ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ಬೆಳ್ಳುಳ್ಳಿ ಜನ್ಮ ರಹಸ್ಯ ಬಹಿರಂಗ

By * ವಿಜಯರಾಜ್ ಕನ್ನಂತ
|
Google Oneindia Kannada News

ಈರುಳ್ಳಿ ಬೆಲೆ ಜಾಸ್ತಿ ಆದಾಗಲೆಲ್ಲ ಸಾಂಬರು ಪಲ್ಯಗಳಲ್ಲಿ... ಅಷ್ಟೇ ಯಾಕೆ, ಹೋಟೆಲಿನ ಮಸಾಲೆ ದೋಸೆಯ 'ಬಾಜಿ'ಯಲ್ಲಿ ಕೂಡಾ ಈರುಳ್ಳಿ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ ಅಂತ ಬೇಕಿದ್ರೆ ನೀವು 'ಬಾಜಿ' ಕಟ್ಟಿ ಗೆಲ್ಲಬಹುದು.

ಆದರೆ ಕೆಲವರಿಗೆ ಮಾತ್ರ ಬೆಲೆಯ ಏರಿಳಿತಗಳಿಗೆ ಅತೀತವಾಗಿ ಜೀವಮಾನ ಪರ್ಯಂತ ಈರುಳ್ಳಿ ಜೊತೆಗೆ ಅದರ ತಮ್ಮನಂತಿರುವ ಬೆಳ್ಳುಳ್ಳಿ ಕೂಡಾ ವರ್ಜ್ಯ ಅನ್ನುವುದು ನಿಮಗೆ ಗೊತ್ತಿರಲಿಕ್ಕೂ ಸಾಕು. ಏನಿರಬಹುದು ಇದಕ್ಕೆ ಕಾರಣ?

ಕೆಲವರ ಪ್ರಕಾರ ಇವೆರಡೂ ತಾಮಸಿಕ ಗುಣಗಳನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ಜೊತೆಗೆ ಇವುಗಳನ್ನು ಸೇವಿಸಿದಾಗ ಬಾಯಿಯ ಶ್ವಾಸದ 'ದುರ್ವಾಸ'ನೆಗೆ ಎದುರಿನವರು 'ಮುನಿ'ದಾರು ಎಂಬ ಕಾರಣವನ್ನು ನೀಡಿ ಇವೆರಡಕ್ಕೆ ಬಹಿಷ್ಕಾರದ 'ಶಾಪ' ಕೊಡಲಾಗಿದೆ.Cool

ಸುಮ್ಮನೇ ಕುತೂಹಲಕ್ಕೆಂದು ನೆಟ್ಟಿನಲ್ಲಿ ನೆಟ್ಟಗೆ ಹುಡುಕಿದಾಗ ಇವೆರಡು ವರ್ಜ್ಯವಾಗಲು ಕಾರಣವೇನು ಎಂಬುದರ ಕುರಿತು 'ದಂತ'ಕತೆಯೊಂದು ಸಿಕ್ಕಿತು.

ಇದು ಯಾವ ಪುರಾಣದಲ್ಲಿ ಉಲ್ಲೇಖವಿದೆ ಅನ್ನುವ ಕುರಿತು ಈ ಕತೆ ಹೇಳಿದವರಿಗೂ ಗೊತ್ತಿಲ್ಲವಾದ ಕಾರಣ ಇದರ ಮೂಲದ ಕುರಿತು ನಾನೂ ಅಷ್ಟೇ ಅಜ್ಞಾನಿ. ಈ ಕತೆ ಅಸಂಬದ್ಧ ಅನ್ನಿಸಿದ್ರೆ ನನ್ನ ಮಾತ್ರ ಬಯ್ಕೋಬೇಡಿ... ಮೂಲದ ಕತೆಗಾರರಿಗೆ ಬಯ್ದು ಬಿಡಿ ಸಾಕು... Sealed ಕತೆ ಏನಪ್ಪಾ ಅಂದ್ರೆ......

