• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದಿ ನ್ಯಾಷನಲ್ಲು,ಕನ್ನಡ ಲೋಕಲ್ಲಾ?!

By Staff
|

ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಆನೆಸವಾರಿ ಮಾಡುತ್ತಿರುವ ಹಿಂದಿಯ ಕೇಂದ್ರ ಸರ್ಕಾರಿ ಕೃಪಾಪೋಷಿತ"ಭಾಷಾ ಸಪ್ತಾಹ"ವನ್ನು ಈಗ ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ. ಹಾಗಾದರೆ, ನಾವು ಕನ್ನಡ ಭಾಷಿಕರು ಜಿಂಕೆಮರೀನಾ ? ಇಂಥ ರಾಷ್ಟ್ರೀಯ ಕುಹಕವನ್ನು ನೋಡಿಕೊಂಡು ನಾವು ತೆಪ್ಪಗಿರಬೇಕಾ? ಚರ್ಚಿಸಿ.

*ಚಂ.ಶೇ.ಕಲ್ಯಾಣ ರಾಮನ್, ಬೆಂಗಳೂರು

ಮೊನ್ನೆ “ ಟಾಟಾ ಸ್ಕೈ " ದೂರದರ್ಶನ ಜಾಲ ಸಂಪರ್ಕದ ನವೀಕರಣಕ್ಕಾಗಿ ಅವರ ಕರೆ ಕೇಂದ್ರದ ಅಧಿಕಾರಿಯ ಜೊತೆ ಮಾತನಾಡುತ್ತಿದ್ದೆ. ಬೆಂಗಳೂರಿನಲ್ಲಿ/ಕರ್ನಾಟಕದಲ್ಲಿ ಟಾಟಾ ಸ್ಕೈ ಸಂಪರ್ಕ ಪಡೆದವರಿಗೆ, ಆ ಉಪಕರಣವನ್ನು ಬಳಸುವ ಬಗ್ಗೆ ಗ್ರಾಹಕ ಮಾಹಿತಿ ಹೊತ್ತಿಗೆಯನ್ನು ನೀಡುತ್ತಾರೆ. ಕನ್ನಡಿಗರ ದುರಾದೃಷ್ಟ ಮಾಹಿತಿ ಕೇವಲ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಲಭ್ಯ. ಇದೇಕೆ ಹೀಗೆ ಎಂದು ಮಾತನಾಡುತ್ತಿದ್ದ ಅಧಿಕಾರಿಯನ್ನು ಪ್ರಶ್ನಿಸಿದಾಗ, “ ಸರ್ ಇಂಗ್ಲೀಷು ಇಂಟರ್‍ನ್ಯಾಷನಲ್ - ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ “ ಎಂದು ಉತ್ತರಿಸಿದ ಹಾಗಾದ್ರೆ ಕನ್ನಡ ಅಬ್ಬೇಪಾರಿನಾ ಎಂದು ಕೇಳಿದೆ? ಇಲ್ಲಾ ಸರ್ ಅದು "ಲೋಕಲ್ಲು" ಎಂದ.

ಹೀಗೆ ನಮ್ಮದೇ ಊರಿನಲ್ಲಿ ನಾವು ಇಲ್ಲಿನ ಯಾವುದೇ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹಿರಿಸಿದ್ದರೆ, ಯಾವುದೇ ವ್ಯಾಪಾರಿ ಮಳಿಗೆಗಳಲ್ಲಿ ಕನ್ನಡದಲ್ಲಿ ಮಾತನಾಡಲು ಮುಂದಾಗಿದ್ದಾಗ ಅಥವ ಹೀಗೆ ಇನ್ನೂ ಹತ್ತು ಹಲವೆಡೆ ವ್ಯವಹಾರದಲ್ಲಿ ಕನ್ನಡವನ್ನು ಬಯಸಿದ್ದಲ್ಲಿ ಅಲ್ಲಿನ ಸೆಕ್ಯುರಿಟಿ ಗಾರ್ಡ್‍ನಿಂದ ಹಿಡಿದು ಉನ್ನತ ಅಧಿಕಾರಿಗಳವರಗಿನ ಮಂದಿಯಿಂದ , ಮುಖಭಂಗಕ್ಕೆ ಒಳಗಾಗಿರುವ ಅನುಭವ ನಮ್ಮಲ್ಲಿ ಅನೇಕರಿಗೆ ಆಗಿರಬಹುದು. ಕನ್ನಡದ ಅನಿವಾರ್ಯತೆಯನ್ನು ಸೃಷ್ಟಿಸದಿದ್ದುದೇ ನಾವು ನಮ್ಮ ನೆಲದಲ್ಲೇ ತಿರಸ್ಕರಿಸಲ್ಪಟ್ಟು ಅವಹೇಳನಕ್ಕೊಳಗಾಗಿದ್ದೇವೆ ಅಂದರೆ ತಪ್ಪಾಗಲ್ಲ.

ಇಂಗ್ಲೀಷೇನೋ ಇಂಟರ್ ನ್ಯಾಷನಲ್ಲು! ಆದರೆ ಹಿಂದಿ ನಮ್ಮ ರಾಷ್ಟ್ರಭಾಷೆನೇ? :ನಮ್ಮ ಬದುಕು, ಶಿಕ್ಷಣ, ಉದ್ಯೋಗ, ಮನೋರ೦ಜನೆ, ವ್ಯವಹಾರ ಮತ್ತು ಇನ್ನೇನೆ ಇದ್ದರೂ ಎಲ್ಲವೂ ನಮ್ಮ ತಾಯಿನುಡಿ ಕನ್ನಡದಲ್ಲಿ ಇರಬೇಕಾದ್ದು ಪ್ರಕೃತಿ ಸಹಜ. ಇ೦ದಿನ ದಿನದಲ್ಲಿ ಇ೦ಗ್ಲೀಷ್ ಮೇಲಿನ ನಮ್ಮ ಅವಲ೦ಬನೆ ಅತಿಯಾಗಿರುವುದು ಆತ೦ಕಕಾರಿಯಾಗಿದೆ. ಇದಕ್ಕೆ ಶತಮಾನಗಳ ಗುಲಾಮಗಿರಿಯ ಇತಿಹಾಸವೂ ಕಾರಣವಾಗಿದೆ. ಹಾಗಾಗಿ ಜಾಗತಿಕ ಸವಾಲುಗಳನ್ನು ತುರ್ತಾಗಿ ಎದುರಿಸಲು ಇ೦ಗ್ಲೀಷಿನ ಅಗತ್ಯ ನಮಗೆ ಇ೦ದು ಖ೦ಡಿತ ಇದೆ. ಹಾಗೆ ಪ್ರಪ೦ಚದ ಉನ್ನತ ಜ್ಞಾನ, ತ೦ತ್ರಜ್ಞಾನಗಳನ್ನೆಲ್ಲಾ ಕನ್ನಡಕ್ಕೆ ತ೦ದು ನಮ್ಮ ಮು೦ದಿನ ಪೀಳಿಗೆ ಸಾಧನೆಯ ಶಿಖರ ಏರುವ೦ತೆ ಮಾಡುವ ಹೊಣೆಗಾರಿಕೆಯೂ ನಮ್ಮದೇ ಆಗಿದೆ. ಆದರೆ ಇದರ ನಡುವೆ ಈ ಹಿಂದಿ ಏಕೆ ಎಂಬುದೇ ಪ್ರಶ್ನೆಯಾಗಿ ಕಾಡುತ್ತದೆ?

ಅದಕ್ಕೆ ಉತ್ತರ ಹುಡುಕುತ್ತ ಹೋದರೆ, ಭಾರತಕ್ಕೆ ತನ್ನದೇ ಆದ ಒಂದು ರಾಷ್ಟ್ರ ಭಾಷೆ ಇರಬೇಕು. ಅದು "ನಮ್ಮದಲ್ಲದ" ಇಂಗ್ಲಿಷ್ ಆಗಿರುವುದಕ್ಕಿಂತ ಹಿಂದಿಯಾಗಿರುವುದೇ ಒಳ್ಳೆಯದೆಂದು ಅದನ್ನು ಪ್ರತಿಪಾದಿಸುತ್ತಿದ್ದವರು ಸಕಲ ಭಾರತೀಯರನ್ನು ನಿಧಾನವಾಗಿ ವಶೀಕರಣಕ್ಕೊಳಪಡಿಸಿರುವುದು ಕಂಡುಬರುತ್ತದೆ. ಕನ್ನಡವನ್ನು ಬಿಟ್ಟು ಬೇರೆ ಯಾವುದೇ ಭಾಷೆಯಾದರೂ ಅದು ನಮಗೆ "ನಮ್ಮದಲ್ಲದ" ಭಾಷೇನೆ ಅಲ್ಲವೇ? ನಮಗೆ ಹಿಂದೀನೂ ನಮ್ಮದಲ್ಲದ್ದು, ಹಾಗೆಯೇ ಇಂಗ್ಲೀಷು ಸಹ ನಮ್ಮದಲ್ಲದ್ದು. ಕನ್ನಡಕ್ಕೂ ಹಿಂದಿಗೂ ಯಾವ ಭಾಷಾ ವೈಜ್ಞಾನಿಕ ಸಂಬಂಧವೂ ಇಲ್ಲ. ಭಾರತಕ್ಕೆ ತನ್ನದೇ ಆದ ಒಂದು ರಾಷ್ಟ್ರಭಾಷೆ ಇರಬೇಕು ಎಂದು ವಾದ ಮಾಡುವುದರಲ್ಲೇ , ಭಾರತ ಮೊದಲಿಂದಲೇ ಒಂದಾಗಿರಲಿಲ್ಲ ಎಂಬ ಸ್ಪಷ್ಟ ಸತ್ಯ ಅಡಗಿದೆ ಅಲ್ಲವೇ? ಮೊದಲಿಂದ ಒಂದಾಗೇ ಇದ್ದಿದ್ದರೆ ಒಂದೇ ಭಾಷೆ ಮೊದಲಿಂದಲೂ ಇರುತ್ತಿತ್ತಲ್ಲವೇ? ಒಂದು ರಾಷ್ಟ್ರಕ್ಕೆ ಒಂದೇ ರಾಷ್ಟ್ರ ಭಾಷೆ ಇರುವುದನ್ನು ನಾವು ಪ್ರಪಂಚದ ಬೇರೆಡೆ ಕಾಣಬಹುದು! ಆದರೆ ಅದೇ ಭಾರತಕ್ಕೂ ಅನ್ವಯಿಸ ಬೇಕಾಗೇನಿಲ್ಲವಲ್ಲ.

ಕಾರಣಗಳೇನೇ ಇರಲಿ, ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ದಶಕಗಳಿಂದ ನಮ್ಮಲ್ಲಿ ತಪ್ಪು ಕಲ್ಪನೆಯನ್ನು ಬಿಂಬಿಸಲಾಗಿದೆ. ನಾವೆಲ್ಲರೂ ತಿಳಿಯಬೇಕಾಗಿರುವ ಸತ್ಯವೆಂದರೆ “ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ". ಕನ್ನಡ, ತಮಿಳು, ಗುಜರಾತಿ, ಅಸ್ಸಾಮಿ, ಪಂಜಾಬಿ ಹೀಗೆ ಇತರ ಭಾಷೆಗಳು ಸೇರಿದಂತೆ ಭಾರತದ ಒಟ್ಟು 23 ಭಾಷೆಗಳನ್ನು ನಮ್ಮ ಸಂವಿಧಾನ ಭಾರತದ ಪ್ರಮುಖ/ಅಧಿಕೃತ/ಆಡಳಿತ ಭಾಷೆಗಳೆಂದು ಮಾತ್ರ ಪರಿಗಣಿಸಿದೆ. ಬಲಿಷ್ಠ ಕರ್ನಾಟಕ, ಆಂಧ್ರಾ, ಬಂಗಾಳ, ಪಂಜಾಬ ಮತ್ತಿತರ ರಾಷ್ಟ್ರಗಳು ತಮ್ಮ ಭಾಷೆ, ಸಂಕ್ಕೃತಿಗಳ ಸ್ವಾಯತ್ತತೆಯಿಂದ ಭಾರತ ರಾಷ್ಟ್ರದ ಸಂಯುಕ್ತತೆಯುಂಟಾಗಿರುವುದು ಎಂದು ನಾವು ಮನಗಾಣಬೇಕಿದೆ.

