ತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವ

By: ಡಿ.ಜಿ.ಮಲ್ಲಿಕಾರ್ಜುನ
Subscribe to Oneindia Kannada

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಾಡಿನ ಮಧ್ಯೆ ಉಳಿದು, ಇಡೀ ಜಗತ್ತನ್ನು ತಮ್ಮ ಮನೆಯ ಒಳಗೆ ಎಳೆದುಕೊಂಡವರು. ಸಾಹಿತ್ಯ, ಕನ್ನಡ ತಂತ್ರಾಂಶ, ಫೋಟೋಗ್ರಫಿ, ಪೇಂಟಿಂಗ್ ...ಹೀಗೆ ವಿವಿಧ ವಿಷಯಗಳಲ್ಲಿ ಅವರು ಮಾಡಿದ ಕೆಲಸ ವಾಹ್, ಅದ್ಭುತ. ಇಂದು (ಸೆಪ್ಟೆಂಬರ್ 8) ಅವರ ಜನ್ಮದಿನ. ಅವರು ನಮ್ಮ ಜತೆಗೆ ಇದ್ದಿದ್ದರೆ 78 ವರ್ಷ ವಯಸ್ಸು. ಅವರ ಮನೆಗೆ ಭೇಟಿ ನೀಡಿದ್ದ ಫೋಟೋಗ್ರಫರ್, ಪತ್ರಕರ್ತ-ಲೇಖಕ ಶಿಡ್ಲಘಟ್ಟದ ಡಿ.ಜಿ.ಮಲ್ಲಿಕಾರ್ಜುನ ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

"ಅಲ್ರೀ, ನಾನೂ ನಿಮ್ಮಂತೆ ಮನುಷ್ಯ. ಕಷ್ಟಪಟ್ರೆ ನೀವು ಕೂಡ ಈ ರೀತಿ ಫೋಟೋ ತೆಗೀಬಹುದು" ಎಂದು ತೇಜಸ್ವಿಯವರು ಅಂದು ಹೇಳಿದ್ದು ಈಗಷ್ಟೇ ಹೇಳಿದಂತಿದೆ. ಅವರ ಮನೆ ಟೀಪಾಯ್ ಮೇಲೆಲ್ಲ ನಾನಾ ವಿಧದ ಹಕ್ಕಿಚಿತ್ರಗಳು. ಕೆಲವೊಂದನ್ನಂತೂ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ನಾನು ನೋಡಿದ್ದು.[ತೇಜಸ್ವಿ ನೆನಪಲ್ಲಿ ಪ್ಯಾಪಿಲಾನ್ ಸರಣಿ ಕೃತಿ ಬಿಡುಗಡೆ]

Poornachandra tejaswi broght world into his house

ತೇಜಸ್ವಿಯವರು ತೆಗೆದಿದ್ದ ಚಿತ್ರಗಳನ್ನು ನೋಡುತ್ತಾ ಬೆರಗಾಗಿ, "ಇವೆಲ್ಲ ನಮ್ಮ ಕೈಲಿ ತೆಗೆಯೊಕಾಗಲ್ಲ" ಎಂದುಬಿಟ್ಟೆ. "ಅಲ್ರೀ, ನಾನೂ ನಿಮ್ಮಂತೆ ಮನುಷ್ಯ. ಕಷ್ಟಪಟ್ರೆ ನೀವು ಕೂಡ ಈ ರೀತಿ ಫೋಟೋ ತೆಗೀಬಹುದು" ಎಂದ ತೇಜಸ್ವಿಯವರ ಮಾತು ನನ್ನೊಬ್ಬನಿಗೇ ಅಲ್ಲ, ಎಲ್ಲರಿಗೂ ಎಲ್ಲ ಕೆಲಸಕ್ಕೂ ಅನ್ವಯಿಸುತ್ತದೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಪಕ್ಷಿ ಮತ್ತು ಕೀಟ ಜಗತ್ತಿನೆಡೆಗೆ ಬೆರಗಿನಿಂದ ನಾನು ನೋಡಲಾರಂಭಿಸಿದ್ದು ತೇಜಸ್ವಿಯವರ ಪುಸ್ತಕ ಓದಿದ ನಂತರವೇ. ಶಾಲೆಯಲ್ಲಿ ವಿಜ್ಞಾನ ಪುಸ್ತಕಗಳಿಂದ ಆಗದ ಕೆಲಸವನ್ನು ಅವರ ಪುಸ್ತಕಗಳು ಮಾಡಿದವು. ಅದರಿಂದ ಸ್ಫೂರ್ತಿ ಪಡೆದ ನಾನು ಮಾಡಿದ ಹಕ್ಕಿ ವೀಕ್ಷಣೆ ಆರಂಭಿಸಿದೆ. ಕ್ಯಾಮೆರಾ ಖರೀದಿಸುವ ಬಗ್ಗೆ ಅವರಿಗೆ ಪತ್ರ ಬರೆದಿದ್ದೆ. ಅಂಥ ತೇಜಸ್ವಿಯವರೇ ಉತ್ತರ ಬರೆದು ಪ್ರೇರೇಪಣೆಯನ್ನೂ ನೀಡಿದರು.

