ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಿಟಿ ಆಫ್‌ ಜಾಯ್‌’ಲೇಖಕ ಡಾಮಿನಿಕ್‌ ಲ್ಯಾಪಿಯರ್‌ ಬೆಂಗಳೂರಲ್ಲಿ

By Staff
|
Google Oneindia Kannada News

ಬೆಂಗಳೂರು : ಪ್ರಸ್ತುತ ಹೆಚ್ಚು ಓದಿಸಿಕೊಳ್ಳುತ್ತಿರುವ ಫ್ರೆಂಚ್‌ ಲೇಖಕ ಡಾಮಿನಿಕ್‌ ಲ್ಯಾಪಿಯರ್‌ ಹಾಗೂ ಮತ್ತೊಬ್ಬ ಬರೆಹಗಾರ ಜೇವಿಯರ್‌ ಮೋರೋ ಮಂಗಳವಾರ ಸಂಜೆ ನಗರಕ್ಕೆ ಆಗಮಿಸಲಿದ್ದಾರೆ. ಬುಧವಾರ ಮುಂಜಾನೆ 11 ಗಂಟೆಗೆ ಕೆನ್ಸಿಂಗ್ಟನ್‌ ರಸ್ತೆಯಲ್ಲಿರುವ ಪಾರ್ಕ್‌ ಹೊಟೇಲಿನಲ್ಲಿ ಈ ಇಬ್ಬರೂ ಸಾಹಿತಿಗಳು ತಮ್ಮ ಕೃತಿ It Was Five Past Midnight In Bhopal ನ ಇಂಗ್ಲಿಷ್‌ ಅನುವಾದವನ್ನು ಬಿಡುಗಡೆ ಮಾಡಲಿದ್ದಾರೆ.

1960ರಲ್ಲಿ ಬೋಫಾಲ್‌ ಮಧ್ಯಪ್ರದೇಶದ ರಾಜಧಾನಿಯಾಯಿತು. ಕೃತಿ ಶುರುವಾಗುವುದು ಈ ಕಾಲದ ಘಟನಾವಳಿಗಳಿಂದ. ಕೊನೆಯಾಗುವುದು - ಜಗತ್ತಿನಲ್ಲೇ ಹಿಂದೆಂದೂ ನಡೆಯದಂಥಾ ಅನಿಲ ದುರಂತ ಸಂಭವಿಸಿದ ದಿನದ ನಡುರಾತ್ರಿಯ ಕರಾಳ ನೆನಪುಗಳೊಂದಿಗೆ.

1984ರಲ್ಲಿ ಕೇಂದ್ರ ಕಾರ್ಬೈಡ್‌ ಕೀಟನಾಶಕ ಕಾರ್ಖಾನೆಯಿಂದ ಸೋರಿದ ಸುಮಾರು 5 ಸಾವಿರ ಟನ್‌ನಷ್ಟು ಮೀಥೈಲ್‌ ಐಸೋ ಸಯನೇಟ್‌ ಅನಿಲ ತಕ್ಷಣವೇ ಕೊಂದುಹಾಕಿದ್ದು ಭೋಪಾಲದ 4 ಸಾವಿರ ಜನರನ್ನ. ಸಾವಿರಾರು ಮಂದಿ ಗಾಯಗೊಂಡು ಜೀವನ ಪರ್ಯಂತ ನರಳುವ ದುಸ್ಥಿತಿ ನಿರ್ಮಾಣವಾಯಿತು. ದುರಂತ ಸಂಭವಿಸಿದ ನಂತರದ 12 ವರ್ಷಗಳಲ್ಲಿ ಒಟ್ಟು 22 ಸಾವಿರ ಮಂದಿ ಸತ್ತಿದ್ದಾರೆ. ಜಗತ್ತಿನ ಮೊದಲ ಭಾರೀ ಕೈಗಾರಿಕಾ ದುರಂತ ಇದು.

ಇಂಥಾ ವಸ್ತುವನ್ನ ವಿದೇಶೀಯರಿಬ್ಬರು ಕೃತಿಯಾಗಿಸಿದ್ದು ಯಾಕೆ ?