ಭಾರತ!ಸ್ವಾತಂತ್ರ್ಯಕ್ಕೂ ಮೊದಲು ಹಿಂದಿಯ ಸ್ಥಾನ :ಹಲವಾರು ಭಾಷೆಗಳನ್ನು ಮಾತನಾಡುವ ಪ್ರದೇಶಗಳ ಒಕ್ಕೂಟವಾಗಿರುವ ಭಾರತದಲ್ಲಿ ಸ್ವಾತಂತ್ರ್ಯಕ್ಕೂ ಮೊದಲು ಹಿಂದಿ ಕೇವಲ ದೇಶದ ಉತ್ತರ ಭಾಗದ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಬ್ರಿಟೀಷರ ಆಳ್ವಿಕೆಗೊಳಗಾಗಿದ್ದ ಎಲ್ಲಾ ಭಾಗದ ವಾಸಿಗಳನ್ನು ಒಂದು ಸೂರಿನಡಿ ಒಗ್ಗೂಡಿಸುವ ನೆಪದಲ್ಲಿ 1900 ರ ಶತಮಾನದ ಆರಂಭದಲ್ಲಿ ಹಿಂದಿಯನ್ನು ಮೆತ್ತಗೆ ಈ ಪ್ರದೇಶಗಳಲ್ಲಿ ಒಳ ನುಸುಳಿಸುವ ಪ್ರಯತ್ನ ಉತ್ತರದ ಕಡೆಯ ಕೆಲವು ನಾಯಕರಿಂದ ಪ್ರಾರಂಭಿಸಲ್ಪಟ್ಟಿದ್ದು ಇತಿಹಾಸ. ದೇಶ ಸ್ವಾತಂತ್ರ್ಯಗೊಂಡು, ಸಂವಿಧಾನ ರಚಿಸಿದವರ ಅನುಗ್ರಹದಿಂದಾಗಿ! ಹಿಂದಿಗೆ ಈ ದೇಶದ ಆಡಳಿತ ಭಾಷೆಯ ಪಟ್ಟ ಕೂಡ ದೊರಕುವ ಪ್ರಾಪ್ತಿಯಾಯ್ತು! ಹಿಂದಿಯನ್ನು ರಾಷ್ಟ್ರ ಭಾಷೆ ಮಾಡಿ ಇತರ ಭಾಷೆಗಳನ್ನು ಸ್ಥಳೀಯ ಮತ್ತು ಪ್ರಾದೇಶಿಕ ಭಾಷೆಗಳನ್ನಾಗಿ ಪರಿಗಣಿಸುವ ಹುನ್ನಾರ ನಡೆಸಿದ್ದ ಹಿಂದಿ ಉತ್ಸಾಹಿಗಳಿಗೆ, ಇತರ ರಾಜ್ಯಗಳ ಸ್ವಾಭಿಮಾನಿಗಳಿಂದ ಪ್ರತಿಭಟನೆ-ವಿರೋಧಗಳನ್ನೆದುರಿಸಬೇಕಾಯ್ತು.

ಅಂದು ಭಾರತ ಒಕ್ಕೂಟ ಸಂಸ್ಥಾನ [ union of states] ಆಗುವುದರ ಬದಲು ಭಾರತ ಸಂಯುಕ್ತ ಸಂಸ್ಥಾನ [united states of India] ಆಗಬೇಕೆಂದು ತಮಿಳುನಾಡಿನ ದ್ರಾವಿಡ ನಾಯಕ ಅಣ್ಣಾದೊರೈ ಮತ್ತು ನಮ್ಮ ರಾಷ್ಟ್ರ ಕವಿ ಕುವೆಂಪು ಪ್ರತಿಪಾದಿಸಿದ್ದರು. ಕನ್ನಡ, ತೆಲುಗು ಹಾಗು ಭಾರತದ ಇತರ ಸ್ವತಂತ್ರ ಭಾಷೆಗಳು ಹಿಂದಿಗಿಂತಲೂ ಪ್ರಾಚೀನವಾದುದು. ಹಲವು ಉಪಭಾಷೆಗಳನ್ನು ಆಪೋಷನ ತೆಗೆದುಕೊಂಡು ಬೆಳೆದ ಹಿಂದಿ! ಯನ್ನು ಅಂದು ಭಾರತದಲ್ಲಿ ಅತಿ ಹೆಚ್ಚು ಜನ ಮಾತನಾಡುವ ಭಾಷೆ ಮತ್ತು ಅದನ್ನೇ ರಾಷ್ಟ್ರ ಭಾಷೆ ಮಾಡಬೇಕು ಎಂದು ಉತ್ತರ ಭಾರತೀಯರು ಮುಂದಾದಾಗ ಭಾರತದಲ್ಲಿ ಇರುವ ಅತಿ ಹೆಚ್ಚು ಪಕ್ಷಿಗಳು ಕಾಗೆ ಅದನ್ನು ರಾಷ್ಟ್ರ ಪಕ್ಷಿ ಎನ್ನೋಣವೇ ಎಂಬ ದ್ರಾವಿಡ ನಾಯಕರ “ಕುಚೋದ್ಯ ಪಟ್ಟು" ಸಹ ಅಂದು ಹಿಂದಿ ನಮ್ಮೆಲ್ಲರನ್ನೂ ಮುಳುಗಿಸದಿರುವಂತೆ ತಡೆಹಿಡಿಯಿತು.

ಸ್ವಾತಂತ್ರ್ಯಾನಂತರದ ಹಿಂದಿಯ ಬೆಳವಣಿಗೆ: ಹೀಗಾಗಿ ಇತರ ಪ್ರದೇಶಗಳ ಸ್ವಾಭಿಮಾನಿಗಳಿಂದ ಬಂದ ಪ್ರತಿಭಟನೆಗಳಿಂದಾಗಿ ಹಿಂದಿ ಕೇವಲ ಕೇಂದ್ರದ ಆಡಳಿತ ಭಾಷೆಯಾಗಿ ಉಳಿದುಕೊಂಡಿತು. ಆದರೆ ನಂತರದಲ್ಲಿ ಎಲ್ಲಾ ರಾಜ್ಯಗಳಲ್ಲಿರುವ, ಕೇಂದ್ರಸರ್ಕಾರದ ಹಿಡಿತವಿರುವ ಬ್ಯಾಂಕು, ವಿಮಾ ಕಚೇರಿ, ರೈಲ್ವೇ, ಅಂಚೆ, ದೂರದರ್ಶನ, ರೇಡಿಯೋ, ಸೇನೆ ಹೀಗೆ ವಿವಿಧೆಡೆಯಲ್ಲಿ ವ್ಯವಸ್ಥಿತವಾಗಿ ಹಿಂದಿ ಪ್ರಚಾರ ಕೈಗೊಳ್ಳುವ ಮೂಲಕ, ತ್ರಿಭಾಷ ಸೂತ್ರದಡಿ ಹಿಂದಿಯೇತರ ರಾಜ್ಯಗಳ ವಿಧ್ಯಾರ್ಥಿಗಳಿಗೆ ಅದನ್ನು ಹೇರುವ ಮೂಲಕ ಹಿಂದಿ ಪ್ರಸಾರಕ್ಕೆ ಕಾರ್ಯೋನ್ಮುಖರಾಗಿರುವುದು ನಮ್ಮ ಕಣ್ಣ ಮುಂದಿರುವ ಸತ್ಯ.. ಹಿಂದಿಯನ್ನು ಕಲಿತು ಇಡೀ ಭಾರತವನ್ನು ಸುತ್ತಾಡಿ ಎಲ್ಲವನ್ನು ಗ್ರಹಿಸಿ, ಎಲ್ಲರೊಂದಿಗೆ ಏಕತೆಯನ್ನು ಸಾಧಿಸಿಬಿಡಬಹುದು ಎಂದು ನಮ್ಮ ಮುಗ್ದ ವಿಧ್ಯಾರ್ಥಿಗಳಲ್ಲಿ, ಹಿಂದಿ ಪ್ರಚಾರಕರು ಭ್ರಮೆಯನ್ನು ಹುಟ್ಟುಹಾಕುವಲ್ಲಿ ಬಹು ಮಟ್ಟಿಗೆ ಯಶಸ್ವಿಯಾಗಿದ್ದಾರೆ. ಕೇವಲ ಕೇಂದ್ರ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಕಚೇರಿಗಳಿಗೆ ಸೀಮಿತವಾಗಿದ್ದ ಈ ಹಿಂದಿ ಪಿಡುಗು ನಿಧಾನವಾಗಿ ಖಾಸಗೀ ಕ್ಷೇತ್ರಕ್ಕೂ ವ್ಯಾಪಿಸುತ್ತಿರುವುದು ವಿಷಾದನೀಯ. ಬಹುಷಃ ಈ ಕಾರಣಕ್ಕಾಗಿಯೇ ಹಿಂದಿ ವಶೀಕರಣಕ್ಕೊಳಗಾಗಿರುವ ಆ ಟಾಟಾ ಸ್ಕೈ ಅಧಿಕಾರಿ ಮತ್ತು ಅವರಂತಹ ಸಾವಿರಾರು ಮಂದಿ ಕನ್ನಡ, ತಮಿಳು, ತೆಲುಗು, ಬಂಗಾಳಿ, ಅಸ್ಸಾಮಿ ಭಾಷೆಗಳನ್ನು “ಲೋಕಲ್ಲು" ಮಟ್ಟಕ್ಕೆ ಇಳಿಸಿ ಯಾವುದೇ ಪ್ರಾಮುಖ್ಯತೆ ನೀಡದಿರುವುದು ಎಂದನಿಸುತ್ತದಲ್ಲವೇ?

ಕಾಕತಾಳೀಯವಾಗಿ ಇದೇ ಸೆಪ್ಟಂಬರ್ 7 ರಿಂದ 14 ರವರೆಗೆ ಕೇಂದ್ರ ಸರ್ಕಾರಿ ಕೃಪಾಪೋಷಿತ “ಹಿಂದಿ ಸಪ್ತಾಹ್" [ಹಿಂದಿ ವಾರಾಚರಣೆ] ಎಲ್ಲೆಡೆ ಪ್ರಾರಂಭವಾಗುತ್ತಿದೆ. ಕನ್ನಡಿಗರೆಲ್ಲರೂ ಇದನ್ನು ತೀವ್ರವಾಗಿ ಖಂಡಿಸಿ-ಪ್ರತಿಭಟಿಸಬೇಕಿದೆ. ನಮ್ಮ ಹಿಂದಿ ವಿರೋಧವನ್ನು ಕನ್ನಡ ಪ್ರೇಮಕ್ಕೆ ಸಮೀಕರಿಸಬೇಕಿದೆ. ಹಾಗೆ ಈ ದೇಶಕ್ಕೆ ಒಂದು ರಾಷ್ಟ್ರಭಾಷೆ ಇರಲೇಬೇಕೆಂದರೆ .. 2500 ವರ್ಷಗಳಿಗೂ ಮಿಗಿಲಾದ ಸಾಹಿತ್ಯ ಪರಂಪರೆಯಿರುವ, ಜಗತ್ತಿನ ಅತ್ಯಂತ ತರ್ಕಬದ್ಧವಾದ, ಗೊಂದಲಗಳಿಲ್ಲದ ಲಿಪಿ ಹೊಂದಿರುವ, 7 ಜ್ಞಾನಪೀಠ ಪ್ರಶಸ್ತಿಗಳ ಒಡೆಯರಾದ, ವೈದ್ಯಕೀಯದಂತಹ ಕಷ್ಟದ ವಿಷಯಗಳಿಗೂ ನಿಘಂಟು ರೂಪಿಸಿರುವ, ಬ್ಯಾಂಕಿಂಗ್ ನಿಘಂಟು ಹೊಂದಿರುವ ಏಕೈಕ ಭಾರತೀಯ ಭಾಷೆಯಾದ, ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳ ಹುಟ್ಟಿಗೆ ಕಾರಣವಾಗಿರುವ ಐ.ಟಿ - ಬಿ.ಟಿಗಳಿಗೆ ತವರಾಗಿ ಪ್ರಪಂಚದ ಅತಿವೇಗವಾಗಿ ಬೆಳೆಯುತ್ತಿರುವ ಪ್ರದೇಶದ ಉಸಿರಾಗಿರುವ ನಮ್ಮ ಕನ್ನಡ ಭಾಷೆ ರಾಷ್ಟ್ರಭಾಷೆಯಾಗಲಿ ಅಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more