ರಾಹು-ಕೇತು ಕಾಟ ಮತ್ತು ಗ್ರಹಣ ಚಕ್ರ

(ಮೇಲಿನ ಚಿತ್ರದಲ್ಲಿ, ನೀಲಿ ಬಣ್ಣದ್ದು ಭೂಮಿ. ಹಳದಿ ಬಣ್ಣದ್ದು ಸೂರ್ಯ. ಮಂಕುಕೆಂಪು ಚಂದ್ರ. ಇನ್ನು ಕಪ್ಪಗಿರೋದು ರಾಹು ಕೇತು ಬಿಂದುಗಳು)
ಈಗ ಆ ಪ್ರಯೋಗವನ್ನೇ ಮುಂದುವರಿಸೋಣ. ನೀವು ಇಟ್ಕೊಂಡಿರೋ ತಟ್ಟೇನ ಇದ್ದಹಾಗೆ ಅದರ ಸುತ್ತ ಅದನ್ನೇ ತಿರುಗಿಸ್ತಾ ಇರಿ. ಇದು ಚಂದ್ರನ ಚಲನೆಯನ್ನ ಸೂಚಿಸುತ್ತೆ. ಇನ್ನೊಂದು ವಿಷಯ ಏನಂದ್ರೆ ಈ ಚಂದ್ರನ ಹಾದಿಯ ಪಾತಳಿ ಬಿಟ್ಟೂಬಿಡದೆ (continuously), ನಿಧಾನವಾಗಿ ಭೂಮಿ-ಸೂರ್ಯನ ಪಾತಳಿಗೆ ಹೋಲಿಸಿದರೆ ತಿರುಗ್ತಾ ಇರುತ್ತೆ. ಇದು ಹೇಗೆ ತೋರ್ಸೋದು? ಈಗ ನಿಮ್ಮ ಪ್ರಯೋಗದಲ್ಲಿ, ಮೊದಲು ನೀವು ತಟ್ಟೆ ನೀರಿನಿಂದ ಅತಿ ಎತ್ತರದಲ್ಲಿರೋ ತುದಿ ಬಕೆಟ್ ನ ಹಿಡಿಕೆಯ ಒಂದು ಬದಿಯಲ್ಲಿರುತ್ತೆ ಅಂದ್ಕೊಳಿ. ಈ ಬದಿಯನ್ನ "ಎ" (ಎತ್ತರ ಬಿಂದು) ಅಂತ ಕರೆಯಣ. ಹಾಗಾದ್ರೆ, ತಟ್ಟೆಯ ಅತಿ ಕೆಳಭಾಗ ನೀರಿನಡಿಯಲ್ಲಿರೋದು, ಬಕೆಟ್ಟಿನ ಹಿಡಿಕೆಯ ಇನ್ನೊಂದು ಭಾಗದಲ್ಲಿರಬೇಕಲ್ಲ? ಈ ತುದಿಯನ್ನ "ತ" (ತಗ್ಗು ಬಿಂದು) ಅಂತ ಕರೆಯಣ. (ಮೊದಲ ಚಿತ್ರ ನೋಡಿ)
ಈಗ ನಿಮ್ಮ ತಟ್ಟೆಯನ್ನ, ತನ್ನ ಸುತ್ತ ತಾನೇ ತಿರುಗ್ತಾ ಇರುವಾಗಲೇ ನಿದಾನವಾಗಿ "ಎ" ನಲ್ಲಿರುವ ತಟ್ಟೆಯ ಮೇಲಿನ ತುದಿಯನ್ನ ಅದಿರುವ ಜಾಗದಿಂದ ಅಲುಗಿಸುತ್ತಾ, ನಿದಾನವಾಗಿ ಅದರ ವಿರುದ್ಧ ದಿಕ್ಕಿಗೆ ತೊಗೊಂಡು ಹೋಗೋದಕ್ಕೆ ಶುರು ಮಾಡಿ. ಹೀಗೆ ಮಾಡುವಾಗ ತಟ್ಟೆ ನೀರಿನ ಜೊತೆ ಮಾಡ್ತಾ ಇರೋ ಕೋನ (angle) ಬದಲಾಗ್ದಿರೋ ಹಾಗೆ ನೋಡ್ಕೊಳಿ. ನೋಡ್ತಾ ನೋಡ್ತಾ ಏನಾಗತ್ತೆ? ಅತೀ ಎತ್ತರದ ತುದಿ "ಎ" ಇಂದ "ತ" ಕಡೆಗೆ ಹೋಗ್ತಾ ಇರತ್ತೆ. ಆಮೇಲೆ ಒಂದ್ಸಲ "ಎ" ಕಡೆಯಲ್ಲಿ, ತಟ್ಟೆಯ ನೀರಿನ ಅತಿ ತಗ್ಗಿನ ಬದಿಯೂ, "ತ" ಕಡೆಯಲ್ಲಿ ತಟ್ಟೆ ನೀರಿನ ಮೇಲಿರೋ ಅತೀ ಮೇಲಿನ ತುದಿಯೂ ಇರತ್ತೆ! ಇದು ನಾವು ಹೊರಟ ಸ್ಥಿತಿಗೆ ತದ್ವಿರುದ್ಧ ಅಲ್ವೇ? ಆದ್ರೆ, ನೀವು ಮಾಡ್ತಾ ಇರೋದನ್ನೇ ಮುಂದ್ವರಿಸ್ತಾ ಹೋದ್ರೆ ಏನಾಗತ್ತೆ? ಮತ್ತೆ ತಗ್ಗಿನ ಬದಿ "ತ" ಬಿಂದುವನ್ನೂ, ಎತ್ತರದ ಬದಿ "ಎ" ಬಿಂದುವನ್ನೂ ಸೇರತ್ತೆ.
ಈಗ ನಾವು ಚಂದ್ರ ಭೂಮಿ ಸುತ್ತೋ ಪಾತಳೀ (ಅಂದ್ರೆ ತಟ್ಟೆ), ಭೂಮಿ ಸೂರ್ಯನ ಸುತ್ತೋ ಪಾತಳಿಯಿಂದ (ಅಂದ್ರೆ ನೀರಿನ ಸಮತಲದಿಂದ) ನೋಡಿದ್ರೆ, ನಿಧಾನವಾಗಿ ತನ್ನ ಸಮತಲವನ್ನ ಬದ್ಲಾಯಿಸ್ತಾ ಇರೋದು, ಆದ್ರೆ ಅದೇ ವೇಳೆಯಲ್ಲಿ, ಅವರಡರ ನಡುವಿನ ಕೋನ ಬದ್ಲಾಗ್ದೇ ಇರೋದು ಹೇಗೆ ಅನ್ನೋದನ್ನ ನಮಗ್ನಾವೇ ತೋರ್ಸಿಕೊಂಡ್ವಿ! ಇದು ಗೊತ್ತಾದಮೇಲೆ, ನಾವು ತಟ್ಟೆಯ ಅಂಚು ನೀರನ್ನ ಮುಟ್ತಿರೋ ಜಾಗದಲ್ಲಿರೋ ರಾಹು-ಕೇತು ಬಿಂದುಗಳಿಗೆ ಏನಾಗತ್ತೆ ಅಂತ ಗಮನಿಸೋಣ. ಅದಕ್ಕೆ ಈಗ ಮಾಡಿದ ಪ್ರಯೋಗವನ್ನೇ (ತಟ್ಟೆಯನ್ನ ತಿರುಗಿಸೋದು) ಇನ್ನೊಂದ್ಸಲ ಮಾಡಿ. ಆದ್ರೆ ನಮ್ಮ ಈ ಬಿಂದುಗಳ ಮೇಲೆ ಒಂದು ಕಣ್ಣಿಡಿ. ಏನಾಯ್ತು ನೋಡಿ? ಆ ಬಿಂದುಗಳೂ ನಿಧಾನವಾಗಿ ತಮ್ಮ ಜಾಗ ಬಿಟ್ಟು ಹೋಗಿ, ಬಕೆಟ್ಟಿನ ಬದಿಯ ಬೇರೆಬೇರೆ ಬಿಂದುಗಳಿಗೆ ಹತ್ತಿರವಾಗುತ್ತಾ ಕಡೆಗೆ ಮೊದಲಿದ್ದೆಡೆಗೇ ಮರಳುತ್ತವೆ. ಆಕಾಶದಲ್ಲಿ ಆಗೋದೂ ಅಷ್ಟೇ. ರಾಹು-ಕೇತು ಬಿಂದುಗಳು ಕಣ್ಣಿಗೆ ಕಾಣಿಸ್ದೇ ಇದ್ರೂ, ಅವು ಆಕಾಶದ ಸುತ್ತಾ ತಿರುಗುತ್ತಾ ಮತ್ತೆ ಮತ್ತೆ ಹೊರಟಲ್ಲಿಗೇ ಮರಳುತ್ತವೆ. ಅದೇ ಕಾರಣಕ್ಕೇ ರಾಹು-ಕೇತುಗಳನ್ನೂ ನಮ್ಮ ಹಿಂದಿನವರು ಗುರು ಶುಕ್ರ ಶನಿಗಳ ತರಹ ಗ್ರಹಗಳು ಅಂದಿದ್ದು!
ಬೇರೆ ಗ್ರಹಗಳೆಲ್ಲ ನಮಗೆ ಪಶ್ಚಿಮದಿಂದ ಪೂರ್ವಕ್ಕೆ ಹೋಗೋಹಾಗೆ ಕಾಣತ್ವೆ. ಅಂದ್ರೆ ಗುರುಗ್ರಹ, ಉದಾಹರಣೆಗೆ ಈಗ ಮಿಥುನ ರಾಶಿಯಲ್ಲಿ ಇದೆ ಅಂದ್ಕೊಳಿ, ಮುಂದಿನ ವರ್ಷ ಅದು ಕಟಕದಲ್ಲಿರುತ್ತೆ. ಅದರ ಮುಂದಿನ ವರ್ಷ ಸಿಂಹ. ಹೀಗೇ ಹೋಗ್ತಿರತ್ತೆ. ಆದ್ರೆ, ರಾಹು-ಕೇತು ಹಾಗಲ್ಲ. ಈಗ ರಾಹು ಮೇಷದಲ್ಲಿ, ಕೇತು ತುಲಾದಲ್ಲಿ ಇತ್ತು ಅಂದ್ಕೊಳಿ (ಇವೆರಡರ ಮಧ್ಯೆ ಆರು ರಾಶಿ ಅಂತರ ಇರ್ಬೇಕು. ಅಂದ್ರೆ ಅರ್ಧ ಆಕಾಶ) ಇನ್ನೊಂದು ಸ್ವಲ್ಪ ಕಾಲದ ನಂತರ, ರಾಹು ಮೀನದಲ್ಲೂ, ಕೇತು ಕನ್ಯಾದಲ್ಲೂ ಇರ್ತಾನೆ. ಇದೇ "ಮೇರುಂ ಅಪ್ರದಕ್ಷಿಣೇ ಕುರ್ವಾಣಂ" ಅಂತ ರಾಹು ಸ್ತೋತ್ರ ಹೇಳೋದರ ಒಳಗುಟ್ಟು!
ಅದ್ಸರಿ. ಗುರುವೇನೋ ಕಣ್ಣಿಗೆ ಕಾಣತ್ತೆ. ಹಾಗಾಗಿ ಅದು ಸಿಂಹದಲ್ಲೋ, ಕನ್ಯಾದಲ್ಲೋ ಎಲ್ಲಿರತ್ತೆ ಅಂತ ಕಾಣತ್ತೆ - ಆದ್ರೆ, ರಾಹು ಕೇತು ಎಲ್ಲಿದೆ ಅಂತ ಹೇಗೆ ಗೊತ್ತಾಗತ್ತೆ? ಅವು ಇರೋಕಡೆಗೆ ಸೂರ್ಯ ಚಂದ್ರ ಬಂದಾಗ ಗ್ರಹಣ ಆಗತ್ತೆ. ಅಲ್ವಾ? ಅಂದ್ರೆ, ರಾಹು- ಕೇತುಗಳನ್ನ ಬರಿಗಣ್ಣಿಂದ ನೋಡ್ದಿದ್ರೂ, ಅವುಗಳ ಪರಿಣಾಮ ನಮಗೆ ಕಾಣತ್ತೆ.
ಹಿಂದಿನವರು ಇದನ್ನ ಗಮನಿಸಿದ್ರು. ಯಾರೋ ಒಬ್ಬನ ಹತ್ತನೇ ಹುಟ್ಟಿದ ಹಬ್ಬದ ದಿನ (ಚಾಂದ್ರಮಾನದಲ್ಲಿ) - ಮಾಘ ಮಾಸದ ಅಮಾವಾಸ್ಯೆ, ಅವನೂರಲ್ಲಿ ಒಂದು ಸೂರ್ಯ ಗ್ರಹಣ ಆಗಿತ್ತು ಅಂದ್ಕೊಳಿ. ಇನ್ನು ಐವತ್ನಾಕು ವರ್ಷದ ಮೇಲೊಂದು ತಿಂಗಳು ಕಳೆದ ದಿನ - ಅಂದ್ರೆ, ಅವನ ಅರವತ್ನಾಕನೇ ಹುಟ್ಟು ಹಬ್ಬವಾದಮೇಲೆ ಬರೋ ಮೊದಲಮಾವಾಸ್ಯೆಯಲ್ಲಿ, ಅಂದ್ರೆ ಆ ವರ್ಷದ ಫಾಲ್ಗುಣ ಅಮಾವಾಸ್ಯೆಯ ದಿವಸ ಇನ್ನೊಂದು ಸೂರ್ಯ ಗ್ರಹಣ ಆಗಿರ್ತಿತ್ತು! ಇವುಗಳನ್ನೇ ಕೆಲವು ಶತಮಾನಗಳ ಕಾಲ ಗಮನಿಸಿದವರಿಗೆ ಇದು ಗೊತ್ತಾಯ್ತು - ಒಂದೇ ಜಾಗದಲ್ಲಿ ಐವತ್ನಾಕು ವರ್ಷ, ಒಂದು ತಿಂಗಳಿಗೆ ಮತ್ತೊಂದು ಗ್ರಹಣ ಆಗತ್ತೆ ಅಂತ. ನೂರಾರು ವರ್ಷಗಳ ಕಾಲ ಆಕಾಶವನ್ನ ನೋಡ್ತಾ, ಗಮನಿಸ್ತಾ ಇದ್ದಂತಹವರಿಗೆ, ಇದರ ಒಳಗುಟ್ಟು ಗೊತ್ತಾಗಿತ್ತು. ಇದೇ ರೀತಿಯ ಮರಳುವಿಕೆಗಳೇ ಹಿಂದಿನವರು ಆಕಾಶದ ರಹಸ್ಯಗಳನ್ನ ಅರಿಯುವುದಕ್ಕೆ ಸಹಾಯವಾದದ್ದು! ಈ ಅಂಶವನ್ನ ಅವರು ಗ್ರಹಣ ಯಾವ ದಿವಸ ಆಗತ್ತೆ ಅನ್ನೋದಕ್ಕೆ ಬಳಸ್ಕೋತಿದ್ರು (ಇನ್ನೂ ಬೇರೆಬೇರೆ ಲೆಕ್ಕಾಚಾರಗಳೂ ಇದ್ದ್ವು ಅನ್ನಿ. ನಾನು ಸ್ವಲ್ಪ ಸುಲಭವಾಗಿ ಹೇಳಿಬಿಟ್ಟಿದೀನಿ). ಪ್ರತಿ ವರ್ಷದ ಯಾವುದೋ ಒಂದು ತಿಂಗಳು ತೊಗೊಂಡ್ರೆ, ಸೂರ್ಯ ಆಕಾಶದ ನಕ್ಷತ್ರಗಳ ಹಿನ್ನಲೆಯಲ್ಲಿ ನೋಡಿದ್ರೆ ಹೆಚ್ಚು ಕಮ್ಮಿ ಒಂದೇ ಜಾಗದಲ್ಲೇ ಇರ್ತಾನೆ. ಅಂದ್ರೆ, ಮಾಘ ಅಮಾವಾಸ್ಯೆಯಲ್ಲಿ, ಪ್ರತೀ ವರ್ಷ ಸೂರ್ಯ ಕುಂಭ ರಾಶಿಯಲ್ಲೇ ಇರ್ತಾನೆ. ಹಾಗಾದ್ರೆ, ಐವತ್ನಾಕು ವರ್ಷ ಕಳೆದ ಮೇಲೂ, ಮಾಘ ಅಮಾವಾಸ್ಯೆಯ ದಿನ ಸೂರ್ಯ ಕುಂಭದಲ್ಲೇ ಇರ್ತಾನೆ ಅಂತ ತಿಳ್ಕೋಬಹುದು. ಅಲ್ವಾ? ಆದ್ರೆ ನಮ್ಮ ಮೇಲಿನ ಉದಾಹರಣೇಲಿ ಮಾಘ ಮಾಸದ ಅಮಾವಾಸ್ಯೆ ದಿನ ಗ್ರಹಣ ಆಗ್ಲಿಲ್ಲ. ಬದಲಿಗೆ ಇನ್ನೊಂದು ತಿಂಗಳು ಬಿಟ್ಟು, ಅಂದ್ರೆ, ಫಾಲ್ಗುಣ ಅಮಾವಾಸ್ಯೆ ದಿನ ಗ್ರಹಣ ಆಯ್ತು.
ಗ್ರಹಣ ಆಗೋದು ಸೂರ್ಯ-ಚಂದ್ರ ರಾಹು-ಕೇತು ಬಿಂದುವಿನ ಸಮೀಪ ಇದ್ದಾಗ ಅನ್ನೋದನ್ನ ನೆನಪಿಸ್ಕೊಳೋಣ. ಮತ್ತೆ ನಮ್ಮ ಪ್ರಯೋಗದಲ್ಲಿ ರಾಹು-ಕೇತು ತಿರುಗ್ತಾ ಇದ್ದಿದ್ದನ್ನೂ ನೆನಪಿಸ್ಕೊಳೋಣ. ಅಂದ್ರೆ ಐವತ್ನಾಕು ವರ್ಷ-ಒಂದು ತಿಂಗಳ ಅವಧಿ ಕಳೆದಾಗ ಸೂರ್ಯ-ಚಂದ್ರ -ರಾಹು-ಕೇತುಗಳು ಇರೋ ಜಾಗಗಳು ಆ ಅವಧಿ ಆರಂಭವಾದಾಗ ಎಲ್ಲಿದ್ವೋ ಅಲ್ಲೇ. ಇಲ್ದೇ ಇದ್ರೆ ಆಗ ಮತ್ತೊಂದು ಗ್ರಹಣ ಆಗ್ತಿರ್ಲಿಲ್ಲ. ಹಾಗಾರೆ ರಾಹು ಕೇತು ಬಿಂದುಗಳು ಆಕಾಶವನ್ನ ಐವತ್ನಾಕು ವರ್ಷ - ಒಂದು ತಿಂಗಳಲ್ಲಿ ಸುತ್ತುತ್ತವಾ? ಒಂದು ವಿಷಯ ಗಮನಿಸೋಣ. ಒಂದು ಹೆಚ್ಚುವರಿ ತಿಂಗಳಲ್ಲಿ ಚಂದ್ರ ಆಕಾಶದ ಸುತ್ತ ಒಂದು ಸುತ್ತ ತಿರುಗಿ (360 ಡಿಗ್ರಿ), ಮತ್ತೆ ಇನ್ನೊಂದು ಮೂವತ್ತು ಡಿಗ್ರಿಯಷ್ಟುಮುಂದೆ ಹೋಗಿರ್ತಾನೆ. ಹಾಗೇ ಸೂರ್ಯನೂ ಮೂವತ್ತು ಡಿಗ್ರಿಯಷ್ಟು ಮುಂದೆ ಹೋಗಿರ್ತಾನೆ. ಅಂದ್ರೆ ರಾಹು ಕೇತು ಬಿಂದುಗಳು ಕೂಡ ಮೂವತ್ತು ಡಿಗ್ರಿ ಮುಂದೆ ಹೋಗಿರ್ಬೇಕು. ಹಾಗಾಗಿ ರಾಹು-ಕೇತು ಬಿಂದು ಸುತ್ತೋ ಅವಧಿ ಇದಲ್ಲ. ಮತ್ತಿನ್ನೇನಿರ್ಬಹುದು?
ಹಿಂದಿನವರು ಸೂರ್ಯಗ್ರಹಣಗಳ ಹಾಗೇ ಚಂದ್ರಗ್ರಹಣಗಳನ್ನೂ ಗಮನಿಸ್ತಿದ್ರು. ಎಷ್ಟೋ ಸಲ ಚಂದ್ರ ಗ್ರಹಣಗಳು ಹದಿನೆಂಟು ವರ್ಷ ಹತ್ತು ಅಥವಾ ಹನ್ನೊಂದು ದಿನಗಳಲ್ಲಿ ಮರುಕಳಿಸಿದ್ದಿದ್ದು ಅವರ ಗಮನಕ್ಕೆ ಬಂದಿತ್ತು. ಅಂದ್ರೆ, ಸೂರ್ಯ-ಚಂದ್ರ-ರಾಹು-ಕೇತುಗಳ alignment ಹದ್ನೆಂಟುವರ್ಷ ಹತ್ತು/ಹನ್ನೊಂದು ದಿವಸಕ್ಕೆ ಇದ್ದಲ್ಲಿಗೇ ಮರಳುತ್ತಾ? ಅಂದ್ರೆ ಮೂವತ್ತಾರು ವರ್ಷ ಇಪ್ಪತ್ತು ದಿವಸಕ್ಕೂ ಮರಳಬೇಕಲ್ವಾ? ಅದೇ ತರಹ ಐವತ್ನಾಕು ವರ್ಷ ಮೂವತ್ತು ದಿವಸಕ್ಕೂ ಮರಳತ್ತಾ? ಹೌದು. ಅದನ್ನಾಗ್ಲೇ ಅವರು ಗಮನಿಸಿದ್ರಲ್ಲ ಐವತ್ನಾಕು ವರ್ಷ ಕಳೆದು ತಿಂಗಳಿಗೆ ಮತ್ತೆ ಸೂರ್ಯ ಗ್ರಹಣ ಆಗತ್ತೆ ಅಂತ! ಈ ಹದಿನೆಂಟು ವರ್ಷ ಹತ್ತು/ಹನ್ನೊಂದು ದಿನದ ಚಕ್ರವನ್ನೇ ಗ್ರಹಣಚಕ್ರ (Saros cycle) ಅನ್ನಬಹುದು.
