ವಿಶೇಷ ಲೇಖನ: ಬಾಯಲ್ಲಿ ನೀರೂರಿಸುವ ಭರ್ಜರಿ ಖಾದ್ಯ ‘ಈಸುಳ್ಳಿ’!

By: ಸ.ರಘುನಾಥ
Subscribe to Oneindia Kannada

ಆದಿಯಿಂದ ಮಾನವ ತನಗಾಗುವ (ರುಚಿ) ತಿನಿಸುಗಳನ್ನು ಕಂಡುಕೊಂಡು ಅಟ್ಟುಣುವುದರಲ್ಲಿ ನಿಸ್ಸೀಮ. ಅವನು ಸಸ್ಯ ಮತ್ತು ಪ್ರಾಣಿಗಳನ್ನು ಅವಲಂಬಿಸಿರುವಂತೆ ಕೀಟಗಳನ್ನೂ ಅವಲಂಬಿಸಿರುತ್ತಾನೆ. ಇದಕ್ಕಾಗಿ ಆಯ್ಕೆ ಮಾಡುತ್ತಲೇ ಅವುಗಳನ್ನು ಪಡೆಯುವ ಉಪಾಯಗಳನ್ನು, ಅದಕ್ಕೆ ತಕ್ಕ ಉಪಕರಣಗಳನ್ನೂ ತಯಾರಿಸಿಕೊಳ್ಳುತ್ತಿರುತ್ತಾನೆ.

ಪ್ರಾಣಿ, ಕೀಟಗಳನ್ನು ಹಿಡಿಯುವ ವಿಧಾನ ಯಾವುದಾದರೂ ಅದು ಬೇಟೆಯ ಪರಿಧಿಗೇ ಬರುತ್ತದೆ. ಹಿಡಿಯುವುದು ಎಂಬ ಪದದಲ್ಲಿ ಬೇಟೆಯೆಂಬ ಅರ್ಥವೇ ಹುದುಗಿರುತ್ತದೆ. ಬೇಟೆಗೆ ಕಥೆ, ಪದ್ಯ, ಹಾಡುಗಳೂ ಇರುತ್ತವೆ. ಇವು ಪೌರಾಣಿಕ, ಐತಿಹಾಸಿಕ, ಧಾರ್ಮಿಕ, ಕುಲ ಸಂಬಂಧಿಯವೂ ಆಗಿರುತ್ತವೆ.['ತೇರಿ ಇಟ್‍ಮೇಲ್ ಅಸ್ಯವಿರೆಕಾಳ್': ಹಳ್ಳಿಗರ ಪ್ರಶಂಸೆ, ಬಯ್ಗುಳ ಹೀಗೂ ಉಂಟು...]

ಇಂಥ ಬೇಟೆಗಳಲ್ಲಿ 'ಈಸುಳ್ಳಿ' ಬೇಟೆಯೂ ಒಂದು. ಈಸುಳ್ಳಿಗೆ ಬೇರೆ ಪ್ರದೇಶಗಳಲ್ಲಿ ಏನೆಂಬರೋ ತಿಳಿಯದು. ಇದು ಕೋಲಾರ ಮಂಡಲದಲ್ಲಿ ಈಸುಳ್ಳಿ. ರೆಕ್ಕೆ ಬಂದ ಗೆದ್ದಲು ಹುಳುಗಳೇ ಈಸುಳ್ಳಿಗಳು. ಇವೆಂದರೆ ಕೋತಿ, ಕಾಗೆ, ಕೌಜುಗ, ಗೊರವಂಕ ಮುಂತಾದ ಹಕ್ಕಿಗಳಿಗೂ ಪ್ರಿಯ.

ಹುತ್ತದಲ್ಲಿ ಗೆದ್ದಲು ಹುಳುಗಳು ಎಲ್ಲ ಕಾಲದಲ್ಲೂ ಇರುವುವಾದರೂ ಅವಕ್ಕೆ ರೆಕ್ಕೆ ಬಂದು, ಬಲಿತು ಈಸುಳ್ಳಿಗಳಾದಾಗ ಮಾತ್ರ ಬೇಟೆಯಾಡುತ್ತಾರೆ. ಅಂದರೆ, ಹಿಡಿಯುತ್ತಾರೆ. ಇದು ಕಂಡಕಂಡ ಹುತ್ತಗಳಲ್ಲಿ ಸಿಗುವುದಿಲ್ಲ. ಇದಿರುವುದನ್ನು ಕಂಡುಹಿಡಿಯಲು ಇಲಿಗಳನ್ನು ಹಿಡಿಯುವವರಂತೆ ತಜ್ಞತೆ, ಅನುಭವವಿರಬೇಕು. ಇಂಥ ಬೇಟೆಗಾರರಲ್ಲಿ ಈ ತಜ್ಞತೆ ಯಾವ ಮಟ್ಟದ್ದೆಂದರೆ ಇಂಥ ಹುತ್ತದಲ್ಲಿ ಇಷ್ಟೇ 'ಈಸುಳ್ಳಿ'ಗಳಿರುತ್ತವೆ ಎಂದು ಅಂದಾಜಿಸುವಷ್ಟು.[ಚಾಟ್ ಮಸಾಲ ಪಾನಿಪುರಿ ಮಸಾಲಪುರಿ ತಿನ್ನಬಾರದು, ಏಕೆ?]

ಕಾವಿಗೆ ಹೊರಬರುವ ಈಸುಳ್ಳಿ

ಕಾವಿಗೆ ಹೊರಬರುವ ಈಸುಳ್ಳಿ

ಗೊತ್ತುಪಡಿಸಿಕೊಂಡ ಹುತ್ತವನ್ನು ಸನಿಕೆಯಿಂದ ಸಪಾಟು ಮಾಡಿದಾಗ ಅನೇಕ ರಂಧ್ರಗಳು ಬಾಯಿ ತೆರೆಯುತ್ತವೆ. ಅವುಗಳಲ್ಲಿ ಹುಳು(ಕೀಟ)ಗಳು ಹೆಚ್ಚಿಗೆ ಹೊರಬರುವ ತೂತು ಯಾವದೆಂದು ಇವರಿಗಷ್ಟೇ ತಿಳಿದಿರುತ್ತದೆ. ಅದನ್ನು ಮುಖ್ಯವಾಗಿಸಿಕೊಂಡು ಸವರಿದ ಹುತ್ತಕ್ಕೆ ನೀರು ಸಿಂಪಡಿಸಿ, ಬಾಗುವ ಸಣ್ಣ-ಸಣ್ಣ ಕಡ್ಡಿಗಳಿಂದ ಗೂಡು ಕಟ್ಟಿ, ಹೊಂಗೆ, ಕಕ್ಕೆ ಸೊಪ್ಪಿನಿಂದ ಮುಚ್ಚುತ್ತಾರೆ. ಇದಕ್ಕೂ ಮೊದಲು ಒಂದು ದುಂಡಾಕಾರದ ಕುಳಿ ನಿರ್ಮಿಸಿರುತ್ತಾರೆ. ‘ಈಸುಳ್ಳಿ'ಗಳು ಸಂಗ್ರಹವಾಗುದೇ ಈ ಕುಳಿಯಲ್ಲಿ. ತೇವದ ಮಣ್ಣಿನಿಂದ ಕೂಡಿದ ಅದರ ಕಂಠಕ್ಕೆ, ಕುಳಿಗೆ ಇಳಿಜಾರಾಗಿ ಕಕ್ಕೆ ಎಲೆಗಳನ್ನು ಅಂದವಾಗಿ ಜೋಡಿಸಿ ಮೆತ್ತುತ್ತಾರೆ. ಇವು ನುಣುಪಾಗಿದ್ದು ಹುಳುಗಳು ಜಾರಿ ಕುಳಿಯನ್ನು ತುಂಬಿಕೊಳ್ಳುತ್ತವೆ. ಇದೆಲ್ಲ ಸಂಜೆ ವೇಳೆಗೆ ಮುಗಿಯುತ್ತದೆ. ಬೆಳಗಿನ ಜವ 4-5ಗಂಟೆಗೇ ಬಂದು, ಗೂಡಿಗೆ ಹೊಗೆ ಹಾಕುತ್ತಾರೆ. ಒಂದರ್ಧ ಗಂಟೆಯೊಳಗೆ ಇದರ ಕಾವಿಗೆ ಈಸುಳ್ಳಿಗಳು ಹೊರಬಂದು ಕುಳಿಯಲ್ಲಿ ಬೀಳುತ್ತವೆ. ಹೀಗೆ ಕುಳಿ ತುಂಬಿದವನ್ನು ಸಂಗ್ರಹಿಸಿಕೊಳ್ಳುತ್ತಾರೆ. ಇದನ್ನು ಮಾರುವುದೂ ಉಂಟು. ಪಡಿಗೆ(ಅರ್ಧಸೇರು) 50-60 ರುಪಾಯಿಗಳವರೆಗೆ ಬೆಲೆ.

ಹಸಿ ಈಸುಳ್ಳಿ ಮಕ್ಕಳಿಗೆ ತಿನ್ನಿಸುತ್ತಾರೆ

ಹಸಿ ಈಸುಳ್ಳಿ ಮಕ್ಕಳಿಗೆ ತಿನ್ನಿಸುತ್ತಾರೆ

ಹುತ್ತವೇ ಅಲ್ಲದೆ ಊರ ಹೊರಗೆ ದಾರಿ ಬದಿಯಲ್ಲಿ ಇದೇ ಕ್ರಮದಲ್ಲಿ ಗೂಡು ಕಟ್ಟಿ ಈಸುಳ್ಳಿಗಳನ್ನು ಹಿಡಿಯುವುದೂ ಉಂಟು. ರೆಕ್ಕೆ ಬರದ ಹುಳುಗಳು ಉಪಯುಕ್ತವಲ್ಲ. ಹುತ್ತ(ನೆಲ)ದೊಳಗಿನ ಹುಳುಗಳು ರೆಕ್ಕೆ ಬಂದು ಬಲಿತಿವೆಯೇ ಎಂದು ಹುತ್ತವನ್ನು ತೋಡಿ ನೋಡುವುದಿಲ್ಲ. ಇದರ ಸೂಚಿ ಪ್ರಕೃತಿಯಲ್ಲೇ ಇವರಿಗೆ ಕಂಡುಬರುತ್ತದೆ. ಅದೂ ಕುತೂಹಲಕಾರಿಯಾದ ಸಂಗತಿಯೇ. ಕಕ್ಕೆ ಎಲೆಗಳು ಕಡು ಹಸಿರುಗಟ್ಟಿ ಬಲಿತು ಮಿರಮಿರ ಮಿರುಗುವ ಕಾಲಕ್ಕೆ ಈಸುಳ್ಳಿಗಳು ಬಲಿತಿರುತ್ತವೆ ಎಂಬ ಅರಿವು ಇವರದು. ಈಸುಳ್ಳಿಗಳು ಮುಂಗಾರಿನ ದಿನಗಳಲ್ಲಿ ಕೀಟಗಳಾಗುತ್ತವೆ. ಮಘಾ, ಉಬ್ಬವಾನ(ಮಖಾ, ಪುಬ್ಬಾ ಮಳೆ) ದಿನಗಳು ಇದರ ಬೇಟೆಗೆ ಪ್ರಶಸ್ತ ಕಾಲ. ನಂತರ ಸಿಕ್ಕಿದರೂ ತಿನ್ನುವುದಿಲ್ಲ. ವಿದ್ಯುತ್ ದೀಪಗಳಿಗೆ ಮುತ್ತಿಗೆ ಹಾಕಿ ರೆಕ್ಕೆ ಕಳೆದುಕೊಳ್ಳುವ ಇವನ್ನು ಆರಿಸಿ ಬಳಸುತ್ತಾರೆಯಾದರೂ ಹುತ್ತದಲ್ಲಿ ಹಿಡಿದವಕ್ಕಿರುವ ಬೆಲೆ, ಗೌರವ ಇವಕ್ಕಿರದು. ರಾಣಿ ಹುಳು ಸಿಗುವುದು ಹುತ್ತದಲ್ಲಿಯೇ. ಇದನ್ನು ಹಿಡಿದು ಅಲ್ಲಿಯೇ ಹಸಿಯಾಗಿಯೇ ತಿನ್ನುತ್ತಾರೆ. ಮುಖ್ಯವಾಗಿ ಮಕ್ಕಳಿಗೆ ತಿನ್ನಿಸುತ್ತಾರೆ. ಇದರಲ್ಲಿರುವ ಕೊಬ್ಬು ಮತ್ತು ಪ್ರೊಟೀನು ಪೌಷ್ಟಿಕವಾದುದು.

ಪುರಾಣದ ಕತೆಯೂ ಇದೆ

ಪುರಾಣದ ಕತೆಯೂ ಇದೆ

ಈಸುಳ್ಳಿ ಹೆಚ್ಚಾಗಿ ಹಿಡಿಯುವವರು ‘ಗುರಿಕಾಳ್ಳು' ಜಾತಿಯವರು. ಇಂದು ಇವರನ್ನು ವಾಲ್ಮೀಕಿ, ನಾಯಕ ಎಂದು ಗುರುತಿಸಲಾಗಿದೆ. ‘ಗುರಿಕಾಳ್ಳು'(ಗುರಿಕಾರರು) ಬೇಟೆಗಾರರು ಹಿಡಿದ ಈಸುಳ್ಳಿಗಳನ್ನೇ ಇವನ್ನು ತಿನ್ನುವ ಜನ ಕೊಳ್ಳುವುದು. ಇತರೆ ಜಾತಿಯವರು ಹಿಡಿದವಕ್ಕೆ ಬೇಡಿಕೆ ಇಲ್ಲ ಅಥವಾ ಕಡಿಮೆ ಬೇಡಿಕೆ. ಇವರು ಈಸುಳ್ಳಿ ಬೇಟೆಯ ದೈವಾಜ್ಞೆ ಹಕ್ಕುದಾರರು. ಆ ಕಥೆ ಹೀಗಿದೆ : ಪಾರ್ವತಿ ಈ ಬಡವರ ಮನೆಯ ಹೆಣ್ಣುಮಗಳು. ಶಿವನನ್ನು ಮದುವೆಯಾಗಿದ್ದಳು. ಒಂದು ಹುಣ್ಣಿಮೆಯ ದಿನ ಶಿವ- ಪಾರ್ವತಿ ಆಕಾಶದಲ್ಲಿ ಲೋಕ ಸಂಚಾರ ಮಾಡುತ್ತಿರಲು, ಬಡತನದ ಚಿಂತೆಯಲ್ಲಿರುವ ತನ್ನ ಅಣ್ಣತಮ್ಮಂದಿರನ್ನು ನೆನೆದು, ನೊಂದು ಅವರಿಗೆ ಸಹಾಯ ಮಾಡ ಬಯಸಿ, ಸಿರಿಯನ್ನು ಕೊಡುವಂತೆ ಶಿವನನ್ನು ಬೇಡಿದಳಂತೆ. ಶಿವ ಕೋಪದಿಂದ ‘ವಾಳ್ಲಕೇಮಿಚ್ಚೇದಿ ನಾ ಬಂಡ'(ಅವರಿಗೇನು ಕೊಡೋದು ನನ್ನ ಕೂದಲು) ಎಂದು ತನ್ನ ಎಡತೊಡೆಯಿಂದ ಒಂದು ಕೂದಲನ್ನು ಕಿತ್ತು ನೆಲಕ್ಕೆ ಹಾಕಿದನಂತೆ. ಅದು ಹೋಗಿ ಹುತ್ತದಲ್ಲಿ ಬಿದ್ದು ಈಸುಳ್ಳಿಗಳಾದುವಂತೆ. ಆಗ ಪಾರ್ವತಿ, ಅವರಿಗೆ, ನೀವು ಇವುಗಳನ್ನು ಹಿಡಿದು ಬದುಕಿರಿ ಎಂದಳಂತೆ. ಹೀಗೆ ಗುರಿಕಾಳ್ಲರಿಗೆ ಈಸುಳ್ಳಿಗಳ ಮೇಲೆ ಹಕ್ಕು ಪ್ರಾಪ್ತವಾಯಿತಂತೆ. ಇವರನ್ನು ಬಿಟ್ಟು ಯಾರಾದರೂ ಈಸುಳ್ಳಿಗಳನ್ನು ಹಿಡಿದು ಮಾರಿದರೆ ಅವರಿಗೆ ಕೇಡಾಗುವುದೆಂಬ ನಂಬಿಕೆಯೂ ಇದೆ.