ಈ ಈರುಳ್ಳಿ ಬೆಳ್ಳುಳ್ಳಿ ಎರಡೂ ನಾನ್-ವೆಜಿಟೇರಿಯನ್ ಅಂತೆ ಮಾರಾಯ್ರೆ! ಸತ್ಯಯುಗದಲ್ಲಿ ಋಷಿಗಳು ಲೋಕ ಕಲ್ಯಾಣಾರ್ಥವಾಗಿ ಅಶ್ವಮೇಧ ಹಾಗೂ ಗೋಮೇಧ ಯಜ್ಞಗಳನ್ನು ಮಾಡುತ್ತಿದ್ದರಂತೆ.

ಆ ಯಜ್ಞದಲ್ಲಿ ಜೀವಂತ ಕುದುರೆ ಹಾಗೂ ಹಸುಗಳನ್ನು ತುಂಡುಗಳಾಗಿ ಕತ್ತರಿಸಿ, ಯಜ್ಞಕ್ಕೆ ಆಹುತಿ ಕೊಡಲಾಗುತ್ತಿತ್ತಂತೆ. ಆ ಬಳಿಕ ಋಷಿಗಳು ಮಂತ್ರಗಳನ್ನು ಪಠಿಸಿದಾಗ, ಅವು ಜೀವ ತಳೆದು ನವ ತಾರುಣ್ಯದಿಂದ ನಳನಳಿಸುತ್ತಿದ್ದುವಂತೆ. ಎಷ್ಟಾದರೂ ಸತ್ಯಯುಗವಲ್ಲವೇ!

ಹೀಗೆ ಒಬ್ಬ ಋಷಿ ಒಮ್ಮೆ ಗೋಮೇಧ ಯಜ್ಞವನ್ನು ಹಮ್ಮಿಕೊಂಡಿದ್ದನಂತೆ. ಆಗವನ ಪತ್ನಿ ತುಂಬು ಗರ್ಭಿಣಿಯಂತೆ. ಅವಳಿಗೆ ಮಾಂಸ ತಿನ್ನಬೇಕೆಂದು ಬಲವಾದ ಆಶೆಯಾಯಿತಂತೆ (ನೆನಪಿಡಿ ಇದು ಬಹು ಹಿಂದಿನ ಕಾಲದ ಪುರಾಣದ ಮಾತು. ಆಗ ಮಾಂಸಾಹಾರ ವರ್ಜ್ಯವಾಗಿರಲಿಲ್ಲ!)

ಹೀಗೆ ಆಶೆಪಟ್ಟುದು ನೆರವೇರದೇ ಹೋದರೆ ಹುಟ್ಟುವ ಶಿಶು ಸದಾ ಬಾಯಲ್ಲಿ ಜೊಲ್ಲು ಸುರಿಸಿಕೊಂಡೇ ಇರುವುದು ಎನ್ನುವ ಪ್ರತೀತಿಯಿತ್ತಂತೆ. ಹಾಗಾಗಿ ಆಕೆ ಯಜ್ಞಕ್ಕೆಂದು ಮೀಸಲಾಗಿರಿಸಿದ ಕತ್ತರಿಸಿದ ಮಾಂಸದ ತುಂಡೊಂದನ್ನು ಋಷಿಯ ಗಮನಕ್ಕೆ ಬರದಂತೆ ತೆಗೆದು ಬಚ್ಚಿಟ್ಟಳಂತೆ. ಇದ್ಯಾವುದರ ಅರಿವೇ ಇಲ್ಲದ ಋಷಿ, ತನ್ನ ಯಜ್ಞದ ಕಾರ್ಯವನ್ನು ಸಾಂಗಗೊಳಿಸಿ, ಮಾಂಸವನ್ನು ಅಗ್ನಿಗೆ ಆಹುತಿಯಾಗಿ ಕೊಟ್ಟು, ಮಂತ್ರಗಳನ್ನು ಉಚ್ಚರಿಸಿದನು.

