ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣಿಗಳಿಗೆ ಈಜಿನ ಅವಶ್ಯಕತೆ, ಅನಿವಾರ್ಯತೆ

By Staff
|
Google Oneindia Kannada News

ಆನೆಗಳು ಆ ದಢೂತಿ ದೇಹ ಇಟ್ಟುಕೊಂಡು ಹೇಗೆ ಈಜುತ್ತವೆ? ಬೆಕ್ಕಿನ ಜಾತಿ ಪ್ರಾಣಿಗಳು ಈಜುವುದು ಕಮ್ಮಿ, ಹಾವುಗಳಂತೂ ಉತ್ತಮ ಈಜುಪಟುಗಳು.ಹುಟ್ಟಿದ ಮಗುವನ್ನು ನೀರಿಗೆ ಎಸೆದರೆ ಮಾನವ ಪ್ರಾಣಿಗೂ ಈಜು ಮೋಜಾಗುತ್ತದೆ.....

* ಪರಿಸರಪ್ರೇಮಿ ಅರುಣ್, ಬೆಂಗಳೂರು

Odin tigerಬೆಕ್ಕುಗಳಿಗೆ ನೀರೆಂದರೆ ಅಷ್ಟಕ್ಕಷ್ಟೆ. ಬೆಕ್ಕಿನ ಜಾತಿಗೆ ಸೇರಿದ ಹುಲಿ, ಚಿರತೆ, ಸಿಂಹಗಳು ಕೂಡ ನೀರನ್ನು ಬಾಯಾರಿಕೆ ಆರಿಸಿಕೊಳ್ಳಲಷ್ಟೆ ಬಳಸುತ್ತವೆಯೇ ಹೊರತು ಎಮ್ಮೆಗಳಂತೆ ನೀರಿನಲ್ಲಿ ಕಾಲ ಕಳೆಯಲು ಇಚ್ಛಿಸುವುದಿಲ್ಲ. ನೀರಿನಿಂದ ಬೆಕ್ಕಿನ ಮೇಲಿನ ಕೂದಲು ನಾಶವಾಗುವ ಸಾಧ್ಯತೆಯಿರುತ್ತೆ ಎಂಬ ಅರಿವು ಅವಕ್ಕಿದೆ.

ಆದರೂ ಅನಿವಾರ್ಯ ಇರುವಾಗ ಬೆಕ್ಕುಗಳು ಈಜುವುದರಲ್ಲಿ ತನ್ನ ಪರಿಣತಿಯನ್ನು ತೋರಿಸಿಯೇ ಬಿಡುತ್ತೆ.

ಸ್ಯಾನ್ ಫ್ರಾನ್ಸಿಸ್ಕೋದ ಮೃಗಾಲಯವೊಂದರಲ್ಲಿ ಹುಟ್ಟಿ ಬೆಳೆದ ಓದಿನ್ ಎಂಬ ಬಿಳಿಹುಲಿಯು ಈಜುಗಾರಿಕೆಯಲ್ಲಿ ಚಾಂಪಿಯನ್ ಎಂದು ಹೆಸರುಗಳಿಸಿದೆ. ಸ್ವಾಭಾವಿಕವಾಗಿ ಬೆಕ್ಕುಗಳು ಉತ್ತಮ ಈಜುಗಾರ ಪ್ರಾಣಿಗಳಲ್ಲದಿದ್ದರೂ ಓದಿನ್‍ನಂತೆ ತರಬೇತಿ ಪಡೆದರೆ ಏನು ಬೇಕಾದರೂ ಸಾಧಿಸಬಹುದು ಎಂದು ನಿರೂಪಿತವಾಗಿದೆ. 'ಓದಿನ್' ನೀರಿನೊಳಗೆ ಬೇಟೆಯೂ ಆಡಬಲ್ಲ ಸಾಮರ್ಥ್ಯ ಹೊಂದಿದೆ. ನೀರೆಂದರೆ ಓದಿನ್‍ಗೆ ಆಸೆ ಮತ್ತು ಖುಷಿ.

