ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೇ ಸುಮ್ಮನೆ

By Staff
|
Google Oneindia Kannada News

H. Anandram Shastri, Bengaluruನಮ್ಮ ಸುತ್ತ ನಾವೇ ನಿರ್ಮಿಸಿಕೊಂಡಿರುವ ವ್ಯವಸ್ಥೆಯೆಂಬ ಅಭೇದ್ಯ ಭದ್ರ ಕೋಟೆಯ ವಿವಿಧ ಮಜಲುಗಳನ್ನು, ವಾಸ್ತವಾಂಶವನ್ನು ಬೆಂಗಳೂರಿನ ಎಚ್. ಆನಂದರಾಮ ಶಾಸ್ತ್ರಿಯವರು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಈ ಭದ್ರ ಕೋಟೆಯನ್ನು ಛಿದ್ರಗೊಳಿಸದೇ ನಾವು ಉದ್ಧಾರವಾಗುವುದಿಲ್ಲ ಎಂಬುದೂ ಅಷ್ಟೇ ವಾಸ್ತವದ ಸಂಗತಿ. ನಮ್ಮ ಸುತ್ತಮುತ್ತಲೇ ಘಟಿಸುವ ಈ ಸಂಗತಿಗಳು ಹೀಗೇ ಸುಮ್ಮನೆ ಓದಿ ಹಾಗೇ ಬಿಡುವಂಥದ್ದಲ್ಲ. ವಿಚಾರಮಾಡಿ.

***

ಬದುಕಿರುವುದೇ ಬದುಕಾಗಬಾರದು

ಸಾಹಿತ್ಯ, ಕಲೆ, ಸಂಸ್ಕೃತಿ, ಪ್ರಕೃತಿ, ಬಾಳಿನ ಸೊಗಸು, ಇಂಥ 'ಜೀವನಭಾಗ್ಯ'ದೆಡೆಗೆ ಮಾನವನು ಗಮನ ಹರಿಸುತ್ತ ತನ್ನ ಬಾಳನ್ನು ಸುಖಮಯವನ್ನಾಗಿಯೂ ಸಾರ್ಥಕವನ್ನಾಗಿಯೂ ಮಾಡಿಕೊಳ್ಳಬೇಕಾಗಿರುವಾಗ ಇಂದು ಶ್ರೀಸಾಮಾನ್ಯರು ಮಾತ್ರವಲ್ಲ, ಬಹುತೇಕ ಸಾಹಿತಿಗಳೂ ಕಲಾವಿದರೂ ಕೂಡ ಸಾಮಾಜಿಕ ಸಮಸ್ಯೆ ಮತ್ತು ಭ್ರಷ್ಟ ರಾಜಕಾರಣಗಳ ಬಗ್ಗೆಯೇ ಸದಾ ಚಿಂತಿಸುವಂಥ ಒಂದು ರೀತಿಯ ಅಸಹಾಯಕ ಸ್ಥಿತಿ ಮತ್ತು ಅಂಥ ವಾತಾವರಣ ಸೃಷ್ಟಿಯಾಗಿದೆಯೆನ್ನುವುದಕ್ಕೆ ಒಂದು ಪುಟ್ಟ ನಿದರ್ಶನ ಇಲ್ಲಿದೆ.