ಡಾಮಿನಿಕ್‌ ಲ್ಯಾಪಿಯರ್‌ ತಮ್ಮ 14ನೇ ವಯಸ್ಸಿನಲ್ಲೇ ಜಗತ್ತನ್ನು ಸುತ್ತಿದವರು. ಪತ್ರಿಕೋದ್ಯಮಿಯಾಗಿಯೂ ಅನುಭವ ಪಡಕೊಂಡವರು. ಇವರ ‘ಫ್ರೀಡಮ್‌ ಅಟ್‌ ಮಿಡ್‌ನೈಟ್‌’ ಹಾಗೂ ‘ಈಸ್‌ ಪ್ಯಾರಿಸ್‌ ಬರ್ನಿಂಗ್‌?’ ಕೃತಿಗಳೂ ಘಟಿಸಿದ ಸಾಕಷ್ಟು ತಿರುಳನ್ನೇ ಬಿಂಬಿಸಿದ್ದು. ದೇಶ- ವಿದೇಶಗಳ ವಿವಿಧ ಮುಖಗಳ ಬಗ್ಗೆ ಅಪಾರ ಆಸಕ್ತಿಯುಳ್ಳ ಡಾಮಿನಿಕ್‌ರಲ್ಲಿ ಸದಾ ಪತ್ರಕರ್ತ ಜಾಗೃತನಾಗೇ ಇರುತ್ತಾನೆ. ಅನುಭವಕ್ಕೆ ದೊರೆತ ವಿಷಯವನ್ನು ಕೃತಿಯಾಗಿಸುವುದೇ ನೈಜ ಸಾಹಿತ್ಯ ಕೃಷಿ ಅನ್ನೋದು ಅವರ ಅಂಬೋಣ. ಹೀಗಾದಾಗ ಕಲ್ಪನೆಯ ತುಣುಕು ಅದರಲ್ಲಿ ಹದವಾಗಿ ಬೆರೆತರೂ ತಪ್ಪಿಲ್ಲವಂತೆ.

ಜಗತ್ತನ್ನೇ ಸೆಳೆದ ಭೋಪಾಲ್‌ ಅನಿಲ ದುರಂತ ಡಾಮಿನಿಕ್‌ ಮನದ ಬಹು ಕಾಲದ ತುಡಿತ. ಸಂಬಂಧಿ ಜೇವಿಯರ್‌ ಮೋರೋ, ಡಾಮಿನಿಕ್‌ ತುಡಿತಕ್ಕೆ ಚಾಲನೆ ಕೊಟ್ಟು ಸಹಕರಿಸಿದರು. ಅನಿಲ ದುರಂತ ಪುಸ್ತಕವಾಯಿತು. ಇಂಗ್ಲಿಷ್‌ ಅನುವಾದ ಕೂಡ ಸೆಪ್ಟೆಂಬರ್‌ 12, ಬುಧವಾರ ಬಿಡುಗಡೆಗೆ ಸಿದ್ಧವಾಗಿದೆ. ಮುಂದೆ ಅದು ಸಿನಿಮಾ ಕೂಡ ಆಗಲಿದೆ!

ಡಾಮಿನಿಕ್‌ ವಿರಚಿತ ‘ದಿ ಸಿಟಿ ಆಫ್‌ ಜಾಯ್‌’ ಎಂಬ ಕಲ್ಕತ್ತಾದ ಕೊಳಗೇರಿ ಕುರಿತಾದ ಕೃತಿಯ 75 ಲಕ್ಷಕ್ಕೂ ಹೆಚ್ಚು ಪ್ರತಿಗಳು ಬಿಕರಿಯಾದವು ಅನ್ನೋದೇ ಇವರ ಜನಪ್ರಿಯತೆಗೆ ಹಿಡಿದ ಕನ್ನಡಿ. ‘ಈಸ್‌ ಪ್ಯಾರಿಸ್‌ ಬರ್ನಿಂಗ್‌?’ ಕೃತಿ 1981ರಲ್ಲಿ ಚಲಚ್ಚಿತ್ರವೂ ಆಯಿತು. 50 ಅಂತರರಾಷ್ಟ್ರೀಯ ತಾರೆಗಳು ಅದರಲ್ಲಿ ನಟಿಸಿದ್ದರು. ಚಿತ್ರ ಕೂಡ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಆಸ್ಕರ್‌ ಪ್ರಶಸ್ತಿ ವಿಜೇತ ನಿರ್ದೇಕ ಆಲಿವರ್‌ ಸ್ಟೋನ್‌ ಭೋಪಾಲ್‌ ಅನಿಲ ದುರಂತವನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಪ್ರಸಿದ್ಧ ಹಾಲಿವುಡ್‌ ನಟ ಟಾಮ್‌ ಕ್ರೂಸ್‌ ತೋಳ ತೆಕ್ಕೆಯಲ್ಲಿ ಈ ಹೊತ್ತು ಕಳೆದು ಹೋಗಿರುವ ಪೆನೆಲೋಪ್‌ ಕ್ರಝ್‌ ಚಿತ್ರದ ಮುಖ್ಯ ಪಾತ್ರ ನಿರ್ವಹಿಸುವರಂತೆ.

(ಇನ್ಫೋ ಇನ್‌ಸೈಟ್‌)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X