Garlic evolution Mythology

ಎಂದಿನಂತೆ ಯವ್ವನದಿಂದ ನಳನಳಿಸುವ ಹಸುವೊಂದು ಯಜ್ಞಕುಂಡದಿಂದ ಜಿಗಿದೆದ್ದು ಹೊರಬಂದಿತು. ಅದನ್ನು ಗಮನಿಸಿ ನೋಡಿದಾಗ ಅದರ ಎಡಪಾರ್ಶ್ವದ ಅಂಗದಲ್ಲಿ ಊನತೆಯೊಂದು ಕಂಡು ಬಂದಿತಂತೆ. ಇದಕ್ಕೆ ಕಾರಣ ಋಷಿಪತ್ನಿ ಎತ್ತಿಟ್ಟಿದ್ದ ಮಾಂಸದ ತುಂಡೇ ಆಗಿತ್ತು.

ಋಷಿ ಸ್ವಲ್ಪ ಹೊತ್ತು ಧ್ಯಾನಮಗ್ನನಾಗಿ ಅವಲೋಕಿಸಿದಾಗ ಅವನಿಗೆ ನಡೆದ ವೃತ್ತಾಂತವೆಲ್ಲಾ ಕಣ್ಮುಂದೆ ಚಿತ್ರದಂತೆ ಗೋಚರಿಸಿ ಆದ ಅನರ್ಥದ ಅರಿವಾಯಿತು. ಗಂಡನಿಗೆ ವಿಷಯ ತಿಳಿಯಿತೆನ್ನುವುದನ್ನು ಅವನ ವದನವನ್ನು ನಿರುಕಿಸಿಯೇ ಗ್ರಹಿಸಿದ ಋಷಿಪತ್ನಿ,

ಆ ಕೂಡಲೇ ಬಚ್ಚಿಟ್ಟಿದ್ದ ಮಾಂಸದ ತುಂಡನ್ನು ತೆಗೆದು ಹೊರಗೆಸೆದಳಂತೆ. ಋಷಿಯು ಮಂತ್ರಗಳನ್ನು ಪಠಿಸಿದ ಕ್ಷಣಮಾತ್ರದಲ್ಲೇ ಆ ಮಾಂಸದ ತುಂಡಿನಲ್ಲಿ ಜೀವಸಂಚಾರವಾಯಿತಂತೆ. ಆ ತುಂಡಿನಲ್ಲಿದ್ದ ರಕ್ತವೆಲ್ಲ ಕೆಂಪು ವರ್ಣದ ತೊಗರಿಬೇಳೆ (ಹೆಚ್ಚಾಗಿ ಉತ್ತರಭಾರತದ ಕಡೆ ಸಿಗುತ್ತಂತೆ) ಆಯಿತು. ಅದರಲ್ಲಿದ್ದ ಮೂಳೆಯೆಲ್ಲಾ ಬೆಳ್ಳುಳ್ಳಿ ಆಯಿತು. ಅದರ ಮಾಂಸವೆಲ್ಲಾ ಈರುಳ್ಳಿ ಆಯಿತಂತೆ. ಈ ಕಾರಣಕ್ಕೇ ಕೆಲವು ಜನರಿಗೆ ಇದು ವರ್ಜ್ಯ ಅಂತ ಹೇಳುತ್ತೆ ಈ ಕಥೆ!!

ಬೆಳ್ಳುಳ್ಳಿ ಕೆಂಪು ತೊಗರಿಗಳ ಕತೆ ಅತ್ಲಾಗಿರಲಿ... ಈರುಳ್ಳಿ ಬೆಲೆ ನೋಡಿದ್ರೆ ಮಾಂಸವೇ ಈರುಳ್ಳಿ ಆಗಿದ್ದಿರಲೂಬಹುದು ಅಂತ ಈ ಕಲಿಯುಗದಲ್ಲೂ ಅನುಮಾನ ಬರದೇ ಇರುತ್ತಾ ಹೇಳಿ Laughing !!

English summary
Here is interesting Hindu Mythological imaginary story about about Onion and Garlic evolved on earth and why eating them become taboo to some of the communities in India narrates Vijayaraj Kannantha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X