• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಛಂದ’ದಿಂದ ಮೂರು ಚೆಂದದ ಪುಸ್ತಕಗಳು!

By Staff
|
  • ಡಾ. ಗುರುಪ್ರಸಾದ್‌ ಕಾಗಿನೆಲೆ

VasudhendraDr. Guruprasad Kagineleಪ್ರಿಯ ಓದುಗ, ಮಿತ್ರ ವಸುಧೇಂದ್ರ ಪ್ರಕಾಶಕನಾಗಿದ್ದಾನೆ. ಕನ್ನಡದ ಪುಸ್ತಕ ಪ್ರಕಟಿಸುವ ಸಾಹಸಕ್ಕೆ ಕೈಹಾಕಿದ್ದಾನೆ. ಕಳೆದ ಜನವರಿಯಲ್ಲಿ ತನ್ನ ಮೂರೂ ಪುಸ್ತಕಗಳನ್ನು ತಾನೇ ಪ್ರಕಟಿಸುವ ಮೂಲಕ ಪ್ರಕಾಶಕನಾದ ವಸುಧೇಂದ್ರ ಈ ವರ್ಷ ಮತ್ತೆ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾನೆ. ಮೊನ್ನೆ ಜನವರಿಯಲ್ಲಿ ಈ ಮೂರೂ ಪುಸ್ತಕಗಳ ಬಿಡುಗಡೆ ಬೆಂಗಳೂರಿನಲ್ಲಿ ಆಯಿತು. ಅಚ್ಚುಕಟ್ಟಾಗಿ ಆಯಿತಂತೆ. ಪುಸ್ತಕಗಳ ಕುರಿತು ಓ.ಎಲ್‌. ನಾಗಭೂಷಣ ಸ್ವಾಮಿ, ಅನಂತರಾಮು ಮತ್ತು ನೇಮಿಚಂದ್ರ ಅವರು ಒಳ್ಳೆ ಮಾತಾಡಿದರು. ಎರಡು ವಾರದ ನಂತರ ಹುಬ್ಬಳ್ಳಿಯಲ್ಲಿ ಒಂದು ಸಣ್ಣ ಪರಿಚಯ ಕಾರ್ಯಕ್ರಮವಿತ್ತಂತೆ. ಅದೂ ಚೆನ್ನಾಗಿ ನಡೆಯಿತು ಎಂದು ಮಾತಾಡಿದಾಗ ಹೇಳಿದ್ದ. ಒಟ್ಟು ವಸು ಪ್ರಕಾಶಕನಾಗಿದ್ದಾನೆ. ವಸುವಿನ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತಾ ಇದೆ. ಇನ್ನೂ ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸಬೇಕಾದ ಹೊಣೆಗಾರಿಕೆ ಅವನ ಮೇಲಿದೆ.

ಮೊದಲೇ ಹೇಳಿಬಿಡುತ್ತೇನೆ, ವಸುವಿನ ಛಂದ ಪುಸ್ತಕದ ಲಾಂಛನದಲ್ಲಿ ನನ್ನದೂ ಒಂದು ಪುಸ್ತಕ ಪ್ರಕಟವಾಗಿದೆ.ಪುಸ್ತಕದ ಹೆಸರು ‘ವೈದ್ಯ, ಮತ್ತೊಬ್ಬ’ ನನ್ನ ಪುಸ್ತಕದ ಬಗ್ಗೆ ನಾನೇ ಪರಿಚಯ ಮಾಡಿಕೊಡುವುದಕ್ಕೆ ಸಂಕೋಚವಾಗುತ್ತದೆ. ಆದರೆ, ಈ ಪುಸ್ತಕಗಳನ್ನು ಅಮೆರಿಕದಲ್ಲಿ ಸಾಧ್ಯವಾದಷ್ಟು ಮಾರುವ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿರುವುದರಿಂದ ಕೆಲವೇ ಕೆಲವು ಮಾತುಗಳು. ಇದು ನನ್ನ ಲೇಖನ ಸಂಗ್ರಹ. ದಟ್ಸ್‌ಕನ್ನಡ ಡಾಟ್‌ ಕಾಮ್‌ನ ಓದುಗರಿಗೆ ನನ್ನ ಲೇಖನಗಳ ಪರಿಚಯವಿರಬಹುದು ಅಂದುಕೊಂಡಿದ್ದೇನೆ. ನನ್ನ ವೃತ್ತಿಯ ತಳಮಳಗಳು, ಅಮೆರಿಕಾ, ನಾನು ನೋಡಿದ ಸಿನೆಮಾಗಳು, ಅಲ್ಲಿಲ್ಲಿ ಓದಿದ ಪುಸ್ತಕಗಳು, ಸಮ್ಮೇಳನಗಳು ಇನ್ನಿತರೇ ವಸ್ತುಗಳ ಬಗ್ಗೆ ಒಂದಿಷ್ಟು ಬರೆದುಕೊಂಡಿದ್ದೇನೆ. ವಿಜಯಕರ್ನಾಟಕ, ಕನ್ನಡಪ್ರಭ ಇನ್ನಿತರ ಕನ್ನಡ ಪತ್ರಿಕೆಗಳಲ್ಲಿ ಕೆಲವು ಲೇಖನಗಳೂ ಪ್ರಕಟವಾಗಿವೆ. ಇವೆಲ್ಲವನ್ನೂ ಸೇರಿಸಿ ಒಂದು ಚಂದದ ಸಂಕಲನವನ್ನು ಮಾಡಿದ್ದಾನೆ, ವಸು. ಅವನಿಗೆ ಧನ್ಯವಾದಗಳು.

ಶ್ಯಾಮ್‌ಸುಂದರ್‌ ಗೊತ್ತಲ್ಲ, ಅದೇ ದಟ್ಸ್‌ಕನ್ನಡದ ಸಂಪಾದಕರು. ಅವರು ಕಳೆದ ವರ್ಷ ಅಮೆರಿಕಾಕ್ಕೆ ಬಂದಾಗ ಮಿನೆಸೊಟಾದ ನಮ್ಮ ಪುಟ್ಟೂರು ರಾಚೆಸ್ಟರಿಗೂ ಬಂದಿದ್ದರು. ನಮ್ಮೂರಲ್ಲಿ ಇರುವುದೇ ಮೂರೂ ಮತ್ತೊಂದು ಜನ ಕನ್ನಡಿಗರು ( ಮೂರೂ ಮತ್ತೊಂದು ಅಂದರೆ, ಮೂರೂ ಮತ್ತೊಂದೇ, ಲಿಟರಲಿ). ಎಲ್ಲಾ ಕೂತುಕೊಂಡು ಕಾಫಿ ಕುಡಿಯುತ್ತಾ ಮಾತಾಡುತ್ತಿರಬೇಕಾದರೆ, ಶ್ಯಾಮ್‌ ಹೇಳಿದ್ದರು. ‘ ಕನ್ನಡ ಕಮಾಡಿಟಿ ಆಗಬೇಕು, ಗುರು, ಅಲ್ಲಿಯತನಕ ನಾವೇನೇ ಗುದ್ದಾಡಿದ್ರೂ ಅಷ್ಟೇ. ಕನ್ನಡಾನ ಟೀ ಶರ್ಟಿನ ಮೇಲೆ ಬರ್ಕೊಳೋ ರೀತಿ ಆಗ್ಬೇಕು. ಆಗಲೇ ನಾವೆಲ್ಲಾ ಉಳ್ಕೋಳೋದು ’ ಎಂದಿದ್ದರು.

‘ಛಂದ ಪುಸ್ತಕ’ ಇನ್ನೂ ಎರಡು ಪುಸ್ತಕಗಳನ್ನು ಪ್ರಕಟಿಸಿದೆ. ಒಂದು ಛಂದ ಪುಸ್ತಕದ ಬಹುಮಾನ ಪಡೆದ ಸುನಂದಾ ಪ್ರಕಾಶ್‌ ಕಡಮೆಯವರ ‘ಪುಟ್ಟ ಪಾದದ ಗುರುತು’ ಮತ್ತು ಸುಮಂಗಲಾರವರ ‘ಜುಮುರು ಮಳೆ’ ಎರಡೂ ಕಥಾ ಸಂಕಲನಗಳು. ಈ ಇಬ್ಬರೂ ಕತೆಗಾರ್ತಿಯರೂ ಇತ್ತೀಚಿನ ಕನ್ನಡ ಕಥೆಗಳನ್ನು ಓದುವ ಅಭ್ಯಾಸವಿರುವವರಿಗೆಲ್ಲರಿಗೂ ಚಿರಪರಿಚಿತರಾದವರು. ಇವರಿಬ್ಬರೂ ಪಡೆದ ಬಹುಮಾನಗಳಿಗೆ ಲೆಕ್ಕವಿಲ್ಲ. ಪುಸ್ತಕಗಳಲ್ಲಿ ಪ್ರಕಟಿತವಾದ ಕಥೆಗಳೆಲ್ಲಾ ಬಹುಮಾನ ಬಂದಿರುವ ಕಥೆಗಳೇ. ಸುಮಂಗಲಾರವರ ಕಥೆಗಳಿಗೆ ಜಿ. ಎಸ್‌. ಸದಾಶಿವರವರು ಮುನ್ನುಡಿ ಬರೆದಿದ್ದಾರೆ. ‘ಮೆಲುದನಿಯ ವಿಷಾದರಾಗಗಳು’ ಅಂತ ಕರೆದಿದ್ದಾರೆ. ಕಥೆಗಳನ್ನು ಓದಿದ ಮೇಲೆ, ಈ ವಿಷಾದ ಇಲ್ಲಿನ ಹಲವು ರಾಗಗಳಲ್ಲಿ ಒಂದು ಎಂದು ನನಗೆ ಅನ್ನಿಸಿತು. ವ್ಯಕ್ತ, ಅವ್ಯಕ್ತದ ನಡುವೆ ಕೆಲವೊಮ್ಮೆ ಅಮೂರ್ತ ಅನ್ನಿಸಬಹುದಾದ ಇವರ ಶೈಲಿ, ಸಂವೇದನೆ ಹೊಚ್ಚಹೊಸದು ಮತ್ತು ತಾಜಾತನದಿಂದ ಕೂಡಿದ್ದು ಅನ್ನುವುದರಲ್ಲಿ ಸಂಶಯವಿಲ್ಲ.

ಸುನಂದಾರವರು ಮೂಲತಃ ಉತ್ತರಕನ್ನಡದವರು. ಅವರ ಕಥೆಗಳನ್ನು ನಾನು ಬಹಳ ಓದಿದ್ದೇನೆ. ಇವರೂ ಅಷ್ಟೇ. ಭಾಗವಹಿಸಿದ ಪ್ರತಿ ಕಥಾ ಸ್ಪರ್ಧೆಗಳಲ್ಲೂ ಒಂದು ಬಹುಮಾನ ಪಡೆದೇ ಇದ್ದಾರೆ. ನಿರೂಪಣೆಯಲ್ಲಿ ಮುಟ್ಟಿದರೆ ನಲುಗಿಹೋಗುವಷ್ಟು ಸೂಕ್ಷತೆಯನ್ನು ಹೊಂದಿರುವ ಇವರ ಶೈಲಿ, ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ತೆರೆದುಕೊಳ್ಳಬಹುದಾದಂತ ವಿಶಾಲ ಹರಹು ಮತ್ತು ಜೀವನ ಪ್ರೀತಿ ಇವುಗಳಿಂದ ನಾನು ಹೊಟ್ಟೆಕಿಚ್ಚು ಬರುವಷ್ಟು ಖುಷಿಯಾಗಿದ್ದೇನೆ. ಜಯಂತ ಕಾಯ್ಕಿಣಿಯವರು ಸೊಗಸಾದ ಮುನ್ನುಡಿ ಬರೆದಿದ್ದಾರೆ.

ಇವರಿಬ್ಬರ ಪುಸ್ತಕಗಳನ್ನು ಓದಿದ ಮೇಲೆ ಶ್ಯಾಮ್‌ ಜತೆ ಮಾತಾಡಿದ್ದು ನೆನಪಿಗೆ ಬಂತು ಅಂದರೆ, ಈ ಎರಡೂ ಪುಸ್ತಕ ಓದಿದ ಮೇಲೆ, ಕನ್ನಡದಲ್ಲಿ ‘ಎಲ್ಲಾದರೂ ಇರು’ ಅಂದುಕೊಂಡು , ಬರಕೊಂಡು ಓಡಾಡುತ್ತೀವಿ ಅಂತ ಅರ್ಥ ಬರೋದಿಲ್ಲ. ಆದರೆ, ಸಮಕಾಲೀನ ಕನ್ನಡ ಸಣ್ಣಕಥೆಗಳಿಗೆ ಪ್ರಾತಿನಿಧಿಕವಾಗಿ ನಿಲ್ಲಬಹುದಾಗಿದೆ, ಇವರಿಬ್ಬರ ಕಥೆಗಳು. ಕನ್ನಡ ಬೆಳಕೊಂಡು, ಉಳಕೊಂಡು ಹೋಗೋ ಪರಿಯನ್ನು ತೋರಿಸಿತ್ತು ಅಂತ ನನಗೆ ಅನ್ನಿಸಿತು.

ಈಗ ನನ್ನ ಜವಾಬ್ದಾರಿ ಅಂದರೆ, ಈ ಪುಸ್ತಕಗಳನ್ನು ಅಮೆರಿಕಾದಲ್ಲಿ ಕೈಲಾದಷ್ಟು ಮಾರೋದು. ವಸು ಖರ್ಚು ಮಾಡಿದ್ದಷ್ಟು ದುಡ್ಡನ್ನಾದರೂ ವಾಪಸ್ಸು ಬಂದರೆ, ಮುಂದಿನ ವರ್ಷ ಆತ ಇದೇ ಸಾಹಸಕ್ಕೆ ಕೈ ಹಾಕಬಹುದು. ಈ ಮೂರೂ ಪುಸ್ತಕಗಳಿಗೆ ಭಾರತದಲ್ಲಿ ನೂರು ರೂಪಾಯಿ ಬೆಲೆಯಿಟ್ಟಿದ್ದ. ಅಮೆರಿಕಾದಲ್ಲಿ, ಲೇಖಕಿಯರ ಕಥಾ ಸಂಕಲನಗಳಿಗೆ ತಲಾ ಮೂರು ಡಾಲರ್‌ ಮತ್ತು ನನ್ನ ಪುಸ್ತಕಕ್ಕೆ ಎರಡು ಡಾಲರ್‌ ಅಂತ ನಿಗದಿ ಮಾಡೋಣ ಎಂದು ಅಂದುಕೊಂಡಿದ್ದೀನಿ. ( ಅಂಚೆ ವೆಚ್ಚ ಬಿಟ್ಟು). ನಿಮಗೆ ಒಂದೊಂದೇ ಪುಸ್ತಕಗಳು ಪ್ರತ್ಯೇಕವಾಗಿ ಬೇಕು ಅಂದಲ್ಲಿ ಅದಕ್ಕೂ ಅವಕಾಶವಿದೆ.

ನಿಮಗೆ ಪುಸ್ತಕ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಿ .ನನ್ನ ವಿಳಾಸ 2664, ಗ್ರಾನೈಟ್‌ ಡ್ರೈವ್‌, ರಾಚೆಸ್ಟರ್‌, ಮಿನೆಸೊಟಾ.

Email address: gkaginele@hotmail.com

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X