ಬಹಳ ಜನರು ಮನೆಯಲ್ಲಿ ಸಾಕಿದ ಬೆಕ್ಕುಗಳಿಗೆ ಸ್ನಾನ ಮಾಡಿಸುವುದುಂಟು. ಇದರಿಂದ ಬೆಕ್ಕಿನ ಆರೋಗ್ಯಕ್ಕೆ ಹಾನಿಯೇ ಹೊರೆತು ಒಳಿತಲ್ಲ. ಒಂದು ಬಗೆಯ ಹೈಡ್ರೋಫೋಬಿಯಾ! ಕುಡಿಯಬೇಕಾದರೂ ಅಷ್ಟೆ, ಕತ್ತನ್ನು ಉದ್ದ ಮಾಡಿಕೊಂಡು ಬರೀ ನಾಲಿಗೆಯಷ್ಟನ್ನೇ ನೀರಿಗೆ ಸೋಕಿಸಿ ಕುಡಿಯುತ್ತೆ.

ಜನರ ಬುದ್ಧಿಗೆ ಬೆಕ್ಕಿನ ದಿನಚರಿ ಅಭ್ಯಾಸ ಮಾಡುವ ಪುರುಸೊತ್ತೆಲ್ಲಿಂದ ಬರಬೇಕು! ಪುರುಸೊತ್ತಿರುವವರು ಧನ್ಯರು.

ಹೀಗೆ ಪುರುಸೊತ್ತಿಲ್ಲದವರು ಕೆಲವು ಸೂಕ್ಷ್ಮಗಳನ್ನು ತಿಳಿದುಕೊಳ್ಳುವ ಗೋಜಿಗೂ ಹೋಗಿರುವುದಿಲ್ಲ. ಮನೆಗೆ ಹಾವು ಬಂತೆಂದರೆ ಗಾಬರಿಯಾಗಿ ಕಿರುಚಾಡುವುದನ್ನು ನೋಡಿದ್ದೇನೆ. ಹಾವುಗಳಿಗೆ ಕಿವಿಯೆಲ್ಲಿರುತ್ತೆ? ಎಷ್ಟು ಕಿರುಚಿದರೂ ಪ್ರಯೋಜನವಿಲ್ಲ. ಮತ್ತೆ ಕೆಲವು ಧೈರ್ಯಶಾಲಿಗಳು, ಆದರೆ ತಿಳುವಳಿಕೆಯಿಲ್ಲದವರು ಹಾಲೆರೆಯುವುದನ್ನೂ ನೋಡಿದ್ದೇನೆ. ಆದರೆ ಹಾವು ಮಾಂಸಾಹಾರಿ. ಹಾಲು ಕುಡಿದು 'ಕ್ಷಮಿಸಿ' ಹೋಗುವ ಪ್ರಾಣಿಯಲ್ಲ. ಬಹಳ ವಿಚಿತ್ರ ನಡವಳಿಕೆಯೆಂದರೆ ನಾಗರ ಹಾವೊಂದು ಒಬ್ಬರ ಮನೆಯೊಳಗೆ ಹೊಕ್ಕಾಗ, ಆ ಮನೆಯ ಹೆಂಗಸಿನ ಎದುರಾದಾಗ, ಹೆಡೆಯೆತ್ತಿ ಚೆಲುವನ್ನು ಪ್ರದರ್ಶಿಸಿದಾಗ, ಗಾಬರಿಗೊಂಡ ಆಕೆ ಕೈಯಲ್ಲಿದ್ದ ತಂಬಿಗೆಯೊಳಗಿದ್ದ ನೀರನ್ನು ಅದರ ಮುಖಕ್ಕೆ ಎರಚಿದ್ದಾಳೆ. ಒಳಗಡೆಯಿಂದ ಬಕೀಟುಗಟ್ಟಲೆ ನೀರನ್ನು ತಂದು ಹಾವಿನ ಮೇಲೆ ಅಭಿಷೇಕ ಮಾಡಿಬಿಟ್ಟಿದ್ದಾಳೆ.

ಮನೆಯು ಹೊಳೆಯಾಯಿತೇ ಹೊರೆತು, ಹಾವು ಸುಲಭವಾಗಿ ಈಜಿಕೊಂಡು ಮೂಲೆ ಸೇರಿಕೊಂಡುಬಿಟ್ಟಿತು! ಹಾವುಗಳು ಅದ್ಭುತ ಈಜುಗಾರ ಸರೀಸೃಪಗಳೆಂದು ತಿಳಿದುಕೊಳ್ಳುವುದು ಇಲ್ಲಿನ ಉದ್ದಿಶ್ಯ.

