ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇರಿಕ ಮತ್ತು ಅಮೇರಿಕನ್ನರು : ಒಂದು ನೋಟ

By Staff
|
Google Oneindia Kannada News
ಯಾವುದೇ ಒಂದು ದೇಶವನ್ನು ವಿದೇಶಿಗರು ಪರಾಮರ್ಶಿಸುವುದಕ್ಕೂ, ಸ್ವದೇಶಿಯರು ಪರಾಮರ್ಶಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸ್ಪದೇಶಿಯರು ಸ್ವಲ್ಪ ಹೆಚ್ಚು ಉತ್ಪ್ರೇಕ್ಷೆ ಮಾಡುತ್ತಾರೆ. ಆದರೆ, ಜಾನ್‌ಸ್ಟೈನ್‌ ಬೆಕ್‌ ಸ್ವತಃ ಅಮೆರಿಕನ್ನರಾದರೂ ತಮ್ಮ ಪುಸ್ತಕದಲ್ಲಿ ತಮ್ಮ ದೇಶದ ಬಗ್ಗೆ ಕಠೋರ ವಾಸ್ತವಗಳನ್ನೇ ತೆರೆದಿಟ್ಟಿದ್ದಾರೆ.

ಅಮೆರಿಕಾ ಕುರಿತು ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ. ಆದರೆ ಅಮೆರಿಕಾದ ಅನುಭವಗಳ ಕುರಿತು, ಮೂಲ ಅಮೆರಿಕನ್ನರಲ್ಲದವರು ಹಾಗೂ ಇತರ ದೇಶದ ಪ್ರವಾಸಿಗರು ಬರೆದಿರುವ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಂಡಿರುವುದು ಬಹು ಅಪರೂಪ. ಅಮೆರಿಕಾವನ್ನು ಹೊರಗಿನವರು ಹೇಗೆ ನೋಡಿದ್ದಾರೆ ಎನ್ನುವುದಕ್ಕೆ ಈ ಪುಸ್ತಕಗಳು ಸಾಕ್ಷಿಯಾಗಿವೆ.

ಆದರೆ ಯಾವುದೇ ಒಂದು ದೇಶವನ್ನು ವಿದೇಶಿಗರು ಪರಾಮರ್ಶಿಸುವುದಕ್ಕೂ, ಸ್ವದೇಶಿಯರು ಪರಾಮರ್ಶಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸ್ಪದೇಶಿಯರು ಸ್ವಲ್ಪ ಹೆಚ್ಚು ಉತ್ಪ್ರೇಕ್ಷೆ ಮಾಡುತ್ತಾರೆ.

ಜಾನ್‌ ಸ್ಟೈನ್‌ಬೆಕ್‌ ಸ್ವತಃ ಅಮೆರಿಕನ್ನರಾದರೂ ತಮ್ಮ ಪುಸ್ತಕದಲ್ಲಿ ತಮ್ಮ ದೇಶದ ಬಗ್ಗೆ ಅದೆಷ್ಟು ಕಠೋರ ವಾಸ್ತವಗಳನ್ನು ಇಲ್ಲಿ ನೀಡಿದ್ದಾರೆಂದರೆ ಯಾರೂ ನಂಬಲಿಕ್ಕೆ ಸಾಧ್ಯವಾಗುವುದಿಲ್ಲ.

ಅಮೆರಿಕಾ ನಾನೂರು ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡು ಅದು ಈಗ ಜಗತ್ತಿನ ಅಗ್ರಗಣ್ಯ ರಾಷ್ಟ್ರವಾಗಿರುವುದು ನಿಜಕ್ಕೂ ಬೆರಗುಗೊಳಿಸುವ ಸಂಗತಿ. ಇಂತಹ ದೇಶದ ಬಗ್ಗೆ ತಿಳಿಯುವ ಕುತೂಹಲ ಉಳ್ಳವರಿಗೆ, ವಿಶ್ವನಾಥ್‌ ಹುಲಿಕಲ್‌ ಕನ್ನಡಕ್ಕೆ ಭಾಷಾಂತರಿಸಿರುವ ‘ಅಮೆರಿಕಾ ಮತ್ತು ಅಮೆರಿಕನ್ನರು’(ಆಂಗ್ಲಮೂಲ : ಜಾನ್‌ ಸ್ಟೈನ್‌ಬೆಕ್‌) ಎಂಬ ಕೃತಿಯಲ್ಲಿ ಮಹತ್ವದ ಮಾಹಿತಿ ಲಭ್ಯವಾಗುತ್ತದೆ. Book

ಹುಲಿಕಲ್‌ ಅವರ ಈ ಪ್ರಯತ್ನದಿಂದ ನಾವು ಅಮೆರಿಕಾವನ್ನು ಇನ್ನೊಂದು ರೀತಿಯಲ್ಲಿ ಅರಿಯಲು ಸಾಧ್ಯವಾಗಿದೆ. ಅದಕ್ಕಾಗಿ ಅವರು ಅಭಿನಂದನಾರ್ಹರು. ವಿಷಯ ನಿರೂಪಣೆ ಸರಳಗೊಳಿಸಲು ಲೇಖಕರು ಇಡೀ ಪುಸ್ತಕವನ್ನು ಹತ್ತು ಲೇಖನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇವುಗಳು ಅಮೆರಿಕಾದ ಚರಿತ್ರೆ, ರಾಜಕೀಯ ಹಾಗೂ ಆಶೋತ್ತರಗಳನ್ನು ವಾಸ್ತವದ ನೆಲೆಯಲ್ಲಿ ಚರ್ಚಿಸುತ್ತವೆ.

ಪುಸ್ತಕದ ಆಶಯವನ್ನು ಸ್ಟೈನ್‌ ಬೆಕ್‌ ತಮ್ಮ ಮುನ್ನುಡಿಯಲ್ಲಿ ಸವಿವರವಾಗಿ ಬರೆದಿದ್ದಾರೆ. ಅವರ ಮೊದಲ ಪ್ರಬಂಧ ‘ಒಗ್ಗಟ್ಟಿನಲ್ಲಿ ಬಲವಿದೆ’ಯಲ್ಲಿ ಅಮೆರಿಕವನ್ನು ಕಟ್ಟುವಲ್ಲಿ ಹತ್ತು ಹಲವು ಜನಾಂಗಗಳು ಹೇಗೆ ರಾಷ್ಟ್ರೀಯ ಪ್ರವಾಹದಲ್ಲಿ ಸೇರಿಕೊಂಡವೆಂದು ವಿವರವಾಗಿ ಬರೆಯಲಾಗಿದೆ. ಅಮೆರಿಕಾ ಎಂದರೆ ಒಂದು ಜನಾಂಗವಲ್ಲ. ಒಂದೇ ರಾಷ್ಟ್ರದ ಮೂಲವೂ ಅಲ್ಲ. ಅಲ್ಲಿ ವಲಸೆ ಬಂದವರ ಒಂದು ದೊಡ್ಡ ಸಮೂಹವೇ ನಿರ್ಮಾಣವಾಗಿದೆ. ವಿವಿಧ ರಕ್ತದ ಜನ ಸೇರಿ ಅಮೆರಿಕಾವನ್ನು ಕಟ್ಟಿದ್ದಾರೆ ಎಂದು ವಿವರವಾಗಿ ಚಿತ್ರಿತವಾಗಿದೆ.

ಅಮೆರಿಕನ್ನರು ಅಶಾಂತ, ಅತೃಪ್ತ ಹಾಗೂ ಏನನ್ನೋ ಅರಸಿಕೊಂಡು ಹೋಗುವ ವ್ಯಕ್ತಿಗಳು ಎಂದು ವಿದೇಶೀ ಪ್ರವಾಸಿಗರು ಹೇಳುತ್ತಾರೆ. ಇಂತಹ ಅತಿರೇಕದ ಹೇಳಿಕೆಗಳನ್ನು ನೀಡುವ ಮನಸ್ಸುಗಳ ವಿಷಾದ ವ್ಯಕ್ತಪಡಿಸುತ್ತಾರೆ. ‘ಜನತಾ ಸರ್ಕಾರ ಮಾನವರೆಲ್ಲರೂ ಸಮಾನರು’ ಎಂಬ ಪ್ರಬಂಧದಲ್ಲಿ ಸಮಾಜದ ಬಗ್ಗೆ ಅಮೆರಿಕನ್ನರ ಚಿಂತನೆ ಏನು ಎಂಬುದನ್ನು ವ್ಯಾಖ್ಯಾನಿಸಲಾಗಿದೆ. ಅಮೆರಿಕಾದಲ್ಲಿ ಸರ್ಕಾರಕ್ಕಿಂತ ಕಾರ್ಪೊರೇಷನ್‌ ವ್ಯವಸ್ಥೆ ಹೆಚ್ಚು ಪ್ರಬಲವಾಗಿದೆ ಎಂಬ ಲೇಖಕರ ಮಾತು ಕುತೂಹಲಕಾರಿಯಾಗಿದೆ.

ಪುಸ್ತಕವನ್ನು ಓದುತ್ತಾ ಹೋದಾಗ ಒಂದೆಡೆ ಲೇಖಕರು ಉಲ್ಲೆಖಿಸಿರುವ ‘ಅಮೆರಿಕನ್ನರು ಯುದ್ಧ ಪ್ರಿಯರು’ ಎಂದಿದ್ದಾರೆ. ಇದು ಸುಳ್ಳಲ್ಲ. ಯಾಕೆಂದರೆ ಅಮೆರಿಕಾ ಈವರೆಗಿನ ಇತಿಹಾಸವನ್ನು ಬಲ್ಲವರು ಅದನ್ನು ಒಪ್ಪಲೇಬೇಕಾಗುತ್ತದೆ. ಇದರ ಮೂಲ ಹುಡುಕಾಟವೆಂದರೆ ಅಮೆರಿಕನ್ನರು ಸುಖಾನ್ವೇಷಕರು.

ಈ ಬಗೆಗಿನ ಒಂದು ಪ್ರಬಂಧವೂ ಇಲ್ಲಿದೆ. ತಮ್ಮ ಮಕ್ಕಳನ್ನು ಮಕ್ಕಳಾಗಲು ಬಿಡದ ಹಠಮಾರಿ ಪಾಲಕರು ಇಲ್ಲಿದ್ದಾರೆ ಎಂದು ಬರೆಯಲಾಗಿದೆ. ಇದು ಅಮೆರಿಕಾದ ವ್ಯಕ್ತಿತ್ವದ ಮೇಲೆ ತಿರುಗು ಮುರುಗಾದ ಪರಿಣಾಮ ಬೀರಿದೆ.

ಈ ಪುಸ್ತಕದ ಇನ್ನಷ್ಟು ಪ್ರಮುಖ ಅಂಶಗಳೆಂದರೆ ‘ಅಮೆರಿಕಾ ಮತ್ತು ಅಮೆರಿಕನ್ನರು’ ಹಾಗೂ ‘ಅಮೆರಿಕಾ ಮತ್ತು ಪ್ರಪಂಚ’ ಎಂಬ ಪ್ರಬಂಧಗಳು ಇದರಲ್ಲಿ ಅಮೆರಿಕನ್ನರ ಮನಸ್ಸು ಮಹಾತ್ವಾಕಾಂಕ್ಷೆ ರಾಜಕೀಯ- ರಾಯಭಾರಿಯತ್ವ ಇತ್ಯಾದಿಗಳನ್ನು ಸಹಜವಾಗಿ ನೋಡಲಾಗಿದೆ ಮತ್ತು ವಿಶ್ಲೇಷಿಸಲಾಗಿದೆ. ಈ ದೇಶದ ಭೌಗೋಳಿಕ ವಿಶ್ಲೇಷಣೆ ನಮ್ಮನ್ನು ಇನ್ನಷ್ಟು ಅರಿವಿನೆಡೆಗೆ ಕರೆದೊಯ್ಯುತ್ತದೆ.

ಭವಿಷ್ಯದ ಬಗ್ಗೆ ಬರೆದಿರುವ ಲೇಖನದಲ್ಲಿ ಲೇಖಕರ ಕರಾರುವಾಕ್ಕಾದ ಆಶಯವಿದೆ. ಅಮೆರಿಕಾ ಮುಂದೆ ಏನಾದೀತು? ಎನ್ನುವ ಊಹಾನೋಟ ಬೀರಿದ್ದಾರೆ. ನೈತಿಕ ನೆಲೆಗಳು - ನೀತಿಶಾಸ್ತ್ರ, ಆರ್ಥಿಕ ಭದ್ರತೆಗಳು ಕಳಚುತ್ತಾ ಸಾಗಿರುವ ಇಂದಿನ ದಿನಗಳಲ್ಲಿ ನಮ್ಮ ಕಾಲುಗಳು ಮರಳಿನಲ್ಲಿ ಹೂತು ಹೋಗುತ್ತವೆ ಎನ್ನುವ ಮಾತುಗಳು ಎಚ್ಚರಿಕೆ ಗಂಟೆಯಂತೆ ಭಾಸವಾಗಿತ್ತವೆ.

ಒಂದು ದೇಶದ ಬಗ್ಗೆ ತಿಳಿಯುವಾಗ ನಾವು ಅತ್ಯಂತ ನಿರ್ಮಲ ಮನಸ್ಸಿನಿಂದ ಓದಿಗೆ ತೆರೆದುಕೊಳ್ಳಬೇಕಾಗುತ್ತದೆ. ಅಂತಹ ಓದು ಈ ಪುಸ್ತಕದ ಬಗ್ಗೆ ನಮಗೆ ಪ್ರೀತಿ ಮತ್ತು ಆಸಕ್ತಿಯನ್ನು ಹುಟ್ಟಿಸುತ್ತದೆ.

ಒಬ್ಬ ಅಮೆರಿಕನ್‌ ಸುಲಲಿತವಾಗಿ ತನ್ನ ದೇಶದ ಬಗ್ಗೆ ಹೇಳಿಕೊಂಡದ್ದು ಗಮರ್ನಾಹವಾಗಿದೆ. ಆ ಕಾರಣಕ್ಕಾಗಿ ಈ ಪುಸ್ತಕ ನಮಗೆ ಹತ್ತಿರವೆನಿಸುತ್ತದೆ. ಮೈಸೂರಿನ ಕಾವ್ಯಾಲಯ ಪ್ರಕಾಶಕರು ಈ ಪುಸ್ತಕವನ್ನು ಹೊರತಂದಿದ್ದಾರೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X