ಇನ್ನೊಂದು ಕಥೆ ಇದೆ

ಇನ್ನೊಂದು ಕಥೆ ಇದೆ

ಇದೇ ಕಥೆ ಇನ್ನೊಂದು ರೂಪದಲ್ಲಿಯೂ ಇದೆ. ಒಂದು ದಿನ ಪಾರ್ವತಿಗೆ ತನ್ನ ಉಡಿದಮನೆ(ತವರು) ನೆನಪಾಯಿತಂತೆ. ಅಲ್ಲಿ ತನ್ನಣ್ಣ, ತಮ್ಮದಿರು ಬಡತನದಲ್ಲಿದ್ದು ಕಷ್ಟಪಡುವುದನ್ನು, ಅದರಿಂದ ದುಃಖಿಸುವುದನ್ನು ತನ್ನ ಮೈಮೆಯಿಂದ ತಿಳಿದುಕೊಂಡಳು. ಶಿವನಿಗೆ ಹೇಳಿ ವರವನ್ನು ಕೊಡಿಸಬೇಕೆಂದುಕೊಂಡಳು. ಸರಿ, ರಾತ್ರಿಯಾಯಿತು. ‘ಬಗುತರ' ಕರೆಗೆ ಭೂಲೋಕಕ್ಕೆ ಹೋಗಿದ್ದ ಶಿವ ಕೈಲಾಸದ ಮನೆಗೆ ಬಂದ. ಯಾವ ಭಕ್ತ ಯಾವ ಪರಿಯಲ್ಲಿ ಕಾಡಿದ್ದನೋ ಏನೋ ಅವನ ಮನಸ್ಸು ನೆಟ್ಟಗಿರಲಿಲ್ಲ. ಇದು ಪಾರ್ವತಿಯ ಗಮನಕ್ಕೆ ಬರಲಿಲ್ಲ. ಶಿವ ಮಾಮೂಲಿಯಾಗಿದ್ದಾನೆಂದು ತಿಳಿದಳು. ಊಟಕ್ಕಿಕ್ಕಿದಳು. ಶಿವ ಸೇರಿದಷ್ಟು ತಿಂದ. ಸರಿಯಾಗಿ ಉಣ್ಣದ ಗಂಡ ಹಾಲಾದರೂ ಕುಡಿಯಲೆಂದು ಹಾಲನ್ನು ತಂದು ಕೊಡುತ್ತ, ತವರಿನ ವಿಷಯ ತೆಗೆದಳು. ಏನಾದರೂ ಬದುಕುವ ವರವನ್ನು ಕೊಡುವಂತೆ ಕೋರಿದಳು.

ಸಿಟ್ಟಿನಲ್ಲಿದ್ದ ಶಿವ

ಸಿಟ್ಟಿನಲ್ಲಿದ್ದ ಶಿವ

ಮೊದಲೇ ಅಸಮಾಧಾನದಲ್ಲಿದ್ದ ಶಿವನಿಗೆ ರೇಗಿತು. ಕೋಡಲೇನಿದೆ ಎಂದು ಸಿಡುಕುತ್ತ ಎಡಗೈ ಎತ್ತಿ ಬೀಸಿದ. ಅದು ಹಾಲಿನ ಲೋಕಟಕ್ಕೆ ಬಡಿಯಿತು. ಲೋಟ ಪಾರ್ವತಿಯ ಕೈ ಜಾರಿ ಬಿದ್ದಿತು. ಬಿದ್ದ ಲೋಟದ ಹಾಲು ಭೂಲೋಕಕ್ಕಿಳಿದು ಹುತ್ತದಲ್ಲಿ ಬಿತ್ತು. ಆಗ ಪಾರ್ವತಿ, "ಹುತ್ತದಲ್ಲಿ ಬಿದ್ದ ಹಾಲು ಈಸುಳ್ಳಿಗಳಾಗುತ್ತವೆ. ಅದನ್ನು ಹಿಡಿದು ಬದುಕಿಕೊಳ್ಳಿ" ಎಂದು ತಿಳಿಸುವಂತೆ ನಂದಿಯನ್ನು ತನ್ನ ಅಣ್ಣತಮ್ಮಂದಿರ ಬಳಿಗೆ ಕಳುಹಿಸಿದಳು. ಇದು ತನ್ನ ತವರಿನ ಕುಲದವರಿಗೆ ಶಿವನ ವರವೆಂದು ತಿಳಿಸುವಂತೆ ಹೇಳಿದಳು. ಅಲ್ಲದೆ ಈಸುಳ್ಳಿಗಳನ್ನು ಹಿಡಿಯುವ ಹಕ್ಕು ಗುರಿಕಾಳ್ಳರಿಗೆ ಮಾತ್ರವೆಂದು, ಬೇರೆ ಯಾವ ಕುಲದವರಿಗೂ ಆ ಹಕ್ಕಿಲ್ಲವೆಂದು, ಇದು ತನ್ನ ಆಜ್ಞೆಯೆಂದು ತಿಳಿಸಿದಳು. ಯಾರಾದರೂ ಇದನ್ನು ಮೀರಿದರೆ ಅವರು ಉದ್ಧಾರವಾಗರು ಎಂದು ಶಪಿಸಿದಳು. ನಂದಿ ಹೋಗಿ ಅದರಂತೆ ತಿಳಿಸಿದ.

ರುಚಿಯ ಖಾದ್ಯ

ರುಚಿಯ ಖಾದ್ಯ

ಈಸುಳ್ಳಿಗಳು ಒಳ್ಳೆಯ ರುಚಿಯ ಖಾದ್ಯ. ಇದನ್ನು ಹುರುಳಿಯಂತೆ ಹುರಿದು ತಿನ್ನುತ್ತಾರೆ. ನವಿರಾದ ಕಾರದೊಂದಿಗೆ ಬೆಳ್ಳುಳ್ಳಿ ಅರೆದು ಹಾಕಿ ಹುರಿಯುವರು. ಇದರಲ್ಲಿರುವ ಕೊಬ್ಬು ಕರಗಿ ಮಸಾಲೆಯೊಂದಿಗೆ ಹುಳು ಬೇಯುವುದರಿಂದ ಹುರಿಯಲು ಎಣ್ಣೆಯ ಅಗತ್ಯವಿರದು. ನಸುಗೆಂಪಿಗೆ ಬಂದಿತೆಂದರೆ ಹುರಿತ ಮುಗಿದಂತೆಯೆ. ವ್ಯಂಜನವಿದು. ಸೇವನೆ ಒಂದು ಮಿತಿಯಲ್ಲಿರಬೇಕು. ಇಲ್ಲವೆಂದರೆ ಬೇದಿ ಗ್ಯಾರಂಟಿ. ಸರಿಯಾಗಿ ಹುರಿಯದಿದ್ದರೂ ಬೇದಿಯಾಗುವುದಿದೆ. ಜೀರ್ಣಶಕ್ತಿ ಚೆನ್ನಾಗಿದ್ದರೆ ಅಂಥ ಸಮಸ್ಯೆಯಾಗದು. ಜ್ವರವಿದ್ದವರಿಗೆ, ಅಜೀರ್ಣವಾಗುವವರಿಗೆ ಇದನ್ನು ಕೊಡುವುದಿಲ್ಲ. ಬಾಣಂತಿಯರಿಗೆ ಇದು ಒಳ್ಳೆಯ ಪೌಷ್ಟಿಕತೆಯನ್ನು ನೀಡುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Esulli-it is an insect hunt by particular caste people in and around Kolar. Mouth watering food prepared by this insect.
Please Wait while comments are loading...