ಪುಸ್ತಕಗಳ ತಿಪ್ಪೇಗುಂಡಿಯಾಗಿ ಪ್ರಾಧಿಕಾರ!ನಡೆದಿರುವುದೇ ಅವ್ಯವಹಾರ?
ಬೆಂಗಳೂರು : ಧಾನ್ಯವನ್ನು ಕೊಳೆಯಿಸುವ ಸರ್ಕಾರಿ ಗೋದಾಮುಗಳಂತೆ ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕಗಳನ್ನು ಕೊಳೆಯಿಸುತ್ತಿದೆಯೇ? ಇಂಥದೊಂದು ಜಿಜ್ಞಾಸೆ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಕೇಳಿಬಂತು.
ಹಂಪಿಯ ಕನ್ನಡ ವಿವಿ ಪ್ರಸಾರಾಂಗ 1 ಕೋಟಿ ರುಪಾಯಿ ಲಾಭದಲ್ಲಿ ನಡೆಯುತ್ತಿದ್ದರೆ, ಪುಸ್ತಕ ಪ್ರಾಧಿಕಾರ ನಷ್ಟದಲ್ಲೇ ಮುಂದುವರಿದಿದೆ. ಪ್ರಾಧಿಕಾರದ ಗೋದಾಮಿನಲ್ಲಿ 1 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ಪುಸ್ತಕಗಳು ಕೊಳೆಯುತ್ತಿವೆ ಎಂದು ಶಾಸಕ ಎಂ.ಪಿ. ಪ್ರಕಾಶ್ ಆತಂಕ ವ್ಯಕ್ತಪಡಿಸಿದರು. ಇದೇ ಆತಂಕ, ಪುಸ್ತಕಗಳು ಕೊಳೆಯುತ್ತಿರುವ ಬಗ್ಗೆ ಪ್ರಶ್ನೆ ಎತ್ತಿದ ಶಾಸಕ ಡಾ.ಎಂ.ಪಿ. ನಾಡಗೌಡ ಅವರದು.
ನಾಡಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಅವರು, ಪುಸ್ತಕಗಳನ್ನು ಕೊಳೆ ಹಾಕಿರುವಲ್ಲಿ ಯಾವುದೇ ಅವ್ಯವಹಾರ ನಡೆದಿದ್ದಲ್ಲಿ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದರು.
ಕಳೆದ 6 ತಿಂಗಳಲ್ಲಿ ಪ್ರಾಧಿಕಾರ 16 ಲಕ್ಷ ರುಪಾಯಿಗಳ ಪುಸ್ತಕ ವ್ಯಾಪಾರ ನಡೆಸಿದೆ. ಪ್ರಾಧಿಕಾರದ ವಾಹನವನ್ನು ಬಳಸಿಕೊಂಡು ವಿಭಾಗೀಯ ಮಟ್ಟಕ್ಕೆ ಪುಸ್ತಕ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಿಗೂ ಪುಸ್ತಕ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಣಿ ಸತೀಶ್ ಹೇಳುವುದರೊಂದಿಗೆ ಚರ್ಚೆ ಮುಕ್ತಾಯ.(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications