• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಲಾಗ್ ಲೋಕದ ಹೂಳೆತ್ತಬೇಕಾಗಿದೆ

By Staff
|
ಪ್ರತಿ ಶನಿವಾರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿರುವ ಅಂಕಣ ಮೀಡಿಯಾ ಮಿರ್ಚಿ. ಅಂಕಣಕಾರರಾದ ಮೋಹನ್ ಅಲ್ಲಿ ಮಂಡಿಸಲಾದ ಒಂದು ಲೇಖನವನ್ನು ಇನ್ನೂ ಹೆಚ್ಚಿನ ಚರ್ಚೆಗಾಗಿ ತಮ್ಮ ಬ್ಲಾಗ್ ಅವಧಿಯಲ್ಲಿ ಪ್ರಕಟಿಸಿದ್ದಾರೆ. ಬ್ಲಾಗ್ ಬರಹಗಳ ಬಗ್ಗೆ ನಾವೆಷ್ಟು ಕಾಳಜಿ ವಹಿಸುತ್ತೆವೋ ಅಷ್ಟೇ ಕಾಳಜಿ ಬ್ಲಾಗ್ ಕಾಮೆಂಟ್ ಗಳ ಬಗ್ಗೆಯೂ ಇರಬೇಕು ಎಂಬ ಹಂಬಲ ಅವರದು. ಅಂತರ್ಜಾಲದಲ್ಲಿ ಕನ್ನಡ ಕಳಕಳಿ ಇದ್ದವರು ಈ ಲೇಖನ ಓದಿರಿ. ಬ್ಲಾಗ್ ಲೋಕದ ಹೂಳೆತ್ತಲು ನಾವೆಲ್ಲ ಮನಸ್ಸು ಮಾಡಲು ಸಾಧ್ಯವಾ ಯೋಚಿಸಿರಿ. ಮತ್ತೆ, ಅವರ ಈ ವಾದ ಸರಣಿಗೆ ಚಾರಣಿಗರ ಗುಂಪು ಯಾವ ಬಗೆಯ ಕಾಮೆಂಟ್ ಹಾಕುತ್ತಾರೆ ಎಂಬ ಕುತೂಹಲ ನಿಮ್ಮಂತೆ ನಮಗೂ ಇದೆ- ಸಂಪಾದಕ

* ಜಿ ಎನ್ ಮೋಹನ್, ಬೆಂಗಳೂರು

ನೀವು ಯಾಕೆ ಒಂದು ಬ್ಲಾಗ್ ಮಾಡಬಾರದು?" ಅಂತ ನಾನು ಕೇಳಿದ್ದು 'ಉದಯವಾಣಿ" ಸಂಪಾದಕಿ ಆರ್. ಪೂರ್ಣಿಮಾ ಅವರನ್ನ. ತುಂಬಾ ದಿನಗಳ ನಂತರ ಉಭಯ ಕುಶಲೋಪರಿ ಮಾತಾಡಿಕೊಳ್ತಾ ಇದ್ವಿ. ಆಗ ಈ ಪ್ರಶ್ನೆ ಕೇಳಿದೆ. ಪೂರ್ಣಿಮಾ 'ರಪ್" ಅಂತ ಉತ್ತರ ಕೊಟ್ರು- 'ಬ್ಲಾಗ್ ಮಾಡ್ಬೇಕು ಅಂತ ಇಷ್ಟ ಇತ್ತು. ಆದರೆ ಈಗ ಬ್ಲಾಗ್ ಗಳಲ್ಲಿ ಬಾರೋ ಕಾಮೆಂಟ್ ನೋಡ್ತಾ ಇದ್ರೆ ಯಾರಿಗೆ ಬ್ಲಾಗ್ ಮಾಡ್ಬೇಕು ಅನ್ಸುತ್ತೆ ಹೇಳಿ" ಅಂದರು. ಒಂದೆರಡು ವರ್ಷಗಳಿಂದ ತೀವ್ರವಾಗಿ ಬ್ಲಾಗ್ ಲೋಕದಲ್ಲಿ ತೊಡಗಿಸಿಕೊಂಡಿರುವ ನಾನೂ ತಬ್ಬಿಬ್ಬಾದೆ. ಹೌದಲ್ಲಾ! ಅನಿಸಿತು. ಬ್ಲಾಗ್ ಲೋಕದ ಬೆಳವಣಿಗೆಗಳನ್ನ ಸದಾ ಹಿಂಬಾಲಿಸುತ್ತಲೇ ಬಂದಿದ್ದೇನೆ ಆದರೆ ಕಾಮೆಂಟ್ ಗಳ ಅಬ್ಬರ, ಆರ್ಭಟಕ್ಕೆ 'ಬ್ಲಾಗ್ ಸಹವಾಸವೇ ಬೇಡ" ಎನ್ನುವ ನಿರ್ಧಾರಕ್ಕೆ ಬಂದ ಘಟನೆಗೆ ಕಣ್ಣು ಬಿಟ್ಟಿದ್ದು ಈಗಲೇ . ಪೂರ್ಣಿಮಾ ಅಮೆರಿಕಾಗೆ ಹೋದಾಗಲೆಲ್ಲಾ ಅಲ್ಲಿನ ಬ್ಲಾಗ್ ಲೋಕದ ಬೆನ್ನತ್ತುತ್ತಾರೆ. ಒಬಾಮ-ಹಿಲೆರಿ ನಡುವಣ ಸ್ಪರ್ಧೆಯ ಬಿರುಸು ಅಲ್ಲಿನ ಬ್ಲಾಗ್ ಲೋಕದಲ್ಲಿ ಪಡೆದುಕೊಂಡ ತಿರುವು ನೋಡಿ ಇದಾವ ರೀತಿಯ ಬ್ಲಾಗಿಂಗ್ ? ಅಂತ ತೀರ್ಮಾನಕ್ಕೆ ಬಂದಿದ್ದಾರೆ. 'ಒಬಾಮಾಗೆ ಬೆಂಬಲ ಕೊಡೋ ಉತ್ಸಾಹದಲ್ಲಿ ಹಿಲರಿ ಕ್ಲಿಂಟನ್ ಚಾರಿತ್ರ್ಯ ವಧೆ ಯಾಕೆ ಮಾಡ್ಬೇಕು. ಅವಳ ಖಾಸಗಿ ಬದುಕಿಗೆ ಕೈ ಹಾಕೋದು ಯಾಕೆ? ಕಾಮೆಂಟ್ ಗಳಿಗೆ ಒಂದು ಮಿತಿ ಬೇಡ್ವಾ?" ಎಂದು ಪ್ರಶ್ನಿಸಿದರು.

ಹೌದು! ಕಾಮೆಂಟ್ ಗಳಿಗೆ ಒಂದು ಎಲ್ಲೆ, ಚೌಕಟ್ಟು ಬೇಡ್ವಾ ಅಂತ ಯೋಚಿಸ್ತಾ ಇರೋವಾಗಲೇ ಅದೇ ಅಮೆರಿಕಾದ ಕೇಟಿ ಸಿಯರ್ರಾ ನೆನಪಾದಳು. ಕಂಪ್ಯೂಟರ್ ಪುಸ್ತಕಗಳನ್ನು ಬರೆಯುವ ಕೇಟಿ ತಮಗೆ ಇಷ್ಟವಾದ ಫುಟ್ಬಾಲ್ ತಂಡವೊಂದು ಈ ಸಲದ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೆ ಅಂತ ಬ್ಲಾಗ್ ನಲ್ಲಿ ಬರೆದರು. ಅಷ್ಟೇ ಸಾಕಾಯ್ತು. ಶುರುವಾಯ್ತು 'ಕಾಮೆಂಟ್ ಅಟ್ಯಾಕ್". ಜೀವ ತೆಗೀತೀವಿ, ಕಾಲು ಮುರಿತೀವಿ, ಆಚೆ ಬಾ ನೋಡ್ಕೋತೀವಿ ಅಂತ ಕಾಮೆಂಟ್ ಗಳು ಅಬ್ಬರಿಸೋದಿಕ್ಕೆ ಶುರು ಮಾಡಿದವು. ಯಾವ ಕಾಮೆಂಟ್ ಗಳಿಗೂ ಮುಖ ಇಲ್ಲ. ಕೇಟಿ ಬದುಕನ್ನೇ ನುಚ್ಚು ನೂರು ಮಾಡುವಂತಾ ಅಟ್ಯಾಕ್ ಶುರುವಾದವು. ಕೊನೆಗೆ ಪೋಲೀಸರ ಮೋರೆ ಹೋಗಬೇಕಾಯಿತು. ಯಾವಾಗ ಕೇಟಿ ತಾವು ಅನುಭವಿಸಿದ್ದನ್ನೆಲ್ಲಾ ಬಹಿರಂಗಪಡಿಸಿದರೋ ಆಗ ನೂರಾರು ಬ್ಲಾಗರ್ ಗಳು ತಾವೂ ಸಹಾ ಅಸಭ್ಯ, ಅಸಹನೀಯ, ಬೇಜವಾಬ್ದಾರಿ ಕಾಮೆಂಟ್ ಗಳಿಂದ ನೊಂದ ಕಥೆಗಳನ್ನು ಹೊರಗೆಡಹಿದರು. ಆಗ ಶುರುವಾಯಿತು ನೋಡಿ ಮುಖರಹಿತ, ಹೊಣೆಗಾರಿಕೆ ಇಲ್ಲದ ಕಾಮೆಂಟ್ ವಿರುದ್ಧದ ಚಳವಳಿ. ರಾಬರ್ಟ್ ಸ್ಕೊಬಲ್ ಈ ಕಾಮೆಂಟ್ ಅಟ್ಯಾಕ್ ವಿರೋಧಿಸಿ ಇಡೀ ವಾರ ತಮ್ಮ ಬ್ಲಾಗ್ ಬಂದ್ ಮಾಡಿದರು. ಸೈಬರ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ ಟಿಮ್ ಓ ರೀಲಿ 'ಸಪೋರ್ಟ್ ರೆಸ್ಪಾನ್ಸಿಬಲ್ ಕಾಮೆಂಟಿಂಗ್" ಚಳವಳಿಗೆ ನಾಂದಿ ಹಾಡಿದರು. ಬೇಕಾಬಿಟ್ಟಿಯಾಗಿ ಹರಿಯುತ್ತಿದ್ದ ಕಾಮೆಂಟ್ ಗಳಿಗೆ ಕಡಿವಾಣ ಹಾಕಲು ಈ ಎಲ್ಲರಿಗೂ ಸಾಧ್ಯವಾಗಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಬ್ಲಾಗ್ ಲೋಕದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನಂತೂ ಈ ಚಳವಳಿ ಮನದಟ್ಟು ಮಾಡಿಕೊಟ್ಟಿದೆ.

'ಯಾಕೆ ಹೀಗಾಯ್ತೋ, ನಾನು ಕಾಣೆನು…" ಅಂತ ಸುಮ್ಮನಿರುವ ಬದಲು ಕನ್ನಡ ಬ್ಲಾಗ್ ಲೋಕದತ್ತ ಕಣ್ಣಾಡಿಸತೊಡಗಿದೆ. ಕನ್ನಡ ಬ್ಲಾಗ್ ಲೋಕದಲ್ಲಿ ಈಗ ಸುದ್ದಿ ಮಾಡುತ್ತಿರುವ ಬರಹಗಳನ್ನು, ಅದನ್ನು ನೂರೆಂಟು ಜನರಿಗೆ ಹಂಚಲು ಸರಸರನೆ ಹರಿದಾಡುತ್ತಿರುವ 'ಮೇಲ್"ಗಳನ್ನು ಗಮನಿಸಿದರೆ ಸಾಕು ಕನ್ನಡ ಬ್ಲಾಗ್ ಲೋಕದಲ್ಲೂ ಹೂಳೆತ್ತುವ ಕೆಲಸ ನಡೆಯಬೇಕಾಗಿದೆ ಎಂಬುದಂತೂ ಸ್ಪಷ್ಟ. ಇತ್ತೀಚೆಗೆ ಒಂದಷ್ಟು ಬ್ಲಾಗ್ ಗೆಳೆಯರು ಸೇರಿ ಬ್ಲಾಗರ್ ಗಳ ಸಮ್ಮೇಳನಕ್ಕೆ ಅಡಿಪಾಯ ಹಾಕುತ್ತಿದ್ದೆವು. ನಮ್ಮ ಆ ದಿನದ ಇಡೀ ಸಮಯವನ್ನು ಕಬಳಿಸಿದ್ದು ಕಾಮೆಂಟ್ ಗಳು. ಕಾಮೆಂಟ್ ಗಳಿಗೆ ಒಂದು ಜವಾಬ್ದಾರಿ ಇರಬೇಕು ಎನ್ನುವುದನ್ನು ಮುಖ್ಯ ಚರ್ಚೆಯಾಗಿಟ್ಟುಕೊಂಡರೆ ಒಳ್ಳೆಯದು ಅನ್ನುವುದೇ ಎಲ್ಲರ ಯೋಚನೆ. ಬ್ಲಾಗಿಂಗ್ ಅನ್ನು ಪ್ರೀತಿಸೋ ಒಂದಷ್ಟು ಜನ ಒಟ್ಟಿಗೆ ಸೇರಿದರೆ ಸಾಕು ಅಲ್ಲಿ ಮೊದಲು ಚರ್ಚೆಯಾಗುವುದೇ ಕಾಮೆಂಟ್ ಗಳು. 'ಅಯ್ಯೋ ನಂಗೂ ಬಕೆಟ್ ಅಂತ ಕರೀತಾರೆ. ನಿನ್ನ ಚರಿತ್ರೆ ಎಲ್ಲಾ ಬಯಲು ಮಾಡ್ತೀನಿ ಅಂತ ಧಮಕಿ ಹಾಕ್ತಾರೆ, ನಾನು ಬರದ್ರೆ ಸಾಕು ಉಗೀತಾರೆ. ಬರೀ ನನ್ನನ್ನ ಮಾತ್ರ ಅಲ್ಲ ನಮ್ಮ ಮನೆಯವರನ್ನೂ ತೊಳೆಯೋಕೆ ಹೊರಟಿದಾರೆ… ಬ್ಲಾಗ್ ನಡೆಸುವುದಕ್ಕೂ ಎಂಟೆದೆ ಬೇಕು ಎನ್ನುವ ಕಾಲವಂತೂ ಬಂದುಬಿಟ್ಟಿದೆ

ಬಯ್ಯೋದು, ಹಂಗಿಸೋದು, ಕಾಲೆಳೆಯೋದು ಇವೆಲ್ಲಾ ಎಲ್ಲೋ ಕದ್ದು ಮುಚ್ಚಿ ಮಾಡಬೇಕಾಗಿಲ್ಲ. ಅದನ್ನ ಎನ್ಕರೇಜ್ ಮಾಡೋ ಹೊಸ ಟ್ರೆಂಡ್ ಶುರುವಾಗಿದೆ. ಅಮೆರಿಕಾದಲ್ಲಿ 'ಷಾಕ್" ರೇಡಿಯೋ ಅಂತಿದೆ. ಅದರ ಆಸೇನೇ ಷಾಕ್ ಕೊಡ್ಬೇಕು ಅನ್ನೋದು. ಹಾಗಾಗಿ ಇಲ್ಲಿ ಬಯ್ಯೋರಿಗೆ, ಹಂಗಿಸೋರಿಗೆ ಮೊದಲ ಮಣೆ. ಹಿಂದುಗಡೆ ಬಾಗ್ಲಿಂದ ಕಳ್ಳನ ಥರಾ ಈ ಟ್ರೆಂಡ್ ಬ್ಲಾಗ್ ಒಳಕ್ಕೂ ಬಂದು ಕೂತಿದೆ. ಒಂದು ಕಾರ್ಟೂನ್ ಯಾವುದೋ ಬ್ಲಾಗ್ ನಲ್ಲಿ ನೋಡಿದ್ದು ನೆನಪು. 'ಮೊದಲು ನಾವು ಬೊಗಳ್ತಿದ್ವಿ ಈಗ ಬ್ಲಾಗ್ತೀವಿ" ಅಂತ. ಅದೇ ಕನ್ಫ್ಯೂಶನ್ ಈಗ ಎಲ್ರಿಗೂ. ಜವಾಬ್ದಾರೀನೆ ಇಲ್ದೆ ಇರೋ ಕಾಮೆಂಟ್ ನೋಡಿದಾಗ 'ಇದೇನಿದು ಬೊಗಳ್ತಿದಾರೋ. ಬ್ಲಾಗ್ತಿದಾರೋ" ಅಂತ.

ಕನ್ನಡ ಬ್ಲಾಗ್ ಲೋಕಕ್ಕೆ ಈಗ ಪ್ರತೀ ದಿನ ಒಂದಿಲ್ಲೊಂದು ಬ್ಲಾಗ್ ರಂಗ ಪ್ರವೇಶ ಮಾಡ್ತಾ ಇದೆ. ಬ್ಲಾಗ್ ಮಂಡಲಕ್ಕೆ ಇದು ನಿಜಕ್ಕೂ ಒಳ್ಳೇ ಸುದ್ದಿ. ಪತ್ರಿಕೆ, ಚಾನಲ್ ಗಳ ಟ್ರಾಫಿಕ್ ಜಾಸ್ತಿ ಆಗ್ತಾ ಇರೋ ರೀತಿನೇ ಬ್ಲಾಗ್ ಟ್ರಾಫಿಕ್ ಸಹಾ ಜಾಸ್ತಿ ಆಗ್ತಿದೆ. ಆಗ್ಲಿ. ಆದ್ರೆ ಬೇರೆ ಮಾಧ್ಯಮದಲ್ಲಿರೋ ನಂ 1 ರೇಸ್ ಇಲ್ಲೂ ಇಣಕಿ ಹಾಕ್ತಿದೆ. ಪೇಪರ್ಗೆ ಸರ್ಕ್ಯುಲೇಶನ್, ಚಾನಲ್ ಗೆ ಟಿ ಆರ್ ಪಿ ಹಾಗೇ ಬ್ಲಾಗ್ ಗೆ 'ಹಿಟ್ಸ್" . ಪ್ರತಿಯೊಂದು ಬ್ಲಾಗ್ ನ ಬಾಗಿಲು ಎಷ್ಟು ಜನ ಬಡಿದಿದಾರೆ ಅಂತ ಗೊತ್ತಾಗೋದಿಕ್ಕೆ ಬ್ಲಾಗ್ ತಾಣಗಳೇ ನೀಡಿರೋ ಒಂದು ಫೆಸಿಲಿಟಿ- ಬ್ಲಾಗ್ ಮೀಟರ್. ಪ್ರತಿಯೊಬ್ಬರಿಗೂ ಹಿಟ್ಸ್ ಬೇಕು. ಇವತ್ತು ದೊಡ್ಡ ದನೀಲಿ ಮಾತಾಡಿದ್ರೆ ಸಾಕು ಎಲ್ರೂ ನಮ್ ಕಡೆ ನೋಡ್ತಾರೆ ಅನ್ನೋ ಸುಖಾನ ಹಲವು ಕಾಮೆನ್ಟಿಗರು ಅನುಭವಿಸ್ತಾ ಇದಾರೆ. ಇವತ್ತು ಹಿಟ್ಸ್ ಚಾರ್ಟ್ ನಲ್ಲಿ ಮೇಲೇರಬೇಕಂದ್ರೆ ಇರೋ ಸುಲಭವಾದ ಮಾರ್ಗಾನೆ ಜಯಂತ ಕಾಯ್ಕಿಣಿ ಹೇಳಿದ ಹಾಗೆ 'ಮರೆಯಲ್ಲಿ ಕೂತು ಕಲ್ಲು ಹೊಡೆಯೋದು". ಜೋಗಿ ಮೊನ್ನೆ ಪುಸ್ತಕ ಬಿಡುಗಡೆ ಪ್ರೊಗ್ರಾಮ್ ನಲ್ಲಿ ನೆನಪಿಸಿಕೊಳ್ತಾ ಇದ್ರು- ಎ ಎನ್ ಮೂರ್ತಿರಾಯರು ಹೇಳ್ತಿದ್ರಂತೆ- 'ಹೊಗಳುವಾಗ ಅನಾಮಿಕನಾಗಿರು, ತೆಗಳುವಾಗ ನೀನು ಯಾರು ಅಂತ ಗುರುತಿಸಿಕೋ" ಅಂತ. ಆದರೆ ಈಗಿನ ಟ್ರೆಂಡ್ ಅದಕ್ಕೆ ಉಲ್ಟಾ.

ಅನಾಮಿಕತೆ ಅನ್ನೋದು ಬ್ಲಾಗ್ ನ ಒಂದು ಶಕ್ತಿ. ಆದರೆ ಅದೇ ಅದರ ದೌರ್ಬಲ್ಯ ಕೂಡಾ ಅನ್ನೋದನ್ನ ನಿಜಾ ಮಾಡೋಕೆ ಅಂತಾನೇ ಹೊರಟಿರೋ ಕಾಮೆನ್ಟಿಗರೂ ಇದ್ದಾರೆ. ಈ ಜಗತ್ತಿನಲ್ಲಿ 'ಜೋಬು ಅನ್ನೋದು ಇರೋವರ್ಗೂ ಜೋಬುಗಳ್ರು ಇರ್ತಾರೆ ' ಅನ್ನೋ ಥರಾ ಬ್ಲಾಗ್ ಗಳು ಇರೋವರ್ಗೂ ಅದಕ್ಕೇ ಮಸಿ ಬಳಿಯೋದಕ್ಕೆ ಅಂತಾನೇ ಇರೋ ಒಂದಷ್ಟೋ ಕಾಮೆನ್ಟಿಗರೂ ಇರ್ತಾರೆ. ಅನಾಮಿಕತೆ ಅನ್ನೋ ಸೌಲಭ್ಯ ಬಳಸಿ ಪ್ರತೀ ಬ್ಲಾಗಿಗೂ ಕನ್ನ ಹಾಕ್ತಾ ಖುಷಿ ಅನುಭವಿಸೋರೂ ಇದಾರೆ. ಅನಾಮಿಕತೆ ಬರಹಗಾರರಿಗೆ ಎಷ್ಟೋ ಬಾರಿ ತಮ್ಮೊಳಗಿನ ಬೆಸ್ಟ್ ಅನ್ನ ನೀಡೋದಕ್ಕೆ ಸಹಾಯ ಮಾಡಿದೆ. ಅನಾಮಿಕತೆ ಅನ್ನೋದು ಎಷ್ಟೋ ನಂಬಲಿಕ್ಕೆ ಆಗದ ನೋವುಗಳನ್ನ ಹಂಚಿಕೊಳ್ಳೋಕೆ ಸಹಾಯ ಮಾಡಿದೆ. ಅನಾಮಿಕತೆ ಅನ್ನೋದು ಲೋಕಾಯುಕ್ತಕ್ಕೆ ಇರೋ ದೊಡ್ಡ ಶಕ್ತಿ. ಆದರೆ ಇವತ್ತು ಇದೇನು anonimity ಯೋ ಇಲ್ಲಾ enimity ಯೋ ಅಂತ ಗೊಂದಲ ಕಾಡೋ ಅಷ್ಟು ಬ್ಲಾಗ್ ಲೋಕ ಬದಲಾಗಿವೆ.

