ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ವರ್ಷಗಳ ಹಿಂದೆ ಬಾಪು ಕನ್ನಡ ನಾಡಿಗೆ ಕಾಲಿಟ್ಟ ಆ ಕ್ಷಣ!

By ಬಿ.ಜಿ. ಪೂರ್ಣಿಮಾ
|
Google Oneindia Kannada News

ಮೇ 8 ಕರ್ನಾಟಕದ ಮಟ್ಟಿಗೆ ನೆನಪಿನಲ್ಲುಳಿಯುವಂಥ ದಿನ. ಸರಿಯಾಗಿ ನೂರು ವರ್ಷಗಳ ಹಿಂದೆ ಇದೇ ದಿನ ಬಾಪೂಜಿ ಕರ್ನಾಟಕದ ನೆಲದ ಮೇಲೆ ಪ್ರಥಮವಾಗಿ ಕಾಲಿಟ್ಟಿದ್ದು. ಈ ಸುಸಂದರ್ಭವನ್ನು ಕರ್ನಾಟಕ ಸರಕಾರ ಅತ್ಯಂತ ವೈಭವದಿಂದ ಆಚರಿಸುತ್ತಿದೆ. ಇದರ ಸವಿನೆನಪಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಗಾಂಧೀಜಿ ಬೆಂಗಳೂರಿಗೆ ಇಳಿದಾಗ ಆ ಕ್ಷಣ ಹೇಗಿತ್ತು, ಅವರನ್ನು ಕನ್ನಡಿಗರು ಹೇಗೆ ಸ್ವಾಗಿತಸಿದರು ಎಂಬುದನ್ನು ಜಿ.ಬಿ.ಪೂರ್ಣಿಮಾ ಅವರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.
***

ನೂರು ವರ್ಷಗಳ ಹಿಂದೆ ಗಾಂಧೀಜಿ ಕನ್ನಡ ನಾಡಿಗೆ ಕಾಲಿಟ್ಟ ಆ ಕ್ಷಣದ ಕುರಿತು ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷರೂ ಹಾಗೂ ಗಾಂಧೀ ಅವರೊಂದಿಗೆ ಒಡನಾಟವನ್ನು ಹೊಂದಿದ್ದ ಡಾ: ಹೊ. ಶ್ರೀನಿವಾಸಯ್ಯ ಅವರ ನೆನಪಿನ ಬುತ್ತಿಯ ಪ್ರಕಾರ.... 1915ರ ಮೇ 8ರಂದು ಬೆಳಿಗ್ಗೆ ಗಾಂಧಿ ತಮ್ಮ ಪತ್ನಿ ಕಸ್ತೂರಬಾ ಹಾಗೂ ಪತ್ರಕರ್ತ ನಟೇಶನ್ ಅವರೊಂದಿಗೆ ಮದ್ರಾಸ್ ಮೇಲ್ ರೈಲಿನಲ್ಲಿ ಬಂದಿಳಿದರು.

ಮಹಾತ್ಮಾ ಗಾಂಧಿ ಅವರ ಮೊದಲ ಕರ್ನಾಟಕ ಭೇಟಿಗೆ ಕಾರಣಕರ್ತರಾದವರು ಸಾಹಿತಿ ಹಾಗೂ ಹಿರಿಯ ಪತ್ರಕರ್ತ ದಿವಂಗತ ಡಿ.ವಿ. ಗುಂಡಪ್ಪ. ಅವರ ಪ್ರಯತ್ನದ ಫಲವೇ ಗಾಂಧಿ ಅವರು ಬೆಂಗಳೂರಿಗೆ ಭೇಟಿ ನೀಡಲು ಸಾಧ್ಯವಾಯಿತು. ತಮ್ಮ ಸ್ನೇಹಿತರಾದ ಮದರಾಸಿನ ಜಿ.ಎ. ನಟೇಶನ್ ಅವರ ಸಹಾಯದಿಂದ ಮದರಾಸಿಗೆ ತೆರಳುತ್ತಿದ್ದ ಗಾಂಧೀಜಿ ಅವರನ್ನು ಬೆಂಗಳೂರಿಗೆ ಭೇಟಿ ನೀಡುವಂತೆ ಕೋರಿಕೊಂಡರು. ಗಾಂಧೀ ಕೂಡ ಅದಕ್ಕೆ ಸಮ್ಮತಿ ಸೂಚಿಸಿ, ದಿವಂಗತ ಡಿ.ವಿ.ಜಿ ಅವರ ಕೋರಿಕೆಯಂತೆ ಕರ್ನಾಟಕಕ್ಕೆ ಭೇಟಿ ಕೊಟ್ಟರು.

When Gandhiji came to Bengaluru 100 years back

ಗಾಂಧಿ ಅವರನ್ನು ರೈಲ್ವೆ ನಿಲ್ದಾಣದಿಂದ ಕುದುರೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲು ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದರೆ, ವಿದ್ಯಾರ್ಥಿಗಳು ಕುದುರೆ ಬದಲಿಗೆ ತಾವೇ ಸಾರೋಟನ್ನು ಎಳೆಯಲು ಉತ್ಸುಕರಾಗಿದ್ದರು. ಆದರೆ ಗಾಂಧೀಜಿ ಅವರು ಸಾರೋಟನ್ನು ಹತ್ತಲು ನಿರಾಕರಿಸಿ ಪತ್ನಿ ಸಮೇತ ಆನಂದರಾವ್ ವೃತ್ತದಲ್ಲಿ ತಮಗಾಗಿ ಮೀಸಲಾಗಿದ್ದ ತಮ್ಮ ನಿವಾಸದವರೆಗೆ ನಡೆದೇ ಹೋರಟರು. ವಿದ್ಯಾರ್ಥಿಗಳಿಗೆ ಸಾರೋಟು ಎಳೆಯುವ ಅವಕಾಶ ತಪ್ಪಿತಲ್ಲ ಎಂದು ಬೇಸರವಾದರೂ ಗಾಂಧೀಜಿ ಅವರ ಜೊತೆಗೆ ಹೆಜ್ಜೆಹಾಕಲು ಉತ್ಸಾಹದಿಂದ ಓಡಲಾರಂಭಿಸಿದರು. ಗಾಂಧೀಜಿ ಅವರೊಂದಿಗೆ ಹೆಜ್ಜೆ ಹಾಕಬೇಕಾದರೆ ಉಳಿದವರು ಓಡಲೇಬೇಕಾಗಿತ್ತು.

ಸಹಸ್ರಾರು ಜನರೊಂದಿಗೆ ಹೊರಟ ಪಾದಯಾತ್ರೆ ವಾಸ್ತವ್ಯದ ಸ್ಥಳವನ್ನು ತಲುಪಿದಾಗ ಮಹಿಳೆಯರು ಆರತಿ ಎತ್ತಿ ಅವರನ್ನು ಸ್ವಾಗತಿಸಿದರು. ಗಾಂಧಿ ಅವರಿಗೆ ಊಟಕ್ಕೆ ಏನೇನು ಬೇಕೆಂಬುದನ್ನು ಮೊದಲೇ ವಿಚಾರಿಸಿಕೊಂಡಿದ್ದ ಕೆ.ಎಸ್. ಕೃಷ್ಣ ಅಯ್ಯರ್ ಅವರು ಕಡಲೆಕಾಯಿ ಬೀಜದ ಜೊತೆಗೆ ವಿವಿಧ ಹಣ್ಣುಗಳನ್ನು ತರಿಸಿದ್ದರು. ಗಾಂಧಿ ಅವರು ಕಡಲೆಕಾಯಿ ಬೀಜ ಹಾಗೂ ಪಪ್ಪಾಯಿ ಹಣ್ಣನ್ನು ಮಾತ್ರ ತಿಂದು ಸೇಬಿನ ಹಣ್ಣಿನ ರುಚಿಯನ್ನು ನೋಡಲಿಲ್ಲವಂತೆ. ಸೇಬಿನ ಹಣ್ಣು ಸಾಮಾನ್ಯ ಜನರಿಗೆ ಕೈಗೆಟುಕದ ಹಣ್ಣಾಗಿರುವುದೇ ಅದಕ್ಕೆ ಕಾರಣ.

ಬೆಳಗಿನ ಕಾರ್ಯಕ್ರಮ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ನಡೆಯಿತು. (ಈಗ ಸೆಂಟ್ರಲ್ ಕಾಲೇಜು ಹತ್ತಿರ ಇರುವ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕಟ್ಟಡದಲ್ಲಿ.) ತಮ್ಮ ರಾಜಕೀಯ ಗುರುಗಳಾಗಿದ್ದ ಗೋಖಲೆ ಅವರ ಭಾವಚಿತ್ರವನ್ನು ಅನಾವರಣ ಮಾಡಿ, ಗೋಖಲೆ ಕುರಿತು ಮಾತನಾಡಿದರು. ಅವರು ಅನಾವರಣ ಮಾಡಿದ ಗೋಖಲೆ ಅವರ ಭಾವಚಿತ್ರವು ನರಸಿಂಹರಾಜ ಕಾಲೋನಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಈಗಲೂ ಇದೆ.

ಸಂಜೆ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಗಾಂಧೀಜಿ ಅವರನ್ನು ನೋಡಲು ಜನ ಸಾಗರವೇ ಹರಿದು ಬಂದಿತ್ತು. ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಅವರು ಗಾಂಧಿ ಅವರನ್ನು ಭೇಟಿ ಮಾಡುವ ಸಲುವಾಗಿ ಮೈಸೂರಿನಿಂದ ಕಾರಿನಲ್ಲಿ ಆಗಮಿಸಿದ್ದರು. ತಮ್ಮನ್ನು ಭೇಟಿ ಮಾಡಲು ಬಂದಿದ್ದ ಹಲವು ಗಣ್ಯರನ್ನು ಭೇಟಿ ಮಾಡಿದ ನಂತರ ಮತ್ತೆ ಕರ್ನಾಟಕಕ್ಕೆ ಭೇಟಿ ನೀಡುವುದಾಗಿ ತಿಳಿಸಿ ಅದೇ ದಿನ ರಾತ್ರಿ ರೈಲಿನಲ್ಲಿ ಗಾಂಧೀಜಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಭರವಸೆ ನೀಡಿದಂತೆ ಅವರು ಹಲವು ಭಾರಿ ಕರ್ನಾಟಕಕ್ಕೆ ಆಗಮಿಸಿದ್ದರಲ್ಲದೆ ನಂದಿಬೆಟ್ಟದಲ್ಲಿ ಪ್ರಕೃತಿ ಚಿಕಿತ್ಸೆಗಾಗಿ 45 ದಿವಸಗಳ ಕಾಲ ತಂಗಿದ್ದರು. 1937ರಲ್ಲಿ ಹುದಲಿಗೆ ಭೇಟಿ ನೀಡಿದುದು ಕರ್ನಾಟಕದ ಅವರ ಕೊನೆಯ ಭೇಟಿ.

ದಕ್ಷಿಣ ಆಫ್ರಿಕಾಗೆ ವಕೀಲಿ ವೃತ್ತಿಗಾಗಿ 1893ರಲ್ಲಿ ತೆರಳಿದ್ದ ಮಹಾತ್ಮಾ ಗಾಂಧೀಜಿ ಅವರು ಅಲ್ಲಿಯ ಅನ್ಯಾಯ ಮತ್ತು ಅಹಿಂಸೆಯ ವಿರುದ್ಧ ಹೋರಾಟ ನಡೆಸಿ 21 ವರ್ಷಗಳ ನಂತರ 1915ರ ಜನವರಿ 9ರಂದು ಭಾರತಕ್ಕೆ ಮರಳಿದ್ದರು. ಅವರು ಭಾರತಕ್ಕೆ ಮರಳಿ ಜನವರಿ 9ಕ್ಕೆ ನೂರು ವರ್ಷಗಳಾದ ಕಾರಣ ದೇಶದಾದ್ಯಂತ ದಕ್ಷಿಣ ಆಫ್ರಿಕಾದಿಂದ ಮರಳಿದ ಶತಮಾನೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗಿತ್ತು. ಅದೇ ರೀತಿಯಲ್ಲಿಯೇ, ಮಹಾತ್ಮಾ ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲ ಭೇಟಿ ನೀಡಿ ಮೇ 8ಕ್ಕೆ ನೂರು ವರ್ಷಗಳಾಗುತ್ತಿರುವ ಸಂದರ್ಭವನ್ನು ರಾಜ್ಯ ಸರ್ಕಾರ ಆಚರಿಸುತ್ತಿದೆ. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ವತಿಯಿಂದ ಕರ್ನಾಟಕದಲ್ಲಿ ಗಾಂಧೀ ಮೊದಲ ಹೆಜ್ಜೆ ಶತಮಾನೋತ್ಸವವನ್ನು ರಾಜ್ಯದಾದ್ಯಂತ ಅರ್ಥಪೂರ್ಣವಾಗಿ ಮತ್ತು ಅವಿಸ್ಮರಣೀಯವಾಗಿ ಆಚರಿಸಲು ನಿರ್ಧರಿಸಿದೆ.

ಕರ್ನಾಟಕ ಜನತೆ ಹೆಮ್ಮೆಯಿಂದ ಆಚರಿಸಬೇಕಾಗಿರುವ ಈ ಕಾರ್ಯಕ್ರಮಗಳನ್ನು ವಿಶೇಷವಾಗಿ ಯುವ ಜನರಲ್ಲಿ ಗಾಂಧೀ ವಿಚಾರಧಾರೆಯನ್ನು ಬಿತ್ತುವ ಉದ್ದೇಶದಿಂದ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸಬಲೀಕರಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಹಲವು ಸಂಘಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ಕಾರ್ಯಕ್ರಮದ ವಿವರಗಳು ಹೀಗಿವೆ.

English summary
Father of the nation Mahatma Gandhi stepped on the soil of Karnataka for the first time 100 years back on May 8. Karnataka government has wide plans to celebrate the centenary of Gandhi's visit. G.B. Poornima explains how was the scenario when Gandhiji came to Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X