ಹೆಗಡೆ ಅವರ 'ವ್ಯಕ್ತಿ ವಿನ್ಯಾಸ, ಕಲ್ಪನಾ ಶಿಲ್ಪ'
- ಮಾನಸ, ಬೆಂಗಳೂರು.
ಸಿರ್ಸಿ ತಾಲೂಕಿನ ಇಟಗುಳಿ ಮೂಲದವವರಾದ ನರಸಿಂಹ ಹೆಗಡೆ ಶಿಲ್ಪಕಲಾ ಕೃತಿ ವಿನ್ಯಾಸದಲ್ಲಿ ಸಿದ್ಧಹಸ್ತರು. ದೇವಲಕುಂಡ ವಾದಿರಾಜ್, ವೆಂಕಟಾಚಲಪತಿ ಮತ್ತು ಎಂಟಿವಿ ಆಚಾರ್ಯ ಅವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ಗೆರೆಗಳ ಅಭ್ಯಾಸ ಮಾಡಿದವರು ಹೆಗಡೆ. ಅಲ್ಲದೆ, ಕಮಲೇಶ್ ಮತ್ತು ಯೂಸುಫ್ ಅರಕ್ಕಲ್ ಅವರಿಂದ ಶಿಲ್ಪಕಲೆ ಸೂಕ್ಷ್ಮಗಳನ್ನು ಕಲಿತವರು. ಪುಂಡಲೀಕ ಶೆಣೈ ಅವರಿಂದ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ಹೆಗಡೆ ಆಕಾಶವಾಣಿಯಲ್ಲಿ ಕೊಳಲು ಕಾರ್ಯಕ್ರಮಗಳನ್ನೂ ನೀಡಿದ್ದಾರೆ.
ಹೆಗಡೆ ಅವರ ಕಲಾ ನೈಪುಣ್ಯ ಸಾಕಾರವಾಗಿರುವುದು ಮುಖ್ಯವಾಗಿ ಗೆರೆಗಳಲ್ಲಿ. ಸುಮಾರು 5000 ಕ್ಕೂ ಹೆಚ್ಚು ಗೆರೆಚಿತ್ರಗಳನ್ನು ಬಿಡಿಸಿದ ಹೆಗ್ಗಳಿಕೆ ಅವರದು. ಈ ಚಿತ್ರಗಳ ಅನೇಕಾರು ಪ್ರದರ್ಶನಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿವೆ. ಕಲ್ಲು, ಮರ, ಮಣ್ಣು ಮತ್ತು ಲೋಹದಲ್ಲಿ ಅನಾವರಣಗೊಳ್ಳುವ ಅವರ ಶಿಲ್ಪಕಲಾಕೃತಿಗಳು ಸ್ವರ್ಣವಲ್ಲಿ ಮಠ, ಶೃಂಗೇರಿ ಮಠ, ಎಎನ್ ಜೆಡ್ ಟೆಕ್ನಾಲಜೀಸ್, ಚೆನ್ನೈನ ಸಿಲ್ವರ್ ಲೈನ್ ಟೆಕ್ನಾಲಜೀಸ್ ಮುಂತಾದೆಡೆ ನೋಡಸಿಗುತ್ತವೆ.
ಹೆಗಡೆಯವರ ಪ್ರಸಕ್ತ ಪ್ರದರ್ಶನದಲ್ಲಿ ಮರ, ಹಿತ್ತಾಳೆ, ಫೈಬರ್ ಮತ್ತು ಸಿಂಥಟಿಕ್ ನಲ್ಲಿ ಚಿತ್ರಿಸಲಾದ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಈ ಬಗೆಯ ಪ್ರದರ್ಶನವನ್ನು ಹೆಗಡೆಯವರು ಇದೇ ಪ್ರಥಮವಾಗಿ ಹಮ್ಮಿಕೊಳ್ಳುತ್ತಿದ್ದಾರೆ. ಚಿತ್ರಕಲಾಪರಿಷತ್ ಆವರಣದಲ್ಲಿ ಜ. 25 ರಿಂದ 31ರ ವರೆಗೆ ಪ್ರದರ್ಶನ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಸಮಯ ಬೆಳಗ್ಗೆ 11 ರಿಂದ ಸಂಜೆ 7 ರತನಕ. ನರಸಿಂಹ ಹೆಗಡೆಯವರ ಸಂಪರ್ಕ : 94490 60077












Click it and Unblock the Notifications