Support responsible commenting ಚಳವಳಿ ತನ್ನನ್ನ ಬ್ಲಾಗ್ ಲೋಕಕ್ಕೆ ಕಾಮನ್ ಸೆನ್ಸ್ ತರೋ ಪ್ರಯತ್ನ ಅಂತ ಬಣ್ಣಿಸಿಕೊಂಡಿದೆ. ಬ್ಲಾಗ್ ಲೋಕಕ್ಕೆ ಏನು ಬೇಕಾಗಿದೆ ಅಂತ ಗುರುತಿಸಿ ಕೊಳ್ಳೋ ಹೊತ್ತಲ್ಲೇ ಬ್ಲಾಗ್ ಲೋಕಕ್ಕೆ ಏನು ಬೇಡ ಅನ್ನೋದನ್ನೂ ಗುರುತಿಸಿ ಕೊಳ್ಳೋ ಜರೂರು ಇದೆ ಅನ್ನೋದು ಗೊತ್ತಾಗಿದೆ. 'ಇದೇನು ಸೆನ್ಸಾರಾ?" ಅಂತ ಕೂಗೆಬ್ಬಿಸಿದವರಿಗೆ ಇದು ಸೆನ್ಸಾರ್ ಅಲ್ಲ ಸೆಲ್ಫ್ ಸೆನ್ಸಾರ್ ಅನ್ನೋದನ್ನ ಚಳವಳಿ ಸ್ಪಷ್ಟ ಮಾಡಿದೆ. ಬ್ಲಾಗ್ ನಲ್ಲಿ ಹಾಕುವ ಬರಹಗಳಿಗೆ ಹೇಗೆ ಬ್ಲಾಗಿಗರು ಜವಾಬ್ದಾರರೋ ಹಾಗೇನೇ ಅದರ ಕಾಮೆಂಟ್ ಗಳಿಗೂ ಜವಾಬ್ದಾರರು ಅನ್ನೋದನ್ನ ಕಲಿಸಲಾಗ್ತಿದೆ.

ಬ್ಲಾಗಿಂಗ್ ಗೆ ಒಂದು ನೀತಿ ಸಂಹಿತೆ ಇರ್ಬೇಕು ಅಂತ ಯೋಚನೆ ಮಾಡ್ತಾ ಇರೋರ ಸಂಖ್ಯೆ ಜಾಸ್ತಿ ಆಗ್ತಿದೆ. ವಿಕಿಪೀಡಿಯಾದ ಬಳಗ ಸಹಾ ಇದಕ್ಕೆ ಕೈಜೋಡಿಸಿದೆ. ಅಮೆರಿಕಾದಲ್ಲಿ ಈಗಾಗಲೇ ಇದನ್ನ 'ಸೈಬರ್ ಬುಲ್ಲಿಯಿಂಗ್" ಅಂತ ಗುರ್ತ್ಸಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ ಹಲ್ಲೆ ನಡೆಸಿದ ಹಾಗೆ ಈಗ ಸೈಬರ್ ಹಲ್ಲೆ ನಡೆಸಲಾಗ್ತಿದೆ ಅನ್ನೋದು ವಿವರಣೆ. ಕನ್ನಡದಲ್ಲಿ ಬ್ಲಾಗಿಂಗ್ ಈಗ ಶೈಶವಾವಸ್ಥೆಯನ್ನ ದಾಟಿಕೊಳ್ಳೋ ಕಾಲದಲ್ಲಿದೆ. ಈ ಕಾಲ ಒಂದು ವಿಮರ್ಶೆಯ ಕಾಲ ಆಗ್ಬೇಕು. ಕತ್ತಲಲ್ಲಿ ಕ್ರಿಮಿಗಳು ಸಿಕ್ಕಾಪಟ್ಟೆ ಜಾಸ್ತಿ. ಹಾಗಾಗಿ ಬೆಳಕು ಇರೋ ರೀತಿ ನೋಡಿಕೊಳ್ಳೋ ಜವಾಬ್ದಾರಿ ಕೂಡಾ ನಮ್ಮ ಮುಂದೇನೇ ಇದೆ. ಕೇವಲ 'ಹಿಟ್ಸ್" ಗಳ ಮೇಲೆ ಮಾತ್ರ ಕಣ್ಣಿಟ್ಟರೆ ಕೊನೆಗೆ ಉಳಿಯೋದು 'ಹಿಟ್ ಅಂಡ್ ರನ್" ಕೇಸ್ ಗಳು ಮಾತ್ರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more