಿಕೆಗೆ ಹೋಗುವಂತೆ ಮಾಡುತ್ತದೆ. ಉನ್ನತ ವಿದ್ಯಾಭ್ಯಾಸದ ನಡುನಡುವೆಯೂ ಸಂಗೀತವನ್ನಂತೂ ಇವರು ಬಿಡೋದೇ ಇಲ್ಲ. ಬಿಡುವಿನ ಇಡೀ ಸಮಯ ಅದಕ್ಕೇ ಮೀಸಲು. ಅಮೆರಿಕೆಯಲ್ಲಿ ಹುಟ್ಟಿರುವ ಕನ್ನಡದ ಚಿಣ್ಣರಿಗೆ ಕರ್ನಾಟಕ ಸಂಗೀತದ ಗಂಧ- ಗಾಳಿ ತುಂಬುತ್ತಿರುವ ಇವರು ಈಗಲೂ ಸಂಗೀತದ ವಿದ್ಯಾರ್ಥಿ. ಕ್ಯಾಲಿಫೋರ್ನಿಯಾದಲ್ಲಿರುವ ವಿದುಷಿ ಲಲಿತಾ ವೆಂಕಟರಾಮ್‌ ಅವರಲ್ಲಿ ಇವತ್ತೂ ಸಂಗೀತದ ಪಾಠಗಳನ್ನು ರಾಮ್‌ ಕಲಿಯುತ್ತಿದ್ದಾರೆ.

ರಾಗ ಕಟ್ಟಿ, ದಾನ ಮಾಡುವ ರಾಮ್‌ : ಅಮೆರಿಕೆಯಲ್ಲಿರುವ ಸಂಗೀತಾಸಕ್ತರು ಸೇರಿ ಕಟ್ಟಿರುವ ರಾಗ ಎಂಬ ಸಂಗೀತ ಸಮೂಹದಲ್ಲೂ ತೊಡಗಿಕೊಂಡಿರುವ ರಾಮ್‌, ಬಿಡುವಿನ ವೇಳೆ ಅಮೆರಿಕೆಯ ಕನ್ನಡಿಗರಿಗೆ ಹಳೆಯ ಹಾಗೂ ಹೊಸ ಕನ್ನಡ ಗೀತೆಗಳ ರುಚಿಯಾದ ಖಾದ್ಯ ಉಣಬಡಿಸುತ್ತಾರೆ. ಅಮೆರಿಕೆಯ ಟಿವಿ ಕೇಂದ್ರ, ದೂರದರ್ಶನ, ಉದಯ ಹಾಗೂ ಕಾವೇರಿ ಚಾನೆಲ್‌ಗಳಿಗೂ ರಾಮ್‌ ಹಾಡಿದ್ದಾರೆ. ಕಾರ್ಯಕ್ರಮ ಕೊಡಲು ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿರುತ್ತಾರೆ. ಇತರೆ ಸಂಗೀತಗಾರರಿಗಿಂತ ರಾಮ್‌ ಭಿನ್ನವಾಗಿ ನಿಲ್ಲುವುದು ಅವರ ಸಮಾಜ ಸೇವೆಯಿಂದ. ಇವರು ತಂದಿರುವ ಕೆಸೆಟ್ಟುಗಳಿಂದ ಬರುವ ಲಾಭದ ಹಣವನ್ನು ಸನ್ನಿವೇಲ್‌ ಹಿಂದೂ ದೇವಾಲಯ, ಏಷ್ಯನ್‌ ವುಮೆನ್‌ ಶಲ್ಟರ್‌ ಮೊದಲಾದ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಕ್ರೆೃ, ಶಂಕರ್‌ ಐ ಫೌಂಡೇಷನ್‌ ಸಂಸ್ಥೆಗಳಿಗಾಗಿ ಆಗಾಗ ಚಾರಿಟಿ ಷೋಗಳನ್ನೂ ನಡೆಸಿದ್ದಾರೆ.

ಹೆಸರು ತಂದ ಅಪೂರ್ವ ಭಕ್ತಿ ಸಂಗಮ : ವಾಣಿ ಜಯರಾಂ, ಮಂಜುಳಾ ಗುರುರಾಜ್‌ ಹಾಗೂ ಬಿ.ಆರ್‌.ಛಾಯಾ ಅವರೊಡನೆ ಸೇರಿ ಹೊರ ತಂದ ‘ಅಪೂರ್ವ ಭಕ್ತಿ ಸಂಗಮ’ ಎಂಬ ಎರಡು ಕೆಸೆಟ್ಟುಗಳು ರಾಮ್‌ಗೆ ಹೆಸರು ತಂದುಕೊಟ್ಟವು. ಕರ್ನಾಟಕ ಹಾಗೂ ಅಮೆರಿಕೆಯಲ್ಲಿ ಕೆಸೆಟ್ಟುಗಳು ಸರಸರ ಬಿಕರಿಯಾದವು. ರಾಮ್‌ ಹೆಸರೂ ಮನೆಮನೆಗಳಲ್ಲಿ ಗುನುಗಿತು. ಜನಪ್ರಿಯತೆಯ ಕಾರಣ ಆ ಕೆಸೆಟ್ಟು ಕರ್ನಾಟಕದಲ್ಲಿ ಮತ್ತೆ ಬಿಡುಗಡೆಯಾಯಿತು.

ಆನಂದ್‌ ಆಡಿಯೋ ಬ್ಯಾನರ್‌ ಅಡಿಯಲ್ಲಿ ಡಾ.ನರಸಿಂಹ ಎಂಬ ಮತ್ತೊಬ್ಬ ಸಾಫ್ಟ್‌ವೇರ್‌ ಎಂಜಿನಿಯರ್‌ ಗೆಳೆಯರ ಜೊತೆ ಸೇರಿ ರಾಮ್‌ ಸಿದ್ಧಪಡಿಸಿದ್ದ ‘ಜಾಣೆ ಬಾ ಮನೆಗೆ’ ಎಂಬ ಕೆಸೆಟ್ಟನ್ನು ಕೆಲ ವಾರಗಳ ಹಿಂದಷ್ಟೇ ನಾಗತಿಹಳ್ಳಿ ಚಂದ್ರಶೇಖರ್‌ ಬಿಡುಗಡೆ ಮಾಡಿದ್ದಾರೆ. ತಮ್ಮ ಹೊಸ ಚಿತ್ರದಲ್ಲಿ ಹಾಡುವ ಅವಕಾಶವನ್ನೂ ಕೊಟ್ಟಿದ್ದಾರೆ.

‘ನನ್ನ ಪ್ರೀತಿಯ ಹುಡುಗಿ’ ಸಂಗೀತ ನಿರ್ದೇಶಕ ಮನೋಮೂರ್ತಿ ಹೀಗೆನ್ನುತ್ತಾರೆ- ‘ರಾಮ್‌ ಪ್ರಸಾದ್‌ ಅವರ ಕಂಠ ತುಂಬಾ ಚೆನ್ನಿದೆ. ಚಿತ್ರದಲ್ಲಿ ಅವರು ಹಾಡಿರುವ ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ಹಾಡು ಅವರ ಸಂಗೀತ ಜೀವನಕ್ಕೆ ಹೊಸ ತಿರುವನ್ನು ತರಲಿದೆ ಎಂಬ ನಂಬುಗೆ ನಮ್ಮದು’.

ದೈನಂದಿನ ಕೆಲಸ ಕಾರ್ಯಗಳು ಎಲ್ಲರಿಗೂ ಇರುತ್ತದೆ. ಆದರೆ ಮನುಷ್ಯನಿಗೆ ಒಂದು ಗೀಳು ಅಂತ ಇದ್ದರೆ ಅದಕ್ಕೆ ಸಮಯದ ಕೊರತೆ ತೊಡಕಾಗುವುದಿಲ್ಲ. ರಾಮ್‌ಪ್ರಸಾದ್‌ ವಿಷಯದಲ್ಲಿ ಈ ನಿಯಮ ನಿಜವಾಗಿದೆ. ತಮ್ಮಪಾಡಿಗೆ ತಾವು ಹಾಡಿಕೊಳ್ಳುವ ನೆಪದಲ್ಲಿ ಮಕ್ಕಳಿಗೆ ಸಂಗೀತಪಾಠ ಹೇಳಿಕೊಡುತ್ತಿರುತ್ತಾರೆ. ಪಾಠದ ನೆಪದಲ್ಲಿ ತಮ್ಮ ರಾಗಶುದ್ಧಿಯನ್ನು ನಿರಂತರ ಸಾಣೆಗೆ ಒಡ್ಡುತ್ತಿರುತ್ತಾರೆ. ಮಕ್ಕಳು ಸುಶ್ರಾವ್ಯವಾಗಿ ಹಾಡುಹೇಳುವುದನ್ನು ಕೇಳಿ ನಲಿಯುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
kannada music talents unearthed by nagatihalli chandrashekher
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more