ಕಾಳಿಂಗಸರ್ಪಗಳ ಮರಿಗಳ ರಾಶಿಯೇ ನಮಗೊಂದು ಸಲ ಬಿಸಿಲೆ ಚಾರಣದಲ್ಲಿ ಎದುರಾಗಿತ್ತು. ಡಾ.ಐತಾಳರು ಹೇಳಿದ್ದರು, "ಬಿಸಿಲೆಯಲ್ಲಿ ಬೇಕಾದಷ್ಟು ಕಾಳಿಂಗಗಳನ್ನು ನಾನೇ ಬಿಟ್ಟಿದ್ದೇನೆ. ನದಿಯಲ್ಲಿ ಈಜುತ್ತಲೇ ಇರುತ್ತೆ. ಬಂಡೆಗಳ ಸಂದಿಗಳಲ್ಲಿ ಅಡಗಿಕೊಂಡಿರುತ್ತೆ. ಬಿಸಿಲೆಯ ನದಿಯಲ್ಲಿ ಆನೆಗಳೂ ಸಹ ಈಜುತ್ತಿರುತ್ತೆ!"

ಆನೆಗಳು ಈಜುತ್ತವೆಯೇ?

Can Elephant swimನನಗೆ ಬಹಳ ಈಚೆಗೆ ಗೊತ್ತಾಗಿದ್ದು ಈ ವಿಷಯ. ಐದಾರು ವರ್ಷಗಳಾದವಷ್ಟೆ. "Elephants are excellent swimmers!" ಎಂದು ನ್ಯಾಷನಲ್ ಜಿಯಾಗ್ರಫಿಕ್ ಪುಸ್ತಕದಲ್ಲಿ ಓದಿದಾಗ.

ಇತ್ತೀಚಿನ ಔಟ್‍ಲುಕ್ ಟ್ರಾವಲರ್‍ನಲ್ಲಿ ಒಂದು ವರದಿಯಾಗಿದೆ. ರಾಜನ್ ಎಂಬ ಆನೆಯು ಅಂಡಮಾನ್‍ನಲ್ಲಿ ಬಂದ ಪ್ರವಾಸಿಗರನ್ನು ನೀರಿನೊಳಗೆ ಈಜಿಸುವ ಕೆಲಸವನ್ನು ಮಾಡುತ್ತಿದ್ದು, ಈಗ ನಿವೃತ್ತ ವಯಸ್ಸಾದರೂ (58 ವರ್ಷ) ಅದನ್ನು ಕೇರಳಕ್ಕೆ ತಂದು, ಅದೇ ಕೆಲಸವನ್ನು ಮುಂದುವರೆಸಲು ಆಗ್ರಹಿಸುತ್ತಿದ್ದಾರೆ ಎಂದು.

ಆನೆಯು ಆ ದಢೂತಿ ದೇಹ ಇಟ್ಟುಕೊಂಡು ಹೇಗೆ ಈಜುತ್ತವೆ? ತನ್ನ ನಾಲ್ಕೂ ಕಾಲುಗಳನ್ನು ಬಳಸಿಕೊಂಡು ತಲೆ ಮತ್ತು ಸೊಂಡಿಲನ್ನು ನೀರಿನ ಮೇಲ್ಭಾಗದಲ್ಲಿರಿಸಿ, ಉಸಿರಾಡಿಕೊಂಡು ಮೈಲಿಗಟ್ಟಲೆ ಈಜಬಲ್ಲುದು. ಅದರ ದೇಹ, ನೀರಿನಲ್ಲಿ ತೇಲಲು, ಈಜಲು ಸಹಕಾರಿಯಾಗಿದೆಯೆಂದು ವಿಜ್ಞಾನಿಗಳು ಹೇಳುತ್ತಾರೆ.

ಆನೆಗಳು ಮೈಲಿಗಟ್ಟಲೆ ಈಜುತ್ತವೆಯೆಂದು ತಿಳಿಯಿತು. ಆದರೆ, ಮೈಲಿಗಟ್ಟಲೆ ಹಾರಬೇಕಾದ ಪಕ್ಷಿಗಳೂ ಸಹ ಈಜಬಲ್ಲವು ಎಂಬುದು ವಿಸ್ಮಯವಷ್ಟೆ. ಲೂನ್ (Gavia pacifica) ಎಂಬ ಪಕ್ಷಿಯು ಆರುನೂರು ಅಡಿ ಕೆಳಗಿನವರೆಗೂ ಡೈವ್ ಮಾಡುತ್ತವೆಂದು ದಾಖಲಾಗಿದೆ. ಮನುಷ್ಯನೊಬ್ಬನು ಒಂದು ಸಲ, ಕೆಲವೇ ಗಂಟೆಗಳವರೆಗೆ, ಆರುನೂರು ಅಡಿ ಧುಮುಕಬೇಕಾದರೆ, ಧುಮುಕಿ, ಈಜಿ, ಬದುಕಿ ಹಿಂದಿರುಗಬೇಕಾದರೆ ಅವನಿಗೆ ಬೇಕಾದ ಸಾಮಗ್ರಿಗಳಿಗೆ ಏನಲ್ಲಾ ಅಂದರೂ ಲಕ್ಷ ರೂಪಾಯಿ ಖರ್ಚು ಮಾಡಬೇಕಾದೀತು.

ಪೆಸಿಫಿಕ್ ಸಾಗರದಲ್ಲಿ ಕಾಣಸಿಗುವ ಈ ‍ಲೂನ್ ಪಕ್ಷಿ ನೀರಿನೊಳಕ್ಕೆ ಧುಮುಕುವುದಲ್ಲದೆ ಒಳಗೆ, ಅಷ್ಟು ಕೆಳಗೆ, ಮೀನುಗಾರಿಕೆಯನ್ನೂ ಮಾಡಬಲ್ಲ ಶಕ್ತಿ ಹೊಂದಿದೆ. ಇದರ ಬೇಟೆಯೇನಿದ್ದರೂ ಆರು ನೂರು ಅಡಿ ಕೆಳಗೆ!

ಮನುಷ್ಯನ ಮಗು ಹುಟ್ಟಿದ ಗಳಿಗೆಯೇ ನೀರಿನಲ್ಲಿಳಿದರೆ ಈಜಬಲ್ಲುದು ಎಂಬ ಸತ್ಯ ಅನೇಕರಿಗೆ ಗೊತ್ತಿಲ್ಲ. ನಾವು ಮನುಷ್ಯರು, natural swimmers. ಆದರೆ ನಮ್ಮ ಆಚರಣೆಗಳು ನಮ್ಮನ್ನು ಪ್ರಕೃತಿಯಿಂದ ದೂರ ಮಾಡುತ್ತವೆ. ಹುಟ್ಟಿದ ಮಗುವನ್ನಿರಲಿ, ತಾಯಿಗೆ ತಣ್ಣೀರನ್ನೂ ಸಹ ಕೊಡುವುದಿಲ್ಲ ನಮ್ಮಲ್ಲಿ. ಮಗುವಿಗೆ ಬೇಸಿಗೆಯಲ್ಲೂ ಹೊದಿಕೆ ಹೊದಿಸಿ, ಮಫ್ಲರ್ ಹಾಕಿ, ಪ್ಯಾಕ್ ಮಾಡಿಬಿಟ್ಟಿರುತ್ತೇವೆ. ಗರ್ಭಕೋಶದೊಳಗಿರುವಾಗಲೇ ಈಜಿ ಅಭ್ಯಾಸವಿರುವ ಶಿಶುವಿಗೆ ಹುಟ್ಟಿದಾಗಲೇ ನೀರಿನಲ್ಲಿ ಈಜುವ ಅವಕಾಶ ಕಲ್ಪಿಸಿಕೊಟ್ಟರೆ ಒಂದು ವರ್ಷದೊಳಗೆ ಮಗು excellent swimmer ಆಗುವ ಸಂದೇಹವೇ ಇಲ್ಲ!

ಈಜೋಣ ಬನ್ನಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X