ನೆಂಪೆ ಸುಂದರಿಯ ನೆನಪಲ್ಲಿ ತುಂಬು ಪ್ರೀತಿಯಿಂದ...
ಡಿಯರ್ ಕುಳ್ಳಿ,
ಇವತ್ತಿಗೆ ನೀನು ಊರಿಗೆ ಹೋಗಿ ಏಳು ದಿನ ಆಯಿತು. ತೀರ್ಥಹಳ್ಳಿಯ ಮಳೆ, ಗಾಳಿಯ ಮಧ್ಯೆ ಹೇಗಿದ್ದೀಯೋ ಏನೋ? ನಾವಿಬ್ಬರೂ ಹೋಗುತ್ತಿದ್ದ ಆ ಬಂಗಾರಪೇಟೆ ಪಾನಿಪೂರಿ ಅಂಗಡಿಗೇ ನಾನೊಬ್ಬನೇ ಹೋಗೇ ಇಲ್ಲ ಗೊತ್ತಾ! ನಿಮ್ಮ ಮನೆಯಲ್ಲಿ ಅಡಿಕೆ ಕೊಯ್ಲು, ನೀನಂತೂ ವಿಪರೀತ ಕೆಲಸ ಅಂದು ಒಂದೆರಡು ನಿಮಿಷದಲ್ಲೇ ಮಾತು ಮುಗಿಸಿಬಿಡುತ್ತೀಯೆ.
ಇಲ್ಲಿ ನನ್ನ ಪರಿಸ್ಥಿತಿ ಏನಂತ ಯೋಚಿಸಿದ್ದೀಯಾ? ಬೆಂಗಳೂರಿನಲ್ಲಿ ಸಿಗುವ ಮಸಾಲೆ ಪುರಿಯನ್ನ ತೀರ್ಥಹಳ್ಳಿಯ ವಿಘ್ನೇಶ್ ಚಾಟ್ಸ್ ಗೆ ಹೋಲಿಸ್ತೀಯಾ, ಇಲ್ಲಿನ ಮಳೆಯನ್ನ ಆಗುಂಬೆಗೆ ಸಮವಾ ಎನ್ನುತ್ತೀಯಾ? ನಿನ್ನೂರಿನ ಗಾಳಿ, ಅಲ್ಲಿನ ಮಣ್ಣು, ಮರ, ನದಿ, ಕುರುವಳ್ಳಿಯ ಸೇತುವೆ, ರಾಮೇಶ್ವರ ದೇವಸ್ಥಾನ, ಕೊಪ್ಪ ಸರ್ಕಲ್, ಮಯೂರ ಹೋಟೆಲ್...ಅವೆಲ್ಲವನ್ನೂ ಬೆಂಗಳೂರಿಗೆ ತಂದುಕೊಡಲು ನನಗೆ ಸಾಧ್ಯವಿಲ್ಲ ಮಾರಾಯ್ತಿ.

ರಾಮಕೃಷ್ಣ ಪುರ, ತೀರ್ಥ ಮುತ್ತೂರಿನಲ್ಲೇ ಮನಸ್ಸು ಬಿಟ್ಟು ಬಂದು, ಅವು ಚೆಂದವಿದ್ದವು. ಇಲ್ಲಿ ಬರೀ ಗಲಾಟೆ. ಒಟ್ಟುರಾಶಿ ಬೆಂಗಳೂರು ಏನೇನು ಚೆನ್ನಾಗಿಲ್ಲ ಅಂತ ತಿಂಗಳು ತಿಂಗಳಿಗೂ ಊರಿಗೆ ಹೋಗುವುದಿದ್ದರೆ ಬಹಳ ಕಷ್ಟ ಆಗುತ್ತೆ ಕಣೆ. ಮಲೆನಾಡ ಹುಡುಗಿ ಅಂತ ದುಂಬಾಲು ಬಿದ್ದು ಇಷ್ಟ ಪಟ್ಟಿದ್ದಕ್ಕೆ ಇದೆಂಥ ಶಿಕ್ಷೆ ನೋಡು.
ಇದು ಕೊನೆ ವಾರ್ನಿಂಗ್. ಡಿಸೆಂಬರ್ ಹತ್ತರೊಳಗೆ ಬೆಂಗಳೂರಿಗೆ ಬಂದುಬಿಡು. ಇಲ್ಲದಿದ್ದರೆ ನಾನೇ ನಿನ್ನ ಮನೆಗೆ ಬರ್ತೀನಿ. ಅದು ಯಾವುದು ನಿನ್ನೂರು, ನೆಂಪೆ ಅಲ್ಲವಾ? ಅಲ್ಲಿಗೇ ಬರ್ತೀನಿ. ನೆಂಪೆ ಅಂದರೆ ಏನರ್ಥ ಹೇಳಿದ್ದೆ? ಉತ್ಸವ ಅಂತಲ್ಲವಾ! ಹ್ಞಾಂ, ಉತ್ಸವದಲ್ಲೇ ಬಂದು ನಿನ್ನನ್ನು ಹೊತ್ತುಕೊಂಡು ಬರ್ತೀನಿ.
ನಿನ್ನವ
ಶ್ರೀನಿ












Click it and Unblock the Notifications