ಅದೊಂದು ಕನ್ನಡ ಸಾಹಿತ್ಯ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭ. ತೀರ್ಪುಗಾರರ ಪರವಾಗಿ ಮಾತನಾಡಲು ನನ್ನನ್ನು ಆಹ್ವಾನಿಸಲಾಗಿತ್ತು. ನಾಲ್ಕು ದಶಕಗಳಿಂದ ನಾಡಿನ ಪತ್ರಿಕೆಗಳಲ್ಲಿ ವಿವಿಧ ಪ್ರಕಾರಗಳ ಸಾವಿರಾರು ಲೇಖನಗಳನ್ನೂ ಹಲವು ಬಗೆಯ ಅಂಕಣಗಳನ್ನೂ ಬರೆದಿರುವ ಮತ್ತು ಪುಸ್ತಕ ಪ್ರಕಟಿಸಿರುವ ನನ್ನನ್ನು ಆ ಸಮಾರಂಭದಲ್ಲಿ ರಾಜಕೀಯ ಅಂಕಣಕಾರನಾಗಿ ಮಾತ್ರ ಗುರುತಿಸಲಾಯಿತಲ್ಲದೆ ನಾನು ಬರೆದ ವಾಚಕರ ಪತ್ರಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಯಿತು. ಸಾಹಿತಿಗಳಿಂದ ತುಂಬಿ ತುಳುಕುತ್ತಿದ್ದ ಆ ಸಮಾರಂಭದಲ್ಲಿ ನನ್ನ ಸಾಹಿತ್ಯ ಕೃಷಿಯ ಪ್ರಸ್ತಾಪವೇ ಆಗಲಿಲ್ಲ. ಅಂದರೆ, ನನ್ನ 'ರಾಜಕಾರಣ ಪ್ರಧಾನ ಅಂಕಣ' ಮತ್ತು ಸಾಮಾಜಿಕ ಸಮಸ್ಯೆಗಳತ್ತ ಬೆಳಕು ಚೆಲ್ಲುವ ನನ್ನ ವಾಚಕರ ಪತ್ರಗಳು ನನ್ನ ಸೃಜನಶೀಲ ಸಾಹಿತ್ಯದ ಬೆಳಕನ್ನು ಮಂದಗೊಳಿಸಿಬಿಟ್ಟಿವೆ! ಬದುಕು ಎಲ್ಲಕ್ಕಿಂತ ದೊಡ್ಡದು, ನಿಜ. ಆದರೆ, ಕೇವಲ ಬದುಕಿರುವುದೇ ಬದುಕಾಗಬಾರದಷ್ಟೆ.

***
ಕಣ್ಗಾವಲು ಸಮಿತಿಗಳು ಅವಶ್ಯ

ಬೆಂಗಳೂರು ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಈಚೆಗೆ ಸಂಭವಿಸಿದ ದುರಂತ, ಮಹಿಳೆಯೋರ್ವಳ ಸಾವು ಕೈಮೀರಿ ಘಟಿಸಿದ ಘಟನೆಯೇನಲ್ಲ. ಅವಶ್ಯ ಸಿಬ್ಬಂದಿ, ಸೂಕ್ತ ಭದ್ರತೆ ಮತ್ತು ವಾರದ ರಜೆಯ ಅನುಷ್ಠಾನ ಇದ್ದಿದ್ದರೆ ಒಂದು ಸಾವನ್ನು ಖಂಡಿತ ತಪ್ಪಿಸಬಹುದಿತ್ತು. ಜನರ ಕಿಸೆಗೆ ಲಗ್ಗೆಯಿಡುವುದೇ ಗುರಿಯಾಗಿರುವ ಖಾಸಗಿ ಸಂಸ್ಥೆಗೆ ಮೋಜಿನ ಸವಾರಿಯಾಟ ನಡೆಸಲು ಬಾಲಭವನದ ಉದ್ಯಾನವನ್ನು ಗುತ್ತಿಗೆಗೆ ನೀಡುವುದನ್ನು ಆಕ್ಷೇಪಿಸಿ ನಾನು ಇದೇ ಮಾರ್ಚ್ 17ರಂದು ಪತ್ರಿಕೆಗಳಲ್ಲಿ ಬರೆದಿದ್ದೆ. ಆಗೇನಾದರೂ ಸಾರ್ವಜನಿಕ ಸಂಚಲನದ ಪ್ರತಿಕ್ರಿಯೆ ಉಂಟಾಗಿದ್ದಿದ್ದರೆ ಇಂದು ಈ ಅಪಘಾತ ಸಂಭವಿಸುತ್ತಿರಲಿಲ್ಲ.

ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಮತ್ತು ಪರಭಾರೆ ವಿರೋಧಿಸಿ ನಾನು ಬರೆದ ಪತ್ರವೊಂದು ಇದೇ ಮಾರ್ಚ್ 3ರಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅನಂತರದ ದಿನಗಳಲ್ಲಿ ಈ ಬಗ್ಗೆ ಜನಾಂದೋಲನ ಗಟ್ಟಿಗೊಂಡು ಇದೀಗ ಸ್ಥಳೀಯ ಆಡಳಿತ ಜವಾಬ್ದಾರಿಯಿಂದ ವರ್ತಿಸುವಂತಾಗಿದೆ. ಆಡಳಿತವೆಂಬ ಸೊಕ್ಕಿದಾನೆಗೆ ಜನಗಳು ಅಂಕುಶವಿಡದಿದ್ದರೆ ಯಾವುದೇ ಸಾಮಾಜಿಕ ವಿಷಯವಾಗಲೀ ಸೂಕ್ತವಾಗಿ ಬಗೆಹರಿಯದು. ಅಂತಹ ದುರವಸ್ಥೆ-ಅವ್ಯವಸ್ಥೆ ಇಂದು ನಮ್ಮ ಪ್ರಾಪ್ತಿಯಾಗಿದೆ. ಆದ್ದರಿಂದ ಜನರು ಸಾಮಾಜಿಕ ವಿಷಯಗಳಿಗೆ ಕ್ರಿಯಾತ್ಮಕವಾಗಿ ಸ್ಪಂದಿಸಬೇಕು. ಆಗ ಮಾತ್ರ ನಾವು ಸುಭದ್ರ ಮತ್ತು ಸುಖೀ ಸಮಾಜವನ್ನು ಹೊಂದಲು ಸಾಧ್ಯ.

ಮೋಜಿನಾಟಗಳು ಉಂಟುಮಾಡುತ್ತಿರುವ ಸಾವುನೋವುಗಳನ್ನು ತಡೆಗಟ್ಟಬೇಕಾದರೆ ನಾಗರಿಕ ಕಣ್ಗಾವಲು ಸಮಿತಿಗಳು ಅಸ್ತಿತ್ತ್ವಕ್ಕೆ ಬರಬೇಕು ಮತ್ತು ಆ ಸಮಿತಿಗಳಿಗೆ ಸರ್ಕಾರದ ಮನ್ನಣೆ ಇರಬೇಕು. ಸರ್ಕಾರವನ್ನೇ ನಂಬಿ ಕುಳಿತರೆ ಈ ನೆಲದಲ್ಲಿ ಯಾವ ಸಾವು ನೋವನ್ನೂ ತಪ್ಪಿಸಲು ಸಾಧ್ಯವಿಲ್ಲ!

***
ಹ್ಯಾರಿ ಪಾಟರ್ ಅಬ್ಬರ

ಕಳೆದ ವರ್ಷ ಇದೇ ವೇಳೆ ಹ್ಯಾರಿ ಪಾಟರ್ ಹಂಗಾಮಾ ನಡೆದಿತ್ತು. ಇತರ ಶ್ರೀಮಂತ ದೇಶಗಳಂತೆ ಭಾರತದ ಶ್ರೀಮಂತ ಮಕ್ಕಳೂ ಪಾಟರ್ ಸರಣಿಯ ಕೊನೇ ಪುಸ್ತಕಕ್ಕೆ ಮುಗಿಬಿದ್ದು ಕೊಂಡೋದಿದರು. ಅಷ್ಟೇ ರೋಚಕವೂ ಹಾಗೂ ವೈಭವೋಪೇತವೂ ಆದ ನಮ್ಮ ಜಾನಪದ ಕಥೆಗಳನ್ನು ಈ ಮಕ್ಕಳು ಅರಿಯರು.

ಏಳು ಸಮುದ್ರ ದಾಟಿ, ಕೀಳು ಸಮುದ್ರ ದಾಟಿ, ರಾಕ್ಷಸನ ಬಳಿ ಬಂಧಿಯಾಗಿರುವ ರಾಜಕುಮಾರಿಯನ್ನು ಶೂರನೂ ಚತುರನೂ ಆದ ಬಡ ಯುವಕ ಪಾರುಮಾಡಿ, ಮದುವೆಯಾಗಿ, ರಾಜ್ಯದೊಡೆಯನಾಗುವ ನಮ್ಮ ಅಜ್ಜಿ ಕಥೆಯು ಯಾವ ಪಾಟರ್ ಕಥೆಗಿಂತ ಕಮ್ಮಿಯೇನಿಲ್ಲ. "ಚಂದಮಾಮ"ದ ಒಂದೊಂದು ಫ್ಯಾಂಟಸಿ/ಜಾನಪದ ಕಥೆಯೂ ಒಂದೊಂದು ಪಾಟರ್ ಕಥೆಯಾಗಬಲ್ಲುದು. "ಪಂಚತಂತ್ರ" ಕಥೆಗಳಂತೂ ಕುತೂಹಲದ ಜೊತೆಗೆ ಮಕ್ಕಳಿಗೆ ನೀತಿಯನ್ನೂ ಸಾರುತ್ತವೆ. ಹತ್ತು ವರ್ಷದಿಂದೀಚೆಗಷ್ಟೇ ಪಾಟರ್ ಈ ಭೂಮಿಗೆ ಬಂದರೆ ಅರ್ಧ ಶತಮಾನದ ಹಿಂದೆಯೇ ನಮ್ಮ ರೋಚಕ ಜಾನಪದ ಕಥೆಗಳು ಬೆಳ್ಳಿ ತೆರೆಯಮೇಲೆ ರಾರಾಜಿಸಿದ್ದವು.

ಪಾಟರ್ ಕಥೆಗಳಂತೆ ನಮ್ಮ ಈ ಕಥೆಗಳನ್ನೂ ವಿಸ್ತರಿಸಿ, ಇಂದಿನ ಕಾಲಮಾನಕ್ಕೆ ಹೊಂದಿಸಿ ಪುಸ್ತಕಗಳನ್ನೂ ಸಿನೆಮಾಗಳನ್ನೂ ಸೃಷ್ಟಿಸುವವರು ಬೇಕು. ಅವುಗಳಿಗೆ ಪಾಟರ್‌ಗೆ ಸಿಕ್ಕಂಥ ಪ್ರಚಾರವೂ ನಮ್ಮಲ್ಲಿ ಸಿಗಬೇಕು. ನಮ್ಮೆಲ್ಲ ಮಕ್ಕಳಿಗೂ ನಮ್ಮ ಈ ಅದ್ಭುತ-ಅಗಾಧ ಕಥಾ ಖಜಾನೆಯ ನಿಧಿ ಲಭ್ಯವಾಗಬೇಕು. ಪಾಟರ್‌ನ ಅಬ್ಬರದಲ್ಲಿ ನಮ್ಮ ಈ ಕಥಾ ಭಂಡಾರ ಮಕ್ಕಳಿಗೆ ಪರಿಚಯವಾಗದೆಯೇ, ಕ್ರಮೇಣ ಕಳೆದೇಹೋಗಿಬಿಡುವಂಥ ಸ್ಥಿತಿ ಬರಬಾರದು.

***
'ಅತಿ ಆಶಾ'ವಾದ

ಇನ್ನು ಅರ್ಧ ಶತಮಾನದಲ್ಲಿ ಭಾರತವು ಸುಖ-ಸಮೃದ್ಧಿಭರಿತ ರಾಷ್ಟ್ರವಾಗತ್ತದೆಂದು ಕೆಲವು ಪಂಡಿತರು ಆಶಾವಾದ ಮಂಡಿಸುತ್ತಿದ್ದಾರೆ. ಇದೊಂದು ಬಗೆಯ ಅತ್ಯಾಶೆಯೆಂದೇ ನಾನು ಹೇಳುತ್ತೇನೆ. ಏಕೆಂದರೆ, ಕ್ರಾನಿಕ್ ಹಂತದ ಉಪಭೋಗ ಸಂಸ್ಕೃತಿಯ ಜಾಡ್ಯವನ್ನು ನಾವೀಗಾಗಲೇ ಹೊಂದಿಬಿಟ್ಟಿದ್ದೇವೆ. ನಿರಕ್ಷರಿ-ಬಡವ-ಗ್ರಾಮೀಣ ಜನತೆಯೂ ಭೋಗದ ಅವಕಾಶಕ್ಕಾಗಿ ಹಾತೊರೆದು ಕುಳಿತಿದೆ. ನಾವಿಂದು ವಿದೇಶದ ಕೂಲಿಗಳಾಗಿದ್ದೇವೆ; ವಿದೇಶೀ ಬಂಡವಾಳಶಾಹಿಗಳಿಂದ ಅತೀವ ಶೋಷಣೆಗೊಳಗಾಗಿದ್ದೇವೆ; ಆರ್ಥಿಕ ಉದಾರೀಕರಣದ ಬಲಿಪಶುಗಳಾಗಿದ್ದೇವೆ; ತಜ್ಜನ್ಯ ಆರ್ಥಿಕ ಅಸಮಾನತೆಯ ಪ್ರಹಾರಕ್ಕೊಳಗಾಗಿದ್ದೇವೆ; ಇಷ್ಟಾಗಿಯೂ, "ಹಣದುಬ್ಬರ ಇಳಿಯಲಿದೆ-ಜಿಡಿಪಿ ಏರಿದೆ", ಎಂಬ ಕೇಂದ್ರ ಅರ್ಥಮಂತ್ರಿಯ ಅರ್ಥಹೀನ ಹೇಳಿಕೆಗೆ, ಪ್ರಧಾನಿಯ ಜಾಳು ಭರವಸೆಗಳಿಗೆ ಕುರಿಗಳಂತೆ ಗೋಣುಹಾಕುತ್ತಿದ್ದೇವೆ ಮತ್ತು ಅದೇ ಅಯೋಗ್ಯರನ್ನೇ ಆರಿಸಿ ಕಳಿಸುತ್ತಿದ್ದೇವೆ! ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿ ಇರುವಂಥ ಯೋಗ್ಯರು ಚುನಾವಣೆಗೆ ನಿಲ್ಲಲಾರದಂಥ ರಾಜಕೀಯ ವಾತಾವರಣವನ್ನು ನಿರ್ಮಿಸಿದ್ದೇವೆ; ಯೋಗ್ಯರನ್ನು ಆರಿಸಲು ಮತಗಟ್ಟೆಗೆ ಹೋಗದ ಅಯೋಗ್ಯರು ನಾವಾಗಿದ್ದೇವೆ! ಜೊತೆಗೆ, ಭ್ರಷ್ಟರನ್ನು ಸಾಕುವ ಭ್ರಷ್ಟರು ನಾವಾಗಿದ್ದೇವೆ. ಅಲ್ಲೊಬ್ಬರು ಇಲ್ಲೊಬ್ಬರು ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತೇವಾದರೂ ಕೃತಿಗಿಳಿಯದ "ನಿರಾಳ"ರು / ಹೇಡಿಗಳು ನಾವಾಗಿದ್ದೇವೆ.

ಹೀಗೆಲ್ಲ ಇರುವಾಗ, ಈ ದೇಶದಲ್ಲಿ ಸುಖ-ಸಮೃದ್ಧಿಯ ತಂಪು ಗಾಳಿ ಬೀಸಬೇಕೆಂದರೆ ವಾತಾವರಣ ತಕ್ಕ ಹದಕ್ಕೆ ಬರಬೇಕಾಗಿದೆ. ಒಂದೋ, ಸೂಕ್ತ ನಾಯಕನ ಸೂತ್ರದನುಸಾರ ಯುವಸಮೂಹ ಮುನ್ನುಗ್ಗಬೇಕು. ಇದಕ್ಕಾಗಿ ಯುವಸಮೂಹದ ಮನಃಪರಿವರ್ತನೆಯ ವ್ಯವಸ್ಥಿತ ಪ್ರಯತ್ನ ದೀರ್ಘಕಾಲದವರೆಗೆ ನಡೆಯಬೇಕಾಗುತ್ತದೆ. ಇಲ್ಲವೇ, ಅಂಥ ಯೋಗ್ಯ ಹಾಗೂ ಸಮರ್ಥ ಸರ್ವಾಧಿಕಾರಿ ದೇಶಾಡಳಿತವನ್ನು ಕೈಗೆ ತೆಗೆದುಕೊಳ್ಳಬೇಕು. ಅಥವಾ, ಅನುಭವಿಸಿ ಅನುಭವಿಸಿ ಸಾಕಾಗಿ ನಾವು ಸಿಡಿದೇಳಬೇಕು. ಇದ್ಯಾವುದು ಆಗಬೇಕಾದರೂ ಪೂರ್ವೋಕ್ತ ಅಡ್ಡಿ-ಆತಂಕಗಳಿಂದಾಗಿ ತುಂಬಾ ಸಮಯ ಬೇಕಾಗುತ್ತದಷ್ಟೆ. ಆದ್ದರಿಂದ, ಇನ್ನು ಅರ್ಧ ಶತಮಾನದಲ್ಲಿ, ಊಹ್ಞೂ, ಅಷ್ಟು ಬೇಗ ತಂಪು ಹವೆ ಅಸಾಧ್ಯ. ಪೂರ್ವೋಕ್ತ ಅಡ್ಡಿ-ಆತಂಕಗಳ ಜೊತೆಗೆ, ಜೀವನವನ್ನು ಅರ್ಥೈಸಿಕೊಂಡು ಒಂದಾಗಿ ಸಾಗಲೆಂದು ನಮಗೊದಗಿರುವ 'ಧರ್ಮ'ವನ್ನು ನಾವು ವಿರುದ್ಧ ನೆಲೆಯಲ್ಲಿ ಬಳಸುತ್ತಿದ್ದೇವೆ ಬೇರೆ!

***
ಅಂಥ ದಿನ ಬರದಿರಲಿ

ಬಿಜೆಪಿಯ ಸರ್ಕಾರ ಬಂತೆಂದು ಬೀಗುವವರು ಕೊಂಚ ಯೋಚಿಸಬೇಕು. ಈಗ ಆಳಲಿಕ್ಕೆ ಹೊರಟಿರುವುದು ಬಿಜೆಪಿಯ ಸರ್ಕಾರವಲ್ಲ, ಬಳ್ಳಾರಿ ಗಣಿ ರೆಡ್ಡಿಗಳ ಸರ್ಕಾರ. ಅವರು ಗೆದ್ದಿರುವುದು, ತಮ್ಮವರನ್ನು ಗೆಲ್ಲಿಸಿರುವುದು ಮತ್ತು ಶಾಸಕರನ್ನು ಖರೀದಿಸಿಕೊಟ್ಟಿರುವುದು ಕರ್ನಾಟಕದ ಖನಿಜ ಸಂಪತ್ತನ್ನು ಲೂಟಿ ಮಾಡಿ ಸಂಪಾದಿಸಿದ ಹಣದಿಂದ. ಲಾಭವಿಲ್ಲದೆ ಕೋಟಿಗಟ್ಟಲೆ ಹಣ ಚೆಲ್ಲಲು ಈ ರೆಡ್ಡಿಗಳೇನೂ ದಡ್ಡರಲ್ಲ. ಆಂಧ್ರಮೂಲದ ಈ ರೆಡ್ಡಿಗಳೀಗ ಕರ್ನಾಟಕದ ರಾಜಕಾರಣದಲ್ಲಿ ಯಶಸ್ವಿಯಾಗಿ ಬಂಡವಾಳ ಹೂಡಿದ್ದಾರೆ. ಮುಂದೆ ಅಪರಿಮಿತ ಲಾಭ ಗಿಟ್ಟಿಸಿಕೊಳ್ಳುತ್ತಾರಲ್ಲದೆ ಅಧಿಕಾರದ ಪ್ರತಿಷ್ಠೆಯನ್ನೂ ಮೆರೆಯುತ್ತಾರೆ. ಇವರೊಡನೆ ಇದೇ ಬಿಜೆಪಿಯ ಭೂ ಮಾಫಿಯಾ ರಾಜಕಾರಣಿಗಳೂ ಸೇರಿಕೊಂಡು ಕರ್ನಾಟಕದ ಭೂಮಿಯನ್ನು ಮುಗಿಸಿಬಿಡುತ್ತಾರೆ. ಸ್ವಸುಖ ಮತ್ತು ಸ್ವಪ್ರತಿಷ್ಠೆಗಳನ್ನು ಮಾತ್ರ ಗುರಿಯಾಗಿಟ್ಟುಕೊಳ್ಳುವ ಇಂಥ ದುಷ್ಟ ಬಂಡವಾಳಶಾಹಿಗಳಿಂದ ನಾಡಿಗೆ ಏನೇನೂ ಒಳ್ಳಿತಾಗುವುದಿಲ್ಲ. ಬದಲಿಗೆ ನಾಡಿನ ಪ್ರಾಕೃತಿಕ ಸಂಪತ್ತೆಲ್ಲ ಇವರ ಖಜಾನೆ ಸೇರುತ್ತದೆ. ಬಡವರ ಗೋಳು ಉಲ್ಬಣಿಸುತ್ತದೆ. ಇಡೀ ನಾಡೇ ಒಂದು ವಿಧದಲ್ಲಿ ಈ ದುಷ್ಟರ ಅಡಿಯಾಳಾಗಿಬಿಡುತ್ತದೆ. ಏಕೆಂದರೆ ಕಾನೂನೇ ಇವರ ಕೈಲಿರುತ್ತದಲ್ಲಾ!

ನಾಡಿನ ಜನತೆ ಎಚ್ಚತ್ತುಕೊಳ್ಳಬೇಕು. ಮುಂದಾಗಬಹುದಾದ ಅನಾಹುತವನ್ನು ಮನಗಂಡು ಈಗಲೇ ಯಡಿಯೂರಪ್ಪನನ್ನು ಸರಿದಾರಿಗೆ ಹಚ್ಚಬೇಕು. ಯಡಿಯೂರಪ್ಪ ಕೂಡ ಈ ಗಣಿ ರಾಕ್ಷಸರನ್ನೂ ಭೂ ರಾಕ್ಷಸರನ್ನೂ (ಇವರನ್ನು ದೊರೆಗಳೆಂದು ಕರೆದರೆ ದೊರೆತನಕ್ಕೇ ಅವಮಾನ) ಎಲ್ಲಿಟ್ಟಿರಬೇಕೋ ಅಲ್ಲಿಟ್ಟಿರಬೇಕು. ತಲೆಯಮೇಲೆ ಕೂರಿಸಿಕೊಳ್ಳಬಾರದು. ಇಲ್ಲದೇ ಹೋದಲ್ಲಿ, ಮುಂದೊಂದು ದಿನ ರಾಜ್ಯ ಬಿಜೆಪಿಯೂ ಮುಳುಗೀತು ಮತ್ತು ಕರ್ನಾಟಕವೂ ಪಾಪರೆದ್ದುಹೋದೀತು!

***
'ಚಿತ್ರ ಏಕೆ' ಎನ್ನುವ ವ್ಯಂಗ್ಯಚಿತ್ರ!

ವ್ಯಂಗ್ಯಚಿತ್ರಗಳು ಸಮಾಜದತ್ತ ಕೊಂಕುನೋಟ ಹರಿಸಿ ವಿಡಂಬನಾ ಚಾತುರ್ಯ ಮೆರೆದು ಸಮಾಜವನ್ನು ತಿದ್ದುತ್ತವಲ್ಲದೆ ನೋಡುಗರಿಗೆ ಪುಟಿದೇಳುವಂಥ ಖುಷಿ ನೀಡುತ್ತವೆ. ಅಕ್ಷರಗಳು ಹೇಳಲಾಗದ್ದನ್ನು ವ್ಯಂಗ್ಯಚಿತ್ರ ಹೇಳಬಲ್ಲದು.

ಇಂದು ಕನ್ನಡ ಪತ್ರಿಕೆಗಳು ವ್ಯಂಗ್ಯಚಿತ್ರಗಳನ್ನೇನೋ ದಂಡಿಯಾಗಿ ಪ್ರಕಟಿಸುತ್ತಿವೆ. ಆದರೆ ಅವುಗಳ ಗುಣಮಟ್ಟ ಗಮನಿಸಿದರೆ ಮಾತ್ರ ನಿರಾಸೆಯಾಗುತ್ತದೆ. ಬಹುಪಾಲು ವ್ಯಂಗ್ಯಚಿತ್ರಗಳಿಗೆ ಚಿತ್ರದ ಅಗತ್ಯವೇ ಇರುವುದಿಲ್ಲ; ಹೇಳಬೇಕಾದ್ದನ್ನು ಅಡಿಬರಹವೇ ಹೇಳಿಬಿಟ್ಟಿರುತ್ತದೆ; ಸುಮ್ಮನೆ ಚಿತ್ರವೊಂದಿರುತ್ತದೆ ಅಷ್ಟೆ. ಚಿತ್ರಕ್ಕೆ ಯಾವ ಮಹತ್ತ್ವವೂ ಇಲ್ಲವಾದಾಗ ಅಂಥ ವ್ಯಂಗ್ಯಚಿತ್ರ ಬೀರುವ ಪರಿಣಾಮವಾಗಲೀ ನೀಡುವ ಖುಷಿಯಾಗಲೀ ಯಃಕಶ್ಚಿತ್ತಾದುದಾಗಿರುತ್ತದೆ.

ವ್ಯಂಗ್ಯಚಿತ್ರದಲ್ಲಿ ಚಿತ್ರವು ತನ್ನ ಉಪಸ್ಥಿತಿಯನ್ನಷ್ಟೇ ಅಲ್ಲ, ತನ್ನ ಅವಶ್ಯಕತೆ ಮತ್ತು ಪ್ರಭಾವಗಳನ್ನೂ ಪ್ರಚುರಪಡಿಸಬೇಕು. ಅಡಿಬರಹವನ್ನು ಬಯಸದ ವ್ಯಂಗ್ಯಚಿತ್ರ ಉತ್ಕೃಷ್ಟ ವ್ಯಂಗ್ಯಚಿತ್ರವೆನ್ನಿಸಿಕೊಳ್ಳುತ್ತದೆ. ಅಡಿಬರಹವಿದ್ದಲ್ಲಿ ಅದು ಚಿತ್ರದ ಭಾಗವಾಗಿರಬೇಕು, ಚಿತ್ರಕ್ಕೆ ಪೂರಕವಾಗಿರಬೇಕು ಹಾಗೂ ವಿಷಯವನ್ನು ಚಿತ್ರದೊಡನೆ ಹಂಚಿಕೊಂಡಿರಬೇಕು. ಅಡಿಬರಹವೊಂದೇ ಎಲ್ಲವನ್ನೂ ಹೇಳಿ ಮುಗಿಸಿಬಿಡಬಾರದು. ಚಿತ್ರದ ಅವಶ್ಯಕತೆ ಇರುವಂಥ ಅಡಿಬರಹ ಅದಾಗಿರಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X