ಮಧ್ವರ ಹೆಸರು ಸೇರಿಸಿದರೆ ಕಾನೂನು ಕ್ರಮ ಕೈಗೊಳ್ಳುವೆ - ತೇಜಸ್ವಿ

Posted By: Super
Subscribe to Oneindia Kannada

ನಾಡಗೀತೆ ‘ಜಯಭಾರತ ಜನನಿಯ ತನುಜಾತೆ’ಯಲ್ಲಿ ಮಧ್ವರ ಹೆಸರನ್ನು ಯಾರಾದರೂ ಸೇರಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕುವೆಂಪು ಅವರ ಪುತ್ರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಎಚ್ಚರಿಸಿದ್ದಾರೆ.

‘ಜಯಭಾರತ ಜನನಿಯ ತನುಜಾತೆ’ ಗೀತೆಯು ‘ಕೊಳಲು’ ಸಂಕಲನದಲ್ಲಿದ್ದು , ಈ ಗೀತೆಯಲ್ಲಿ ಮಧ್ವರ ಹೆಸರಿಲ್ಲ . ‘ಕೊಳಲು’ ಸಂಕಲನ ಕುವೆಂಪು ಅವರು ಬದುಕಿದ್ದಾಗಲೇ ಅನೇಕ ಮರು ಮುದ್ರಣಗಳನ್ನು ಕಂಡಿದ್ದು , ಮರು ಮುದ್ರಣದ ಸಂದರ್ಭದಲ್ಲೂ ಕುವೆಂಪು ಅವರು ಮಧ್ವರ ಹೆಸರನ್ನು ಸೇರಿಸಿಲ್ಲ . ಈ ಕಾರಣದಿಂದಾಗಿ ಮಧ್ವರ ಹೆಸರನ್ನು ಈಗ ಸೇರಿಸುವ ಅಗತ್ಯವೂ ಇಲ್ಲ ಎಂದು ಪೂರ್ಣಚಂದ್ರ ತೇಜಸ್ವಿ ಹೇಳಿದರು.

ಮಧ್ವಾಚಾರ್ಯರ ಹೆಸರನ್ನು ಕುವೆಂಪು ಅವರೇ ಸೇರಿಸಿದ್ದರು ಎನ್ನುವ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹರಿಕೃಷ್ಣ ಪುನರೂರರ ಹೇಳಿಕೆ ಸರಿಯಲ್ಲ . ಕುವೆಂಪು ಒಪ್ಪಿಗೆ ನೀಡಿದ್ದರು, ಹಾಗೆ ಹೇಳಿದ್ದರು ಹೀಗೆ ಹೇಳಿದ್ದರು ಎಂದು ಅನೇಕ ಜನ ಹೇಳುತ್ತಿದ್ದಾರೆ. ಆದರೆ ಈ ಹೇಳಿಕೆಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತೇಜಸ್ವಿ ತಿಳಿಸಿದರು.

ಸಾಹಿತ್ಯ ಪರಿಷತ್ತಿನ ಅಧಿಕಾರ ಬ್ರಾಹ್ಮಣರ ಕೈಗೆ ದೊರೆತಾಗ ಮಧ್ವರ ಹೆಸರನ್ನು ಸೇರಿಸಿ ಹಾಡುವುದು, ಉಳಿದಂತೆ ಮೂಲ ಸ್ವರೂಪದಲ್ಲಿಯೇ ಹಾಡುವುದೆಲ್ಲಾ ನಡೆದಿದೆ. ಪರಿಷತ್‌ ಪ್ರಕಟಿಸಿರುವ ರತ್ನಕೋಶದ ಕೆಲವು ಆವೃತ್ತಿಗಳಲ್ಲಿ ಮಧ್ವಾಚಾರ್ಯರ ಪತ್ತೆಯೇ ಇಲ್ಲ ಎಂದು ತೇಜಸ್ವಿ ಮಾರ್ಮಿಕವಾಗಿ ನುಡಿದರು.

ಕುವೆಂಪು ಅವರ ಗಮನಕ್ಕೆ ಪರಿಷತ್ತಿನ ರಾದ್ಧಾಂತಗಳು ಬಂದಿತ್ತೋ ಇಲ್ಲವೋ ತಮಗೆ ತಿಳಿದಿಲ್ಲ . ಆದರೆ ಕುವೆಂಪು ಅವರಿಗೆ ಮಧ್ವರ ಹೆಸರು ಸೇರಿಸುವ ಇಷ್ಟವಿದ್ದಿದ್ದಲ್ಲಿ , ಮರುಮುದ್ರಣದ ಸಮಯದಲ್ಲಿ ಖಂಡಿತವಾಗಿಯೂ ಸೇರಿಸುತ್ತಿದ್ದರು ಎಂದು ತೇಜಸ್ವಿ ಹೇಳಿದರು.

ಕವಿಯಾಬ್ಬನ ಸೃಜನಶೀಲ ರಚನೆಯನ್ನು ತಿದ್ದುವುದು ಸಲ್ಲ . ನಾಡಗೀತೆಯಾದ ನಂತರ ತಿದ್ದಲು ಹೊರಟಿರುವುದಂತೂ ತೀರಾ ಅಸಹ್ಯ ಹುಟ್ಟಿಸುವ ವಿಚಾರ ಎಂದು ತೇಜಸ್ವಿ ಬೇಸರದಿಂದ ಹೇಳಿದರು. ತಮ್ಮ ಹೇಳಿಕೆಯ ಕುರಿತು ಮಠಾಧೀಶರು ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ - ತಥಾಕಥಿತ ಆಚಾರ್ಯರು ಬೋಧಿಸಿದ್ದೆಲ್ಲಾ ಸುಳ್ಳೇ ಆಗಿದ್ದು , ಪ್ರಸ್ತುತ ಅದನ್ನು ಪುನರುಚ್ಛರಿಸಿದರೂ ಅದು ಸುಳ್ಳೇ ಆಗಿರುತ್ತದೆ ಎಂದರು.

ಇದೊಂದು ಅನಗತ್ಯ ವಿವಾದ -ಜಿಎಸ್ಸೆಸ್‌

ನಾಡಗೀತೆಯ ಕುರಿತು ಉಂಟಾಗಿರುವ ವಿವಾದ ಒಂದು ಅನಗತ್ಯ ಚರ್ಚೆ ಎಂದು ಹಿರಿಯ ಕವಿ ಹಾಗೂ ಕುವೆಂಪು ಅವರ ನಿಕಟವರ್ತಿಯಾಗಿದ್ದ ಡಾ.ಜಿ.ಎಸ್‌.ಶಿವರುದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ. ಕುವೆಂಪು ಅವರ ಕೊಳಲು ಸಂಕಲನದ ಗೀತೆಯಲ್ಲಿ ಮಧ್ವರ ಹೆಸರಿಲ್ಲ . ಸಮಗ್ರಕಾವ್ಯದಲ್ಲೂ ಮಧ್ವರ ಹೆಸರಿಲ್ಲ . ಆ ಕಾರಣದಿಂದಾಗಿ ಈಗ ಮಧ್ವರ ಹೆಸರು ಸೇರಿಸುವುದೂ ಸಲ್ಲ ಎಂದು ಜಿಎಸ್ಸೆಸ್‌ ಹೇಳಿದರು.(ಇನ್ಫೋ ವಾರ್ತೆ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Poornachandra Tejasvi threatens to sue anyone who attempts to tamper his father written poem, recently accepted as State Anthem of Karnataka

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