ಪ್ರತಾಪ್ ಸಿಂಹಗೆ ನ್ಯಾಯಮೂರ್ತಿಗಳ ಶಭಾಸಗಿರಿ

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಲಯ್ಯ ಮತ್ತು ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗಡೆ ಮತ್ತು ವಿಜಯ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
ಯಾರ್ಯಾರು ಏನೇನು ಹೇಳಿದರು?
ನ್ಯಾ. ಸಂತೋಷ್ ಹೆಗಡೆ : ದಕ್ಷ ಅಧಿಕಾರಿಗಳಿಂದ ಕೂಡಿದ ಲೋಕಾಯುಕ್ತ ಇಲಾಖೆ ಬಳ್ಳಾರಿ ಜಿಲ್ಲೆಯಾದ್ಯಂತ ಸತತವಾಗಿ ಪ್ರವಾಸ ಮಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿ 17 ತಿಂಗಳುಗಳಲ್ಲಿ 1600 ಪುಟಗಳ ಮಾಹಿತಿ ಸಲ್ಲಿಸಿದ್ದೇವೆ. ಆದರೆ, ಕೇವಲ ಎರಡೇ ತಿಂಗಳಲ್ಲಿ ಸರ್ವ ಪುರಾವೆಗಳ ಸಮೇತ ಮಾಹಿತಿ ಕಲೆಹಾಕಿ 'ಮೈನಿಂಗ್ ಮಾಫಿಯಾ' ಬಗ್ಗೆ ಪ್ರತಾಪ್ ಸಿಂಹ ಪುಸ್ತಕ ಬರೆದಿರುವುದು ನಿಜಕ್ಕೂ ಶ್ಲಾಘನೀಯ. ಯಾವುದೇ ಕೋರ್ಟಿನಲ್ಲಿ ಪುಸ್ತಕ ಮುಂದಿಟ್ಟುಕೊಂಡು ಗೆಲ್ಲುವುದು ಸಾಧ್ಯವಿದೆ.
ಮೆಟ್ರಿಕ್ ಟನ್ ನಷ್ಟು ಕಬ್ಬಿಣದ ಅದಿರಿನಿಂದ ಮೈನಿಂಗ್ ದೊರೆಗಳಿಗೆ 7 ಸಾವಿರ ರು.ಯಷ್ಟು ಲಾಭ ದೊರೆಯುತ್ತಿದ್ದರೆ, ಸರಕಾರಕ್ಕೆ ದಕ್ಕುತ್ತಿರುವುದು ಕೇವಲ 28 ರು. ರಾಜ್ಯದ ಸಂಪತ್ತು ಲೋಡುಗಟ್ಟಲೆ ಲೂಟಿಯಾಗುತ್ತಿದೆ. ಇದರ ಲಾಭ ಸರಕಾರಕ್ಕೂ ದೊರೆಯುವುದಿಲ್ಲ ನಮ್ಮ ಜನಕ್ಕೂ ದಕ್ಕುತ್ತಿಲ್ಲ. ಮುಂದಿನ ಜನಾಂಗಕ್ಕಂತೂ ಮೊದಲೇ ದೊರೆಯುವುದಿಲ್ಲ.
ನ್ಯಾ. ಎಮ್ಎನ್ ವೆಂಕಟಾಚಲಯ್ಯ : ಮೈನಿಂಗ್ ಹಗರಣವನ್ನು ಬಯಲಿಗೆಳೆದಿರುವ ಪುಸ್ತಕವನ್ನು ಪ್ರತಾಪ್ ಸಿಂಹ ಅತ್ಯಂತ ದಿಟ್ಟವಾಗಿ ಬರೆದಿದ್ದಾರೆ. ಆದರೆ, ಇಂಥವರಿಗೆ ರಕ್ಷಣೆ ಏನಾದರೂ ಇದೆಯಾ? ಇಷ್ಟೊಂದು ಬೋಲ್ಡಾಗಿ ಬರೆದಿರುವವರ ಪ್ರಾಣಕ್ಕೆ ರಕ್ಷಣೆ ಬೇಕಾಗುತ್ತದೆ. ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ.
ಮಾಫಿಯಾ ಅನ್ನುವುದು ಎಲ್ಲ ಕಡೆ ಇದೆ. ಅವುಗಳಲ್ಲಿ ಮೈನಿಂಗ್ ಮಾಫಿಯಾ ಕೂಡ ಒಂದು. ಇದೇ ಬಗೆಯ ಮಾಫಿಯಾ ಪತ್ರಕರ್ತರಲ್ಲಿಯೂ ಕಾಣಿಸಿಕೊಂಡಿರುವುದು ನಿಜಕ್ಕೂ ವಿಷಾದನೀಯ. ಪತ್ರಿಕೆಗಳಲ್ಲಿ ದಿಟ್ಟ ಬರವಣಿಗೆಗಳು ನಶಿಸಿ ಹೋಗುತ್ತಿವೆ. ಯಾವುದೇ ವಿಷಯದ ಬಗ್ಗೆ ಬೋಲ್ಡಾಗಿ ಬರೆಯುವವರು ಕಣ್ಮರೆಯಾಗುತ್ತಿದ್ದಾರೆ. ಫೋರ್ತ್ ಎಸ್ಟೇಟ್ ಸೈಲೆಂಟ್ ಆಗುತ್ತಿದೆ. ಸಿನಿಕತನ ನನ್ನನ್ನೂ ಆವರಿಸಿಕೊಂಡಿದೆ. ಆದರೆ, ಮೈನಿಂಗ್ ಮಾಫಿಯಾ ಕುರಿತ ಪುಸ್ತಕ ನೋಡಿ ನನ್ನಲ್ಲಿ ಆಶಾಭಾವನೆ ಜಾಗೃತವಾಗಿದೆ.
ವಿಶ್ವೇಶ್ವರ ಭಟ್ : ಕನ್ನಡ ಪತ್ರಿಕೋದ್ಯಮ ಕಂಡ ಅತ್ಯಂತ ಪ್ರತಿಭಾವಂತ ಎಳೆಯ ಪತ್ರಕರ್ತ ಪ್ರತಾಪ್ ಸಿಂಹ. ಅವರು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸತತ ಹತ್ತು ವರ್ಷಗಳಿಂದ ಸಂಪಾದಕೀಯ ಪುಟ ನೋಡಿಕೊಳ್ಳುತ್ತಿರುವುದು ನಿಜಕ್ಕೂ ಅಭಿಮಾನದ ವಿಷಯ.












Click it and Unblock the Notifications