Poornachandra tejaswi broght world into his house

ಈಗ ಫೋಟೋಗ್ರಫಿಯಲ್ಲಿ ತೊಡಗಿಸಿಕೊಂಡಿರುವ ನನಗೆ ಪರಿಶ್ರಮ, ತಾಳ್ಮೆಯ ಫಲ ದೊರಕುತ್ತಿದೆ. ಅದರಿಂದ ಆಗುತ್ತಿರುವ ಆನಂದ, ಹೊಂದುತ್ತಿರುವ ಜ್ಞಾನಕ್ಕೆ ಬೆಲೆ ಕಟ್ಟಲಾರೆ!['ತೇಜಸ್ವಿ ವಿಸ್ಮಯ' ಆನ್ ಲೈನ್ ರಸಪ್ರಶ್ನೆಯಲ್ಲಿ ಗೆದ್ದವರು ಗೊತ್ತಾಯ್ತಾ?]

ದೊಡ್ಡವರನ್ನು ತಿದ್ದಲಾಗದು, ಚಿಕ್ಕವರನ್ನು ತಿದ್ದಬೇಕೆನ್ನುವುದು ತೇಜಸ್ವಿಯವರ ಉದ್ದೇಶ. ಅವರಿಂದ, ಅವರ ಕೃತಿಗಳಿಂದ ಸ್ಫೂರ್ತಿ ಪಡೆದು ಸುತ್ತಲ ಪರಿಸರದ ಸೂಕ್ಷ್ಮಗಳೆಡೆಗೆ ನೋಡಿದವರೆಲ್ಲರದೂ ಒಂದೇ ಮಾತು - ತೇಜಸ್ವಿಯವರು ಇನ್ನೂ ಇರಬೇಕಿತ್ತು.

Poornachandra tejaswi broght world into his house

2002ರ ಏಪ್ರಿಲ್ 26. ತೇಜಸ್ವಿಯವರ ತೋಟದೊಳಗೆ ಗೇಟಿಗೆ ಸುತ್ತಿದ್ದ ಚೈನ್ ಬಿಡಿಸಿಕೊಂಡು ಒಳಗಡೆ ಹೋದೆವು. ಅಕ್ಕಪಕ್ಕ ಬರಿ ಕಾಫಿ ಗಿಡಗಳು. ಮುಂದೆ ಕಾಲುದಾರಿ. ಆಹ್ಲಾದಕರವಾದ ಮಲೆನಾಡ ವಾತಾವರಣ. ಎಲ್ಲೆಲ್ಲೂ ಮರ-ಗಿಡಗಳು. ಸ್ವಲ್ಪ ದೂರ ಹೋದ ನಂತರ ಅವರ ಮನೆ ನಿರುತ್ತರ'ದ ಹೆಂಚು ಕಾಣಿಸಿತು. ಮನೆಯ ಸುತ್ತ ನಾನಾ ಬಗೆಯ ಹೂ-ಗಿಡಗಳು. ಮುಂದೆ ಹುಲ್ಲುಹಾಸು, ಆಕರ್ಷಕ ಸಸ್ಯ ವೈವಿಧ್ಯ.

ಅಂಜುತ್ತಲೇ ಕಾಲಿಂಗ್ ಬೆಲ್ ಮಾಡಿದೆವು. ತೇಜಸ್ವಿಯವರು ಬಂದರು. ಸ್ವಲ್ಪ ಮಡಿಸಿದ ಜೀನ್ಸ್ ಪ್ಯಾಂಟ್, ಕಾಟನ್ ಶರ್ಟ್, ಬಿಳಿಗಡ್ಡ, ಕನ್ನಡಕ. ಒಳಕರೆದು ಕುಳಿತುಕೊಳ್ಳಿ ಅಂದರು. ಆಗಲೇ ನಾವು ನೋಡಿದ್ದು ಟೀಪಾಯ್ ಮೇಲೆ ನೂರಾರು ಪಕ್ಷಿಗಳು. "ಇವು ನನ್ನ ಮೂವತ್ತಕ್ಕೂ ಹೆಚ್ಚು ವರ್ಷಗಳ ಅನುಭವ ಮತ್ತು ಪರಿಶ್ರಮದಿಂದ ತೆಗೆದ ಚಿತ್ರಗಳು" ಅಂದರು.[ಪೂರ್ಣಚಂದ್ರ ತೇಜಸ್ವಿ 75 ವಿಶಿಷ್ಟ ಆಚರಣೆ]

Poornachandra tejaswi broght world into his house

ಅವರ ಪತ್ನಿ ರಾಜೇಶ್ವರಿಯವರು ಕೊಟ್ಟ ಕಾಫಿ, ಬಿಸ್ಕತ್ ಸೇವಿಸಿ ಮಾತನಾಡುತ್ತ ಕುಳಿತೆವು. ಅವರು ಮಾಡಿರುವ ಪೇಂಟಿಂಗ್ ಗೋಡೆಯ ಮೇಲಿತ್ತು. ಕೇಳಿದ್ದಕ್ಕೆ, "ಐ ಯಾಮ್ ಎ ಪೇಂಟರ್. ಮೈಸೂರಿನಲ್ಲಿ ತಿಪ್ಪೇಸ್ವಾಮಿಯವರ ಬಳಿ ಕಲಿತಿದ್ದೇನೆ. ಅದಕ್ಕೂ ಮುಖ್ಯವಾಗಿ ನಾನೊಬ್ಬ ಮ್ಯುಸಿಷಿಯನ್. ಪಂಡಿತ್ ರವಿಶಂಕರ್ ಬಳಿ ಸಿತಾರ್ ಕಲಿತಿದ್ದೇನೆ" ಅಂದರು.

ಮನೆಯ ಹಿಂದೆ ಇರುವ ನೀರಿನ ಪುಟ್ಟ ತೊರೆಯಲ್ಲಿ ತೇಜಸ್ವಿ ಮೀನುಗಳನ್ನು ಸಾಕಿದ್ದರು. ಜೊತೆಗೆ ಬಂದಿದ್ದ ನನ್ನಕ್ಕನ ಮಗಳ ಕೈಲಿ ಅವಕ್ಕೆ ಬ್ರೆಡ್ ಹಾಕಿಸಿದರು. ಅವರ ಫೋಟೋ ತೆಗೆದಾಗ "ಯಾಕ್ರೀ ಇಷ್ಟೊಂದು ಫೋಟೋ ತೆಗೆಯುತ್ತೀರಿ. ನಾನೂ ಕೂಡ ನಿಮ್ಮಂತೆಯೇ ಮನುಷ್ಯ" ಅಂದರು. ತಮ್ಮನ ಜೊತೆ ರೇಷ್ಮೆ ಹುಳು ಸಾಕಲು ಅವರ ಮೈಸೂರಿನ ಮನೆಯಲ್ಲಿ ಪ್ರಯತ್ನಿಸಿದ್ದು ಮತ್ತು ಹಿಪ್ಪುನೇರಳೆ ಸೊಪ್ಪಿಗಾಗಿ ಅಲೆದದ್ದು ಎಲ್ಲ ನೆನಪಿಸಿಕೊಂಡು ನಕ್ಕರು.[ತೇಜಸ್ವಿ ಹುಟ್ಟುಹಬ್ಬ ಪ್ರಯುಕ್ತ ಟ್ರೆಕ್ಕಿಂಗ್, ನಾಟಕ]

Poornachandra tejaswi broght world into his house

"ಚೀನಾ ರೇಷ್ಮೆಯಿಂದ ನಮ್ಮ ರೇಷ್ಮೆ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಳಿದಾಗ, ಚೀನಾ ದೇಶದವನು ತಿನ್ನುವುದೂ ಅನ್ನವೇ, ನಮ್ಮ ದೇಶದವನು ತಿನ್ನುವುದೂ ಅನ್ನವೇ. ಅವರು ಕಡಿಮೆ ಬೆಲೆಗೆ ರೇಷ್ಮೆ ಇಲ್ಲಿಗೆ ತಂದು ಮಾರುತ್ತಿದ್ದಾರೆ ಅಂದರೆ ನಾವೇಕೆ ಅಷ್ಟು ಕಡಿಮೆ ಬೆಲೆಗೆ ರೇಷ್ಮೆ ತಯಾರಿಸಲಾಗುತ್ತಿಲ್ಲ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಸರಕಾರದಿಂದ ಸಬ್ಸಿಡಿ ಪಡೆದು, ನೆಮ್ಮದಿಯ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಚಾಲೆಂಜುಗಳನ್ನು ಎದುರಿಸಬೇಕು" ಅಂದರು.

ಅವರು ಭಾವಾನುವಾದ ಮಾಡಿರುವ ಕೆನೆತ್ ಆಂಡರ್ಸನ್, ಜಿಮ್ ಕಾರ್ಬೆಟ್ ಕಥೆಗಳು, ಹೆನ್ರಿಶಾರೇರೆ ಬರೆದಿರುವ ಪ್ಯಾಪಿಲಾನ್ ಕೃತಿಗಳಂಥ ರೋಮಾಂಚಕಾರಿ ಕಥೆಗಳ ಬಗ್ಗೆ ಕೇಳಿದೆವು. "ಈ ಪುಸ್ತಕಗಳನ್ನೆಲ್ಲ ನಾವು ಹೈಸ್ಕೂಲಿನಲ್ಲಿದ್ದಾಗಲೇ ಓದಿದ್ದೆವು. 40 ವರ್ಷಗಳ ನಂತರ ಅನುವಾದ ಮಾಡಿರುವೆ ಅಷ್ಟೆ. ನಮ್ಮ ಸ್ನೇಹಿತರ ಗುಂಪು ಹಾಗಿತ್ತು. ಬರೀ ಓದಿದ್ದರೆ ಮರೆತುಬಿಡುತ್ತಿದ್ದೆವು. ನಾವು ಚರ್ಚೆ-ವಿಮರ್ಶೆ ಮಾಡುತ್ತಿದ್ದುದರಿಂದ ಇನ್ನೂ ನೆನಪಿನಲ್ಲಿವೆ" ಎಂದಿದ್ದರು ತೇಜಸ್ವಿ.[ಜು.14ಕ್ಕೆ ಪೂರ್ಣಚಂದ್ರತೇಜಸ್ವಿ ಪ್ರಶಸ್ತಿ ಸಮಾರಂಭ]

Poornachandra tejaswi broght world into his house

"ನಿಮ್ಮ ಮಿಲೇನಿಯಂ ಸರಣಿಯನ್ನು ಮುಂದುವರೆಸಿ" ಎಂದು ಹೇಳಿದಾಗ ಅವರು ನಕ್ಕರು. "ಈ ರೀತಿ ಮಾಹಿತಿ ಸಾಹಿತ್ಯದ ಪುಸ್ತಕಗಳನ್ನು ಬರೆದರೆ ಕಥೆ- ಕಾದಂಬರಿ ಬರೆಯಿರಿ ಅನ್ನುತ್ತಾರೆ. ಅದನ್ನು ಬರೆದರೆ ಇದನ್ನು ಬರೆಯಿರಿ ಅನ್ನುತ್ತಾರೆ. ಒಮ್ಮೆ ಶಿವರಾಮ ಕಾರಂತರು ಈ ರೀತಿ ಮಕ್ಕಳಿಗೆ ಜ್ಞಾನದಾಯಕವಾದಂತಹ ಪುಸ್ತಕಗಳನ್ನೇ ಬರೆಯಲು ಹೇಳಿದ್ದರು. ಏಕೆಂದರೆ ಮಕ್ಕಳು ಮುಂದಿನ ಭವಿಷ್ಯ, ಅವರನ್ನು ತಿದ್ದಬೇಕು. ಬೆಳೆದವರನ್ನು ಏನು ತಿದ್ದುವುದು?" ಎಂದರು.

"ಸಣ್ಣವರಿದ್ದಾಗ ಎಷ್ಟೊಂದು ಗಲಾಟೆ, ತಂಟೆ ಮಾಡುತ್ತಿದ್ದೆವೆಂದರೆ, ನಮ್ಮಮ್ಮ ಇವರು ಶಾಲೆಗೆ ಹೋದರೆ ಸಾಕಪ್ಪ ಎಂದು ಶಾಲೆಗೆ ಅಟ್ಟುತ್ತಿದ್ದರು. ಶಾಲೆಗಾದರೋ ಒಂದು ಪುಸ್ತಕ ಹಿಡಿದು ಹೋಗುತ್ತಿದ್ದೆವು. ಈಗಿನ ಮಕ್ಕಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ನಾವು ಗುರುಗಳ ಪಾಠದ ಶೈಲಿಯಿಂದಲ್ಲ, ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದೆವು" ಎಂದರು.

(ಲೇಖಕರ ಬಗ್ಗೆ: ಡಿ.ಜಿ.ಮಲ್ಲಿಕಾರ್ಜುನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದವರು. ಅದ್ಭುತವಾದ ಫೋಟೋಗ್ರಾಫರ್, ಲೇಖಕ. ಪ್ರಜಾವಾಣಿ ಪತ್ರಿಕೆಗೆ ಅರೆಕಾಲಿಕ ವರದಿಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಪ್ರಾಣಿ-ಪಕ್ಷಿಗಳ ಬಗೆಗಿನ ಪುಸ್ತಕ ಮತ್ತು ಅವರ ಪ್ರವಾಸ ಕಥನಗಳು ಒಂದಕ್ಕಿಂತ ಒಂದು ಚೆಂದ.)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Septmeber 8th K.P.Poornachandra tejaswi birthday. Photogrpher, writer D.G.Mallikarjuna write about his experience with famous literature person Poornachandra Tejaswi.
Please Wait while comments are loading...