ಆದ್ರೆ ರಾಹು-ಕೇತುಗಳ ಅಪ್ರದಕ್ಷಿಣ ಅವಧಿ ಮಾತ್ರ ಇದೇ ಅಲ್ಲ. ಯಾಕಂದ್ರೆ, ಸೂರ್ಯ ಹದಿನೆಂಟು ವರ್ಷ ಕಳೆದು ಹತ್ತು ಹನ್ನೊಂದು ದಿನದಲ್ಲಿ ಹತ್ತು ಹನ್ನೊಂದು ಡಿಗ್ರಿ ಮುಂದಿರ್ತಾನೆ. ಆ ರಾಹುಕೇತು ಪ್ರದಕ್ಷಿಣೆಯ ಅವಧಿಯನ್ನೂ ಲೆಕ್ಕಾಚಾರ ಮಾಡಿಟ್ಟಿದಾರೆ. ಅದು ಸುಮಾರು 18.6 ವರ್ಷದಷ್ಟು ಕಾಲ. ಸೂರ್ಯ ಆಕಾಶದಲ್ಲಿ ಯಾವುದಾದರೂ ನಿಂತಿರುವ ಬಿಂದು (ನಮ್ಮ ಕಣ್ಣಲ್ಲಿ ಕಾಣೋ ಹಾಗೆ) - ಉದಾಹರಣೆಗೆ ಒಂದು ನಕ್ಷತ್ರ - ಚಿತ್ತಾ - ಅಂತಿಟ್ಕೊಳ್ಳಿ, ಅಲ್ಲಿಂದ ಹೊರಟು ಮತ್ತೆ ವಾಪಸ್ ಅಲ್ಲಿಗೆ ಬರೋ ಕಾಲವನ್ನೇ ನಾವು ಒಂದು (ನಾಕ್ಷತ್ರಿಕ) ವರ್ಷ ಅಂತೀವಿ. ಇದು ಸುಮಾರು ಮುನ್ನೂರರವತ್ತೈದೂ ಕಾಲು ದಿವಸ ಆಗತ್ತೆ. ಈ ಲೆಕ್ಕಾಚಾರಕ್ಕೆ ಭೂಮಿಯೇ ನಡುವಲ್ಲಿದೆ, ಸೂರ್ಯ, ರಾಹು, ಕೇತು ಚಂದ್ರಗಳೇ ಸುತ್ತತಾ ಇವೆ ಅಂದ್ಕೊಂಡ್ರೆ ತಪ್ಪೇನಾಗಲ್ಲ. ಸೂರ್ಯ ಒಂದ್ವರ್ಷದಲ್ಲಿ ಪ್ರದಕ್ಷಿಣೆ ಮಾಡ್ತಾನೆ. ರಾಹು ಕೇತು ಅಷ್ಟು ಹೊತ್ತಿಗೆ ಸ್ವಲ್ಪ ಹಿಂದೆ ಹೋಗಿರತ್ವೆ – ಯಾಕಂದ್ರೆ, ಅದು ಸೂರ್ಯನಿಗೆ ಹೋಲಿಸಿದರೆ ವಿರುದ್ಧ ದಿಕ್ಕಲ್ಲಿ ತಿರುಗ್ತಿದೆ( ಸುಮಾರು 1/18 * 360 ಅಂಶಗಳಷ್ಟು). ಹಾಗಾರೆ, ಇವತ್ತು ಸೂರ್ಯ ರಾಹುವಿನಲ್ಲಿ (ಅಥವಾ ರಾಹುವಿನ ಮುಂದೆ/ಹಿಂದೆ ಇದಾನೆ ಅಂದ್ಕೊಂಡ್ರೆ, ಮತ್ತೆ ಅವನು ರಾಹುವಿಗೆ ಸಿಗೋ ಹೊತ್ತಿಗೆ ಒಂದು ವರ್ಷಕ್ಕಿಂತ ಕಮ್ಮಿ ವೇಳೆ ಆಗ್ಬೇಕು.
ಇದು ಸುಮಾರಾಗಿ 346.6 ದಿವಸಕ್ಕೇ ಆಗತ್ತೆ. ಇದನ್ನ ಡ್ರೆಕೋನಿಯನ್ ವರ್ಷ (draconian year) ಅಂತಾರೆ - ಕನ್ನಡದಲ್ಲಿ ನಾವು ಸರಳವಾಗಿ, ರಾಹು-ಕೇತುವರ್ಷ ಅನ್ಬಹುದೇನೋ. ಇನ್ನು ಚಂದ್ರ-ಸೂರ್ಯ ಒಟ್ಟಿಗೆ ಬರೋದು, ಅಥವಾ ಒಂದಕ್ಕೊಂದು ಎದುರು ಬರೋದು ಹುಣ್ಣಿಮೆ ಅಮಾವಾಸ್ಯೆಗೆ. ಎರಡು ಹುಣ್ಣಿಮೆ ಅಥವಾ ಎರಡು ಅಮಾವಾಸ್ಯೆ ನಡುವೆ ಇರುವ ಕಾಲವೇ ಒಂದು ಚಾಂದ್ರಮಾನ ತಿಂಗಳು. ಈ ಅವಧಿ ಸುಮಾರಾಗಿ 29.5 ದಿವಸದಷ್ಟು ಉದ್ದ ಇರತ್ತೆ. ಹಾಗೇ, ಚಂದ್ರ ಒಂದು ನಕ್ಷತ್ರದಿಂದ ಹೊರಟು ಮತ್ತೆ ಮರಳಿ ಅಲ್ಲಿಗೇ ಬರೋದಕ್ಕೆ, ಅಥ್ವಾ ರಾಹು(ಅಥವಾ ಕೇತು)ವಿನಿಂದ ಹೊರಟು ಮತ್ತೆ ಅಲ್ಲಿಗೇ ಬರೋದಕ್ಕೆ ಬರೋ ಕಾಲ 27.2 ದಿವಸ. (ನಿಂತಿರೋ ನಕ್ಷತ್ರಕ್ಕೆ ಹೋಲಿಸಿದರೆ, ರಾಹು/ಕೇತುವನ್ನ ಮುಟ್ಟೋ ಅವಧಿ ಸ್ವಲ್ಪೇ ಸ್ವಲ್ಪ ಕಡಿಮೆ ಇರ್ಬೇಕು. ಯಾಕೆ ಅನ್ನೋದನ್ನ ನೀವೇ ಯೋಚಿಸಿ!) ಇದನ್ನ ನಾವು ರಾಹುಕೇತು ಮಾಸ ಅನ್ನೋಣ (ಡ್ರೆಕೋನಿಕ್ ಮಂತ್).
ಈಗ ನೋಡಿ ತಮಾಷೆ : 19 ರಾಹುಕೇತುವರ್ಷಗಳು = 19 * 346.4 = 6585.78 ದಿನ 242 ರಾಹುಕೇತುಮಾಸಗಳು = 242 * 27.2 = 6585.36 ದಿನ 223 ಚಾಂದ್ರಮಾನಮಾಸಗಳು= 223 *29.5 = 6585.32 ದಿನ ಈ ಮೂರೂ ಸುಮಾರು ಹತ್ತು ಗಂಟೆಯೊಳಗಿನ ಅವಧಿಯೊಳಗೇ ಬರತ್ವೆ! ಅದ್ರಿಂದ ನೋಡಿ ಈಗ ಏನಾಗತ್ತೆ ಅಂತ. ಇವತ್ತು ಸೂರ್ಯ ಚಂದ್ರ ಎರಡೂ ರಾಹು ಬಿಂದುವಿನಲ್ಲಿದ್ರು ಅಂದ್ಕೊಳಿ. ಅಂದ್ರೆ ಇವತ್ತು ಅಮಾವಾಸ್ಯೆ ಆಗಿತ್ತು. ಆಗ 6585 ದಿವಸ ಆದಮೇಲೆ ಮತ್ತೆ ಸೂರ್ಯ ಚಂದ್ರ ಎರಡೂ ರಾಹುವಿನಲ್ಲೇ ಇರ್ತಾರೆ, ಹಾಗೂ ಅವತ್ತೂ ಮತ್ತೆ ಅಮಾವಾಸ್ಯೆಯೇ ಆಗಿರತ್ತೆ! ಇದೇ ಗ್ರಹಣ ಚಕ್ರದ ಒಳಗುಟ್ಟು. ಈಗ ಗೊತ್ತಾಯ್ತಲ್ಲ, ಯಾಕೆ ರಾಹು ಕೇತು ಹಿಂದಕ್ಕೆ ಸುತ್ತುತ್ತಾ ಇರೋ ಕಾಲವೂ, ಮತ್ತೆ ಗ್ರಹಣ ಚಕ್ರವೂ (ಒಂದಕ್ಕೊಂದು ಸ್ವಲ್ಪ ಸಂಬಂಧ ಇದ್ದರೂ) ಬೇರೆ ಬೇರೆ ಅಂತ?
ಮಹಾಭಾರತದ ಶ್ರೀಕೃಷ್ಣನೂ ಜ್ಯೋತಿಷಿಯಾಗಿದ್ದನೆ? »
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications