ಕಳೆದುದು ಸಿಕ್ಕಿದೆ !
ಬಹುಶಃ ಭಾರತದ ಸಂಗೀತ ಕ್ಷೇತ್ರದಲ್ಲೇ ಇಂಥಾ ದೊಡ್ಡ ಉತ್ಖನನ ಅನ್ನುವಂಥ ಕಾರ್ಯ ನಡೆದಿರುವುದು ಇದೇ ಮೊದಲು. ಲಹರಿ ಕೆಸೆಟ್ ಸಂಸ್ಥೆಯ ಸಾಹಸಿ ವೇಲು ಅವರಿಗೆ ಧನ್ಯವಾದಗಳು.
ಯಾವುವು ಆ ಎದೆ ತುಂಬುವ ಗೀತೆಗಳು?
ಸುಮಾರು 32 ವರ್ಷಗಳಷ್ಟು ಹಳೆಯ ರಾಗ ಸಂಯೋಜನೆಯ ಭಾವಗೀತೆಗಳವು. 1978- 79ರಲ್ಲಿ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಾದರ ಪಡಿಸುತ್ತಿದ್ದ ಎಂಎಸ್‌ಐಎಲ್ ಗೀತೆಗಳು ಪ್ರತಿ ಗುರುವಾರ ರಾತ್ರಿ ವಿವಿಧ ಭಾರತಿಯಲ್ಲಿ ಬಿತ್ತರವಾಗುತ್ತಿದ್ದವು. ಈ ಕಾರ್ಯಕ್ರಮ ಹಿಂದಿ ಹಾಡುಗಳ ಬಿನಾಕಾ ಗೀತ್‌ಮಾಲಾದಷ್ಟೇ ಜನಾನುರಾಗ ಪಡೆದಿತ್ತು. ಈವತ್ತಿಗೂ ನಿಮ್ಮ ಮನೆಯಲ್ಲಿ ಯಾರಾದರೂ ಸುಗಮ ಸಂಗೀತ ಪ್ರೇಮಿ ಹಿರೀಕರಿದ್ದರೆ ಕೇಳಿ, ಅವರು ಆ ರಾಗಗಳನ್ನು ಗುನುಗಿಸಿದರೂ ಆಶ್ಚರ್ಯವಿಲ್ಲ. ಒಂದು ವೇಳೆ ಹಾಡು ಸ್ಮೃತಿಪಟಲ ಸೇರಿದ್ದರೆ ಬೇಸರಗೊಳ್ಳುವ ಅಗತ್ಯವಿಲ್ಲ. ಆ ಹಾಡುಗಳ ಸುರುಳಿ ಹೊತ್ತ 7 ಕೆಸೆಟ್ಟುಗಳನ್ನು (5 ಸಿಡಿಗಳನ್ನು) ಲಹರಿ ಸಂಸ್ಥೆ ಇದೀಗ ಹೊರ ತಂದಿದೆ.
ಕೆಸೆಟ್ಟು ಮುದ್ರಣ ಎಂಬ ಕಸರತ್ತು
ಇವತ್ತು ಈ ಕೆಸೆಟ್ಟುಗಳು ಶೆಲ್ಫ್ ಮೇಲೆ ಇರಲು ಕಾರಣಕರ್ತ ಲಹರಿಯ ವೇಲು. ಎಂಎಸ್‌ಐಎಲ್ ಗೀತೆಗಳು ರೇಡಿಯೋದಲ್ಲಿ ಬಿತ್ತರಗೊಳ್ಳುತ್ತಿದ್ದಾಗ ಲಹರಿ ಇನ್ನೂ ಹುಟ್ಟಿರಲಿಲ್ಲ. ಆದರೆ ವೇಲು ಹುಟ್ಟಿದ್ದರು. ಅವರಲ್ಲಿನ ಸಂಗೀತದ ಅನುಭಾವಿ ಹುಟ್ಟಿದ್ದ. ಅವರ ಸಹೋದರ ಮನೋಹರ ನಾಯ್ಡು ಆ ಗೀತೆಗಳ ಅಭಿಮಾನಿಯಾಗಿದ್ದರು. ಆಗಿನ್ನೂ ವೇಲು ಚಿಕ್ಕವರು. ಕಬ್ಬನ್ ಪಾರ್ಕು, ಚಾಮರಾಜ ಪೇಟೆ ಎಲ್ಲೆಲ್ಲಿ ಭಾವಗೀತಾ ಕಚೇರಿ ನಡೆದರೆ ಅಲ್ಲೆಲ್ಲಾ ವೇಲು ಹಾಜರ್.
1980ರಲ್ಲಿ ಲಹರಿ ಹುಟ್ಟಿತು. ವೇಲು ಕೂಡ ಸಂಸ್ಥೆ ಬೆಳೆಸಲು ಟೊಂಕ ಕಟ್ಟವರ ಪೈಕಿ ಒಬ್ಬರು. ಎಂಎಸ್‌ಐಎಲ್ ಗುನುಗು ಮನದಲ್ಲಿ ಮಾಸಿರಲಿಲ್ಲ.
ಮುಂದೇನಾಯಿತು? ಖುದ್ದು ವೇಲು ಹೇಳುತ್ತಾರೆ....
ರೇಡಿಯೋದಲ್ಲಿ ಹೊಮ್ಮಿ ಮಾಯವಾಗುತ್ತಿದ್ದ ಆ ಮಾಯದಂಥ ಹಾಡುಗಳನ್ನು ಕೆಸೆಟ್ಟಿಗೆ ತುಂಬಿಸಲೇಬೇಕು ಅನ್ನುವ ಆಸೆ ನನ್ನಲ್ಲಿ ಹುಟ್ಟಿತು. ಹಾಡುಗಳ ಮುದ್ರಣ ಕಾಪಿಗೆ ಯಾರನ್ನು ಕಾಣುವುದು ? ಕೆಲವರು ಹೇಳಿದರು- ಅವು ಎಂಎಸ್‌ಐಎಲ್‌ನಲ್ಲೇ ಇರುತ್ತವೆ. ಇನ್ನು ಕೆಲವರೆಂದರು- ಆಲ್ ಇಂಡಿಯಾ ರೇಡಿಯೋದಲ್ಲೇ ಇರುತ್ತವೆ.
1985- 86ರಲ್ಲಿರಬೇಕು, ರತ್ನನ ಪದಗಳು ಕೆಸೆಟ್ ಹೊರತಂದೆವು. ರಾಜರತ್ನಂರ ‘ಭೂಮೀನ್ ತಬ್ಬಿದ್ ಮೋಡಿದ್ದಂಗೆ’ ಮೊದಲಾದ ಗೀತೆಗಳಿಗೆ ಮೈಸೂರು ಅನಂತ ಸ್ವಾಮಿ ಟ್ಯೂನ್ ಹಾಕಿದ್ದರು. ಆಗ ಕೀಬೋರ್ಡ್ ಬಂದಿತ್ತು. ಡಬಡಬ ಸದ್ದು ಸಂಗೀತದ ಅಂಗವಾಗಿ ಹೋಗಿತ್ತು. ಹಾರ್ಮೋನಿಯಂ ಸದ್ದು ಉಡುಗಿತ್ತು. ಎಂಎಸ್‌ಐಎಲ್ ಗೀತೆಗಳ ಕಾಲದ ಕಂಠ, ಶೈಲಿ, ಮುಗ್ಧತೆ ಮಾಯವಾಗಿತ್ತು.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications