ಪವಾಡದಂಥ ಘಟನೆ, ನಂಬದೇ ಇರಲು ಹೇಗೆ ಸಾಧ್ಯ?

By: ಟಿ.ಪಿ.ವ್ಯಾಸಮುದ್ರಿ, ಕುಪರ್ಟಿನೋ, ಕ್ಯಾಲಿಫೋರ್ನಿಯ
Subscribe to Oneindia Kannada

ಇದು ವಿಜ್ಞಾನ ಯುಗ, ಕಂಪ್ಯೂಟರ್ ಯುಗ, ಮೊಬೈಲ್ ಯುಗ. ಪರಿವರ್ತನೆ ಜಗದ ನಿಯಮ ಅನ್ನುವ ಹಾಗೆ. ನಮ್ಮಂಥ ಇಳಿ ವಯಸ್ಸಿನವರು 4-5 ದಶಕಗಳಲ್ಲಿ ಅದೆಷ್ಟು ಬದಲಾವಣೆಗಳನ್ನು ಕಂಡಿದ್ದೇವೆ. ಅವುಗಳನ್ನು ಹೇಳಿದರೆ ಈಗಿನವರು(ಹುಡುಗರು) ನಂಬುವುದಿಲ್ಲ. ಉದಾಹರಣೆಗೆ, ಆಗ ಊರಿಂದ ಊರಿಗೆ ಫೋನ್ ಮಾಡಬೇಕಿದ್ದರೆ ಟ್ರಂಕ್-ಬುಕಿಂಗ್ ಮಾಡಬೇಕಿತ್ತು. ಮುಂಜಾನೆ 10 ಗಂಟೆಗೆ ಕಚೇರಿಗೆ ಬಂದು ಧಾರವಾಡದಿಂದ ಗುಲ್ಬರ್ಗಾಕ್ಕೆ ಕಾಲ್ ಬುಕ್ ಮಾಡಿದರೆ ಸಾಯಂಕಾಲದವರೆಗೂ ಸಿಗ್ತಿರ್ಲಿಲ್ಲ. ಅಕಸ್ಮಾತ್ ಸಿಕ್ಕರೆ ನರ ಹರಿಯುವ ಹಾಗೆ ಒದರಬೇಕಾಗುತ್ತಿತ್ತು.

ನಾ ಒಮ್ಮೆ ಆ ಕ್ಲಾರ್ಕ್‌ಗೆ ಏ ಸುಮ್ಮನೆ ಖಿಡಕಿ/ಬಾಗಿಲದಿಂದ ಒದರು ಹವಾದಾಗಿಂದನs ಕೇಳಸ್ತದ ಫೋನ್ ಯಾಕ ಸುಳ್ಳs ಅಂದೆ. ಅದಕ್ಕ ಅವ ಏನ ಮಾಡೋದ್ರಿ ಸಾಹೇಬರ ಹೊಯಿಕೊಂಡರೂ ಕೇಳ್ಸಂಗಿಲ್ಲ ಅಂದ. ಹೀಗಿತ್ತು ಪರಿಸ್ಥಿತಿ. ಈಗ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ಪ್ರಪಂಚದ ಯಾವದೇ ಮೂಲೆಗೂ ಕ್ಷಣಾರ್ಧದಲ್ಲಿ ಮೊಬೈಲ್ನಿಂದ ಮಾತಾಡಬಹುದು. ಕಂಪ್ಯೂಟರ್‌ದಲ್ಲಿ ಮುಖಾ-ಮುಖಿ ನೋಡ್ತಾ ಮಾತಾಡಬಹುದು.

ಇದೆಲ್ಲ ಮಾನವನ ಸಾಧನೆಯ ಪ್ರತೀಕ. ಅವನ ಧೀಶಕ್ತಿ ಮತ್ತು ಸತತ ಪ್ರಯತ್ನದಿಂದ ಸಾಧಿಸಿದ್ದು. ಕಡಿಮೆಯೇನಲ್ಲ. ಚಂದ್ರನ ಮೇಲೆ ಇಳಿದಾಯಿತು, ಬೇರೆ ಗ್ರಹಗಳಿಗೆ ಹೋಗ್ತಾ ಇದ್ದಾನೆ, ಅಂತರಿಕ್ಷದಲ್ಲಿ ತಂಗುದಾಣ ನಿರ್ಮಿಸಿದ್ದಾನೆ. ಎಂಡ್ಎವರ್ ಎಂಬ ಹೆಸರಿನ ಸ್ಪೇಸ್ ಶಟ್ಟಲ್ ಯಶಸ್ವಿ ಉಡ್ದಾಣದ ಬಳಿಕ ಶಟ್ಟಲ್ ಕ್ಯಾರಿಅರ್ ಏರ್ಕ್ರಾಫ್ಟ್ ಮೇಲೆ ಇಟ್ಟು ಅಮೆರಿಕಾದ್ಯಂತ ಎಲ್ಲರಿಗೂ ನೋಡುವ ಅವಕಾಶ ಮಾಡಿ ಕೊನೆಗೆ ಲಾಸ್-ಎಂಜೆಲಿಸ್ದಲ್ಲಿ ಕಾಯಂ ಆಗಿ ಪ್ರದರ್ಶನಕ್ಕಿಟ್ಟರು. (ಆಗ ಅಮೆರಿಕೆಯಲ್ಲಿ ಇದ್ದದ್ದರಿಂದ ನಾನೂ ನೋಡಿದೆ). ಸಾಗರದ ಆಳಕ್ಕೂ ಇಳಿದಿದ್ದಾನೆ. ಭೂಮಿಯ ಮೇಲಂತೂ ಕೇಳುವದೇ ಬೇಡ. ಅದರ ಒಡಲು ಬಗೆದಿದ್ದಾನೆ ಖನಿಜ ಹೊರ ತೆಗೆದಿದ್ದಾನೆ. ಖಗೋಳದಲ್ಲಿ ಬೇರೆ ಬೇರೆ ಗ್ರಹ ನಕ್ಷತ್ರ ಕಂಡು ಹಿಡಿದಿದ್ದಾನೆ. ಜ್ಯೋತಿಷ್ಯದ ಪ್ರಕಾರ 27 ನಕ್ಷತ್ರಗಳು. ಈಗ 28ನೇ ನಕ್ಷತ್ರ ಬಂದಿದೆ. ಗ್ರಹಗಳು ಒಂಭತ್ತು ಹತ್ತನೇ ಗ್ರಹ ಹುಡುಕಿದ್ದಾನೆ/ಹುಡುಕುತ್ತಿದ್ದಾನೆ.(ಜಾಮಾತ್ರು ದಶಮಗ್ರಹ: ಅಳಿಯನನ್ನು ಬಿಟ್ಟು).

Some miraculous real incidents defy science

ಒಂದು ನಕ್ಷತ್ರಕ್ಕೆ ನಾಲ್ಕು ಚರಣಗಳು/ಪಾದಗಳು. ಅಂದರೆ 27 ಗುಂಡ್ಲೆ 4 = 108.12 ರಾಶಿಗಳು ಅಂದರೆ ಒಂಭತ್ತು ಪಾದಗಳಿಗೆ ಒಂದು ರಾಶಿ. "ಅಶ್ವಿನಿ ಭರಣಿ ಕೃತ್ತಿಕಾ ಪಾದಂ ಮೇಷ|ಕೃತ್ತಿಕಾ ತ್ರಿಪಾದಂ ಮೃಗಶಿರಾ ಆರಿದ್ರಾರ್ಧಂ ವೃಷಭ| ಅಂದರೆ ಅಶ್ವಿನಿ ಭರಣಿ 8 ಪಾದ ಮತ್ತು ಕೃತ್ತಿಕಾ ನಕ್ಷತ್ರದ ಮೊದಲ ಪಾದದಲ್ಲಿ ಹುಟ್ಟಿದವರ ರಾಶಿ ಮೇಷ. ಕೃತ್ತಿಕಾ ನಕ್ಷತ್ರದ ಮುಂದಿನ ಮೂರು ಪಾದ, ಮೃಗಶಿರಾದ ನಾಲ್ಕು ಪಾದ ಹಾಗೂ ಆರಿದ್ರಾದ ಎರಡು ಪಾದದಲ್ಲಿ ಹುಟ್ಟಿದವರದು ವೃಷಭ ರಾಶಿ ಹೀಗೆ ಲೆಕ್ಕಾಚಾರ ಮುಂದುವರೆಯುತ್ತದೆ. 28, 29 ನಕ್ಷತ್ರಗಳು ಬರ್ತಾ ಹೋದರೆ ಈ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಆಗ ಜ್ಯೋತಿಷ್ಯ ಶಾಸ್ತ್ರದ ಬದಲಾದ ಸಂಶೋಧನೆ ಆಗಬೇಕಾಗುತ್ತದೆ. ಇರಲಿ ಮೊದಲೇ ಪಂಚ ಭವತಿ ಪಂಚ ನ ಭವತಿ ಎಂಬುದಾಗಿ ಇರೋದರಿಂದ ಎಲ್ಲ ಭವಿಷ್ಯಗಳು ನಿಜವಾಗುವದಿಲ್ಲ ಆ ಮಾತು ಬೇರೆ.

ಈ ರೀತಿ ಮನುಷ್ಯ ಏನೆಲ್ಲ ಸಾಧಿಸಿದ್ದಾನೆ. ಜನನ ಮರಣಗಳನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಹೆಣಗುತ್ತಿದ್ದಾನೆ. ಒಂದು ರೀತಿಯಲ್ಲಿ ಜನನವನ್ನು ತನ್ನ ಹಿಡಿತಕ್ಕೆ ತಂದಿದ್ದಾನೆ ಎಂದು ಹೇಳಬಹುದೇನೋ. ತಾರೀಖು 11-11-2012ರಂದು ಒಬ್ಬರ ಮನೆಗೆ ಮಗುವಿನ ಮೊದಲ ಹುಟ್ಟು ಹಬ್ಬಕ್ಕೆ ಹೋಗಿದ್ದೆವು. ಮಗು ಜನಿಸಿದ್ದು 11.11.2011ರಂದು. ಅದು ತಾನಾಗಿ ಆ ದಿನ ಜನಿಸಿದ್ದಲ್ಲ. ಅದನ್ನು ಅದೇ ದಿನ ಬೇಕೆಂದು ಪಡೆದದ್ದು. ಮುಂದಿನ ವರ್ಷವೂ ಅನೇಕ ಶಿಶುಗಳು 12.12.2012ರಂದು ಜನಿಸಿದ್ದನ್ನು ಓದಿದೆವು.

ಇದು ವಿಜ್ಞಾನ ತಂತ್ರಜ್ಞಾನದ ಸಾಧನೆ ಅಲ್ಲದೆ ಮತ್ತೇನು? ನಮ್ಮ ಹಳ್ಳ್ಯಾಗ, ದಿನದಾಗ ಬಿದ್ದ ಬಸುರಿ ಇದ್ದರ, ಏನ ಆತವಾ ಗಂಡೋ ಹೆಣ್ಣೋ ಅಂತ ಕೇಳಿದಾಗ, ಎಲ್ಲಿದsಯವ್ವಾ ನಾಕ ದಿನಾ ಆತು ಬ್ಯಾನಿ ತಿನ್ನಾಕ ಹತ್ತ್ಯಾಳು ಇನ್ನೂ ಏನೂ ಇಲ್ಲ. ದೇವರು ಯಾವಾಗ ಕಣ್ಣ ತೆಗಿತಾನೋ ಅಂತಿದ್ರು. ಆಗ ಇಂಥಾ ಪರಿಸ್ಥಿತಿ ಇತ್ತು.

ಇನ್ನು ಸಾವಿನ ವಿಷಯ. ಸಾವು ಇಂತಿಷ್ಟು ದಿನಗಳಲ್ಲಿ ಅಂತ ಖಚಿತವಾದಾಗ ಎಂಥವರಿಗಾದರೂ ಚಿಂತೆ, ಭಯ, ಹೆದರಿಕೆ ಆಗುವುದು ಸಹಜ. ಗಟ್ಟಿ ಮನಸ್ಸು ಮಾಡಿ ಇದನ್ನು ಮೆಟ್ಟಿ ನಿಂತರೆ ಯಾವ ರೋಗವನ್ನಾದರೂ ಹಿಮ್ಮೆಟ್ಟಿಸಬಹುದು ಸಾವನ್ನು ಗೆಲ್ಲಬಹುದು ಅಂತಾರೆ. ಆದರೆ ಇದು ಎಷ್ಟು ಜನರಿಂದ ಸಾಧ್ಯ? ಎಲ್ಲರ ಕೈಯಿಂದ ಆಗುವ ಮಾತಲ್ಲ. ಆದರೂ ಅಲ್ಲಲ್ಲಿ ಇಂಥ ದರ್ಶನಗಳಿವೆ. ಮರಣವನ್ನೂ ಕೈಗೆ ತೆಗೆದುಕೊಳ್ಳುವ/ಮುಂದೂಡುವ ವಿಧಾನ ನಿಧಾನವಾಗಿ(ಸಾಧಿಸಲು) ಶುರು ಆಗಿದೆ.

ಬಹಳಷ್ಟು ಸಂದರ್ಭಗಳಲ್ಲಿ ವೈದ್ಯರ ಮಾತು ದಿಟವಾಗಿದ್ದುಂಟು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಡಾಕ್ಟರ್ ಹೇಳಿದ ಭವಿಷ್ಯವೂ ಸುಳ್ಳಾಗಿ ಹೋಗುತ್ತದೆ. ಇದಕ್ಕೆ ಉದಾಹರಣೆಯಾಗಿ ಒಂದು ಘಟನೆಯನ್ನು (ನಾನು ಪ್ರತ್ಯಕ್ಷ ಕಂಡಿದ್ದು) ಇಲ್ಲಿ ಹೇಳಬಯಸುತ್ತೇನೆ.

ನಮ್ಮ ಊರು ಬಿಜಾಪುರ ಜಿಲ್ಲಾದ ಕೃಷ್ಣಾ ತೀರದ ಒಂದು ಸಣ್ಣ ಹಳ್ಳಿ. ದೂರದ ಹುಬ್ಬಳ್ಳಿಯಲ್ಲಿ ನಮ್ಮ ತಂದೆಯ ಸಂಬಂಧಿ ಒಬ್ಬರು ಇದ್ದರು. ಅವರಿಗೆ ಮೈಯಾಗ ಆರಾಮ ಇಲ್ಲ ಅಂತ ಅವರನ್ನ ನೋಡಿಕೊಂಡು ಬರಲು ಹುಬ್ಬಳ್ಳಿಗೆ ಹೋದರು. ಅವರಿಗೆ T.B ಕೊನೆಯ ಹಂತ ತಲುಪಿದೆ ಮುಂದ ಸಣ್ಣಾಗಿ ಕ್ಯಾನ್ಸರ್ ಆದರೂ ಆದೀತು. ಇನ್ನೇನು ಭಾಳ ಅಂದ್ರ 2-3 ತಿಂಗಳ ಬದುಕಬಹುದು. ಕಾರಣ ಅವರಿಗೆ ಯಾವದೇ ತ್ರಾಸ ಕೊಡಬ್ಯಾಡ್ರಿ, ಬೇಕ್ಕಾದ್ದು ತಿನ್ಲಿ ಅಂತ ಡಾಕ್ಟರ್ ಹೇಳ್ಯಾರ ಅಂತ ಗೊತ್ತಾತು. (ರೋಗಿಗೆ ಇದು ಗೊತ್ತಿದ್ದಿದ್ದಿಲ್ಲ). ಆಗ ಹುಬ್ಬಳ್ಳಿಯೊಳಗ KMC ಇನ್ನೂ ಆಗಿದ್ದಿಲ್ಲ. (ಇದು 54-55ರ ಮಾತು KMC 57ಕ್ಕ ಶುರು ಆತು.) ಇನ್ನ ಹೋದ್ರ ಮೀರಜ ಇಲ್ಲಾ ಸೋಲಾಪುರಕ್ಕ ಹೋಗಬೇಕಿತ್ತು. ಬೆಂಬಿಡದ ಬಡತನ ಮತ್ತ ಡಾಕ್ಟರ್ ಹಂಗ ಹೇಳದೆ 2-3 ತಿಂಗಳು ಅಂತ ಇಷ್ಟs ಹೇಳಿದ್ರು.

ಅದಕ್ಕ ನಮ್ಮ ತಂದಿ ಇವನನ್ ನಮ್ಮ ಹಳ್ಳಿಗೆ ಕರಕೊಂಡು ಹೋಗ್ತೀನಿ, ಹವಾ ಬದಲಾದರ ಸರಿ ಹೋಗಬಹುದು ನೋಡೂಣು ದೇವರು ಇದ್ದಾನ ಅಂತ ಅವನನ್ ನಮ್ಮ ಊರಿಗೆ ಕರಕೊಂಡು ಬಂದರು. ಅವನ್ ನೋಡಿ ಘಾಬರಿ ಆತು. ಅವನ ಅವತಾರ ಘಾಬರಿ ಆಗೂಹಂಗನs ಇತ್ತು. ಬಾಗಲ ಸಂದ್ಯಾಗ ಸಿಕ್ಕ ಸತ್ತ ಒಣಗಿದ ಬಿಳಿ ಹಲ್ಲೀಗತೆ ಆಗಿದ್ದ. ಅವನ ದೇಹ ಎಲಬಿನ ಹಂದ್ರ ಆಗಿತ್ತು. ಇವ ಇಲ್ಲೇ ಸತ್ತ್ನಂದ್ರ ನಮಗ ಅಪವಾದ ಬರ್ತದ ಅಂತ ನಮ್ಮ ಅವ್ವ ವಟವಟ ಹಚ್ಚಿದ್ಲು. ಅಪ್ಪ ಇರ್ಲಿ ದೇವರಿದ್ದಾನ ಅಂದ್ರು.

ಒಂದ ನಾಕ ದಿನ ವಿಶ್ರಾಂತಿ ಆದ ಮ್ಯಾಲ ಅವನ್ ಹೌರಗ ನಮ್ಮ ಹೊಲದ ಕಡೆ ಕರಕೊಂಡು ಹೋಗಿ ಬರತಿದ್ರು. ನಮ್ಮ ಹೊಲ ಸನೇನ ಇತ್ತು. (ಒಂದ ಕಿಲೋ ಮೀಟರ್). ಮುಂದ ದಿನಾ ಮುಂಜಾನೆ ಅವನನ್ನ ಹೊಲಕ್ಕ ಕರಕೊಂಡ ಹೋಗಿ ಬೆಳಸಿ/ಸೀತ್ನಿ ತಯಾರ ಮಾಡಿ ಕೊಡಲಿಕ್ಕೆ ವ್ಯವಸ್ಥಾ ಮಾಡಿದರು. ನಮ್ಮ ಹೊಲದಾಗ ಆಳೆತ್ತರ ಬೆಳೆದ ಜೋಳದ ಪೈರು ನಿಂತು ನೋಡೂ ಹಂಗ ಇತ್ತು. ಎರಡೂ ಕೈಗೆ ಅಮುಕದ ದೊಡ್ಡ ತೆನೆಗಳು, ಅದರಲ್ಲಿ ಹಾಲು ತುಂಬಿದ ಎಳೇ ಹಸಿರು ಕಾಳುಗಳು, ಹಸಿರು ಬಣ್ಣದ ಮುತ್ತಿನಂತೆ ಹೆಣೆದುಕೊಂಡಿದ್ದವು.

ಎರಡೇ ಎರಡು ತೆನೆಗಳನ್ನು ಕುಳ್ಳಿನಿಂದ ತಯಾರಿಸಿದ (ಒಲೆ) ಬೆಂಕಿಯಲ್ಲಿ ಬೇಯಿಸಿ ಉದುರಿಸಿದರೆ ಒಂದು ಚಟಾಕು ಕಾಳು ಬರ್ತಿದ್ದು. (ಪುಷ್ಯ, ಮಾಘ ಮಾಸ ಅಂದರೆ ಜನವರಿ, ಫೆಬ್ರವರಿ ತಿಂಗಳು). ಅಷ್ಟೊಂದು ಚಳಿಯೂ ಅಲ್ಲದ ಭಾಳ ಬಿಸಿಲೂ ಅಲ್ಲದ ಒಳ್ಳೇ ಆರೋಗ್ಯಕರ ಕೃಷ್ಣಾ ತೀರದ ಹವಾಮಾನ. ಬೆಳಸಿ/ಸೀತ್ನಿ ಊದಿಕೊಂಡು ಬಿಸಿಬಿಸಿಯಾಗಿ ಬೆಲ್ಲ ಇಲ್ಲ ಪುಥಾಣಿ ಹಿಂಡಿ/ಪುಡಿಯೊಂದಿಗೆ ಸೇವಿಸಿ ಮನೆಗೆ ಬಂದು ಬೆಣ್ಣೆ ತೆಗೆದ ಮಜ್ಜಿಗೆ ಒಂದು ದೊಡ್ಡ ಲೋಟ ತುಂಬಾ ಕುಡಿಯುತ್ತಿದ್ದರು.

ನಮ್ಮ ಮನೆಯಲ್ಲಿ ಮಜ್ಜಿಗೆ ಖಂಬ ಅಂತನೇ ಇತ್ತು. ಅದಕ್ಕೆ ಹಗ್ಗ ಹಾಕಿ ಕಡಗೋಲಿಗೆ ಸುತ್ತಿ, ಕೆಳಗೆ ಕೆನೆಯಿಂದ ಕೂಡಿದ ಮೊಸರಿನ ಗುಂಡಿ (ಪಾತ್ರೆ) ಯಲ್ಲಿ ಆ ಕಡಗೋಲು ಇರಿಸಿ ಹಗ್ಗ ಜಗ್ಗುತ್ತ ಮೊಸರು ಕಡೆಯುವದು. ನಮ್ಮ ತಾಯಿ ಹೀಗೆ (ಹಾಡು ಹೇಳುತ್ತ) ಮೊಸರು ಕಡೆದು ಬೆಣ್ಣೆ ತೆಗೆಯುತ್ತಿದ್ದರು. ಈಗ, ಈ ದೃಶ್ಯ ಯಶೋದಾ ಮಾತೆ ಬೆಣ್ಣೆ ಕಡೆಯುವ, ಮುಖಕ್ಕೆ ಬೆಣ್ಣೆ ಮೆತ್ತಿದ, ಕೃಷ್ಣನ, ಬಾಲ್ಯದ ದಿನಗಳನ್ನು ನೆನೆಪಿಸುವ ಯಾವದೋ ಕ್ಯಾಲೆಂಡರಿನಲ್ಲಿ ಮಾತ್ರ ನೋಡಲು ಸಿಗಬಹುದು.

ನದಿಯಲ್ಲಿ ಈಸಿ ಬಂದು ಮಧ್ಯಾನ್ಹ ಮಂಡಿಗೆಯಂತಹ ಬಿಸಿ ಭಕ್ಕರಿ, ಪಲ್ಯ, ಹಾಲು ಮೊಸರು, ಗೋದೀ ಹೊಲದಲ್ಲಿ ಬೆಳೆದ ಹಕ್ಕರಕಿಸೋಪ್ಪಿನ ಕೋಸಂಬರಿ. ರಾತ್ರಿ ಮತ್ತೆ, ಮೊಸರ ಗಡಿಗಿ ತರಿಸಿ ಮೊಸರು ಅವಲಕ್ಕಿ/ಭಕ್ಕರಿ ಇತ್ಯಾದಿ. ಮಲಗುವಾಗ ಒಂದು ವಾಟಗಾ ಬಿಸಿ ಹಾಲು. ಇದು ಅವರ ದಿನಚರಿಯಾಗಿತ್ತು. ಈ ರೀತಿ ರಾಯರು 1-2 ತಿಂಗಳಲ್ಲಿ ಚಿಗುರಿಕೊಂಡು ಮೊದಲಿನಂತೆ ಒಳ್ಳೇ ಆರೋಗ್ಯವಂತರಾದರು.

ಆ ಮೇಲೆ ಒಂದು 15-20 ದಿವಸ ಬಿಟ್ಟು ಅವರು ಹುಬ್ಬಳ್ಳಿಗೆ ಹೊರಟು ಹೋದರು. ತಾವು ತೋರಿಸಿದ ಡಾಕ್ಟರ್ ಕಡೆ ಹೋದಾಗ ಇವರನ್ನು (3 ತಿಂಗಳ ನಂತರ) ನೋಡಿ ಇವನೆಲ್ಲೋ ಕೃಷ್ಣಾರ್ಪಣ ಆಗ್ಯಾನ ಅಂದ್ರ ಮತ್ತ ಬಂದ್ನಲ್ಲ. ಏನ ದೆವ್ವ್ ಗಿವ್ವ್ ಆಗಿ ಬಂದಾನೋ ಅಂತ ಘಾಬರಿ ಆದರಂತ. ತಪಾಸ್ ಮಾಡಿ ನೋಡಿದಾಗ ಯಾವ ಜಡ್ಡಿನ ಲಕ್ಷಣವೂ ಕಂಡು ಬರ್ಲಿಲ್ಲಂತ. ಮುಂದ ಅವರು ನೌಕರಿ ಮಾಡಿ 10-15 ವರ್ಷಗಳ ಹಿಂದೆ ತಮ್ಮ ವಯಸ್ಸಿನ 80ನೇ ವರ್ಷಕ್ಕೆ ತೀರಿಕೊಂಡರು.

"ನಿಮ್ಮ ಅಪ್ಪ ನನ್ನನ್ನ ನಿಮ್ಮ ಊರಿಗೆ ಕರಕೊಂಡು ಹೋಗಿ ನನಗ ಪುನರ್ಜನ್ಮ ಕೊಟ್ಟ. ತಾ ಮಾತ್ರ ಭಾಳ ಲಗೂನೆ ಸಣ್ಣ ವಯಸ್ನ್ಯಾಗ ಸತ್ತ. ನಾನೂ ಅವನೂ ವಾರ್ಗೀನೇ. ನಿಮ್ಮ ಊರ ಹವಾ ಭಾಳ ಛಲೋ ಮತ್ತ ಬೆಳಸಿ/ಸೀತ್ನಿ, ಮಜ್ಜಿಗಿ ಇದರಿಂದನ ನನ್ನ ಪ್ರಕೃತಿ ಸುಧಾರಿಸಿತು" ಅಂತ ಅನೇಕ ಸಲ ನನಗ ಹೇಳಿದ್ದರು. ಅಂದರೆ ಅವರು ಸಾವಿನಂಚಿನಲ್ಲಿದ್ದಾರೆ ಎಂದು ಡಾಕ್ಟರ್ ಹೇಳಿದ ಮೇಲೆ ಸುಮಾರು 40-45 ವರ್ಷ ಆರೋಗ್ಯದಿಂದ ಬದುಕಿದ್ದರು. ಇದಕ್ಕೆ ಏನನ್ನಬೇಕು.

ಈ ವಿಚಾರವಾಗಿ ಎರಡು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಒಂದು: ಅವರ ಆಯುಷ್ಯ ಗಟ್ಟಿಯಾಗಿತ್ತು ಅದಕ್ಕೆ ಬದುಕಿದರು. ದೇವರು ದೊಡ್ಡವ. ಎರಡು: ಮನೋಬಲವೊಂದಿದ್ದರೆ ರೋಗ ಏನು ಮಹಾ. ಆದರೆ ಅವರಿಗೆ ಡಾಕ್ಟರ್ ಹೇಳಿದ ಸಾವಿನ ವಿಷಯ ತಿಳಿಸಿರಲಿಲ್ಲ. ಹೀಗಾಗಿ ಇವರ ವಿಷಯದಲ್ಲಿ ಮನೋಬಲ ಅಂತ ಹೇಳುವದು ಕಷ್ಟ.

ಈ ಪ್ರಸಂಗದಲ್ಲಿ ಒಂದು ಸಂಸ್ಕೃತ ಸುಭಾಷಿತ ನೆನಪಾಗುತ್ತದೆ.

"ಆಯು: ಕರ್ಮಚ ವಿತ್ತಂಚ ವಿದ್ಯಾ ನಿಧನಮೇವಚ |
ಪಂಚೈತಾನ್ಯಪಿ ಸ್ಯಜ್ಜ್ಯಂತೆ ಗರ್ಭಸ್ಥಸ್ಸೈವ ದೇಹಿನ:|

ಅಂದರೆ ಮನುಷ್ಯ ಇನ್ನೂ ಗರ್ಭದಲ್ಲಿರುವಾಗಲೇ ಅವನ ಆಯುಸ್ಸು, ಕೆಲಸ, ಹಣ, ವಿದ್ಯೆ, ಮತ್ತು ಮರಣ ಇವು ಐದೂ ನಿಶ್ಚೈಸಲ್ಪಡುತ್ತವೆ. ಇಷ್ಟೆಲ್ಲಾ ಸಾಧಿಸಿದ್ದರೂ ಇನ್ನೂ ಅನೇಕ ನಿಗೂಢಗಳು ಮಾನವನ ಕೈಗೆಟಕದೆ ಉಳಿದಿವೆ ಎಂಬುದಾಗಿ ವಿಜ್ಞಾನಿಗಳೇ ಒಪ್ಪಿಕೊಳ್ಳುತ್ತಾರೆ. ಆದ್ದರಿಂದ ಜನನ ಮರಣಗಳು ನಮ್ಮ ಕೈಯಲ್ಲಿ ಇಲ್ಲಾ ಅದು ದೇವರ ಸಂಕಲ್ಪ ಅಂತ ಆಸ್ತಿಕರು, ವಿಜ್ಞಾನ ಮನೋಬಲ ಅಂತ ಇನ್ನುಳಿದವರು ಹೇಳುತ್ತಾರೆ. ಅದು ಅವರವರಿಗೆ ಬಿಟ್ಟ ವಿಷಯ/ವಿಚಾರ. ಇದು ನಡೆದು ಹೋದ ಪವಾಡದ0ಥ ಘಟನೆಯಾದ್ದರಿಂದ ನಂಬದೇ ಇರಲು ಹೇಗೆ ಸಾಧ್ಯ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We are living in digital era. Everything is available at the finger tips. We are at such a stage, where we can decide our life and death too. Few decades ago the life was not like this. But, some incidents did defy the logic of nature. Vyasmudri narrates an interesting incident of that kind.
Please Wait while comments are loading...